2 ಲಕ್ಷ ಮೌಲ್ಯದ ಚೆಕ್ಗಳು ನಾಪತ್ತೆ
ಕ.ಪ್ರ. ವಾರ್ತೆ ಟಿ ಆಲೂರು ಟಿ ಡಿ 7
ಆಲೂರಿನ ನಾನಾ ಇಲಾಖೆಗಳಿಗೆ ಲೋಕಾಯುಕ್ತ ಎಸ್ಪಿ ಎಸ್ಪಿ ವೇದಮೂರ್ತಿ ಭೇಟಿ ನೀಡಿ ಇಲಾಖೆಗಳಲ್ಲಿನ ಕಡತಗಳನ್ನು ಪರಿಶೀಲಿಸಿದರು.
ಪಟ್ಟಣದಲ್ಲಿರುವ ಉಪಖಜಾನೆ, ತಾಪಂ ಹಾಗೂ ಸಾರ್ವಜನಿಕ ಆಸ್ಪತ್ರೆಗಳಿಗೆ ಭೇಟಿ ನೀಡಿದ ಲೋಕಾಯುಕ್ತರು ಉಪಖಜಾನೆಯಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯ ಕಡತಗಳನ್ನು ಪರಿಶೀಲಿಸಿ ಅವುಗಳಲ್ಲಿ 1,98,900 ಮೊತ್ತದ ಚೆಕ್ ಕಳೆದುಹೋಗಿರುವ ಬಗ್ಗೆ ಮಾಹಿತಿ ಪಡೆದರು. ಇದರಿಂದ 500ಕ್ಕೂ ಹೆಚ್ಚು ಫಲಾನುಭವಿಗಳಿಗೆ ತೀವ್ರ ತೊಂದರೆ ಉಂಟಾಗುತ್ತಿರುವುದು ಕಂಡು ಬಂತು. ಶೀಘ್ರ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿ, ಅಂಚೆ ಅಧಿಕ್ಷಕರಿಗೆ ಈ ಬಗ್ಗೆ ದಾಖಲೆಗಳೊಂದಿಗೆ ಪತ್ರ ಬರೆದು ಫಲಾನುಭವಿಗಳಿಗೆ ಹಣ ನೀಡಬೇಕೆಂದು ಸೂಚಿಸಿದರು.
ನಂತರ ತಾಪಂಗೆ ಭೇಟಿ ನೀಡಿ ನಡೆಸಲಾಗುತ್ತಿರುವ ಕಾಮಗಾರಿಗಳ ಕಡತಗಳನ್ನು ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. ಅವರು ಕಾಮಗಾರಿಯ ಟೆಂಡರ್ ಕರೆಯುವ ಮೊದಲು ಪತ್ರಿಕೆಗಳಲ್ಲಿ ಪ್ರಕಟಣೆ ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು ಮುಂದಿನ ದಿನಗಳಲ್ಲಿ ಟೆಂಡರ್ ಬಗ್ಗೆ ಜಾಹಿರಾತು ನೀಡುವಂತೆ ಸೂಚಿಸಿದರು.
ನಂತರ ಸಾರ್ವಜನಿಕ ಆಸ್ಪತ್ರೆಗಳಿಗೆ ಭೇಟಿ ಅಲ್ಲಿಯ ಔಷಧಾಲಯ ಹಾಗೂ ವಾರ್ಡ್ಗಳನ್ನು ಪರಿಶೀಲಿಸಿ ವೈದ್ಯರಿಂದ ಮಾಹಿತಿ ಪಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಂಧ್ಯಾ ಸುರಕ್ಷಾ ಫಲಾನುಭವಿಗಳು ಬ್ಯಾಂಕ್ಗಳಲ್ಲೇ ಖಾತೆ ತೆರೆಯುವುದು ಉತ್ತಮ. ತಾಲೂಕಿನಲ್ಲಿ 10,800 ಜನ ಸಂಧ್ಯಾ ಸುರಕ್ಷಾ ಯೋಜನೆಯ ಫಲಾನುಭವಿಗಳಿದ್ದಾರೆ. ಈಗ ಸರ್ಕಾರದ ವತಿಯಿಂದ ಸಂಪೂರ್ಣ ಅಂಗವೈಕಲ್ಯಕ್ಕೆ ಒಳಗಾದವರಿಗೆ 1,000ದಿಂದ 1,200ಕ್ಕೆ ವೇತನ ಹೆಚ್ಚಿಸಿದ್ದು, ಸ್ವಲ್ಪ ಅಂಗ ವೈಕಲ್ಯ ಹೊಂದಿದವರಿಗೆ 500 ನೀಡುತ್ತಿದೆ. ಈ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಿ ಅಂಗವಿಕಲ ವೇತನ ಅರ್ಹ ಫಲಾನುಭವಿಗಳಿಗೆ ಸೇರುವಂತೆ ಮಾಡಬೇಕು ಎಂದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲವು ಚುಚ್ಚುಮದ್ದಿಗೆ ಹಣ ಪಡೆಯುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿದ್ದು, ಯಾವುದೇ ಹಣ ಪಡೆಯುತ್ತಿಲ್ಲ ಎಂದು ತಿಳಿದು ಬಂದಿದೆ. ಔಷಧಾಲಯ, ವಾರ್ಡ್ಗಳು ಹಾಗೂ ಆಸ್ಪತ್ರೆಯ ವ್ಯವಸ್ಥೆ ಸೂಕ್ತ ರೀತಿಯಾಗಿದೆ ಎಂದರು. ನಂತರ ತಾಲ್ಲೂಕಿನ ಜನತೆಗೆ ಸರ್ಕಾರಿ ಇಲಾಖೆಗಳಲ್ಲಿ ಯಾವುದೇ ತೊಂದರೆಯಾದಲ್ಲಿ ಹಾಸನದ ಲೋಕಾಯುಕ್ತ ಕಚೇರಿಗೆ ದೂರು ನೀಡುವಂತೆ ತಿಳಿಸಿದರು. ಸಾರ್ವಜನಿಕರು ದೂರವಾಣಿ ಮೂಲಕವೂ ದೂರು ಸಲ್ಲಿಸಬಹುದಾಗಿದ್ದು, 9448944905 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.