ರಾಮನಾಥಪುರ ಷಷ್ಠಿ ಜಾತ್ರೆಯಲ್ಲಿ ಜನ ಜಂಗುಳಿ
ಅರಕಲಗೂಡು: ತಾಲೂಕಿನ ರಾಮನಾಥಪುರದಲ್ಲಿ ನಡೆದ ಷಷ್ಠಿ ಜಾತ್ರೆಗೆ ಜನಸಾಗರವೇ ಹರಿದು ಬಂದಿತ್ತು. ಬೆಳಗಿನ ಜಾವದಿಂದಲೇ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿ ದರ್ಶನಕ್ಕಾಗಿ ಸುತ್ತಲಿನ ಗ್ರಾಮದ ಜನರು ಎತ್ತಿನ ಗಾಡಿ ಸೇರಿದಂತೆ ವಿವಿಧ ವಾಹನಗಳಲ್ಲಿ ಬಂದಿಳಿಯುತ್ತಿದ್ದ ದಶ್ಯ ಸಾಮಾನ್ಯವಾಗಿತ್ತು. ಸೂರ್ಯ ನೆತ್ತಿಗೇರುತ್ತಿರುವಂತೆ ರಾಮನಾಥಪುರದತ್ತ ಹರಿದು ಬಂರುತ್ತಿದ್ದ ಜನರ ಸಂಖ್ಯೆಯೂ ಅಧಿಕಗೊಳ್ಳುತ್ತಿತ್ತು. ದೇವರ ದರ್ಶನಕ್ಕಾಗಿ ಸಾಲು ಗಟ್ಟಿ ನಿಂತು ಭಕ್ತಿಭಾವದಿಂದ ದೇವರ ದರ್ಶನ ಪಡೆದರು. ಸುಮಾರು 12.30ಕ್ಕೆ ಸರಿಯಾಗಿ ದೇವರ ರಥಾರೋಹಣ ನೆರವೇರಿತು.ಆ ಸುಸಂದರ್ಭಕ್ಕಾಗಿ ಕಾಯ್ದು ಕುಳಿತಿದ್ದ ಭಕ್ತಾದಿಗಳು ಭಕ್ತಿ ಭಾವದ ಘೋಷಣೆ ಕೂಗಿದರು. ವಾದ್ಯಗಳು ಮೇಳೈಸಿದವು. ಭಕ್ತರು ರಥದತ್ತ ಹಣ್ಣು-ಜವನ ಎಸೆದು ಕೃತಾರ್ಥರಾದರು. ಇದಕ್ಕೂ ಮುನ್ನ ಮುಗಿಲೆತ್ತರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗರುಡ ಪಕ್ಷಿ ಮುಗಿಲೆತ್ತರದಲ್ಲಿ ಮೂರು ಸುತ್ತು ಸುತ್ತಿತು. ನೆರೆದಿದ್ದ ಲಕ್ಷಾಂತರ ಜನ ಈ ವಿಸ್ಮಯಕ್ಕೆ ಸಾಕ್ಷಿಯದರು.
ಜಾನುವಾರು ಜಾತ್ರೆ ತೀರ್ಮಾನ ಮುಂದೂಡಿಕೆ
ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಹೋಬಳಿ ಬೂಕದ ಶ್ರೀ ರಂಗನಾಥ ಸ್ವಾಮಿ ದನಗಳ ಜಾತ್ರೆ ನಡೆಸುವ ಕುರಿತು ಶಾಸಕ ಸಿ.ಎನ್.ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ರೈತರ ಅಭಿಪ್ರಾಯ ಪಡೆದು ಜಾತ್ರೆ ನಡೆಸಲು ತೀರ್ಮಾನಿಸಲಾಯಿತು. ತಾಲೂಕಿನಲ್ಲಿ ಜಾನುವಾರಿಗೆ ಕಾಣಿಸಿಕೊಂಡಿರುವ ಕಾಲುಬಾಯಿ ಜ್ವರದ ಹಿನ್ನೆಲೆಯಲ್ಲಿ ದನಗಳ ಜಾತ್ರೆಯನ್ನು ರದ್ದು ಪಡಿಸುವಂತೆ ಪಶುವೈದ್ಯಾಧಿಕಾರಿಗಳು ಮಾಡಿದ ಮನವಿಯ ಮೇರೆಗೆ ಸಾಂಪ್ರದಾಯಿಕವಾಗಿ ನಡೆಯುತ್ತಿರುವ ಜಾತ್ರೆಯನ್ನು ನಿಲ್ಲಿಸುವುದೋ ಬೇಡವೋ ಎಂಬುದರ ಕುರಿತು ಬೂಕನಬೆಟ್ಟದಲ್ಲಿಯೇ ರೈತರೊಂದಿಗೆ ಚರ್ಚಿಸಿ ನಂತರದಲ್ಲಿ ನಿರ್ಧಾರ ತೆಗೆದುಕೊಳ್ಳಲು ತೀರ್ಮಾನಿಸಲಾಯಿತು. ದನಗಳ ಜಾತ್ರೆ ಸಂದರ್ಭದಲ್ಲಿ ಪ್ರತಿ ವರ್ಷವೂ ಆಚರಿಸುತ್ತಿದ್ದ ಗ್ರಾಮೀಣ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜ.10ರಿಂದ 21ರವರೆಗೆ ನಡೆಸಲು ತೀರ್ಮಾನಿಸಲಾಯಿತು. ಜ.19, ರಥೋತ್ಸವ ದಿನದಂದು ನಾಗರಾಜು ಕೋಟೆ ಅವರಿಂದ ನಗೆ ಹಬ್ಬ ನಡೆಸಲು ತೀರ್ಮಾನಿಸಲಾಯಿತು. ತಹಸೀಲ್ದಾರ್ ಡಾ. ನಾಗರಾಜು, ಜಿಪಂ ಅಧ್ಯಕ್ಷೆ ಅಂಬಿಕಾ ರಾಮಕೃಷ್ಣ, ಶ್ರೀನಿವಾಸ್, ಮಂಜುನಾಥ್, ನಾಗರಾಜು ಇದ್ದರು.
ಸಶಸ್ತ್ರ ಪಡೆ ಧ್ವಜ ದಿನಾಚರಣೆ
ಹಾಸನ: ದೇಶದ ರಕ್ಷಣೆ ಹಾಗೂ ಆಂತರಿಕ ಭದ್ರತಾ ಕಾರ್ಯಪಾಲನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಾಜಿ ಸೈನಿಕರ ತ್ಯಾಗ ಬಲಿದಾನವನ್ನು ಗಮನದಲ್ಲಿಟ್ಟುಕೊಂಡು ಸಮಾಜ ಸೇವೆ ಮಾಡುವ ಮೂಲಕ ಮುಂದಿನ ಪಿಳೀಗೆಗೆ ಮಾದರಿಯಾಗುವಂತೆ ನಿವೃತ್ತ ಸೇನಾಧಿಕಾರಿ ಕೆ.ಎಸ್.ನಟೇಶ್ ಕಿವಿಮಾತು ಹೇಳಿದರು. ಜಿಲ್ಲಾಡಳಿತ ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಆಶ್ರಯದಲ್ಲಿ ನಗರದ ಯೂತ್ಹಾಸ್ಟೆಲ್ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉಪ ವಿಭಾಗಾಧಿಕಾರಿ ಬಿ. ಶರತ್ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಪಾಲಿ ಕ್ಲಿನಿಕ್ ಅಧಿಕಾರಿ ಎ.ಸಿ.ಸೋಮಸುಂದರ್, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕ ಸಿ.ಶಿವಸ್ವಾಮಿ, ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಸಿ.ಟಿ.ಪ್ರಭಾಕರ್, ಪಿ.ಎನ್.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
ಅಂಬೇಡ್ಕರ್ ಸ್ಮರಣೆ
ಬೇಲೂರು: ಅಂಬೇಡ್ಕರ್ ಚಿಂತನೆ ಮತ್ತು ಮಾರ್ಗದರ್ಶನ ಇಂದಿನ ಸಮಾಜಕ್ಕೆ ಪೂರಕವಾಗಿವೆ ಎಂದು ತಾಲೂಕು ಛಲವಾದಿ ಮಹಾ ಮಂಡಳ ಅಧ್ಯಕ್ಷ ಯೋಗೇಶ್ ಅಭಿಪ್ರಾಯಪಟ್ಟಿದ್ದಾರೆ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
'ಅಪರಾಧ ತಡೆಗೆ ಸಹಭಾಗಿತ್ವ ಅಗತ್ಯ'
ಜಾವಗಲ್: ಅಪರಾಧ ಚಟುವಟಿಕೆ ತಡೆಗಟ್ಟಲು ಪೊಲೀಸರೊಂದಿಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಅರಸೀಕೆರೆ ಗ್ರಾಮಾಂತರ ವೃತ್ತ ನಿರೀಕ್ಷಕ ಆರ್.ವಿ.ಗಂಗಾಧರಪ್ಪ ಕಿವಿಮಾತು ಹೇಳಿದರು. ಜಾವಗಲ್ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ನಡೆದ ಹೋಬಳಿ ಮಟ್ಟದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ಜನಸ್ನೇಹಿ ಪೊಲೀಸ್ ವ್ಯವಸ್ಥೆ ಅಡಿಯಲ್ಲಿ ತೆರೆದ ಮನೆ, ನೊಂದವರ ದಿನಾಚರಣೆ, ದಲಿತ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳಲಾಗಿದೆ ಈ ನಿಟ್ಟಿನಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಆಟೋಗಳಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವುದು, ಅಧಿಕ ಶುಲ್ಕ ವಸೂಲಾತಿ, ಬಾರ್ಗಳಲ್ಲಿ ನಾಮಫಲಕ ಮತ್ತು ದರಪಟ್ಟಿ ಹಾಕಿಸುವುದು, ಅಕ್ರಮ ಜಾನುವಾರಗಳ ಸಾಕಾಣಿಕೆ, ರಾತ್ರಿ ಗಸ್ತು ವ್ಯವಸ್ಥೆ ಮರಳು ಮತ್ತು ಸೈಜು ಕಲ್ಲುಗಳುನ್ನು ಸರಳವಾಗಿ ಪಡೆಯುವಿಕೆ, ಕುಡಿವ ನೀರಿನ ಸಮಸ್ಯೆ, ಮುಫ್ತಿ ಪೊಲೀಸ್ ನೇಮಕ ಮತ್ತಿತರ ಸಮಸ್ಯೆಗಳ ಬಗ್ಗೆ ಜೆ.ಕೆ ಚಿಕ್ಕಯ್ಯ, ಜೆ.ಆರ್. ಇಂದ್ರೇಶ್, ಜೆ.ಎಸ್.ಲಕ್ಷ್ಮೀನಾರಾಯಣ, ದಯಾನಂದ, ಡಿ.ಶೇಖರ್, ಮಾಜಿ ಗ್ರಾಪಂ ಅಧ್ಯಕ್ಷ ಧನಂಜಯ, ಫಿರೋಜಜ್ಗಾಂಧಿ, ಭಾನುಪ್ರಕಾಶ್, ಟಿ.ಎಮ್. ವಿಜಯಕುಮಾರ್, ಕೆ.ಬಿ.ನಾಗಭೂಷಣ ಸ್ವಾಮಿ ಮತ್ತಿತರರು ಮಾಹಿತಿ ವಿವರ ನೀಡಿದರು.