ನೆಲ-ಜಲ ಕನ್ನಡ ಕುಲ ರಕ್ಷಣೆಗೆ ಬದ್ಧ
ಆಲೂರು : ಕನ್ನಡ ನಾಡು ನುಡಿ, ನೆಲ-ಜಲ ರಕ್ಷಣೆಗೆ ಕರ್ನಾಟಕ ರಕ್ಷಣಾ ವೇದಿಕೆ ಸದಾ ಸಿದ್ಧ ಎಂದು ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದರು.
ಕರವೇ ತಾಲೂಕು ಘಟಕ ಪಟ್ಟಣದ ಕೆಇಬಿ ವೃತ್ತದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕನ್ನಡಿಗರಿಗೆ ದೇಶದ ಯಾವುದೇ ಮೂಲೆಯಲ್ಲಿ ತೊಂದರೆಯಾದರೂ ನಾವು ಸಹಿಸುವುದಿಲ್ಲ ಎಂದು ಗುಡುಗಿದರು.
ರಾಜ್ಯದಲ್ಲಿ ಕನ್ನಡ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಎಂಇಎಸ್ ಕಾರ್ಯಕರ್ತರು ಬುದ್ದಿ ಕಲಿಯದಿದ್ದರೆ ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾಧ್ಯಕ್ಷ ಮನುಕುಮಾರ್ ಮಾತನಾಡಿ, ರಾಜ್ಯದ ರಾಜಧಾನಿ ಸೇರಿದಂತೆ ಪ್ರಮುಖ ಪಟ್ಟಣಗಳಲ್ಲಿ ಅನ್ಯ ಭಾಷಿಗರು ಹೆಚ್ಚಿದ್ದು, ಅವರೊಂದಿಗೆ ಕನ್ನಡಿಗರು ಅವರ ಭಾಷೆಯಲ್ಲಿಯೇ ವ್ಯವಹರಿಸುತ್ತಿರುವುದು ಸರಿಯಲ್ಲ. ಇದೇ ರೀತಿಯಾದರೆ ಕನ್ನಡಿಗರನ್ನು ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ಅನ್ಯಭಾಷಿಗರು ಕನ್ನಡದಲ್ಲೇ ವ್ಯವಹರಿಸುವಂತೆ ಮಾಡಲು ಕನ್ನಡಿಗಾರದ ನಾವೆಲ್ಲರೂ ಕಾರ್ಯೋನ್ಮುಖರಾಗಬೇಕು ಎಂದರು.
ಚಿತ್ರನಟಿ ಅಶ್ವಿನಿ, ನಗರ ಘಟಕದ ಕರವೇ ಅಧ್ಯಕ್ಷ ಮಧು ಪಿ.ಗೌಡ, ನಗರ ಉಪಾಧ್ಯಕ್ಷ ವಿಶ್ವನಾಥ್, ಗೌರವಾಧ್ಯಕ್ಷ ರಾಜಪ್ಪ, ಸಂಜಯ್ ಬಾಬಾ, ಪ್ರಧಾನ ಕಾರ್ಯದರ್ಶಿ ಮಧು, ಮೋಹನ್, ಗುಬ್ಬಿ, ಮಂಜು, ಪ್ಯಾರಿ, ಉದಯ್, ಸುನಿಲ್, ದರ್ಶನ್, ಸೀನಣ್ಣ, ಆಟೋ ಮೂರ್ತಿ, ಗಣೇಶ್, ಜೆಸಿಬಿ ಲೋಕಿ ದರ್ಶನ್ ಹಾಸನ್ ಮತ್ತಿತರರು ಉಪಸ್ಥಿತರಿದ್ದರು.