ಕೈ-ಕೈ ಮಿಲಾಯಿಸುವ ಹಂತಕ್ಕೆ 'ಕೈ' ಕಲಹ!
ದಯಾಶಂಕರ ಮೈಲಿ
ಹಾಸನ: ಜಿಲ್ಲೆಯಲ್ಲಿ ಬೆಟ್ಟದಷ್ಟು ಸಮಸ್ಯೆಗಳಿವೆ. ಕಾಡಾನೆಗಳ ಕಾಟದಿಂದ ರೈತರು ಹೈರಾಣರಾಗಿದ್ದಾರೆ. ಮಳೆ ಕೊರತೆಯಿಂದ ತೆಂಗಿನ ಮರಗಳು ಒಣಗುತ್ತಿದ್ದರೆ, ಜಾನುವಾರುಗಳ ಕಾಲುಬಾಯಿ ಜ್ವರ ದಿನೇ ದಿನೇ ಏರುತ್ತಿದೆ. ಸಂಚರಿಸಲು ಯೋಗ್ಯವಾದ ರಸ್ತೆಗಳಿಲ್ಲ. ಬರ ಇರುವ ತಾಲೂಕುಗಳನ್ನು ಬರ ಪೀಡಿತ ಪಟ್ಟಿಗೆ ಸೇರಿಸದೇ ತಾರತಮ್ಯ ಎಸಗಲಾಗಿದೆ. ಎದುರಾಗುತ್ತಿವ ಬೇಸಿಗೆ ಬರುವ ಕುಡಿಯುವ ನೀರಿನ ಸಮಸ್ಯೆ, ಈಗಲೇ ವಿದ್ಯುತ್ ಕಟ್ ಆರಂಭವಾಗಿದೆ.
ಹೀಗೆ ಹತ್ತು ಹಲವು ಜ್ವಲಂತ ಸಮಸ್ಯೆಗಳು ಜಿಲ್ಲೆಯಲ್ಲಿ ರುದ್ರ ನರ್ತನ ಮಾಡುತ್ತಿವೆ. ಆದರೆ ಇತ್ತ ಗಮನಹರಿಸಬೇಕಾದ ಆಡಳಿತ ಪಕ್ಷ ಕಾಂಗ್ರೆಸ್ ಜಿಲ್ಲಾ ಮುಖಂಡರು ಪರಸ್ಪರ ಆರೋಪ- ಪ್ರತ್ಯಾರೋಪದಲ್ಲಿ ತೊಡಗಿರುವುದು ದುರಂತವೇ ಸರಿ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.
ಸುದ್ದಿಗೋಷ್ಠಿಗಳಲ್ಲಿ ಕೈ ಮುಖಂಡರು ತಮ್ಮ ತಮ್ಮ ವಿರುದ್ಧವೇ ಆರೋಪ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದು ಕೈ ಕೈ ಮಿಲಾಯಿಸುವ ಹಂತಕ್ಕೆ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ ಎಂಬ ಆತಂಕ ಉಂಟಾಗಿದೆ.
ಸಚಿವರ ವಿರುದ್ಧ ದೂರಿಗೆ ನಿರ್ಧಾರ: ಜಿಲ್ಲೆಗೆ ಕಾಲ ಕಾಲಕ್ಕೆ ಭೇಟಿ ನೀಡದ ಉಸ್ತುವಾರಿ ಸಚಿವರ ವಿರುದ್ಧ ಹೈಕಮಾಂಡ್ಗೆ ದೂರು ನೀಡುವುದಾಗಿ ಒಂದಷ್ಟು ಕಾಂಗ್ರೆಸ್ ಮುಖಂಡರು ಹೇಳಿದರೆ, ಅದಕ್ಕೆ ಆನೇಕ ಕಾಂಗ್ರೆಸಿಗರು ವಿರೋಧಿಸಿದ್ದಾರೆ. ಯಾವ ಮಟ್ಟಕ್ಕೆ ಅಂದ್ರೆ... ಆರೋಪ- ಪ್ರತ್ಯಾರೋಪ ಮಾಡಿದವರೆಲ್ಲಾ ಪಕ್ಷದಿಂದ ಉಚ್ಛಾಟಿಸಬೇಕೆಂದು ಆಗ್ರಹಿಸಿರುವುದು. ಕೆಪಿಸಿಸಿ ಸದಸ್ಯ ವಿನಯಗಾಂಧಿ ಮತ್ತಿತರರು, ಉಸ್ತುವಾರಿ ಸಚಿವರು ಆಗಾಗ್ಗೆ ಬಂದು ಜಿಲ್ಲೆ ಸಮಸ್ಯೆಗಳತ್ತ ಗಮನಹರಿಸುತ್ತಿಲ್ಲ. ಎರಡು ಜಿಲ್ಲೆಗಳ ಉಸ್ತುವಾರಿ ಆಗಿರುವುದರಿಂದ ಸಚಿವ ಮಹಾದೇವಪ್ಪನವರಿಗೆ ಸಾದ್ಯವಾಗುತ್ತಿಲ್ಲ. ಹಾಗಾಗಿ ಬೇರೆಯವನ್ನು ನೇಮಿಸಬೇಕು.ಲೋಕೋಪಯೋಗಿ ಇಲಾಖೆಯಡಿ ನಡೆಯುತ್ತಿರುವ ಕಾಮಗಾರಿಗಳು ನ್ಯಾಯವಾಗಿಲ್ಲ ಎಂದು ಟೀಕೆ ಮಾಡಿದರು. ಇದರಿಂದ ಕುಪಿತರಾದ ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾ ಉಪಾಧ್ಯಕ್ಷರಾದ ಜಯಕುಮಾರ್, ಜಿ.ಎಸ್. ಕುಮಾರಸ್ವಾಮಿ, ಹಾಸನ ಬ್ಲಾಕ್ ಅಧ್ಯಕ್ಷ ಎಸ್.ಕೆ. ರಾಜು ಮತ್ತಿತರರು, ಉಸ್ತುವಾರಿ ಸಚಿವರ ವಿರುದ್ಧ ಮಾತನಾಡಿರುವ ವಿನಯಗಾಂಧಿ ಮತ್ತವರ ಬೆಂಬಲಿಗರ ವಿರುದ್ಧ ಶಿಸ್ತು ಕ್ರಮ ಜರುಗಿಸಿ, ಪಕ್ಷದಿಂದ ಉಚ್ಚಾಟಿಸಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರ ಎಂ.ಕೆ. ಶೇಷೇಗೌಡರು, ರಾಜ್ಯ ಸರ್ಕಾರ 9 ತಿಂಗಳಲ್ಲಿ ಬಿದ್ದು ಹೋಗುತ್ತದೆ ಎಂದು ಹೇಳಿರುವುದು ಖಂಡನೀಯ. ಅದು ಅಪ್ಪಟ ಸುಳ್ಳು ಎಂದು ಟೀಕಾ ಪ್ರಹಾರ ನಡೆಸಿದರು.
ಇದನ್ನು ಒಪ್ಪಿಕೊಳ್ಳದ ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ ತಾರಾ ಚಂದನ್, ಮುಖಂಡರಾದ ಅಪ್ಪಾಜಿಗೌಡ ಮತ್ತಿತರರು, ಶೇಷೇಗೌಡರಿಗೆ ಮಠದ ಇತಿಹಾಸವೇ ಗೊತ್ತಿಲ್ಲ. ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ, ನರಸಿಂಹರಾವ್, ರಾಷ್ಟ್ರ ಮುಖಂಡರಾದ ಬೂಟಾಸಿಂಗ್, ಎಸ್.ಎಂ. ಕೃಷ್ಣರಂತಹ ಘಟಾನುಘಟಿ ರಾಜಕಾರಣಿಗಳು ಮಠಕ್ಕೆ ಬಂದು ಭವಿಷ್ಯ ಕೇಳಿಕೊಂಡು ಆಶೀರ್ವಾದ ಪಡೆದುಕೊಂಡು ಹೋಗಿದ್ದಾರೆ. ಅವರು ಮುರ್ಖರಾಗಿ ಕಾಣಿಸುತ್ತಾರೆಯೇ, ಶ್ರೀಗಳ ಭವಿಷ್ಯವಾಣಿ ನಿಜವಾಗಿರುವುದು ಉಂಟು ಎಂದು ಪ್ರತ್ಯಾರೋಪ ಮಾಡಿದರು. ಏತನ್ಮಧ್ಯೆ, ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಮುಖ್ಯಮಂತ್ರಿಗಳು ಹಾಸನಕ್ಕೆ ಬಂದಿದ್ದಾಗ ಮುಖಂಡರೊಬ್ಬರ ಮನೆಗೆ ಊಟಕ್ಕೆ ಹೋದ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದು ಉಂಟು. ಈ ಸಂದರ್ಭದಲ್ಲಿ ಮುಖಂಡರ ನಡುವೆ ವಾದ- ವಾಗ್ಯುದ್ದ ನಡೆದಿದೆ ಎಂದು ತಿಳಿದಿದೆ.
ಹೀಗಾದರೇ ಹೇಗೆ?: ಸಮಸ್ಯೆ ಬಗೆಹರಿಸಬೇಕಾದ ಕಾಂಗ್ರೆಸ್ ್ಮುಖಂಡರೇ ಕಚ್ಚಾಡುತ್ತಾ ಸಮಸ್ಯೆಯಾಗಿ ಪರಿವರ್ತನೆಯಾದರೇ ಸಾಮಾನ್ಯ ಜನರು ಏನು ಮಾಡಬೇಕು. ಇದೊಂದು ರೀತಿ ಬೇಲಿ ಎದ್ದು ಹೊಲ ಮೆಯ್ದುಕೊಂಡಂತೆ. ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಡಿ. 1 ರೊಳಗೆ ದುದ್ದ ರಸ್ತೆ ಕಾಮಗಾರಿ ಆರಂಭವಾಗುತ್ತದೆ ಎಂದು ಹೇಳಿದ್ದರು. ವೈದ್ಯಕೀಯ ಶಿಕ್ಷಣ ಸಚಿವರು ನಗರದ ಹೈಟೆಕ್ ಆಸ್ಪತ್ರೆಗೆ 10 ಕೋಟಿ ರು. ಗಳನ್ನು 10 ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದರು. ಅದ್ಯಾವದು ಕಾರ್ಯಗತವಾಗಿಲ್ಲ. ಎಂದು ಜನಪರ ವೇದಿಕೆ ಕಾರ್ಯದರ್ಶಿ ರಮೇಶ್ಕುಮಾರರ್ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಡುವುದೆಲ್ಲಾವನ್ನು ಬಿಟ್ಟು ಮಾಡಬಾರದೆಲ್ಲಾವನ್ನು ಮಾಡುವ ಪ್ರವೃತ್ತಿಯನ್ನು ಕೈ ಬಿಡದಿದ್ದರೇ ಬರುವ ಲೋಕಸಭೆ ಚುನಾವಣೆಯಲ್ಲಿ ವಿಳಾಸವಿಲ್ಲದ ಸ್ಥಳವನ್ನು ತೋರಿಸುವುದನ್ನು ತಪ್ಪಿಸಲಿಕ್ಕೆ ಆಗದು. ಈ ಎಚ್ಚರ ಇಲ್ಲದಿದ್ದರೇ ಹೇಗೆ ಎಂಬ ಪ್ರಶ್ನೆಗೆ ಕಾಂಗ್ರೆಸಿಗರೇ ಉತ್ತರ ಕಂಡುಕೊಳ್ಳಬೇಕು.
ಅಂದು ಟ್ವೆಂಟಿ ಪಾಯಿಂಟ್
ಇಂದು ಒನ್ ಪಾಯಿಂಟ್
ಅಂದು ಇಂದಿರಾಗಾಂಧಿ ಸರ್ವ ಸಮುದಾಯಗಳಿಗೆ ಅನುಕೂಲವಾಗುವ 20 ಅಂಶಗಳನ್ನು ಜಾರಿಗೆ ತಂದರೆ, ಇಲ್ಲಿನ ಕಾಂಗ್ರೆಸಿಗರು ಇಂದು ಒನ್ ಪಾಯಿಂಟ್ ಪ್ರೊಗ್ರಾಂ ಹಾಕಿಕೊಂಡಿದ್ದಾರೆ. ಅದೆನೆಂದರೆ, ಜೆಡಿಎಸ್ ನಾಯಕರನ್ನು ಕಾರಣವಿರಲಿ, ಇಲ್ಲದಿದರಲಿ ಟೀಕಿಸುವುದು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಇದರ ಅರಿವು ಇಲ್ಲದೇ ಕೆಲ ಕಾಂಗ್ರೆಸ್ ಮುಂಡರು, ಜಿಲ್ಲೆಯ್ಲಲಿ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಇವೆ . ಪರಿಹರಿಸಬೇಕು ಎಂದು ಹೇಳುವ ಮೂಲಕ ತಾವೇ ಪ್ರತಿಪಕ್ಷದವರಂತೆ ವರ್ತಿಸುತ್ತಿದ್ದಾರೆ. ಮತ್ತೆ ಹಲವು ಕಾಂಗ್ರೆಸಿಗರು, ಪರಸ್ಪರ ಕೆಸರು ಎರಚಾಟದಲ್ಲಿ ತೊಡಗಿದ್ದಾರೆ. ಯಾವ ಮಟ್ಟಿಗೆ ಅಂದ್ರೆ, ಕೆಲ ಕಾಂಗ್ರೆಸ್ ಮುಖಂಡರು, ಇತ್ತೀಚೆಗೆ ಕೋಡಿಮಠದ ಶ್ರೀಗಳು ಇನ್ನು 9 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತೆ ಎಂದು ಭವಿಷ್ಯ ನುಡಿದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರೆ, ಮತ್ತೆ ಕೆಲ ಕಾಂಗ್ರೆಸ್ ಮುಖಂಡರು, ಶ್ರೀಗಳ ವಿರುದ್ಧ ಟೀಕೆ ಮಾಡಿರುವುದು ಸರಿಯಲ್ಲ. ಇಂದಿರಾಗಾಂಧಿ ಅಂಥಹ ಮಹಾನ್ನಾಯಕರೇ ಕೋಡಿಮಠಕ್ಕೆ ಬಂದು ಭವಿಷ್ಯ ಕೇಳಿದ್ದಾರೆ. ಶ್ರೀಗಳು ಹೇಳಿರುವುದು ಸರಿ ಇಲ್ಲ ಎಂದು ಹೇಳಲಿಕ್ಕೆ ಆಗದು ಎಂದು ಸಮರ್ಥಿಸಿಕೊಂಡಿದ್ದಾರೆ.