ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಕಂಠಪಾಠಕ್ಕಿಂತ ಪ್ರಯೋಗವೇ ಸರಿ'

Vishwanath S
Updated On : 10 Dec 2013, 12:27 pm

ಚನ್ನರಾಯಪಟ್ಟಣ: ವಿದ್ಯಾರ್ಥಿಗಳಿಗೆ ಪುಸ್ತಕದ ವಿಷಯ ಕಂಠಪಾಠ ಮಾಡಿಸದೆ ಅದನ್ನು ಪ್ರಾಯೋಗಿಕವಾಗಿ ತೋರಿಸಿದಾಗ ಮಾತ್ರ ವಿಷಯದ ಅರಿವು ಹೆಚ್ಚಾಗುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ನಾಗರಾಜರಾವ್ ಕಿವಿಮಾತು ಹೇಳಿದರು. ಪಟ್ಟಣದ ನವೋದಯ ವಿದ್ಯಾಸಂಸ್ಥೆ ಆವರಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆವಿ ಷಯ ಹೇರುವ ಬದಲಾಗಿ ಪ್ರಾಯೋಗಿಕವಾಗಿ ತೋರಿಸಿದರೆ ಸುಲಭವಾಗಿ ಅರ್ಥವಾಗುತ್ತದೆ ಎಂದು ಕಿವಿಮಾತು ಹೇಳಿದರು. ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದಿಸೆಯಲ್ಲಿ ವಿಜ್ಞಾನದ ಹೊಸ ಹೊಸ ಆವಿಷ್ಕಾರದ ಪುಸ್ತಕಗಳನ್ನು ಓದಿ ವೈಜ್ಞಾನಿಕವಾಗಿ ಸಾಧಿಸಿ ವಿಶ್ವದ ಮಟ್ಟದಲ್ಲಿ ದೇಶ ಗುರುತಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ಜಿಪಂ ಅಧ್ಯಕ್ಷೆ ಅಂಬಿಕಾ ರಾಮಕೃಷ್ಣ, ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜು, ಶಿಕ್ಷಣ ಇಲಾಖೆ ಅಭಿವೃದ್ಧಿ ವಿಭಾಗದ ಉಪ ನಿರ್ದೇಶಕಿ ಪದ್ಮಮ್ಮ, ನವೋದಯ ವಿದ್ಯಾ ಸಂಸ್ಥೆ ಅಧ್ಯಕ್ಷ ಜಯರಾಮು, ಪಾಂಡು ಇದ್ದರು.
ಠೇವಣಿ ಮೊತ್ತ ಅಧಿಕ; ಖಂಡನೆ
ಹಾಸನ: ಒಕ್ಕಲಿಗರ ಸಂಘದ ನಿರ್ದೇಶಕರ ಚುನಾವಣೆಗಾಗಿ ಠೇವಣಿಯ ಮೊತ್ತವನ್ನು 10 ಸಾವಿರ ನಿಗದಿಪಡಿಸಿರುವುದನ್ನು ವಕೀಲ ಹಾಗೂ ಜೆಡಿಎಸ್ ಸೇವಾದಳದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚನ್ನಂಗಿಹಳ್ಳಿ ಶ್ರೀಕಾಂತ್ ಖಂಡಿಸಿದ್ದಾರೆ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕವಾಗಿ ಸ್ಪರ್ಧೆ ಮಾಡಲು ಕನಿಷ್ಠ ಠೇವಣಿಯನ್ನು ಸಂಘವೇ ಮಾಡಬೇಕು. ಆದರೆ ಸಂಘವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಳ್ಳದೆ 10 ಸಾವಿರ ನಿಗದಿಪಡಿಸಿರುವುದು ಖೇದಕರ ಸಂಗತಿ ಎಂದು ಹೇಳಿದ್ದಾರೆ. ಚುನಾವಣೆಗಳಲ್ಲಿ  ಸ್ಪರ್ಧಿಸುವ ಬಡವರಿಗೆ ಅನುಕೂಲವಾಗಲೆಂದು ಕಡಿಮೆ ಮೊತ್ತದ ಠೇವಣಿ ನಿಗದಿಪಡಿಸಬೇಕು. ಇದು ಪ್ರಜಾಪ್ರಭುತ್ವದ ಆಶಯ ಕೂಡ. ಆದರೆ ಸಂಘವು ಶ್ರೀಮಂತರಿಗೆ ಮಣೆ ಹಾಕಿದಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಂಎಲ್‌ಎ, ಎಂಪಿ ಚುನಾವಣೆಗಳಲ್ಲೇ ಕಡಿಮೆ ಮೊತ್ತದ  ಠೇವಣಿ ನಿಗದಿಪಡಿಸಲು ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸುತ್ತದೆ.
 ಆದರೆ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ 10 ಸಾವಿರ ನಿಗದಿ ಮಾಡಿರುವುದನ್ನು ವಿರೋಧಿಸುವುದಾಗಿ ತಿಳಿಸಿರುವ ಅವರು, ಕಳೆದ ಬಾರಿಯ ಚುನಾವಣೆಯಂತೆ 3,500ನ್ನೇ ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.
'ಸೌಲಭ್ಯ ಪಡೆಯಲು ಸಂಘಟನೆ ಅಗತ್ಯ'
ಜಾವಗಲ್: ಜಾವಗಲ್ ಹೋಬಳಿ ಮಾವುತನಹಳ್ಳಿಯಲ್ಲಿ ಹೋಬಳಿ ಮಟ್ಟದ ಬೇಡಜಂಗಮ ಸಮಾಜದ ಸಮಾವೇಶ ನಡೆಯಿತು. ಅರಸೀಕೆರೆ ತಾಲೂಕು ಬೇಡ ಜಂಗಮ ಸಮಾಜದ ಅಧ್ಯಕ್ಷ ಕಲ್ಲುಸಾದರಹಳ್ಳಿ ಚಂದ್ರಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೇಡ ಜಂಗಮ ಸಮಾಜವು ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂಘಟಿತ ಹೋರಾಟ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಕಾರ್ಯದರ್ಶಿ ತರುಣ್‌ದೇವ್ ಮಾತನಾಡಿ, ಶೈಕ್ಷಣಿಕ ಪ್ರಗತಿಯಿಂದ ಸಮಾಜದ ಸುಧಾರಣೆ ಸಾಧ್ಯವೆಂದರು. ಗೌರವಾಧ್ಯಕ್ಷ ನಂಜುಂಡಯ್ಯ, ಉಪಾಧ್ಯಕ್ಷ ಎಂ.ಎನ್.ಸಿದ್ದಯ್ಯ, ಶಿಕ್ಷಕ ಮಹೇಶ್ವರಯ್ಯ ಮಾತನಾಡಿದರು. ಸಮಾಜದ ಮುಖಂಡರಾದ ಸಿದ್ದಯ್ಯ, ಎಂ.ಬಿ.ರುದ್ರೇಶ್, ಶಿವಮೂರ್ತಿ, ಮರುಳಯ್ಯ, ಶೇಖರಯ್ಯ, ರೇಣುಕಯ್ಯ, ರೇವಣ್ಣಯ್ಯ, ಬಸವರಾಜು ಇದ್ದರು.
ಜಾವಗಲ್ ಹೋಬಳಿ ಬೇಡಜಂಗಮ ಸಮಾಜವನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಮೂಡನಹಳ್ಳಿ ಮರುಳಸಿದ್ದಯ್ಯ, ಅಧ್ಯಕ್ಷರಾಗಿ ಜಾವಗಲ್ ಜೆ.ಎಂ.ಲೋಕೇಶ್, ಕಾರ್ಯಾಧ್ಯಕ್ಷರಾಗಿ ಕುರಾದಹಳ್ಳಿ ಗುರುಮೂರ್ತಿಸ್ವಾಮಿ, ಉಪಾಧ್ಯಕ್ಷರಾಗಿ ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಯು.ಕೆ.ರಘು, ಸಹ ಕಾರ್ಯದರ್ಶಿಯಾಗಿ ಎಂ.ಬಿ.ರುದ್ರೇಶ್, ವಕ್ತಾರರಾಗಿ ಶಿವಮೂರ್ತಿ, ಪಂಚಾಕ್ಷರಯ್ಯ, ಕಾರ್ಯಕಾರಿ ಸಮಿತಿ ಆಯ್ಕೆ ಮಾಡಲಾಯಿತು.
'ವಿನಯ್ ವಿರುದ್ಧ ಸುಳ್ಳು ಆರೋಪ'
ಹಾಸನ: ಕೆಪಿಸಿಸಿ ಸದಸ್ಯ ವಿನಯ್‌ಗಾಂಧಿ ವಿರುದ್ಧ ಕೆಲವರು ಸುಳ್ಳು ಆರೋಪ ಮಾಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕ ಜಿಲ್ಲಾ ಸಂಚಾಲಕ ಎಚ್.ಬಿ.ಶಿವಕುಮಾರ್ ಆರೋಪಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ವಿನಯ್‌ಗಾಂಧಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಜಿಲ್ಲೆಗೆ ಪ್ರತಿ ತಿಂಗಳು ಆಗಮಿಸಬೇಕು. ಅವರಿಗೆ 2 ಜಿಲ್ಲೆಗಳು ಉಸ್ತುವಾರಿ ನೀಡಿರುವುದರಿಂದ ಜಿಲ್ಲೆಗೆ ಸರಿಯಾಗಿ ಆಗಮಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಚಿವರಿಗೆ ತೊಂದರೆಯಾಗುವುದರಿಂದ ಅದನ್ನು ಬೇರೆಯವರಿಗೆ ನೀಡಬೇಕು ಎಂದು ಹೇಳಿದ್ದರು.ಆದರೆ ಕೆಲವರುವಿನಯ್‌ಗಾಂಧಿ ಅವರನ್ನು ದಲಿತ ವಿರೋಧಿ ಎಂದು ಸುಳ್ಳು ಆರೋಪ ಮಾಡಿ ಬಿಂಬಿಸಿದ್ದಾರೆ. ಯಾವುದೋ ರಾಜಕೀಯ ಕಾರಣಕ್ಕೆ ಕೆಲವರ ಮೇಲೆ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದರು.ಮುಖಂಡರಾದ ಶೇಖರ್, ರಾಮು, ಲಕ್ಷ್ಮೀಶ, ರಮೇಶ್ ಮತ್ತಿತರರು ಇದ್ದರು.
ಟ್ರಾಫಿಕ್ ಜನ ಜಾಗೃತಿ ಜಾಥಾ
ಹಾಸನ: ಟೈಮ್ಸ್ ಇಂಟರ್‌ನ್ಯಾಷನಲ್ ಶಾಲೆ ವತಿಯಿಂದ ಶನಿವಾರ ಟ್ರಾಫಿಕ್ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ನಗರದ ತಣ್ಣೀರುಹಳ್ಳ ವೃತ್ತದಲ್ಲಿ ಟೈಮ್ಸ್ ಶಾಲೆ ಹಮ್ಮಿಕೊಂಡಿದ್ದ ಟ್ರಾಫಿಕ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ನಂತರ ಅವರು ಜಿಲ್ಲೆಯ ಜನರು ಸಂಚಾರಿ ನಿಯಮಗಳನ್ನು ಉಲ್ಲಂಘಿಸದೇ ಸರಿಯಾಗಿ ಪಾಲಿಸುವಂತೆ ಕರೆ ನೀಡಿದರು.ನಂತರ ಶಾಲೆಯ ಮಕ್ಕಳು ನಗರದಲ್ಲಿ ಜಾಗೃತಿ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಟ್ರಾಫಿಕ್ ಬಗ್ಗೆ ಅರಿವು ಮೂಡಿಸಿದರು.ಶಾಲೆಯ ಕಾರ್ಯದರ್ಶಿ ಗಂಗಾಧರ್, ಪ್ರಾಂಶುಪಾಲೆ ಉಮಾ ಎಸ್.ಪಾಟೀಲ್, ಉಪನ್ಯಾಸಕ ವೇದಮೂರ್ತಿ ಇದ್ದರು.
ರಾಷ್ಟ್ರಮಟ್ಟದ ಪುರಸ್ಕಾರ
ಹಾಸನ: ನಗರದ ಕೆನರಾ ಬ್ಯಾಂಕ್ ಸ್ವಉದ್ಯೋಗ ತರಬೇತಿ ಸಂಸ್ಥೆಯ ಸಾಧನೆ ಗುರುತಿಸಿ ಸಂಸ್ಥೆಯ ಮುಖ್ಯಸ್ಥ ಎಂ.ಎನ್.ಮೂರ್ತಿ ಅವರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಿ ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವಾಲಯದಿಂದ ಪುರಸ್ಕರಿಸಲಾಗಿದ್ದು, ಇದು ಜಿಲ್ಲೆಗೆ ತಂದ ಗೌರವ ಎಂದು ಮೈಸೂರು ವಿಭಾಗದ ಕೆನರಾ ಬ್ಯಾಂಕಿನ ಸಹ ಮಹಾಪ್ರಬಂಧಕ  ದಿವಾಕರಶೆಟ್ಟಿ ತಿಳಿಸಿದರು.ಕೆನರಾಬ್ಯಾಂಕ್‌ನ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಸಂಸ್ಥೆಯಿಂದ ಕೃಷಿ, ಪ್ರವಾಸೋದ್ಯಮ, ಕಂಪ್ಯೂಟರ್ ತರಬೇತಿ ಹಾಗೂ  ಸ್ವ ಉದ್ಯೋಗಕ್ಕೆ ಪೂರಕವಾದ ವಿವಿಧ ರೀತಿಯ ತರಬೇತಿಯನ್ನು ನೀಡಿದವರಲ್ಲಿ ಶೇಕಡ 73 ರಷ್ಟು ತರಬೇತಿದಾರರು ಸ್ವ ಉದ್ಯೋಗದಲ್ಲಿ ತೊಡಗಿ ತಮ್ಮ ಜೀವನ ಸಾಗಿಸುತ್ತಿರುವುದು ಪ್ರಶಂಸನೀಯವಾಗಿದೆ ಎಂದು ಹೇಳಿದರು.
ನಿವೃತ್ತ ಅಧಿಕಾರಿಗೆ ಬೀಳ್ಕೊಡುಗೆ
ಹೊಳೆನರಸೀಪುರ: ಸಮಾಜ ಕಲ್ಯಾಣಾಧಿಕಾರಿಯಾಗಿ ಸೇವೆ ಸಲ್ಲಿಸಿ, ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ಇಲ್ಲಿನ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಎಂ.ಜೆ. ರಂಗರಾಜು ಅವರಿಗೆ ಇಲಾಖೆಯ ಎಲ್ಲಾ ನೌಕರರು, ಸಿಬ್ಬಂದಿಗಳು, ನಾನಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಬುಧವಾರ ಹೃದಯಸ್ಪರ್ಶಿಯಾಗಿ ಬೀಳ್ಕೊಡುಗೆ ನೀಡಿದರು.ಸರ್ಕಾರಿ ಸೇವೆಯಲ್ಲಿ ಬಹು ಸುದೀರ್ಘ ಕಾಲ ಅಂದರೆ 33 ವರ್ಷಗಳ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿದ ರಂಗರಾಜು ಅವರನ್ನು, ಸಮಾಜ ಕಲ್ಯಾಣ ಇಲಾಖೆಯ ನಿಲಯ ಪಾಲಕರು, ಅಡುಗೆಯವರು, ನೌಕರರು, ವಿದ್ಯಾರ್ಥಿಗಳಲ್ಲದೇ, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರುಗಳು ಸ್ವಯಂಪ್ರೇರತರಾಗಿ ಆಗಮಿಸಿ ರಂಗರಾಜು ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಭಾರಿ ಅಧಿಕಾರಿಯಾಗಿ ಆಗಮಿಸಿರುವ ಲೋಕೇಶ್ ಅವರನ್ನು ಆತ್ಮೀಯವಾಗಿ ಅಭಿನಂಧಿಸಲಾಯಿತು. ತಾಪಂ ಸದಸ್ಯರಾದ ಸಿ.ಆರ್. ಮಂಜುನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement