ತುಂಗ ಬತ್ತ ತಳಿ ರೋಗದಿಂದ ಮುಕ್ತ: ಅಧಿಕ ಇಳುವರಿ
ಬೇಲೂರು: ಭೂಚೇತನ ಯೋಜನೆಯಡಿಯಲ್ಲಿ ಬೆಳೆದಿರುವ ತುಂಗ ಬತ್ತ ತಳಿಯು ರೋಗ ಬಾಧೆಯಿಂದ ಮುಕ್ತವಾಗಿದೆ ಮತ್ತು ಅಧಿಕ ಇಳುವರಿ ಪಡೆಯಬಹುದು ಎಂದು ಜಿಲ್ಲಾ ಜಂಟಿ ನಿರ್ದೇಶಕ ಬಿ. ಶಿವರಾಜು ತಿಳಿಸಿದರು.
ತಾಲೂಕಿನ ಸೋಂಪುರ ಗ್ರಾಮದ ಬಿ.ಸಿ. ಮೋಹನ್ ಕುಮಾರ್ ಜಮೀನಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ತುಂಗ ಬತ್ತದ ತಳಿಯ ಪ್ರಾತ್ಯಕ್ಷಿಕೆ ಮತ್ತು ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಅವರು, ಬತ್ತದ ತಳಿಗಳ ಅಯ್ಕೆ ವಿಚಾರದಲ್ಲಿ ರೈತರು ಗಮನ ಹರಿಸಿ ಅಯ್ಕೆ ಮಾಡಿದಾಗ ಮಾತ್ರ ಉತ್ತಮ ಇಳುವರಿಯನ್ನು ಪಡೆಯಬಹುದು ಎಂದರು. ತುಂಗ ಬತ್ತದ ತಳಿ ಎತ್ತರವಾಗಿ ಬೆಳೆಯುತ್ತದೆ, ಈ ದಿಸೆಯಲ್ಲಿ ರೈತರಿಗೆ ಮೇವಿನ ಸಮಸ್ಯೆ ನೀಗಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಬೆಂಬಲ ಬೆಲೆ ಬೇಕು: ಎಕರೆಗೆ 30 ರಿಂದ 32 ಕ್ವಿಂಟಾಲ್ ಉತ್ಪಾದನೆ ತೆಗೆಯಬಹುದು. ತುಂಗ ಬತ್ತಕ್ಕೆ ತಾಂತ್ರಿಕ ಬೇಸಾಯದ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ರೈತರಿಗೆ ಕರೆ ನೀಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಅಮಿತ್ ಶೆಟ್ಟಿ ಮಾತನಾಡಿ, ಭೂಚೇತನ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ಬೇಲೂರು ತಾಲೂಕಿನಲ್ಲಿ ಅತಿ ಹೆಚ್ಚು ಬತ್ತ ಬೆಳೆ ಇದ್ದು, ಈ ಬಗ್ಗೆ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಬೇಕು ಎಂದ ಅವರು, ಬೇಲೂರು ಎಪಿಎಂಸಿಯಲ್ಲಿ ಖರೀದಿ ಕೇಂದ್ರ ತೆಗೆಯುವ ಮೂಲಕ ರೈತರ ಸಮಯ ಉಳಿತಾಯ ಮಾಡಬಹದು ಎಂದು ತಿಳಿಸಿದರು. ತಾಪಂ ಉಪಾಧ್ಯಕ್ಷೆ ಕಮಲಮ್ಮ, ಮಾಜಿ ಅಧ್ಯಕ್ಷೆ ಕಮಲಚನ್ನಪ್ಪ, ಅರೇಹಳ್ಳಿ ಕಾಫಿ ಸಂಘದ ಅಧ್ಯಕ್ಷ ತಾರಾನಾಥ್, ಗ್ರಾಪಂ ಅಧ್ಯಕ್ಷೆ ಸುಮಿತ್ರ, ಬೇಲೂರು ಸಹಾಯಕ ಕಣಷಿ ಅಧಿಕಾರಿ ನಾಗೇಂದ್ರ ಪ್ರಸಾದ್, ಬೇಳಕೇರಿ,ತಾಂತ್ರಿಕ ವ್ಯವಸ್ಥಾಪಕ ಸುರೇಶ ಆತ್ಮಯೋಜನೆ ಇನ್ನು ಇತರರು ಇದ್ದರು.