ಅಂಧಕಾರ ದೂರ ಮಾಡುವ ದೀಪೋತ್ಸವ: ಶ್ರೀ
ಹಾಸನ: ಮನುಷ್ಯನಲ್ಲಿನ ಅಂಧಕಾರವನ್ನು ದೂರ ಮಾಡಿ ಸುಜ್ಞಾನದ ಬೆಳಕನ್ನು ಮೂಡಿಸುವುದೇ ಕಾರ್ತಿಕ ದೀಪೋತ್ಸವ ಧಾರ್ಮಿಕ ಸಮಾರಂಭದ ಮುಖ್ಯ ಸಂದೇಶವಾಗಿದೆ ಎಂದು ಕೋಡಿಮಠ ಪೀಠಾಧ್ಯಕ್ಷ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದಲ್ಲಿ ಏರ್ಪಡಿಸಿದ್ದ ಕಾರ್ತಿಕ ಲಕ್ಷದೀಪೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಭಾರತೀಯ ಸನಾತನ ಸಂಸ್ಕತಿಯಲ್ಲಿ ಧಾರ್ಮಿಕ ಸಮಾರಂಭಗಳಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಅಂತೆಯೇ ಕಾರ್ತೀಕ ದೀಪೋತ್ಸವ ಕೂಡ ಸಮಾಜದಲ್ಲಿ ಸುಖ, ಶಾಂತಿ ಎಲ್ಲರಿಗೂ ದೊರಕಲಿ ಎಂಬುದಾಗಿದ್ದು, ಮನುಷ್ಯನ ದುರ್ಗುಣವನ್ನು ಅಗ್ನಿಜ್ವಾಲೆಯಲ್ಲಿ ಸುಟ್ಟು, ಬೆಳಕು ಎಂಬ ಸುಜ್ಞಾನದ ಸನ್ಮಾರ್ಗದಲ್ಲಿ ನಡೆಸು ಎಂದು ಜ್ಯೋತಿ ಸ್ವರೂಪನಾದ ಭಗವಂತನಲ್ಲಿ ನಾವುಗಳೆಲ್ಲರೂ ಸಾಮೂಹಿಕವಾಗಿ ಪ್ರಾರ್ಥಿಸುವುದೇ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.