ನಿವೇಶನ ಶೀಘ್ರ ಹಂಚಿಕೆಗೆ ಚಿಂತನೆ
ಕ.ಪ್ರ. ವಾರ್ತೆ ಟಿ ಹಾಸನ ಟಿ ಡಿ 7
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ನಿವೇಶನ ಹಂಚಿಕೆ ನಿಯಮಗಳನ್ವಯ ಅರ್ಜಿದಾರರಿಗೆ ನಿವೇಶನಗಳನ್ನು ಹಂಚಲಾಗುವುದೆಂದು ನಗರಾಭಿವೃದ್ಧಿ ಸಚಿವ ವಿನಯ್ಕುಮಾರ್ ಸೊರಕೆ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಅವರು ಹಾಸನ ನಗರಾಭಿವೃದ್ಧಿ ಪ್ರಾಧಿಕಾರದಿಂದ ಎಸ್.ಎಂ.ಕೃಷ್ಣ ನಗರ ಬಡಾವಣೆಯನ್ನು ಅಭಿವೃದ್ಧಿಪಡಿಸಿ ಅರ್ಜಿದಾರರಿಗೆ ಹಂಚಲು ಕೈಗೊಂಡಿರುವ ಕ್ರಮಗಳ ಬಗ್ಗೆ ವಿಧಾನ ಪರಿಷತ್ನಲ್ಲಿ ಸಚಿವರನ್ನು ಕೇಳಿದಾಗ ಶೇ.40ರ ಭಾಗ ರೈತರಿಗೆ ನೀಡುವ ನಿವೇಶನಗಳು ಒಟ್ಟು 2763 ಇದ್ದು, ನಿಯಮಗಳನ್ವಯ ಹಂಚಿಕೆ ಮಾಡಲು ಕ್ರಮ ವಹಿಸಲಾಗುವುದೆಂದು ಸಚಿವರು ತಿಳಿಸಿದರು.
ನಿವೇಶನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ ಈಗಾಗಲೇ 2 ತಿಂಗಳು ಗತಿಸಿದ್ದು ರೈತರ ಮತ್ತು ಅರ್ಜಿದಾರರ ಹಿತದೃಷ್ಟಿಯಿಂದ ನಿವೇಶನಗಳನ್ನು ಶೀಘ್ರವಾಗಿ ಹಂಚಿಕೆ ಮಾಡಲು ಪಟೇಲ್ ಶಿವರಾಂ ಅವರು ಪರಿಷತ್ನಲ್ಲಿ ನಡೆದ ಚರ್ಚೆಯಲ್ಲಿ ಒತ್ತಾಯಿಸಿದಾಗ ಮಾನ್ಯ ನಗರಾಭಿವೃದ್ಧಿ ಸಚಿವರು ಉತ್ತರಿಸುತ್ತಾ ಹಾಸನಕ್ಕೆ ಖುದ್ದಾಗಿ ಭೇಟಿ ನೀಡಿ ನಿವೇಶನಗಳನ್ನು ತ್ವರಿತವಾಗಿ ಹಂಚಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ರೈತರಿಗೆ ನೀಡಿರುವ ಭೂ ಪರಿಹಾರವನ್ನು ಶೇ 9.5ರ ಬಡ್ಡಿದರದಲ್ಲಿ ಪ್ರಾಧಿಕಾರಕ್ಕೆ ಮರು ಪಾವತಿಸಿಕೊಂಡು, ಸಂಘ ಸಂಸ್ಥೆಗಳು, ಸರ್ಕಾರಿ ಇಲಾಖೆಗಳಿಗೆ ಸಗಟು ಮಾರಾಟ ಮಾಡಲಾಗಿದ್ದ ಮೊಬಲಗನ್ನು ಬಡ್ಡಿ ಸಮೇತ ಹಿಂದಿರಿಗಿಸಿ ನೋಂದಣಿಗಳನ್ನು ರದ್ದುಪಡಿಸಲಾಗಿದೆ. ನಿರ್ದೇಶಕರು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ಬೆಂಗಳೂರು ಇವರು ಅ.24ರಂದು 60್ಗ40 ಅನುಪಾತದಡಿ ವಸತಿ ಯೋಜನೆ ರೂಪರೇಖೆಗೆ ಅನುಮೋದನೆ ನೀಡಿರುತ್ತಾರೆ.
ಎಸ್.ಎಂ.ಕೆ ನಗರ ವಸತಿ ಬಡಾವಣೆ ರೈತರಿಂದ ಅವರ ಪಾಲಿನ ಶೇ.40 ಭಾಗಕ್ಕೆ ಪರಸ್ಪರ ಒಡಂಬಡಿಕೆ ಪತ್ರಕ್ಕೆ ನಿಯಮಾನುಸಾರ ಒಪ್ಪಿಗೆ ಪಡೆಯುವ ಹಂತದಲ್ಲಿರುತ್ತದೆ.
ಪರಿಷ್ಕೃತ ವಸತಿ ರೂಪರೇಖೆಯಂತೆ ಸಮಗ್ರ ಯೋಜನಾ ವರದಿ ತಯಾರಿಸಲಾಗುತ್ತಿದೆ. ಪ್ರಾಧಿಕಾರದಿಂದ ಪ್ರಸ್ತಾವನೆ ಬಂದ ತರುವಾಯ ಸಮಗ್ರ ಯೋಜನೆ ವರದಿಗೆ ಅನುಮೋದನೆ ನೀಡುವ ಬಗ್ಗೆ ಪರಿಶೀಲಿಲಾಗುವುದೆಂದು ಹಾಗೂ ಅನುಮೋದಿತ ನಕ್ಷೆಯಂತೆ ಬಡಾವಣೆಯಲ್ಲಿ ನಿವೇಶನಗಳನ್ನು ರಚಿಸಿದ ತರುವಾಯ ಹಂಚಿಕೆ ಪ್ರಕ್ರಿಯೆಯ ಬಗ್ಗೆ ಕ್ರಮವಿಡಲಾಗುವುದೆಂದು ತಿಳಿಸಿದರು.
ನಿವೇಶನಗಳಿಗೆ ಒಟ್ಟು 9335 ಅರ್ಜಿಗಳು ಸ್ವೀಕೃತವಾಗಿವೆ. ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ಬೆಂಗಳೂರು ಇವರು ಅನುಮೋದನೆ ನೀಡಿರುವ ನಕ್ಷೆ ಪ್ರಕಾರ ಒಟ್ಟು 2356 ನಿವೇಶನಗಳು ಅರ್ಜಿದಾರರಿಗೆ ಲಭ್ಯವಿರುತ್ತವೆ ಎಂದು ಸಚಿವರು ತಿಳಿಸಿದರು.