ಅರಕಲಗೂಡಲ್ಲಿ 650 ಕುಟುಂಬಕ್ಕೆ ಶೌಚಾಲಯವಿಲ್ಲ!
ಅರಕಲಗೂಡು: ನೈರ್ಮಲ್ಯ ಮತ್ತು ಸ್ವಚ್ಛತೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನೇಕ ಯೋಜನೆಗಳನ್ನು ದಶಕಗಳಿಂದ ಜಾರಿಗೆ ತಂದಿವೆ. ಆದರೆ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಸಮೀಕ್ಷೆಯೊಂದರಲ್ಲಿ ಪಪಂ ವ್ಯಾಪ್ತಿಯೊಂದರಲ್ಲೇ 650 ಶೌಚಾಲಯರಹಿತ ಕುಟುಂಬಗಳಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಕುರಿತು ಮಾಹಿತಿ ಒದಗಿಸಿದ ಮುಖ್ಯಾಧಿಕಾರಿ ಸುರೇಶ್ಬಾಬು, ಈ ಪೈಕಿ ಪ.ಜಾತಿ ಮತ್ತು ಪ.ಪಂಗಡದ 350 ಕುಟುಂಬಗಳು ಮತ್ತು 300 ಇತರೆ ವರ್ಗದ ಕುಟುಂಬಗಳು ಶೌಚಾಲಯದ ಸಮಸ್ಯೆಯನ್ನು ಎದುರಿಸುತ್ತಿವೆ ಎಂದರು. ಹಂತಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಡಲಾಗುವುದು. 2013-14ನೇ ಸಾಲಿಗೆ 14 ಲಕ್ಷ ಮಾತ್ರ ಬಿಡುಗಡೆಯಾಗಿದೆ. ಸದರಿ ಅನುದಾನದಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಕುಟುಂಬಗಳಿಗೆ ಆದ್ಯತೆಯ ಮೇಲೆ ಶೌಚಾಲಯ ನಿರ್ಮಿಸಿಕೊಡಲಾಗುತ್ತಿದೆ. ಪ್ರತಿ ಫಲಾನುಭವಿಗೆ ಶೌಚಾಲಯ ನಿರ್ಮಾಣಕ್ಕೆ 20 ಸಾವಿರ ನೀಡಲಾಗುವುದು. ಈ ಸಾಲಿಗೆ 70 ಮಂದಿ ಫಲಾನುಭವಿಗಳನ್ನು ಮಾತ್ರ ಗುರುತಿಸಲಾಗಿದೆ. ಬಾಕಿ ಉಳಿಯುವ ಫಲಾನುಭವಿಗಳಿಗೆ ಶೌಚಾಲಯ ನಿರ್ಮಿಸಲು 1.40 ಕೋಟಿ ಅನುದಾನ ಬಿಡುಗಡೆಗೆ ಯೋಜನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಪಪಂಗೆ ಕೋಟಿ ತೆರಿಗೆ ಬಾಕಿ
ಅರಕಲಗೂಡು: ಇಲ್ಲಿನ ಪಟ್ಟಣ ಪಂಚಾಯಿತಿಗೆ ಒಂದು ಕೋಟಿ ರು.ಗೂ ಅಧಿಕ ತೆರಿಗೆ ಬಾಕಿ ಬರಬೇಕಿದ್ದು, ಇದರಿಂದಾಗಿ ಪಟ್ಟಣದ ಅಭಿವೃದ್ಧಿಗೆ ಅಡ್ಡಿಯಾಗಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮನೆಗಳು ಮತ್ತು ಇತರೆ ಕಟ್ಟಡಗಳಿಂದ ಬರಬೇಕಾದ ತೆರಿಗೆ ಬಾಕಿ ರು. 12 ಲಕ್ಷಗಳಿಗೂ ಅಧಿಕ. ಇನ್ನು ನೀರಿನ ತೆರಿಗೆ ರು. 67 ಲಕ್ಷ ಬಾಕಿಯಾದರೆಇನ್ನು ಪಟ್ಟಣ ಪಂಚಾಯಿತಿಗೆ ಸೇರಿದ ಮಳಿಗೆಗಳ ಬಾಡಿಗೆ ಬಾಬ್ತು ರು. 45 ಲಕ್ಷ ಬಾಕಿ ಉಳಿದಿದೆ. ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಿ ಪ್ರಯತ್ನಿಸುತ್ತಿದ್ದರೂ ವಸೂಲಾತಿ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಸುರೇಶ್ ಬಾಬು.
ಹೆಸರು ನೋಂದಾಯಿಸಿ
ಹಾಸನ: ಮಡಿಕೇರಿಯಲ್ಲಿ ಜನವರಿ 7, 8 ಮತ್ತು 9ರಂದು ನಡೆಯುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭಾಗವಹಿಸಲು ಇಚ್ಛಿಸುವ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಡಿ. 15ರೊಳಗೆ ತಮ್ಮ ಹೆಸರನ್ನು ರು. 300 ನೋಂದಣಿ ಶುಲ್ಕ ನೀಡಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ನೋಂದಾಯಿಸಿ ರಶೀದಿ ಪಡೆಯಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಚ್.ಎಲ್. ಜನಾರ್ಧನ್ ಕೋರಿದ್ದಾರೆ.
ಯಶೋಗಾಥೆಗಳ ಆಹ್ವಾನ
ಹಾಸನ: ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯು ಡಿ.21ರಂದು ಬೆಂಗಳೂರಿನಲ್ಲಿ ಏಟ್ರಿಯಾ ಹೊಟೇಲ್ನಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಪಾರದರ್ಶಕತೆ ಮತ್ತು ಮಾಹಿತಿ ಬಹಿರಂಗಪಡಿಸುವಿಕೆ ಕುರಿತು ಒಂದು ದಿನ ಪ್ರಾದೇಶಿಕ ಕಾರ್ಯಾಗಾರ ಏರ್ಪಡಿಸಿದೆ. ಈ ಕಾರ್ಯಾಗಾರದಲ್ಲಿ 5 ವಿಷಯಗಳ ಕುರಿತು ಚರ್ಚೆ ನಡೆಸಲಾಗುವುದು. 1) ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮವಾಗಿ ಸರ್ಕಾರಿ ಕಾರ್ಯ ಚಟುವಟಿಕೆಗಳಲ್ಲಿ ಪಾರದರ್ಶಕ. 2) ಸ್ವಯಂ ಮಾಹಿತಿ ಬಹಿರಂಗಪಡಿಸುವಿಕೆ ಸವಾಲುಗಳು ಮತ್ತು ತೊಡಕುಗಳು. 3) ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮವಾಗಿ ಕಡಿಮೆಯಾಗುತ್ತಿರುವ ಭ್ರಷ್ಟಾಚಾರ ವಾಸ್ತವ ಅಥವಾ ಮಿಥ್ಯ 4) ಮಾಹಿತಿ ಹಕ್ಕು ಕಾಯ್ದೆ ಪರಿಣಾಮವಾಗಿ ನಿರ್ಧಾರ ಕೈಗೊಳ್ಳುವಲ್ಲಿ ಜನರ ಸಹಭಾಗಿತ್ವ. 5) ಮಾಹಿತಿ ಹಕ್ಕು ಕಾಯ್ದೆಯ ಭಾಗಿದಾರರಿಗೆ ಜಾಗೃತಿ ಬಗ್ಗೆ ಚರ್ಚಿಸಲಾಗುವುದು. ಈ ವಿಷಯಗಳ ಕುರಿತು ಆಸಕ್ತರು ಕೆ.ಎಂ.ಪ್ರಸಾದ್, ಕಾರ್ಯಾಗಾರ ಸಂಯೋಜಕರನ್ನು (9448719627) ಸಂಪರ್ಕಿಸಬಹುದು. ತಮ್ಮ ಯಶೋಗಾಥೆಗಳನ್ನು ಡಿ.10ರೊಳಗೆ ಕಳುಹಿಸಬಹುದು. ಆಯ್ಕೆ ಸಮಿತಿ ಆಯ್ಕೆ ಮಾಡಿದ ಐದು ಅತ್ಯುತ್ತಮ ಯಶೋಗಾಥೆಗಳಿಗೆ ತಲಾ 5000 ನಗದು ಬಹುಮಾನ ನೀಡಲಾಗುವುದು ಎಂದು ಆಡಳಿತ ತರಬೇತಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.