ಮಡೆಸ್ನಾನ ಪ್ರತಿಬಂಧಕ ಕಾಯ್ದೆಗೆ ಆಗ್ರಹ
ಕ.ಪ್ರ.ವಾರ್ತೆ ಹಾಸನ ಡಿ. 6
ಮಡೆಸ್ನಾನ, ಪಂಕ್ತಿಭೇದ, ಅಸ್ಪೃಶ್ಯತೆ, ಜಾತಿ ತಾರತಮ್ಯ, ಸಾಮಾಜಿಕ ತಾರತಮ್ಯಗಳ ವಿರುದ್ಧ ಹಾಗೂ ಅನಾಗರೀಕ ಮೌಡ್ಯಾಚರಣೆಗಳ ನಿಷೇಧಕ್ಕೆ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಕಾಯ್ದೆ ಜಾರಿಗಾಗಿ ಆಗ್ರಹಿಸಿ ಡಿ.8 ರಂದು ಸಾಮೂಹಿಕ ಪ್ರತಿಭಟನಾ ಧರಣಿ ಹಮ್ಮಿಕೊಂಡಿರುವುದಾಗಿ ಸಿಪಿಎಂ ಮುಖಂಡ ಧರ್ಮೇಶ್ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡೆಸ್ನಾನ, ಪಂಕ್ತಿಭೇದ, ಅಸ್ಪೃಶ್ಯತೆ, ಜಾತಿ ದೌರ್ಜನ್ಯ- ತಾರತಮ್ಯ ಹಾಗೂ ಎಲ್ಲ ರೀತಿಯ ಸಾಮಾಜಿಕ ತಾರತಮ್ಯಗಳ ವಿರುದ್ಧ ಹಾಗೂ ಅನಾಗರೀಕ ಮೌಢ್ಯಾಚರಣೆಗಳ ನಿಷೇಧಕ್ಕೆ ಹಾಗೂ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಕಾಯ್ದೆ ಜಾರಿಗಾಗಿ ಆಗ್ರಹಿಸಿ, ನಗರದ ಹೇಮಾವತಿ ಪ್ರತಿಮೆ ಬಳಿ ಸಾಮೂಹಿಕ ಪ್ರತಿಭಟನಾ ಧರಣಿಯನ್ನು ಜಿಲ್ಲೆಯ ಪ್ರಗತಿಪರ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆಸಲಾಗುತ್ತಿದೆ ಎಂದರು.
ಜಿಲ್ಲೆಯ ಪ್ರಗತಿಪರ ಸಂಘಟನೆಗಳ ಮುಖಂಡರು, ಸಾಹಿತಿಗಳು ಮತ್ತು ಬುದ್ದಿಜೀವಿಗಳು ಭಾಗವಹಿಸುವ ಈ ಸಾಮೂಹಿಕ ಪ್ರತಿಭಟನಾ ಧರಣಿಯನ್ನು ಜಿಲ್ಲೆಯ ವಿಚಾರವಾದಿ ಜ.ಹೊ. ನಾರಾಯಣ ಸ್ವಾಮಿಯವರು ಉದ್ಘಾಟಿಸಲಿದ್ದು, ಸಿಪಿಎಂ ನ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕಾಮ್ರೇಡ್ ನಿತ್ಯಾನಂದ ಸ್ವಾಮಿಯವರು ಭಾರತದಲ್ಲಿ ಮೂಢನಂಬಿಕೆ ಹಾಗೂ ಜಾತಿ ವ್ಯವಸ್ಥೆಯ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಎಸ್ಎಪ್ಐ ವತಿಯಿಂದ ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯ ಕುರಿತು ಚಿತ್ರಕಲಾ ಸ್ಪರ್ಧೆ ಮತ್ತು ಪ್ರದರ್ಶನ ಹಾಗೂ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ.
ಅಸ್ಪೃಶ್ಯತೆ, ಜಾತಿ ತಾರತಮ್ಯ, ಪಂಕ್ತಿಭೇದ, ಮಡೆಸ್ನಾನ, ಸಾಮಾಜಿಕ ತಾರತಮ್ಯಗಳ ವಿರುದ್ಧ ಐಕ್ಯ ಹೋರಾಟಕ್ಕೆ ಮುಂದಾಗಬೇಕಿದೆ. ಆದ್ದರಿಂದ ಎಲ್ಲರೂ ಡಿ.8ರ ಭಾನುವಾರ ಬೆಳಗ್ಗೆ 10.30ಕ್ಕೆ ಸರಿಯಾಗಿ ಹಾಸನದ ಹೇಮಾವತಿ ಪ್ರತಿಮೆ ಬಳಿ ಬಂದು ಸೇರಬೇಕೆಂದು ಅವರು ಮನವಿ ಮಾಡಿದರು.
ಎಲ್ಲೆಡೆ ಪ್ರತಿಭಟನೆ: ಡಿ. 8ರಂದೇ ಅನಾಗರಿಕ, ಅಸಹ್ಯಕರ ಮೌಢ್ಯಾಚರಣೆಯಾದ ಮಡೆಸ್ನಾನ, ಸುಬ್ರಹ್ಮಣ್ಯ ದೇವ್ಥಾನಗಳಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಅದಕ್ಕೆ ಪ್ರತಿರೋಧಾತ್ಮಕ ಪ್ರತಿಕ್ರಿಯೆಯಾಗಿ ಇಂತಹ ವಿಕೃತಿಗಳ ನಿಷೇಧಕ್ಕೆ ಒತ್ತಾಯಿಸಿ, ಈ ಸಾಮೂಹಿಕ ಪ್ರತಿಭಟನಾ ಧರಣಿಯನ್ನು ನಡೆಸಲಾಗುತ್ತಿದೆ. ಅದೇ ದಿನ ಕರ್ನಾಟಕ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಹೇಳಿದರು.
ರಾಜ್ಯದಲ್ಲಿ ನಂಬಿಕೆ ಮತ್ತು ಮೂಡನಂಬಿಕೆಗಳ ಸುತ್ತ ಚರ್ಚೆ ನಡೆಯುತ್ತಿದೆ. ಮೂಡನಂಬಿಕೆ ವಿರೋಧಿ ವಿಧೇಯಕ ಧರ್ಮ ವಿರೋಧಿ, ಜಾತಿ ವಿರೋಧಿ ಎಂದೆಲ್ಲಾ ಬಣ್ಣಿಸುತ್ತಾ, ಕೆಲವರು ನಾಗರೀಕತೆಯ ಮೇಲೆ ಮೌಢ್ಯದ ಸಮಾಧಿ ಕಟ್ಟಲು ಪ್ರಯತ್ನಿಸುತ್ತಿದ್ದಾರೆ. ನಾಗರಿಕ ಸಮಾಜದಲ್ಲಿ ಅನಾಗರೀಕ ಆಚರಣೆಗಳು ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ನಾಗರೀಕ ಸಮಾಜದ್ದೇ ಆಗಿದೆ ಎಂದರು.
ಕೆಲವರಿಗೆ ಮಾರ್ಪಾಡು ಬೇಕಿಲ್ಲ: ಅಂಧಶ್ರದ್ಧೆ ಹಾಗೂ ಜಾತಿ ತಾರತಮ್ಯಗಳ ಆಚರಣೆಗಳಾದ ಪಂಕ್ತಿಬೇಧ ಮತ್ತು ಮಡೆಸ್ನಾನದಂತಹ ಅನಿಷ್ಟ ಪದ್ಧತಿಗಳು ಇನ್ನೂ ಜೀವಂತವಾಗಿವೆ. ಅಸ್ಪಶ್ಯತೆಯಂತಹ ಅನಾಗರೀಕ ಆಚರಣೆಗಳು ಈ ಆಧುನಿಕ ಯುಗದಲ್ಲಿ ಹೊಸ ಹೊಸ-ರೂಪದಲ್ಲಿ ಪ್ರಕಟವಾಗುತ್ತಲೇ ಇವೆ. ಪಂಕ್ತಿಬೇಧ-ಮಡೆಸ್ನಾನದಂತಹ ಅನಾಗರೀಕ ಆಚರಣೆಗಳನ್ನು ತೊಡೆದು ಹಾಕಬೇಕೆಂದು ಚಳುವಳಿಗಳು ನಡೆಯುತ್ತಿದ್ದರೂ, ಅಂತಹ ಜಾತಿ ತಾರತಮ್ಯದ ಆಚರಣೆಗಳನ್ನು ತಾತ್ವಿಕವಾಗಿ ಸಮರ್ಥಿಸಿಕೊಂಡು ಅವುಗಳ ಮುಂದುವರಿಕೆಗೆ ಕೆಲವು ಶಕ್ತಿಗಳು ಪ್ರೋತ್ಸಾಹ ನೀಡುತ್ತಿರುವುದು ವಿಷಾದದ ಸಂಗತಿಯಾಗಿದೆ. ಮೂಡನಂಬಿಕೆ ವಿರೋಧಿ ವಿಧೇಯಕವನ್ನು ವಿರೋಧಿಸುತ್ತಿರುವವರೂ ಇವರೇ ಆಗಿದ್ದಾರೆ. ಇವರಿಗೆ ಭಾರತೀಯ ಸಮಾಜ ಜಾತಿರಹಿತ- ವರ್ಗರಹಿತ ಸಮಾಜವಾಗಿ ಮಾರ್ಪಾಡಾಗುವುದು ಬೇಕಿಲ್ಲ ಎಂದರು.
ಆಂದೋಲನದಿಂದ ಸಾಧ್ಯ: ನಮ್ಮ ಸಮಾಜವು ಜಾತಿ ಮತ್ತು ವರ್ಗ ವಿಭಜಿತ ಸಮಾಜವಾಗಿದೆ. ಪಂಕ್ತಿಬೇಧ-ಮಡೆಸ್ನಾನದಂತಹ ಅಮಾನವೀಯ ಆಚರಣೆಗಳು ಈ ಅಸಮಾನ ವ್ಯವಸ್ಥೆಯ ಪ್ರತಿಬಿಂಬಗಳಾಗಿವೆ.
ನಮ್ಮ ಸಮಾಜದಲ್ಲಿ ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಈ ಶ್ರೇಣೀಕೃತ ಸಮಾಜದಲ್ಲಿ ಹುಟ್ಟಿನಿಂದಲೇ ಜಾತಿ ಆಧಾರಿತವಾಗಿ ಮೇಲು-ಕೀಳು ಎಂದು ವಿಭಜಿಸಲಾಗಿದೆ. ದುಡಿಮೆಗಾರರನ್ನು ಮನುಷ್ಯರೆಂದು ಕಾಣಲಾಗುತ್ತಿಲ್ಲ. ಹೀಗೆ ಶೋಷಿತರ ಹಕ್ಕು, ಅವಕಾಶಗಳನ್ನು ವಂಚಿಸಲಾಗುತ್ತಿದೆ. ಇದನ್ನು ಪ್ರಶ್ನಿಸಿದರೆ, ಆಹಾರ ಪದ್ಧತಿಯಲ್ಲಿಯೂ ತಾರತಮ್ಯ ಆರೋಪಿಸಿ ಇಂತಹ ಕ್ರೂರ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಇದರ ಭಾಗವಾಗಿ ಸ್ವಾತಂತ್ರ್ಯ ಬಂದು 66 ವರ್ಷ ಕಳೆದರೂ ದೇಶದಲ್ಲಿ ಇಂದಿಗೂ ಅಸ್ಪಶ್ಯತೆ, ಜಾತಿ-ಲಿಂಗ ತಾರತಮ್ಯ-ದಬ್ಬಾಳಿಕೆ-ದೌರ್ಜನ್ಯ, ಜೀತ ಪದ್ಧತಿ, ಸಾಮಾಜಿಕ ಬಹಿಷ್ಕಾರ, ದಲಿತರ-ಆದಿವಾಸಿಗಳ-ಮಕ್ಕಳ-ಮಹಿಳೆಯರ-ಅಲ್ಪಸಂಖ್ಯಾತರ ಮೇಲಿನ ಅತ್ಯಾಚಾರ-ದೌರ್ಜನ್ಯ, ಕೋಮುವಾದ, ಧಾರ್ಮಿಕ ಮೂಲಭೂತವಾದ, ಮೂಢನಂಬಿಕೆ, ಕಂದಾಚಾರದಂತಹ ಆಚರಣೆಗಳು ಭಾರತೀಯ ಸಮಾಜದಲ್ಲಿ ಇನ್ನೂ ಜೀವಂತವಾಗಿರುವುದಲ್ಲದೇ ದಿನದಿನಕ್ಕೆ ಆಳವಾಗಿ ಬೇರುಬಿಡುತ್ತಾ ಹೆಮ್ಮರವಾಗಿ ಬೆಳೆಯುತ್ತಿವೆ. ಪ್ರತ್ಯೇಕ ಹೋರಾಟಗಳಿಂದ ಇಂತಹ ಸಾಮಾಜಿಕ ಅನಿಷ್ಟಗಳ ನಿವಾರಣೆ ಸಾಧ್ಯವಿಲ್ಲ. ಒಂದು ಐಕ್ಯ ಮತ್ತು ಪ್ರಬಲ ಸಾಮಾಜಿಕ ಆಂದೋಲನದಿಂದ ಮಾತ್ರ ಇದು ಸಾಧ್ಯ ಎಂದರು.
ಸುದ್ದಿಗೋಷ್ಠಿಯಲ್ಲಿ, ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಟಿ.ಆರ್. ವಿಜಯ್ ಕುಮಾರ್, ದಲಿತ ಮುಖಂಡ ಎಚ್.ಕೆ.ಸಂದೇಶ್, ಎಸ್ಎಫ್ಐ ಜಿಲ್ಲಾಧ್ಯಕ್ಷ ಎಂ.ಜಿ. ಪೃಥ್ವಿ, ಡಿವೈಎಫ್ಐ ಬಿ.ಜಿ. ಗಿರೀಶ್, ದಲಿತ ಹಕ್ಕುಗಳ ಸಮಿತಿಯ ಕೆ.ಎಸ್.ಮಂಜುನಾಥ್ ಇದ್ದರು.