ಮಾಂಸದಂಗಡಿ ತೆರವಿಗೆ ಆಗ್ರಹ
ಕ.ಪ್ರ.ವಾರ್ತೆ , ಹಾಸನ , ಡಿ.9
ಹಂದಿ ಮಾಂಸದ ಹೊಟೇಲ್ ತೆರವುಗೊಳಿಸುವಂತೆ ಆಗ್ರಹಿಸಿ ನಗರಸಭೆ ಜೆಡಿಎಸ್ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ನಗರದ ಶರೀಫ್ ಕಾಲೋನಿಯ ಸಂತ ಫಿಲೋಮಿನಾ ಶಾಲೆ ಮುಂಭಾಗ ನ್ಯೂ ಗಗನ್ ಹಂದಿ ಮಾಂಸದ ಹೊಟೇಲ್ ತೆರೆದಿದ್ದು, ಶರೀಫ್ ಕಾಲೋನಿಯಲ್ಲಿ ಬಹುತೇಕ ಅಲ್ಪಸಂಖ್ಯಾತರು ವಾಸ ಮಾಡುತ್ತಿದ್ದು, ಧಾರ್ಮಿಕ ಆಚರಣೆಗೆ ವಿರೋಧ ಆಗಿರುವುದನ್ನು ಮನಗಂಡು ನಗರಸಭೆಯ ಎಲ್ಲಾ ಜೆಡಿಎಸ್ ಸದಸ್ಯರು ಹೊಟೇಲ್ ಮುಚ್ಚಿಸುವಂತೆ ನಗರಸಭೆ ಪೌರಾಯುಕ್ತರ ಗಮನಕ್ಕೆ ತರಲಾಗಿದೆ. ಆದರೂ ಹೊಟೇಲ್ ವ್ಯಾಪಾರ ನಡೆಸುತ್ತಾ ಬಂದಿದೆ.
ಇಲ್ಲೂ ರಾಜಕೀಯ: ಈ ವಿಷಯದ ಬಗ್ಗೆ ನಗರಸಭೆ ಆರೋಗ್ಯ ನಿರೀಕ್ಷಕ ಸ್ಟೀಫನ್ ಪ್ರಕಾಶ ಅವರನ್ನು ಕೇಳಿದಾಗ ರಾಜ್ಯ ಸರ್ಕಾರದ ಆಡಳಿತ ಪಕ್ಷದ ಮುಖಂಡರಿಂದ ಮೌಖಿಕ ಆದೇಶ ಬಂದಿರುವುದರಿಂದ ಮುಚ್ಚಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ ಎಂದು ಆರೋಪಿಸಿದರು.
ನಗರಸಭೆಯ ಸರ್ವ ಸದಸ್ಯರ ಅಭಿಪ್ರಾಯ ಮೇರೆಗೆ ಹೊಟೇಲ್ ಮುಚ್ಚಿಸಲು ನೂತನ ಪೌರಾಯುಕ್ತರಿಗೆ ತಿಳಿಸಿದ್ದಾಗಿಯೂ ನಿನಗೇಕೆ ಈ ವಿಚಾರ, ನೀನು ಮನೆಗೆ ಹೋಗಮ್ಮ ಎಂದು ಅಧ್ಯಕ್ಷೆಗೆ ಅಗೌರವದಿಂದ ಮಾತನಾಡಿದ್ದಾರೆ ಹಾಗೂ ಅಧ್ಯಕ್ಷರು ನೀಡಿದ್ದ ಆದೇಶಕ್ಕೆ ವಿರುದ್ಧವಾಗಿ ತೀರ್ಮಾನ ಕೈಗೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾ ಪ್ರತಿನಿಧಿ ಕಾಯ್ದೆಯಡಿ ಆಯ್ಕೆಗೊಂಡ ಹಾಸನ ನಗರದ ಪ್ರಥಮ ಪ್ರಜೆಯನ್ನು ಹಾಗೂ ಸದಸ್ಯರನ್ನು ಏಕ ವಚನದಲ್ಲಿ ಕರೆಯುವ ಮೂಲಕ ಪಕ್ಷದ ನಾಯಕರಿಗೆ ಅಗೌರವನ್ನು ತೋರಿದ್ದಾರೆ. ಹಿಂದುಳಿದ ವರ್ಗದಿಂದ ಆಯ್ಕೆಯಾಗಿ ಬಂದಿರುವ ಒಬ್ಬ ಮಹಿಳಾ ಅಧ್ಯಕ್ಷೆಯಾಗಿ ಇಂತಹ ಸರ್ವಾಧಿಕಾರಿ ಪೌರಾಯುಕ್ತರಿಂದ ನಾಗರಿಕ ಸೇವೆ ಅಪೇಕ್ಷಿಸಲು ಸಾಧ್ಯವಿಲ್ಲ ಎಂದರು. ಪೌರಾಯುಕ್ತರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಹಾಗೂ ಶರೀಫ್ ಕಾಲೋನಿಯಲ್ಲಿ ತೆರೆದಿರುವ ಹಂದಿ ಮಾಂಸದ ಅಂಗಡಿಯನ್ನು ತೆರೆವುಗೊಳಿಸುವಂತೆ ಒತ್ತಾಯಿಸಿದರು. ಶಾಸಕ ಎಚ್.ಎಸ್.ಪ್ರಕಾಶ್, ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ, ಉಪಾಧ್ಯಕ್ಷ ಇರ್ಷಾದ್‌ಪಾಷ, ಸದಸ್ಯರಾದ ಎಚ್.ಎಸ್.ಅನಿಲ್‌ಕುಮಾರ್, ಪ್ರಸನ್ನ ಕೃಷ್ಣಮೂರ್ತಿ, ಅಂಬಿಕ ರವಿಶಂಕರ್, ವಾಸು ಇತರರು ಇದ್ದರು.
ಅಸಹಾಯಕತೆ: ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ನಗರದ ಶರೀಫ್ ಕಾಲೋನಿಯಲ್ಲಿ ಹಂದಿಮಾಂಸದ ಅಂಗಡಿ ತೆರೆದಿರುವ ಬಗ್ಗೆ ನಗರಸಭೆಯಲ್ಲಿ ಚರ್ಚೆಯಾಗಿ ಅನುಮತಿ ನೀಡಿರುವುದರಿಂದ ಅದನ್ನು ನಾವು ತೆರವು ಮಾಡಿಸಲು ಬರುವುದಿಲ್ಲ. ಅದನ್ನು ನಗರಸಭೆಯವರೇ ಬಗೆಹರಿಸಿಕೊಳ್ಳುವಂತೆ ಸೂಚಿಸಿದರು.