ಮಂದಗತಿ ಕಾಮಗಾರಿ ಖಂಡಿಸಿದವರಿಗೆ ಲಾಠಿ ರುಚಿ!
ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿ ಕಾಚೇನಹಳ್ಳಿ ಏತ ನೀರಾವರಿ ಯೋಜನೆಯ ಕಾಮಗಾರಿಯ ಹಿನ್ನಡೆಯನ್ನು ಖಂಡಿಸಿ ದಂಡಿಗನಹಳ್ಳಿ ಹೋಬಳಿ ರೈತರು ನಡೆಸುತ್ತಿದ್ದ ಧರಣಿ ಹತ್ತಿಕ್ಕಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ತಾಲೂಕಿನ ಉದಯಪುರದಲ್ಲಿ ನಡೆಯಿತು.
ಕಾಮಗಾರಿ ತ್ವರಿತಗೊಳಿಸಲು ಆಗ್ರಹಿಸಿ ರೈತರು ಹೆದ್ದಾರಿ ತಡೆ ಗೊಳಿಸಿದ ಸಂದರ್ಭದಲ್ಲಿ ಪೊಲೀಸರು ಧರಣಿ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದರು. ಇದಕ್ಕೆ ಜಗ್ಗದ ಧರಣಿ ನಿರತರು ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸುವವರಗೆ ವಾಪಸ್ ತೆಗೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದ ಸಂದರ್ಭದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಕಳೆದ 20 ವರ್ಷಗಳಿಂದ ನಡೆಯುತ್ತಿರುವ ಕಾಚೇನಹಳ್ಳಿ ಏತ ನೀರಾವರಿ ಯೋಜನೆಯ ಮಂದಗತಿ ಕಾಮಗಾರಿ ಖಂಡಿಸಿ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ದಂಡಿಗನಹಳ್ಳಿ ಹೋಬಳಿ ರೈತರು ರಾಷ್ಟ್ರೀಯ ಹೆದ್ದಾರಿ 75ನ್ನು ಅರ್ಧ ಗಂಟೆಗೂ ಅಧಿಕ ಸಮಯ ತಡೆಗೊಳಿಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಹೆದ್ದಾರಿ ತೆರವುಗೊಳಿಸಿದರು.
ಧರಣಿ ಆರಂಭದ ಹಂತದಲ್ಲಿ ಪೊಲೀಸರು ಹೆದ್ದಾರಿ ತೆರವುಗೊಳಿಸಲು ಅರೆಸಾಹಸ ಮಾಡಿ ತೆರವುಗೊಳಿಸಿದರಾದರೂ, 100ಕ್ಕೂ ಹೆಚ್ಚು ಯುವಕರು ಮತ್ತೆ ರಾಷ್ಟ್ರೀಯ ಹೆದ್ದಾರಿಗೆ ಬಂದು ಧರಣಿ ಕುಳಿತು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸುವವರಗೆ ಧರಣಿ ಕೈ ಬಿಡುವುದಿಲ್ಲವೆಂದು ಪಟ್ಟು ಹಿಡಿದ ಸಂದರ್ಭದಲ್ಲಿ ಹೆದ್ದಾರಿ ಪ್ರಯಾಣಿಕರಿಗೆ ಆದ ಸಮಸ್ಯೆಯನ್ನು ಮನಗಂಡ ಪೊಲೀಸರು ಎರಡನೇ ಬಾರಿ ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು. ಇದಾದ ನಂತರವೂ ಹೆದ್ದಾರಿಯಲ್ಲಿ ಮಲಗಿ ಧರಣಿ ನಡೆಸಲು ಮುಂದಾದ ಯುವಕರನ್ನು ಪೋಲಿಸರು ರಸ್ತೆಯ ಬದಿಗೆ ಎತ್ತೋಯ್ದು ಆನಂತರದಲ್ಲಿ ಹೆದ್ದಾರಿಗೆ ಬಾರದಂತೆ ಜಿಲ್ಲಾ ಸಶಸ್ತ್ರ ಪಡೆಯಿಂದ ರೋಪ್ವೇ ನಿರ್ಮಿಸಿ ಧರಣಿ ನಿರತರು ಹೆದ್ದಾರಿಗೆ ಬಾರದಂತೆ ತಡೆದರು. ನಂತರದಲ್ಲಿ ಹೋರಾಟಗಾರ ಕೃಪಾಶಂಕರ್ ಮತ್ತು ಅವರ ಬೆಂಬಲಿಗರು ಹೆದ್ದಾರಿ ಪಕ್ಕದಲ್ಲಿಯೇ ಕುಳಿತು ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸುವವರಗೆ ತಾವು ಧರಣಿ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದ ಸಂದರ್ಭದಲ್ಲಿ ಪೊಲೀಸರು ತಹಸೀಲ್ದಾರ್ ಅವರನ್ನು ಸ್ಥಳಕ್ಕೆ ಕರೆಸಿ ಧರಣಿ ನಿರತರಿಂದ ಮನವಿ ಪಡೆಯಲು ಅನುವು ಮಾಡಿಕೊಟ್ಟರು. ತಹಸೀಲ್ದಾರ್ ಡಾ.ನಾಗರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದ ನಂತರ ಮಾತನಾಡಿದ ಕೃಪಾಶಂಕರ್, 22 ವರ್ಷಗಳ ಹಿಂದೆ ಸರ್ಕಾರ ಯೋಜನೆಗೆ ಚಾಲನೆ ನೀಡಿದ್ದು, ಈ ಯೋಜನೆಯನ್ನು ಪೂರ್ಣಗೊಳಿಸಲು ಜನಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ ಎಂದರು.
25ರಿಂದ ಡಿಸಿ ಕಚೇರಿ ಎದುರು ಧರಣಿ: ಕಾಮಗಾರಿ ಕೈಗೆತ್ತಿಕೊಂಡು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಸರ್ಕಾರ ಮುಂದೆ ಬಾರದಿದ್ದರೆ, ಡಿ.25ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವುದಾಗಿ ತಿಳಿಸಿದ ಅವರು ಕಾಮಗಾರಿಯಿಂದ ನೀರು ಬಿಡುವವರಗೆ ತಮ್ಮ ಹೋರಾಟ ಮುಂದುವರಿಯುತ್ತದೆ ಎಂದು ತಿಳಿಸಿದರು.