ಕರೆಂಟ್ಗಾಗಿ ಪ್ರತಿಭಟನೆ
ಕ.ಪ್ರ. ವಾರ್ತೆ ಟಿ ರಾಮನಾಥಪುರ ಟಿ ಡಿ 7
ಕರ್ನಾಟಕದ ಉಪ್ಪುಂಡು ಮಹಾರಾಷ್ಟ್ರದ ಬಾಲಂಗೋಚಿಯಂತೆ ವರ್ತಿಸುತ್ತಿರುವ ನಾಡದ್ರೋಹಿ ಸಂಬಾಜಿ ಪಾಟೀಲ್ ಹೇಳಿಕೆ ಮತ್ತು ಇಲ್ಲಿನ ಅಸಮರ್ಪಕ ವಿದ್ಯುತ್ ಪೂರೈಕೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕುಶಲ್ ಐಟಿಐ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಎಚ್.ಇ.ಜಗದೀಶ್ ಮಾತನಾಡಿ, ಪರೀಕ್ಷೆ ಸಮೀಪಿಸುತ್ತಿವೆ. ಆದರೆ ಇತ್ತೀಚೆಗೆ ರಾಮನಾಥಪುರ, ಕೊಣನೂರು ಹೋಬಳಿಗಳು ಸೂರ್ಯಾಸ್ತಮಾನವಾದ ಕೂಡಲೆ ಕತ್ತಲಲ್ಲಿ ಕಣ್ಮರೆಯಾಗುತ್ತಿವೆ ಎಂದು ಆರೋಪಿಸಿದರು.
ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ರೈತರು ತಮ್ಮ ಜಮೀನುಗಳಲ್ಲಿ ಅರ್ಧಂಬರ್ಧ ಬೆಳೆದಿರುವ ಜೋಳ, ರಾಗಿ, ಬತ್ತ ಇನ್ನಿತರ ಬೆಳೆಗಳು ನೀರಿಲ್ಲದೆ ಒಣಗುತ್ತಿದ್ದು, ರೈತರು ನೀರು ಹಾಯಿಸಲು ಹರಸಾಹಸ ಪಡುತ್ತಿದ್ದು, ಈ ಬಗ್ಗೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಹಿರಿಯ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದು ಸರಿಯಲ್ಲ. ಕೂಡಲೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅಸಮರ್ಪಕ ವಿದ್ಯುತ್ ಪೂರೈಕೆಯನ್ನು ಸರಿಪಡಿಸುವಂತೆ ಒತ್ತಾಯಿಸಿದರು.
ಕರ್ನಾಟಕದ ಉಪ್ಪುಂಡು ನಾಡದ್ರೋಹಿ ಹೇಳಿಕೆಯನ್ನು ನೀಡುತ್ತಿರುವ ಸಂಬಾಜಿ ಪಾಟೀಲ್ ಅಧಿಕಾರದಲ್ಲಿ ಮುಂದುವರಿಯಲು ಅನರ್ಹ. ಈತನನ್ನು ವಜಾಗೊಳಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಪಟ್ಟಣದ ಹೃದಯಭಾಗದಲ್ಲಿರುವ ಬಸವ ವೃತ್ತದಿಂದ ಹೊರಟ ಪ್ರತಿಭಟನಾಕಾರರು ಮೊದಲಿಗೆ ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ನಂತರ ನಾಡಕಚೇರಿಗೆ ತೆರಳಿ ರಾಜಸ್ವ ನಿರೀಕ್ಷಕ ಅಂಜನಪ್ಪನವರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಹೊಂಬೇಗೌಡ, ಕಾರ್ಯಾಧ್ಯಕ್ಷ ಸ್ವಾಮಿಗೌಡ, ರಾಮನಾಥಪುರ ಹೋಬಳಿಯ ಅಧ್ಯಕ್ಷ ಕೃಷ್ಣೇಗೌಡ, ಉಪಾಧ್ಯಕ್ಷ ಎಸ್.ಪಿ.ಕುಮಾರಾಚಾರ್, ರವಿ ಮತ್ತು ಕುಶಲ ಐಟಿಐ ವಿದ್ಯಾರ್ಥಿಗಳು ಇದ್ದರು.