ಬಜೆಟ್ನಲ್ಲಿ ಕಸದ ಸಮಸ್ಯೆಗೆ ಒತ್ತು ನೀಡಿ
ಕ.ಪ್ರ. ವಾರ್ತೆ ಟಿ ಹಾಸನ ಟಿ ಡಿ 7
ನಗರಸಭೆ ಹಿಂಭಾಗ ಸೃಷ್ಟಿಯಾಗಿರುವ ಕಸದ ರಾಶಿಯನ್ನು ಮೊದಲು ತೆರವುಗೊಳಿಸುವುದು ಸೇರಿದಂತೆ ನಾನಾ ಸಮಸ್ಯೆ ಬಗೆಹರಿಸುವುದಕ್ಕೆ ಮುಂದಿನ ಬಜೆಟ್ನಲ್ಲಿ ಕ್ರಮ ಕೈಗೊಳ್ಳುವಂತೆ ನಗರದ ಹಿರಿಯ ನಾಗರಿಕ ರು, ಸಾರ್ವಜನಿಕರು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ.
ನಗರಸಭೆಯ 2014-15ನೇ ಸಾಲಿನ ಆಯವ್ಯಯ ಅಂದಾಜು ಪಟ್ಟಿ ತಯಾರಿಸುವ ಸಂಬಂಧ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಗರಸಭೆ ಅಧ್ಯಕ್ಷೆ ಎಚ್.ಎಚ್.ಶ್ರೀವಿದ್ಯಾ ಆನಂದ್ ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸಮಾಲೋಚನಾ ಸಭೆ ನಡೆಯಿತು. ಈ ಸಂದರ್ಭದಲ್ಲಿ ನಗರದ ಹಿರಿಯ ನಾಗರಿಕರು, ಸರ್ಕಾರೇತರ ಸಂಘ ಸಂಸ್ಥೆಯವರು ಭಾಗವಹಿಸಿದ್ದರು.
ಸಭೆಯಲ್ಲಿ ಸಮಾಜ ಸೇವಕ ಅಜ್ಮದ್ ಖಾನ್, ಮನೋಹರ್, ಹಿರಿಯ ನಾಗರಿಕ ಶಿವಣ್ಣ ಸೇರಿದಂತೆ ಇತರರು ಮಾತನಾಡಿ, ನಗರದಲ್ಲಿ ಉತ್ಪತ್ತಿಯಾಗುವ ಕರಗುವ ಹಾಗೂ ಕರಗದ ಕಸಗಳನ್ನು ಸಂಪೂರ್ಣವಾಗಿ ಸಂತೆಪೇಟೆಯ ನಗರಸಭೆಯ ಹಿಂಭಾಗದಲ್ಲಿ ರಾಶಿ ಹಾಕಲಾಗುತ್ತಿದೆ. ಈ ಜಾಗದಲ್ಲಿ ಕಸದ ರಾಶಿ ಶಿಖರದಂತೆ ಎದ್ದಿದೆ ಎಂದು ಆರೋಪಿಸಿದರು.
ನಗರಸಭೆ ವತಿಯಿಂದ ನಗರದಲ್ಲಿ ಉತ್ಪತ್ತಿಯಾಗುವ ಕಸವನ್ನು ಒಂದೆಡೆ ಹಾಕಲು ಅಲ್ಲಲ್ಲಿ ಕಸದ ತೊಟ್ಟಿಗಳನ್ನು ಇಡಲಾಗಿದೆ. ಆದರೆ ಆ ತೊಟ್ಟಿಯಲ್ಲಿ ಕಸ ತುಂಬಿ ತುಳುಕಿ ತೊಟ್ಟಿಯ ಮುಂದೆ ಹರಡಿಕೊಂಡಿರುತ್ತದೆ. ಕಸವನ್ನು ಸರಿಯಾದ ಸಮಯಕ್ಕೆ ವಿಲೆವಾರಿ ಮಾಡದ ಪರಿಣಾಮ ಸಾರ್ವಜನಿಕರು ರಸ್ತೆಗಳಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಬಜೆಟ್ನಲ್ಲಿ ಸ್ವಚ್ಛತೆಗೆ ಹೆಚ್ಚಿನ ಅನುದಾನವನ್ನು ಮೀಸಲಿಟ್ಟಿತ್ತು. ಆದರೆ ಸ್ವಚ್ಛತೆ ಮಾತ್ರ ಆಗುತ್ತಿಲ್ಲ ಎಂದರು.
ಸಂತೆಪೇಟೆಯ ಮೂಲಕ ಗೋರೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದ ಎರಡು ಬದಿಗಳಲ್ಲಿ ಕಸ ಸುರಿಯಲಾಗಿದ್ದು, ಕಸದ ರಾಶಿ ಎಗ್ಗಿಲ್ಲದೆ ಏರುತ್ತಿದೆ. ಹಲವು ವರ್ಷಗಳಿಂದ ಕಸದ ರಾಶಿ ಹಾಕಿರುವುದರಿಂದ ಕರದಂತಹ ವಸ್ತುಗಳು ಇಲ್ಲಿ ಅನೈರ್ಮಲ್ಯ ಉಂಟು ಮಾಡಿವೆ. ಇಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬೆಂಕಿಗೆ ಸುಡುತ್ತಿರುವುದರಿಂದ ದಟ್ಟವಾದ ಹೊಗೆ ವಾಯುಮಾಲಿನ್ಯ ಮಾಡುತ್ತಿದೆ. ಹತ್ತಿರದ ಕಾಲೋನಿಗಳಲ್ಲಿ ನಿವಾಸಿಗಳು ನಾನಾ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಈ ಬಾರಿಯ ಬಜೆಟ್ನಲ್ಲಿ ಮೊದಲು ಕಸದ ವಿಲೇವಾರಿಗೆ ಹಣ ಮೀಸಲಿಡಿ ಎಂದು ಒತ್ತಾಯಿಸಿದರು.
ನಂತರ ಕುಡಿಯುವ ನೀರಿನ ಸಮಸ್ಯೆಯೇ ಯತ್ತೇಚ್ಛವಾಗಿದ್ದು, ಅದನ್ನು ದೂರು ಬಂದಾಕ್ಷಣ ಬಗೆಹರಿಸಬೇಕು. ಟ್ಯಾಂಕ್ಗಳನ್ನು ಸ್ವಚ್ಛಗೊಳಿಸಬೇಕು, ಎನ್.ಆರ್.ವೃತ್ತದಲ್ಲಿ ಬೀಡಾಡಿ ದನಗಳನ್ನು ರಸ್ತೆಯಲ್ಲಿ ಬಿಟ್ಟಿದ್ದು, ಅದನ್ನು ಸ್ಥಳಾಂತರಿಸುವ ಕಾರ್ಯ ಆಗಬೇಕು. ಯಾರು ಬೀದಿಗೆ ದನಗಳನ್ನು ಅಟ್ಟಿದ್ದಾರೋ ಅವರಿಗೆ ನೋಟಿಸ್ ನೀಡಿ ದನಗಳನ್ನು ಕರೆದುಕೊಂಡು ಹೋಗುವಂತೆ ನಗರಸಭೆ ಕ್ರಮ ಕೈಗೊಳ್ಳಬೇಕು ಎಂದರು.
ನಗರದ ಎನ್.ಆರ್.ವೃತ್ತದಲ್ಲಿ ಜನಸಂಖ್ಯೆ ಹೆಚ್ಚಳ ಹಾಗೂ ವಾಹನಗಳ ದಟ್ಟಣೆ ಹೆಚ್ಚಾಗಿರುವುದರಿಂದ ಪಾದಚಾರಿಗಳಿಗೆ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಈ ವೃತ್ತದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಮೇಲ್ಸೆತುವೆ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದರು.
ಹಿರಿಯ ನಾಗರಿಕ ರಾಮಸ್ವಾಮಿ ಮಾತನಾಡಿ, ನಗರದ ಪೃಥ್ವಿ ಚಿತ್ರಮಂದಿರದ ಪಕ್ಕದ 80 ರಸ್ತೆಯು ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸಲಿದ್ದು, ಇಲ್ಲಿ ಸಾಕಷ್ಟು ಜಾಗ ಒತ್ತುವರಿಯಾಗಿದೆ. ಈ ಬಗ್ಗೆ ನಗರಸಭೆ ಕ್ರಮ ಕೈಗೊಳ್ಳಬೇಕು ಎಂದರು.
ನಗರಸಭೆಯ ಆಯುಕ್ತ ಕೃಷ್ಣಮೂರ್ತಿ ಮಾತನಾಡಿ, ನಗರದ ಹಿರಿಯ ನಾಗರಿಕರು ನೀಡುವ ಸಲಹೆಗಳನ್ನು ಪರಿಗಣಿಸಿದ್ದು, ಸರ್ಕಾರದಿಂದ ಬಂದ ಅನುದಾನ ಯಾವುದೇ ಕಾರಣಕ್ಕೆ ವೆಚ್ಚ ಮಾಡದೆ ವಾಪಸ್ ಕಳುಹಿಸುವುದಿಲ್ಲ. ಶೇ.ನೂರಕ್ಕೆ ನೂರರಷ್ಟು ಕೆಲಸ ಮಾಡದಿದ್ದರೂ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತೇನೆ. ಮುಂದಿನ ತಿಂಗಳು ಸ್ವಚ್ಛತೆಯ ಟೆಂಡರ್ ಕರೆಯಲಾಗುತ್ತದೆ. ಸಾರ್ವಜನಿಕರ ಸಮ್ಮುಖದಲ್ಲಿಯೇ ಸ್ವಚ್ಛತೆಯ ಟೆಂಡರ್ ನಡೆಸುವುದಾಗಿ ಹೇಳಿದರು.
ಈ ಹಿಂದೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಎಂಬ ದೂರುಗಳಿದ್ದು, ಆದರೆ ಇನ್ನು ಮುಂದೆ ಆ ರೀತಿ ನಡೆಯುವುದಿಲ್ಲ. ಸಾರ್ವಜನಿಕರ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸಲಾಗುತ್ತದೆ. ನನ್ನ ದೂರವಾಣಿ ಸಾರ್ವಜನಿಕ ಸೇವೆಗೆ ಸದಾ ಸಿದ್ಧವಿದ್ದು, ಅದರ ಪ್ರಯೋಜನ ಪಡೆದುಕೊಳ್ಳಬಹುದು. ಪಾರ್ಕ್ಗಳನ್ನು ಸ್ವಚ್ಛಗೊಳಿಸಿ ಅದಕ್ಕೆ ಬೇಲಿ ಹಾಕುವ ಕಾರ್ಯ ಮಾಡಲಾಗುತ್ತದೆ. ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಯಾವುದೇ ಸಂದರ್ಭದಲ್ಲಾದರೂ ಸಾರ್ವಜನಿಕರು ದೂರು ನೀಡಿದರೆ, ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸದಸ್ಯರು, ಸಿಬ್ಬಂದಿ ಸಹಕಾರದೊಂದಿಗೆ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಬಜೆಟ್ ಸಿದ್ಧಗೊಳಿಸುವುದಾಗಿ ಸಾರ್ವಜನಿಕರಿಗೆ, ಹಿರಿಯ ನಾಗರಿಕರಿಗೆ ಹಾಗೂ ಸಂಘ ಸಂಸ್ಥೆ ಸದಸ್ಯರಿಗೆ ಭರವಸೆ ನೀಡಿದರು. ನಗರಸಭೆ ಅಧ್ಯಕ್ಷೆ ಎಚ್.ಎಚ್.ಶ್ರೀವಿದ್ಯಾ ಆನಂದ್, ಉಪಾಧ್ಯಕ್ಷ ಇರ್ಷಾದ್ ಪಾಷ, ಸದಸ್ಯರು, ಹಿರಿಯ ನಾಗರಿಕರು ಸೇರಿದಂತೆ ಇತರರು ಇದ್ದರು.