ಕಳಪೆ ಚರಂಡಿ ಕಾಮಗಾರಿ; ಆಕ್ರೋಶ
ರಾಮನಾಥಪುರ: ಸಮೀಪದ ಕಟ್ಟೇಪುರದಲ್ಲಿರುವ ಅಂಬೇಡ್ಕರ್ ಭವನದ ಬಳಿ ನಡೆಯುತ್ತಿರುವ ಕಳಪೆ ಚರಂಡಿ ಕಾಮಗಾರಿಯನ್ನು ಕೂಡಲೆ ಸ್ಥಗಿತಗೊಳಿಸುವಂತೆ ಅಂಬೇಡ್ಕರ್ ನಗರದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು. ಅಂಬೇಡ್ಕರ್ ನಗರ ನಿವಾಸಿ ರವಿ ಮಾತನಾಡಿ, ಈ ಹಿಂದೆ ಅಂಬೇಡ್ಕರ್ ಭವನದ ಬಳಿ ಕಾಂಕ್ರೀಟ್ ಚರಂಡಿ ನಿರ್ಮಿಸಿದ್ದು, ಇದು ಚೆನ್ನಾಗಿತ್ತು. ಆದರೂ ಇಲ್ಲಿನ ಗ್ರಾಪಂ ವತಿಯಿಂದ ಚರಂಡಿ ಕಾಮಗಾರಿ ನಿರ್ವಹಿಸುತ್ತಿರುವ ಸ್ಥಳೀಯ ಪಂಚಾಯ್ತಿ ಸದಸ್ಯ ಜಗದೀಶ್ ಎಂಬಾತ ಹೊಸದಾಗಿ ಕಾಮಗಾರಿ ಮಾಡುವ ದುರುದ್ದೇಶದಿಂದ ಹಳೆಯದನ್ನು ಕಿತ್ತು ಹಾಕಿ ಈ ಜಾಗದಲ್ಲಿ ಕಾಂಕ್ರೀಟ್ನಿಂದ ಚರಂಡಿ ನಿರ್ಮಿಸದೆ ಸೈಜ್ಕಲ್ಲು ಬಳಸಿ ಕಳಪೆ ಗುಣಮಟ್ಟದ ಸಿಮೆಂಟ್ ಬಳಸಿ ಚರಂಡಿ ನಿರ್ಮಿಸಲಾಗುತ್ತಿದೆ. ಈ ವಿಚಾರವಾಗಿ ಎಷ್ಟು ಹೇಳಿದರೂ ಕೇಳದೆ ಉಡಾಫೆಯಿಂದ ವರ್ತಿಸುತ್ತಾ ತನಗಿಷ್ಟ ಬಂದ ರೀತಿ ಕಾಮಗಾರಿ ನಡೆಸುತ್ತಿದ್ದಾರೆ. ಇದರಿಂದ ಇಲ್ಲಿನ ನಾಗರಿಕರಿಗೆ ಅಸಮಾಧಾನ ಉಂಟಾಗಿದೆ ಎಂದು ತಿಳಿಸಿದರು. ಯಜಮಾನ್ ಸ್ವಾಮಿ, ಶಂಕರ್, ಹರೀಶ್, ಗೋಪಾಲ, ವೆಂಕಟೇಶ, ಅರುಣ, ಅನು ಇದ್ದರು.
ಯುವಕ ನಾಪತ್ತೆ
ಆಲೂರು: ತಾಲೂಕಿನ ಕೆ.ಹೊಸಕೋಟೆ ಹೋಬಳಿ ಮಗ್ಗೆ ಗ್ರಾಮದ ಅನೂಪ್ ಮಂತೆರೊ(26) ನಾಪತ್ತೆಯಾಗಿದ್ದಾರೆ. ನ.29ರಂದು ತನ್ನ ಬೈಕಿನಲ್ಲಿ ಮನೆಯಿಂದ ಹೊರ ಹೋದವನು ಈವರೆಗೂ ಮನೆಗೆ ಬಾರದ ಕಾರಣ ಅವರ ದೊಡ್ಡಪ್ಪ ಪೆರ್ದು ಮೆಂತೆರೊ ಅವರು ಆಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈತನ ಬಗ್ಗೆ ಮಾಹಿತಿ ದೊರೆತಲ್ಲಿ ಆಲೂರು ಠಾಣೆಗೆ ತಿಳಿಸಬೇಕೆಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.