ಆಡಳಿತ, ಪ್ರತಿಪಕ್ಷ ಸದಸ್ಯರ ವಾಕ್ಸಮರ
ಕ.ಪ್ರ.ವಾರ್ತೆ , ಅರಸೀಕೆರೆ , ಡಿ. 10
ಪುರಸಭೆ ಚುನಾವಣೆ ಮುಗಿದು ಅಧ್ಯಕ್ಷರ ಆಯ್ಕೆಯಾಗಿ ಹಲವು ತಿಂಗಳೇ ಕಳೆದರೂ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಈವರೆಗೆ ಸಾಮಾನ್ಯ ಸಭೆ ಕರೆಯದಿರುವುದಕ್ಕೆ ಕಾಂಗ್ರೆಸ್ ಸ ದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿಯಿಂದ ಗೊಂದಲದ ವಾತಾವರಣ ನಿರ್ಮಾಣವಾಯಿತು. ಇದರಿಂದ ಬೇಸರಗೊಂಡ ಶಾಸಕರು ಸಭೆಯಿಂದ ಹೊರನಡೆಯಲು ಸಿದ್ಧರಾದಾಗ ಜೆಡಿಎಸ್ ಸದಸ್ಯರು ಅವರ ಮನವೊಲಿಸಿದರು.
ಪುರಸಭಾ ಅಧ್ಯಕ್ಷ ಮೋಹನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ನ ಬಿ.ಎನ್. ವಿದ್ಯಾಧರ್, ಶ್ರೀನಿವಾಸ್, ರಂಗನಾಥ್, ಕಾಂತರಾಜು, ಹಾಜೀವಲಿ ಇನ್ನಿತರ ಸದಸ್ಯರು ಚುನಾವಣೆ ಮುಗಿದು ಹಲವು ತಿಂಗಳುಗಳು ಕಳೆದರೂ ಸಭೆ ಕರೆಯದೆ ವಿಳಂಬ ಮಾಡುತ್ತಿರುವ ಬಗ್ಗೆ ಪ್ರಸ್ತಾಪಿಸಿದಾಗ ಸಭೆಯಲ್ಲಿ ಮಾತಿನ ಚಕಮಕಿ ನಡೆಯಿತು. ಕೆಲ ಹೊತ್ತು ಯಾರು ಏನು ಮಾತನಾಡುತ್ತಿದ್ದಾರೆ ಎಂಬುದೇ ಅರ್ಥವಾಗದ ಸ್ಥಿತಿ ನಿರ್ಮಾಣಗೊಂಡಿತ್ತು.
ಪರಿಸ್ಥಿತಿ ಅರಿತ ಶಾಸಕ ಕೆ.ಎಂ. ಶಿವಲಿಂಗೇಗೌಡರು ಮಧ್ಯೆ ಪ್ರವೇಶಿಸಿ ಕೆಲ ತಾಂತ್ರಿಕ ಕಾರಣಗಳಿಂದ ಸಭೆ ಕರೆಯಲು ಸಾಧ್ಯವಾಗಿಲ್ಲ. ಬರಲಿರುವ ದಿನಗಳಲ್ಲಿ ನಿಗದಿತ ಸಮಯಕ್ಕೆ ಸಭೆ ಕರೆಯಲು ಸೂಚಿಸುವುದಾಗಿ ಭರವಸೆ ನೀಡಿದ ನಂತರ ಪರಸ್ಥಿತಿ ತಿಳಿಯಾಯಿತು.
ಕಾಮಗಾರಿ ಬಗ್ಗೆ ಅಸಮಾಧಾನ: ಕಾಂಗ್ರೆಸ್ನ ಸದಸ್ಯ ಬಿ.ಎನ್. ವಿದ್ಯಾಧರ್ ಮಾತನಾಡಿ, ಪಟ್ಟಣದಲ್ಲಿ ಏಳು ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದು ಈ ಬಗ್ಗೆಯೂ ಗಮನ ಸೆಳೆಯಲು ಮುಂದಿನ ಸಭೆಗಳನ್ನು ಪ್ರತಿ ತಿಂಗಳು ಕರೆಯಬೇಕು. ಈಗಾಗಲೇ ನಿರ್ಮಾಣ ಮಾಡುತ್ತಿರುವ ಒಳಚರಂಡಿ ಮ್ಯಾನ್ಹೋಲ್ಗಳನ್ನು ನಿರ್ಮಾಣ ಮಾಡುವಾಗ ಸಾಕಷ್ಟು ಕ್ಯೂರಿಂಗ್ ಮಾಡದೇ ಹಾಗೇಯೇ ಗುತ್ತಿಗೆದಾರರು ಮಣ್ಣಿನಿಂದ ಮುಚ್ಚುತ್ತಿದ್ದು ಅಧಿಕಾರಿಗಳು ಭೇಟಿ ನೀಡಿ ಪರಶೀಲನೆ ನಡೆಸದೆ ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ. ಇಂತಹ ಕಾಮಗಾರಿಗಳಿಂದ ಮುಂದಿನ ನೂರಾರು ವರ್ಷಗಳ ಕಾಲ ಗುಣಮಟ್ಟ ಕಾಪಾಡಿಕೊಳ್ಳಲು ಹೇಗೆ ಸಾಧ್ಯ ಎಂದು ಕಿಡಿಕಾರಿದರು.
ಇವರ ಹೇಳಿಕೆಯನ್ನು ಬೆಂಬಲಿಸಿ ಇದೇ ಪಕ್ಷದ ಸದಸ್ಯರಾದ ಶ್ರೀನಿವಾಸಗೌಡ, ರಂಗನಾಥ, ಹಾಜಿವಲಿ, ಓ.ಜಿ ಗೀತಾ ಸಾಥ್ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಈ ವಿಚಾರದಲ್ಲಿ ತಪ್ಪಾಗಿದೆ ಮುಂದಿನ ಸಭೆಗಳನ್ನು ಪ್ರತಿ ತಿಂಗಳು ನಡೆಯುವಂತೆ ಕ್ರಮ ತೆಗೆದುಕೊಳ್ಳಲು ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಶಾಸಕರ ಸ್ಪಷ್ಪನೆ: ನಂತರ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಶಾಸಕರು ಕಾಮಗಾರಿಗಳಲ್ಲಿ ಯಾವುದೇ ಲೋಪ ಕಂಡುಬಂದಲ್ಲಿ ಅಂತಹ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಲಾಗುವುದು. ತಮ್ಮಗಳ ಬಳಿ ಕಾಮಗಾರಿಗೆ ಸಂಬಂಧಿಸಿದಂತೆ ದಾಖಲೆಗಳಿದ್ದರೆ ನೀಡಬಹುದೆಂದು ಹೇಳಿದರು.
ವಿಷಯ 33 ರ ಸಂಬಂಧಿಸಿದಂತೆ ಅರಸೀಕೆರೆ ಪುರಸಭೆಯಿಂದ ಮದುವೆ ಮತ್ತು ಮತ್ತಿತರೆ ಕಾರ್ಯಕ್ರಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಬಗ್ಗೆ ಟ್ಯಾಂಕರ್ಗೆ ಶುಲ್ಕ ನಿಗಧಿಪಡಿಸುವ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದ ಸದಸ್ಯರು ಮುಂಬರುವ ದಿನಗಳಲ್ಲಿ ಪಟ್ಟಣದಲ್ಲಿ ಕುಡಿಯುವ ನೀರಿಗೆ ಅಭಾವ ಉಂಟಾಗಲಿದೆ. ಆ ನಿಟ್ಟನಲ್ಲಿ ಶುಲ್ಕ ವಿಧಿಸಿ ನೀರು ಸರಬರಾಜು ಮಾಡುವ ಪ್ರಸ್ತಾಪನೆ ಕೈ ಬಿಡಬೇಕು ಎಂದು ಆಗ್ರಹಿಸಿದಾಗ ಸಭೆ ಒಕ್ಕೂರಲಿನಿಂದ ಸಮ್ಮತಿ ನೀಡಿತು.
ಮೊಬೈಲ್ ನೀಡಿಕೆಗೆ ಖಂಡನೆ: ಪುರಸಭಾ ಅಧ್ಯಕ್ಷ ಮೋಹನ್ ಕುಮಾರ್ ಅವರು ಸಭೆಗೆ ಮಾಹಿತಿ ನೀಡಿ ಸಾರ್ವಜನಿಕರ ಅನುಕೂಲಕ್ಕೆಂದು ಪಟ್ಟಣದ ವಿವಿದೆಡೆ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯಗಳ ಹರಾಜು, ನಿರ್ವಹಣೆ, ಕುಡಿಯುವ ನೀರು ಪೂರೈಕೆ, ಬೀದಿ ದೀಪ ಅಳವಡಿಕೆ ಸೇರಿದಂತೆ ಎಲ್ಲಾ ಬಗೆಯ ಕಾಮಗಾರಿಗಳನ್ನು ಎಲ್ಲಾ ವಾರ್ಡ್ಗಳಿಗೆ ಒದಗಿಸಲಾಗುವುದು ಎಂದ ಅವರು, ಕೆಲ ಅಂಶಗಳನ್ನು ಸ್ಥಾಯಿ ಸಮಿತಿಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು. ಇದೇ ವೇಳೆ ಪುರಸಭಾ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಕ್ಸಿಕ್ಯುಟಿವ್ ಸಿಬ್ಬಂದಿಗಳಿಗೆ ಮೊಬೈಲ್ ನೀಡುವ ವಿಷಯವನ್ನು ಸದಸ್ಯರು ಪಕ್ಷಾತೀತವಾಗಿ ಖಂಡಿಸಿದರು. ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಈಗಾಗಲೇ ಕರೆಯಲಾಗಿರುವ ಅಭಿವೃದ್ದಿ ಪ್ಯಾಕೇಜ್ ಕಾಮಗಾರಿಗಳಿಗೆ ಕಡಿಮೆ ದರ ಸೂಚಿಸಿರುವ ಗುತ್ತಿಗೆದಾರರು ಕಾಮಗಾರಿ ಪ್ರಾರಂಭಿಸಲು ಸಭೆ ಸರ್ವಾನುಮತದಿಂದ ಅನುಮೋದನೆ ನೀಡಿತು. ನಾನಾ ಸಂಘ ಸಂಸ್ಥೆಗಳು ತಮ್ಮ ಸಾಮಾಜಿಕ ಕಾರ್ಯಗಳಿಗೆ ನಿವೇಶನ ಕೋರಿ ಸಲ್ಲಿಸಲಾಗಿದ್ದ ಮನವಿಗಳಿಗೆ ಅನುಮೋದನೆ ನೀಡಲಾಯಿತು.
ಉಪಾಧ್ಯಕ್ಷೆ ಭಾಗ್ಯಲತಾ ಮಂಜು, ಮುಖ್ಯಾಧಿಕಾರಿ ಸತ್ಯನಾರಾಯಣ, ಮಾಜಿ ಅಧ್ಯಕ್ಷರಾದ ಸಮೀವುಲ್ಲಾ, ಪಂಚಾಕ್ಷರಿ, ಸದಸ್ಯರಾದ ಓ.ಜಿ. ಗೀತಾ, ಬಾಲಮುರುಗನ್, ಪಾರ್ಥಸಾರಥಿ, ಅನ್ನಪೂರ್ಣ, ಬಬ್ರುವಾಹನ, ಚೆಸ್ಕಾಂ ಎಂಜಿನಿಯರ್ ದೇವರಾಜ್, ನಗರ ಯೋಜನಾ ಉಪ ನಿರ್ದೇಶಕ ಶಂಕರನಾರಾಯಣ್, ಪುರಸಭೆ ಅಧಿಕಾರಿಗಳಾದ ರಮೇಶ್, ಕೃಷ್ಣಮೂರ್ತಿ, ನವೀನ್ ಇದ್ದರು.