ಎರೆಹುಳು ಗೊಬ್ಬರ ಬಳಕೆಯಿಂದ ಅಧಿಕ ಇಳುವರಿ: ಚಿದಾನಂದ್
ಬೇಲೂರು: ಇಂದಿನ ದಿನ-ಮಾನದಲ್ಲಿ ಕೃಷಿಕರಲ್ಲಿ ಕೊಟ್ಟಿಗೆ ಗೊಬ್ಬರದ ಪ್ರಮಾಣ ಇಳಿಮುಖವಾಗಿದ್ದು, ರೈತರು ಅಲ್ಪ ವೆಚ್ಚದಲ್ಲಿ ಎರೆಹುಳು ಗೊಬ್ಬರ ಬಳಕೆ ಮಾಡಬೇಕು ಎಂದು ಕೃಷಿ ಅಧಿಕಾರಿ ಚಿದಾನಂದ್ ಕರೆ ನೀಡಿದರು.
ತಾಲೂಕಿನ ಇಂಟಿತೋಳಲು ಗ್ರಾಮದಲ್ಲಿ ಶ್ರೀಧರ್ಮಸ್ಥಳ ಸಂಘ ಮತ್ತು ಗ್ರಾಮಸ್ಥರು ಸೇರಿ ಹಮ್ಮಿಕೊಂಡಿದ್ದ ಎರೆಹುಳು ಗೊಬ್ಬರದ ತಯಾರಿಕೆ ಮತ್ತು ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿ, ರಸಗೊಬ್ಬರದ ಹಾವಳಿಯಿಂದ ಮಣ್ಣಿನ ಫಲವತ್ತತೆ ನಾಶವಾಗುತ್ತಿದೆ. ಈ ನಿಟ್ಟಿನಲ್ಲಿ ರೈತಾಪಿ ವರ್ಗದವರು ತಮ್ಮ ಅಸುಪಾಸಿನಲ್ಲಿ ಲಭ್ಯ ಇರುವ ಕಸ-ಕಡ್ಡಿಗಳಿಂದ ಉತ್ತಮ ಎರೆಹುಳು ರಸಗೊಬ್ಬರ ಪಡೆದು ಅಧಿಕ ಇಳವರಿ ಮತ್ತು ಉತ್ತಮ ಆಹಾರ ಪಡೆಯಬಹುದು. ಎರೆಹುಳು ಗೊಬ್ಬರ ತಯಾರಿಕೆ ಮಾಡಲು ರೈತರಿಗೆ ಸರ್ಕಾರದಿಂದ ಸಹಾಯಧನ ಲಭ್ಯವಿದೆ ಎಂದರು.
ಈ ವಿಧಾನವಲ್ಲದೆ ರೈತರು ಜೀವಾಮೃತ ಬಳಕೆಗೆ ಮುಂದಾಗಬೇಕು. ದೇಶೀಯ ಹಸುವಿನ ಸಗಣಿ, ಹೊಲದ ಬದಿಯ ಮಣ್ಣು, ಅವರೇಕಾಳು ಕಡ್ಲೆಕಾಳು ದ್ವಿದಳ ಪುಡಿಯನ್ನು ಒಂದು ತೊಟ್ಟಿಗೆ ಹಾಕಿ ಏಳು ದಿನದ ನಂತರದಲ್ಲಿ ತಮ್ಮ ಹೊಲ ಗದ್ದೆಗೆ ಬಳಕೆ ಮಾಡಬೇಕು. ರೈತರು ಮಿತಿ ಮೀರಿದ ರಸಗೊಬ್ಬರ ಹಾವಳಿಯಿಂದ ತಪ್ಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಸಂಘದ ಕೋಶಾಧಿಕಾರಿ ಎಲ್.ಸಿ.ಲಿಂಗರಾಜಾಚಾರ್, ಪದಾಧಿಕಾರಿಗಳಾದ ಇ.ಆರ್.ಓಂಕಾರ್ಪಟೇಲ್, ಕಲೇಶ್, ಮಲ್ಲೇಶ್, ಎಚ್.ಎಂ.ಮಂಜುಳ, ಸುಮಾ, ಲೋಕೇಶ್, ಸೋಮಶೇಖರ್, ಮೀನಾಕ್ಷಿ ಇದ್ದರು.