ಕುಡಿವ ನೀರು ಶಾಶ್ವತ ಪರಿಹಾರಕ್ಕೆ ಹೋರಾಟ ಅಗತ್ಯ: ಶಿವಲಿಂಗೇಗೌಡ
ಅರಸೀಕೆರೆ: ಸತತ ಮಳೆ ಅಭಾವದಿಂದ ತಾಲೂಕಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದ್ದು, ಇದನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಹೋರಾಟಕ್ಕೆ ಸಿದ್ಧರಾಗುವಂತೆ ನಾಗರಿಕರು, ರೈತರು ಹಾಗೂ ವಿದ್ಯಾರ್ಥಿಗಳಿಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಕರೆ ನೀಡಿದರು.
ತಾಲೂಕಿನ ಗಂಡಸಿ ಗ್ರಾಮದ ಶಂಭುಲಿಂಗೇಶ್ವರ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಹಾಗೂ ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಮ್ಮ ಹಿಂದಿನವರು ಮಾಡಿದ ತಪ್ಪಿನಿಂದಾಗಿ ಇಂದು ಪರಿತಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಬೆಳಗಾವಿ ಅಧಿವೇಶನದಲ್ಲಿ ತಾಲೂಕಿನ ಸಮಸ್ಯೆಯನ್ನು ಎಳೆ-ಎಳೆಯಾಗಿ ಬಿಡಿಸಿಟ್ಟಿದ್ದು, ಸರ್ಕಾರದ ಕಣ್ಣು ತೆರೆಸಲು ಇನ್ನು 8-10 ದಿನಗಳಲ್ಲಿ ಹೋರಾಟವನ್ನು ರೂಪಿಸಲಾಗುವುದು. ಪಕ್ಷ ಬೇಧ ಮರೆತು ಎಲ್ಲರೂ ಹೋರಾಟಕ್ಕೆ ಇಳಿಯಬೇಕೆಂದು ಮನವಿ ಮಾಡಿದ ಅವರು ಇಲ್ಲದಿದ್ದರೆ ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ ಎಂದರು.
ಜಿಪಂ ಅಧ್ಯಕ್ಷೆ ಅಂಬಿಕಾ ರಾಮಣ್ಣ, ಉಪಾಧ್ಯಕ್ಷ ಬಿಳಿಚೌಡಯ್ಯ, ಸದಸ್ಯರಾದ ಹುಚ್ಚೇಗೌಡ, ಮಾನಸ ಜಗದೀಶ್, ಜ್ಯೋತಿ ಗಂಗಾಧರ್, ತಾಪಂ ಅಧ್ಯಕ್ಷ ಹೆಚ್.ಟಿ.ಶಿವಮೂರ್ತಿ, ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.