ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಾನವ ಹಕ್ಕುಗಳ ಉಲ್ಲಂಘನೆ ಶಿಕ್ಷಾರ್ಹ ಅಪರಾಧ

Vishwanath S
Updated On : 11 Dec 2013, 12:56 pm

ಕ.ಪ್ರ.ವಾರ್ತೆ ,  ಹಾಸನ ,  ಡಿ. 10
ಮಾನವ ಹಕ್ಕುಗಳ ಉಲ್ಲಂಘನೆಯು ಶಿಕ್ಷಾರ್ಹ ಅಪರಾಧವಾಗಿದ್ದು, ಇದರ ಬಗ್ಗೆ ಅರಿವನ್ನು ಮೂಡಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಜೆ. ಸೋಮಶೇಖರ್ ಹೇಳಿದರು. ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
ಜಿಲ್ಲಾಡಳಿತ, ಕರ್ನಾಟಕ ಪೊಲೀಸ್ ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನ್ಯಾ. ಸೋಮಶೇಖರ್, ದೇಶದ ಪ್ರತಿಯೊಬ್ಬ ಪ್ರಜೆಯೂ ಮಾನವ ಹಕ್ಕುಗಳನ್ನು ಸಂರಕ್ಷಿಸಿ ಅಭಿವೃದ್ಧಿಗೊಳಿಸಬೇಕಾದ ಅವಶ್ಯಕತೆ ಇದೆ. ಮಾನವ ಹಕ್ಕುಗಳ ಬಗ್ಗೆ ಅರಿವನ್ನು ಮೂಡಿಸಬೇಕಾದಂತಹ ಅವಶ್ಯಕತೆ ಇದೆ ಎಂದರು.
ಜಿಲ್ಲೆಯಲ್ಲಿ ಇದ್ದಂತಹ ಅಸ್ಪೃಶ್ಯತೆ, ಜೀತಪದ್ಧತಿಯನ್ನು ಮುಕ್ತಗೊಳಿಸುವಂತೆ ಕಾರ್ಯ ನಡೆದಿದೆ ಹಾಗೂ ನಡೆಯುತ್ತಿದ್ದು, ಅದರ ವಿರುದ್ಧ ಕ್ರಮಕೈಗೊಳ್ಳಬೇಕಾಗಿದೆ. ಮಾನವ ಹಕ್ಕು ಕಾಯ್ದೆ ಅಡಿಯಲ್ಲಿ ಪ್ರತಿಯೊಬ್ಬರು ಸಮಾಜದಲ್ಲಿ ಸಮಾನತೆ, ಸ್ವತಂತ್ರ್ಯ ಮತ್ತು ಗೌರವಪೂರ್ಣವಾಗಿ ಬದುಕುವ, ಸಂರಕ್ಷಣೆಯಿಂದ ಇರುವ ಸ್ವಾತಂತ್ರ್ಯ ಹೊಂದಲಾಗಿದೆ. ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡುವವರಿಗೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಯನ್ನೂ ವಿಧಿಸಲಾಗಿದೆ ಎಂದು ಹೇಳಿದರು.
ತಡೆಗಟ್ಟಬೇಕಿದೆ: ಮಾನವ ಹಕ್ಕುಗಳ ಕಾಯ್ದೆ ದೇಶದಲ್ಲಿ ಜಾರಿಯಾಗಿ 20 ವರ್ಷ ಕಳೆದಿದ್ದರೂ, ಸಾರ್ವಜನಿಕರಲ್ಲಿ ಈವರೆಗೂ ಕಾಯ್ದೆಯ ಬಗ್ಗೆ ಅರಿವು ಕಡಿಮೆ ಇದೆ. ವಿಶ್ವದಲ್ಲಿನ ಅಸಮಾನತೆಯನ್ನು ಹೊಗಲಾಡಿಸುವ ಸಲುವಾಗಿ ಎಲ್ಲರೂ ಸಮಾನರು ಎಂಬ ಭಾವನೆ ಮೂಡಿಸುವ ಸಲುವಾಗಿ 1948ರಲ್ಲಿ ಈ ಕಾಯ್ದೆಯನ್ನು ವಿಶ್ವಸಂಸ್ಥೆ ಹೊರಹಾಕಿತು. ಮಾನವ ಹಕ್ಕು ಕಾಯ್ದೆಯಡಿ ದೇಶದ ಉನ್ನತ ಪ್ರಜೆಯಿಂದ ಒಬ್ಬ ಸಾಮಾನ್ಯ ವ್ಯಕ್ತಿವರೆಗೂ ಅವರದೇ ಸ್ವಾತಂತ್ರ್ಯವಾಗಿ ಬದುಕವ ಹಕ್ಕಿದೆ. ಸಮಾಜದಲ್ಲಿ ಇನ್ನೂ ಕಂದಾಚಾರ ಹಾಗೂ ಜೀತ ಪದ್ಧತಿಗಳು ಆಚರಣೆಗಳು ಜಾರಿಯಲ್ಲಿದ್ದು, ಅವುಗಳನ್ನು ತಡೆಗಟ್ಟಬೇಕಾದ ಅವಶ್ಯಕತೆ ಇದೆ ಎಂದರು.
ಮಂಡೇಲಾ, ಅಂಬೇಡ್ಕರ್ ಸಮಾನರು: ವಿಶ್ವದಲ್ಲಿ ಸಮಾನತೆಗಾಗಿ ಹೋರಾಡಿದ ನೆಲ್ಸನ್ ಮಂಡೇಲಾ ಹಾಗೂ ದಾದಾ ಸಾಹೇಬ್ ಅಂಬೇಡ್ಕರ್ ಪ್ರಮುಖರಾಗಿದ್ದಾರೆ. ಇಂದಿನ ನಮ್ಮ ಯುವಪೀಳಿಗೆ ಸಮಾಜದ ಆಗು ಹೋಗುಗಳ ಬಗ್ಗೆ ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಅವರು ಹೇಳಿದರು.
ಪ್ರಶ್ನೆ: ಉಪನ್ಯಾಸ ನೀಡಿದ ವಕೀಲ ಚಂದ್ರಶೇಖರ್, ಮಾನವ ಹಕ್ಕುಗಳೆಂದರೆ ಸಂವಿಧಾನದಲ್ಲಿ ನೀಡಿರುವಂತಹ ಮೂಲಭೂತ ಹಕ್ಕುಗಳಾಗಿವೆ. ಮಾನವ ಹಕ್ಕುಗಳ ಸಂರಕ್ಷಣೆಗಾಗಿ ಭಾರತ ಇತರೆ ರಾಷ್ಟ್ರಗಳಂತೆ ಹೋರಾಟಗಳನ್ನು ನಡೆಸುತ್ತಿದ್ದರೂ, ಈವರೆಗೂ ಅದನ್ನು ಕಾಯ್ದುಕೊಳ್ಳಲು ಸಾಧ್ಯವಾಗಿಲ್ಲ ಎಂದ ಅವರು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಇನ್ನೂ ಅಧ್ಯಕ್ಷರನ್ನು ನೇಮಿಸಲು ಸಾಧ್ಯವಾಗಿಲ್ಲ. ಇದರಿಂದ ಮಾನವ ಹಕ್ಕುಗಳ ಸಂರಕ್ಷಣೆ ಸಾಧ್ಯವೇ ಎಂದು ಪ್ರಶ್ನಿಸಿದರು.
ಉತ್ತಮ ವ್ಯಕ್ತಿಗಳಾಗಬೇಕು: ಮಾನವ ಹಕ್ಕುಗಳಲ್ಲಿ ಇರುವ ಸಾಧಕಬಾಧಕಗಳ ಜನ ಸಾಮಾನ್ಯರಿಗೆ ತಿಳಿಸಿ ಕೊಡುವ ಜವಬ್ದಾರಿಯನ್ನು ಸರ್ಕಾರ ಮಾಡಬೇಕು. ಮನುಷ್ಯ ತನ್ನ ಬದುಕನ್ನು ಅರ್ಥಪೂರ್ಣವಾಗಿ ಮತ್ತು ತೃಪ್ತಿದಾಯಕವಾಗಿ ಜೀವಿಸಲು ಇರುಬೇಕಾದಂತಹದೇ ಮಾನವ ಹಕ್ಕಾಗಿದೆ. ಪ್ರಸ್ತುತ ಮನುಷ್ಯ ತನ್ನ ವಿವೇಚನೆಯನ್ನು ಕಳೆದುಕೊಳ್ಳುತ್ತಿದ್ದು, ಕಲುಷಿತ ಸಮಾಜದಲ್ಲಿ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಪ್ರತಿಯೊಬ್ಬರು ತಮಗೆ ನೀಡಲಾಗಿರುವ ಹಕ್ಕುಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸಮಾಜದ ಉತ್ತಮ ವ್ಯಕ್ತಿಗಳಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣವರ, ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ, ಹಾಸನ ಉಪವಿಭಾಗೀಯಧಿಕಾರಿ ಶರತ್, ತಹಶೀಲ್ದಾರ್ ಮಂಜುನಾಥ್ ಹಾಗೂ ಇತರರು ಇದ್ದರು.
ಜಿಲ್ಲೆಯಾದ್ಯಂತ ಆಚರಣೆ: ಜಿಲ್ಲಾಡಳಿತ, ಜೀವನಧಾರ ಸೇವಾ ಕೇಂದ್ರ ಸೇರಿದಂತೆ ಇತರೆ ನಾನಾ ಸಂಘ- ಸಂಸ್ಥೆಗಳು, ತಾಲೂಕುಗಳಲ್ಲಿ ವಿಶ್ವಮಾನವ ಹಕ್ಕುಗಳ ದಿನಾಚರಣೆ ಆಚರಿಸಲಾಯಿತು.
ಜೀವನಾಧಾರ ಸೇವಾ ಕೇಂದ್ರದಿಂದ ಆಚರಣೆ
ದೇಶದಲ್ಲಿ ಪ್ರತಿ ವರ್ಷ ಸುಮಾರು 80 ಲಕ್ಷದಷ್ಟು ಮಂದಿ ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ತೊಡಗಿದ್ದಾನೆ ಎಂದು ಎಂ. ಕೃಷ್ಣ ಕಾನೂನು ಕಾಲೇಜು ಸಹ ಪ್ರಾಧ್ಯಾಪಕ ವಿ. ಶ್ರೀನಿವಾಸ್ ಹೇಳಿದರು.
ಜೀವನಾಧಾರ ಸೇವಾ ಕೇಂದ್ರದ ವತಿಯಿಂದ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ ಮಾನವ ಹಕ್ಕುಗಳ ದಿನಾಚರಣೆ ಹಾಗೂ 39ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಶ್ವದಲ್ಲಿ ನಡೆಯುತ್ತಿದ್ದ ಮಾನವನ ಸ್ವಾತಂತ್ರ್ಯಕ್ಕೆ ಧಕ್ಕೆ, ಅಹಿಂಸಾ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಶ್ವ ಸಂಸ್ಥೆ 1948ರಲ್ಲಿ ಮಾನವ ಹಕ್ಕುಗಳನ್ನು ಸ್ಥಾಪನೆ ಮಾಡಿದೆ ಎಂದರು.
ಭೂಮಿಯ ಮೇಲೆ ಜನಿಸುವ ಪ್ರತಿಯೊಬ್ಬರಿಗೂ ಅವರದ್ದೇ ಆದ ಸ್ವಾತಂತ್ರ್ಯ ಇದೆ. ಸಮಾಜದಲ್ಲಿ ಇದ್ದ ಜಾತಿ, ಲಿಂಗ, ಭಾಷೆ, ಬಣ್ಣದ ಆಧಾರದ ಮೇಲಿನ ಶೋಷಣೆಯನ್ನು ತಡೆಗಟ್ಟುವ ಹಾಗೂ ವಿಶ್ವವನ್ನು ಶಾಂತಿಯಿಂದ ನೆಲೆಸುವಂತೆ ಮಾಡುವ ಸಲುವಾಗಿ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ದೇಶದಲ್ಲಿ ಜನರು ಮಾನವ ಹಕ್ಕು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾನವ ಹಕ್ಕುಗಳ ಕಾಯ್ದೆಯಲ್ಲಿ ಪ್ರತಿಯೊಬ್ಬರಿಗೂ ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ನೀಡಬೇಕು ಎಂಬುದು ಇದೆ. ಆದರೇ ದೇಶದಲ್ಲಿ 23 ಕೋಟಿ ಜನರು ಬಡತನ ರೇಖೆಗಿಂತಲೂ ಕಡಿಮೆ ಇದ್ದು, ಪ್ರತಿ ದಿನಕ್ಕೆ ರು. 65ಗಳಿಗಿಂತ ಕಡಿಮೆ ಆದಾಯ ಪಡೆಯುವರ ಸಂಖ್ಯೆ ಸುಮಾರು 47 ಕೋಟಿಯಷ್ಟಿದೆ. ದೇಶದಲ್ಲಿ ಪ್ರತಿ ವರ್ಷಕ್ಕೆ 50 ಲಕ್ಷಕ್ಕೂ ಅಧಿಕ ಹೆಣ್ಣು ಮಕ್ಕಳ ಬ್ರೂಣ ಹತ್ಯೆ ನಡೆಯುತ್ತಿದ್ದು, ಇದರಿಂದ ಸಮಾಜದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದು ಕೂಡ ಮಾನವ ಹಕ್ಕು ಉಲ್ಲಂಘನೆಯಾಗಿದೆ ಎಂದರು.
ಸರ್ಕಾರ ಸಾರ್ವಜನಿಕರಿಗೆ ಹಲವು ಕಾನೂನುಗಳನ್ನು ಜಾರಿಗೊಳಿಸುತ್ತದೆ ಆದರೇ ಅವುಗಳನ್ನು ಅನುಷ್ಠಾನಗೊಳಿಸದೆ. ಯೋಜನೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದರ ಜೊತೆಗೆ ಭ್ರಷ್ಟಾಚಾರದಲ್ಲಿ ಸರ್ಕಾರವೇ ತೊಡಗುತ್ತದೆ. ಹಾಗಾಗಿ ಮಾನವ ಹಕ್ಕುಗಳನ್ನು ಸಂರಕ್ಷಿಸುವಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ವಿಫಲವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪತ್ರಕರ್ತ ಆರ್.ಪಿ. ವೆಂಕಟೇಶ್ ಮೂರ್ತಿ, ಸಿಎಂಎಸ್‌ಎಸ್‌ಎಸ್ ನಿರ್ದೇಶಕ ಫೆಲಿಕ್ಸ್ ರೊಸಾರಿಯೋ, ಸಿಸ್ಟರ್ ಬಿನ್ನಿ, ಹೆಲನ್ ಫರ್ನಾಂಡಿಸ್ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement