ವಾಮಾಚಾರಿಗಳು ದೊಡ್ಡ ಭಯೋತ್ಪಾದಕರು
ಹಾಸನ: ಭವಿಷ್ಯ ಹೇಳಿ, ವಾಮಾಚಾರ ಮಾಡಿ ಜನರಲ್ಲಿ ಭೀತಿ ಹುಟ್ಟಿಸುವವರು ಸಮಾಜದ ದೊಡ್ಡ ಭಯೋತ್ಪಾದಕರು ಎಂದು ವಿಚಾರವಾದಿ ಹುಲಿಕಲ್ ನಟರಾಜ್ ಟೀಕಿಸಿದ್ದಾರೆ.
ನಗರದ ನೂತನ ಬಸ್ ನಿಲ್ದಾಣದ ಪಕ್ಕದ ಮೈದಾನದಲ್ಲಿ ನಡೆಯುತ್ತಿರುವ ಬೃಹತ್ ವಸ್ತು ಪ್ರದರ್ಶನ ಮತ್ತು ಮನರಂಜನಾ ಮೇಳ ಹೊಯ್ಸಳ ಸಂಭ್ರಮ ದಲ್ಲಿ ಗುರುವಾರ ರಾತ್ರಿ ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲಿಯವರೆಗೆ ಮೋಸ ಹೋಗುವವರು ಇರುತ್ತಾರೋ, ಅಲ್ಲಿಯವರೆಗೆ ಮೋಸ ಮಾಡುವವರೂ ಇರುತ್ತಾರೆ. ಜನರ ಮೂಢ ನಂಬಿಕೆಗಳೇ ಭವಿಷ್ಯ ಹೇಳುವವರಿಗೆ, ವಾಮಾಚಾರಿಗಳಿಗೆ ಮತ್ತು ಕಳ್ಳ ಬಾಬಾಗಳಿಗೆ ಬಂಡವಾಳ. ವಿದ್ಯಾವಂತರೂ ಇಂತಹ ಮೂಢ ನಂಬಿಕೆಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ ಎಂದರು.
ಮನುಷ್ಯರು ಮಾನಸಿಕವಾಗಿ ಆರೋಗ್ಯವಂತರಾಗಿರಲು ಮನರಂಜನೆ ಬೇಕು. ಆದರೆ ಅದರೊಂದಿಗೆ ವೈಚಾರಿಕತೆಯೂ ಬೆರೆತಿರಬೇಕು. ಆಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ.
ಇಂದು ಮನರಂಜನೆಯ ಹೆಸರಿನಲ್ಲಿ ವಿದ್ಯುನ್ಮಾನ ಮಾಧ್ಯಮಗಳು ಜನರಲ್ಲಿ ಮೌಢ್ಯವನ್ನು ಬಿತ್ತುತ್ತಿವೆ. ಯುವಜನರು ಮೊಬೈಲ್ ಫೋನ್ಗಳ ಮೋಡಿಗೆ ಒಳಗಾಗಿ ಸಮಾಜದಿಂದ ವಿಮುಖರಾಗಿ ತಪ್ಪು ದಾರಿ ಹಿಡಿಯುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಪವಾಡ ಪುರುಷರೆಂದು ಕರೆದುಕೊಳ್ಳುವವರು ವಿಜ್ಞಾನದ ಆವಿಷ್ಕಾರಗಳನ್ನು ಬಳಸಿಕೊಂಡು ಜನರ ಕಣ್ಣಿಗೆ ಮಂಕುಬೂದಿ ಎರಚುತ್ತಿದ್ದಾರೆ. ಈ ಪವಾಡಗಳ ಹಿಂದಿರುವ ವೈಜ್ಞಾನಿಕ ಸತ್ಯಗಳನ್ನು ಅರಿತು ಪ್ರಶ್ನಿಸುವ ಮನೋಭಾವವನ್ನು ಜನರು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಒಂದು ವರ್ಷ ಕಾಲ ದೀಪ ಉರಿಯುತ್ತಿರುವುದು, ಪಾತ್ರೆಗೆ ಕೇವಲ ಅಕ್ಕಿ ಮತ್ತು ನೀರು ಹಾಕಿ ಬೆಂಕಿಯ ಮೇಲಿಡದೇ ಅನ್ನ ಮಾಡುವುದು- ಇವಾವುವೂ ಪವಾಡಗಳಲ್ಲ. ವೈಜ್ಞಾನಿಕ ಸತ್ಯ. ಮೇಣ ಮತ್ತು ಗೋರಿ ಬೀಜ ಬಳಸಿ ಮಾಡಿದ ಬತ್ತಿಯನ್ನು 60 ವರ್ಷಗಳ ಕಾಲ ಸತತವಾಗಿ ಉರಿಸಬಹುದು. ಒಂದು ವರ್ಷ ಕಾಲ ದೀಪ ಉರಿಯುವುದು ಪವಾಡವಲ್ಲ ಎಂದು ಪ್ರಾತ್ಯಕ್ಷಿಕೆಗಳ ಮೂಲಕ ಮನದಟ್ಟು ಮಾಡಿದರು.
ಹಲವು ಪವಾಡಗಳನ್ನು ಮಾಡಿ ಅವುಗಳ ಹಿಂದಿರುವ ವೈಜ್ಞಾನಿಕ ಸತ್ಯಗಳನ್ನು ಬಯಲು ಮಾಡಿ ಜನರಲ್ಲಿ ತಿಳಿವಳಿಕೆ ಮೂಡಿಸಿದರು. ಈ ಸಂದರ್ಭದಲ್ಲಿ ಹೊಯ್ಸಳ ಸಂಭ್ರಮದ ಅಧ್ಯಕ್ಷ ಎಸ್. ಯೋಗೀಶ್, ನಿರ್ದೇಶಕ ಡಿ. ಮೋಹನ್, ಮನು ಮತ್ತು ಬಾಲಾಜಿ ಇದ್ದರು.