ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹಣಕಾಸು ನಿರ್ವಹಣೆ ಕುರಿತು ಕಾರ್ಯಾಗಾರ

Vishwanath S
Updated On : 11 Dec 2013, 12:59 pm

ಹೊಳೆನರಸೀಪುರ: ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಎಂಕಾಂ  ಸ್ನಾತಕೋತ್ತರ ಕೇಂದ್ರದ  ವಿದ್ಯಾರ್ಥಿನಿಯರಿಗೆ ಹಣಕಾಸು ನಿರ್ವಹಣೆ ಕುರಿತಾದ ಕಾರ್ಯಾಗಾರವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.  ಪ್ರೊ. ಚೇತನ್, ಸಹಾಯಕ ಪ್ರಾಧ್ಯಾಪಕರು, ವಿದ್ಯಾವರ್ಧಕ ಕಾಲೇಜು, ಸ್ನಾತಕೋತ್ತರ ಕೇಂದ್ರ, ಮೈಸೂರು ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಹಣಕಾಸು ನಿರ್ವಹಣೆಯ ಬಗ್ಗೆ ಕೂಲಂಕಷವಾಗಿ ವಿವರಿಸಿದರು. ಪ್ರಾಂಶುಪಾಲ ಪ್ರೊ. ಬಸವಣ್ಣ ಮಾತನಾಡಿ, ವಿದ್ಯಾರ್ಥಿನಿಯರು ಪರೀಕ್ಷೆ ಸಮೀಪಿಸುತ್ತಿರುವುದರಿಂದ ಶ್ರಮಪಟ್ಟು ಓದಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿ ಕಾಲೇಜಿಗೆ ಕೀರ್ತಿ ತರಬೇಕೆಂದು ಸಲಹೆ ಮಾಡಿದರು. ವಾಣಿಜ್ಯ ವಿಭಾಗದ ಸಂಯೋಜಕರಾದ ಪ್ರೊ. ರಾಜಶೇಖರ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರು ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸದಿದ್ದರೆ ಉತ್ತಮ ಅವಕಾಶಗಳು ನಗರ ಪ್ರದೇಶದ ಪಾಲಾಗುತ್ತದೆ. ಆದುದರಿಂದ ವಿದ್ಯಾರ್ಥಿನಿಯರು ಆಸಕ್ತಿ ವಹಿಸಿ ವ್ಯಾಸಂಗ ಮಾಡಬೇಕೆಂದು ಸಲಹೆ ಮಾಡಿದರು. ಎನ್‌ಡಿಆರ್‌ಕೆ ಕಾಲೇಜಿನ ಪ್ರೊ. ರಂಗೇಗೌಡ ಮಾತನಾಡಿ,  ಎಂ.ಕಾಂ. ವಿದ್ಯಾರ್ಥಿನಿಯರಿಗೆ ಇತರೆ ವಿಷಯಗಳ ವಿದ್ಯಾರ್ಥಿನಿಯರಿಗಿಂತ ಹೆಚ್ಚಿನ ಅವಕಾಶಗಳಿವೆ.  ಆದ್ದರಿಂದ ಹೆಚ್ಚು ಅಂಕ ಗಳಿಸಿ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಉಪನ್ಯಾಸಕರು ಇದ್ದರು.
ಪುನರ್ವಸತಿ: ಖಂಡನೆ
ಅರಕಲಗೂಡು: ತಾಲೂಕಿನ ರಾಮನಾಥಪುರ ಹೋಬಳಿ ಗಂಗೂರಿನ 110  ಜೀತವಿಮುಕ್ತರ ಪೈಕಿ ಕೇವಲ 24 ಮಂದಿಗೆ ಮಾತ್ರ ಜಮೀನು ವಸತಿ ನೀಡಿ ಉಳಿದ 86 ಕುಟುಂಬಗಳನ್ನು ಜಿಲ್ಲಾಡಳಿತ ನಿರ್ಲಕ್ಷಿಸಿದೆ ಎಂದು ಕರ್ನಾಟಕ ಮಾದಿಗ ದಂಡೋರ ಸಮಿತಿಯ ಲಿಂಗರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಸಂಸದ ದೇವೇಗೌಡ ಅಭಿವೃದ್ಧಿ ಮಂತ್ರ ಜಪಿಸುತ್ತಾರೆಯೇ ವಿನಹ ಜಿಲ್ಲೆಯ ದಲಿತರ ಹಿತಾಸಕ್ತಿ ಕುರಿತು ಒಮ್ಮೆಯೂ ಕಾಳಜಿ ಪ್ರದರ್ಶಿಸಿಲ್ಲ. ಆಲೂರು ತಾಲೂಕಿನ ತಾಳೂರು ಗ್ರಾಮದ ದಲಿತನ ಕೊಲೆ, ಬೆಳ್ಳಾವರ ಗ್ರಾಮದ ದಲಿತರ ಮೇಲಿನ ಹಲ್ಲೆ, ಅರಕಲಗೂಡು ತಾಲೂಕು ರಾಗಿಮರೂರು ಜೀತವಿಮುಕ್ತರಿಗೆ ಮೂಲಭೂತ ಸೌಕರ್ಯ ಕಲ್ಪಿಸದೆ ವಂಚಿಸಲಾಗಿದೆ ಆದರೆ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ ನಿರ್ಲಕ್ಷ್ಯ ವಹಿಸಿದೆ. ಇದನ್ನು ಮಾದಿಗ ದಂಡೋರ ಸಮಿತಿ ಸಹಿಸುವುದಿಲ್ಲ. ಸಮಸ್ಯೆಯ ಪರಿಹಾರಕ್ಕೆ ಮುಂದಾಗದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ದಸಂಸ ತಾಲೂಕು ಸಮಿತಿ ಪುನಾರಚನೆ
ಅರಕಲಗೂಡು: ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಭೀಮವಾದ) ತಾಲೂಕು ಘಟಕವನ್ನು ಪುನಾರಚಿಸಲಾಗಿದೆ. ತಾಲೂಕು ಘಟಕದ ಅಧ್ಯಕ್ಷರಾಗಿ ಹಾನಗಲಲ್ಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ.ರಾಗಿಮರೂರು ಮೂರ್ತಿ (ಉಪಾಧ್ಯಕ್ಷ), ಜಗದೀಶ(ತಾಲೂಕು ಪ್ರಧಾನ ಕಾರ್ಯದರ್ಶಿ), ಬೆ.ಜೆ. ಅಣ್ಣಯ್ಯ (ಖಜಾಂಚಿ), ಮತ್ತಿಗೋಡು ರಮೇಶ್ ಸಹಕಾರ್ಯದರ್ಶಿ).
ಮಹಿಳಾ ಘಟಕಕ್ಕೆ: ಸುಜಾತ,ತಾಲೂಕು ಮಹಿಳಾ ಘಟಕದ ಅಧ್ಯಕ್ಷೆಯಾಗಿ, ರತ್ನಮ್ಮ,ಕಾರ್ಯದರ್ಶಿ ಯಾಗಿ ಆಯ್ಕೆಗೊಂಡಿದ್ದಾರೆ. ಈ ವೇಳೆ ದಸಂಸದ ವಿಭಾಗ ಸಂಚಾಲಕ ಹೆಚ್.ಪಿ.ಮಂಜು, ಜಿಲ್ಲಾ ಸಂಚಾಲಕ ಜವರಯ್ಯ, ಜಿಲ್ಲಾ ಸಂಘಟನಾ ಸಂಚಾಲಕರುಗಳಾದ ಸಣ್ಣಸ್ವಾಮಿ, ರಾಮಚಂದ್ರ ಇತರರು ಉಪಸ್ಥಿತರಿದ್ದರು.
ಅರ್ಜಿ ಆಹ್ವಾನ
ಅರಕಲಗೂಡು: ಅರಕಲಗೂಡು ತಾಲೂಕಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಆರ್‌ಕೆವಿವೈ ಯೋಜನೆಯಾದ ಬಾಳೆಯಲ್ಲಿ ನಿಖರ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡು ಸಹಾಯ ಧನ ಪಡೆಯಲು ಹಾಗೂ ಆಧುನಿಕ ಬೇಸಾಯ ಪದ್ಧತಿಯನ್ನು  ಅಳವಡಿಸಿಕೊಂಡು ಬೆಳೆಯುವಂತಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಹನಿನೀರಾವರಿ, ಮತ್ತು ತೋಟಗಾರಿಕೆಯಲ್ಲಿ ಉಪಯೋಗಿಸುವ ಯಂತ್ರಗಳನ್ನು ಸಬ್ಸಿಡಿ ದರದಲ್ಲಿ ಅರ್ಜಿ ಸಲ್ಲಿಸುವ ಅರ್ಹ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ನೀಡಲಾಗುವುದು ಎಂದು ತೋಟಗಾರಿಕೆ ಇಲಾಖೆ  ತಿಳಿಸಿದೆ.
ಅಕ್ರಮ ಮದ್ಯ ನಾಶ
ಅರಸೀಕೆರೆ: ತಾಲೂಕಿನ ವ್ಯಾಪ್ತಿಯಲ್ಲಿ ಅಬಕಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ವಿವಿಧೆಡೆ ದಾಳಿ ನಡೆಸಿ 15 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ರು. 1.25 ಲಕ್ಷ ಮೌಲ್ಯದ 390.24 ಲೀಟರ್ ಮದ್ಯ ಹಾಗೂ 55.650 ಲೀಟರ್ ಬೀಯರ್ ಅನ್ನು ಅಬಕಾರಿ ಅಧಿಕಾರಿಗಳು ಹಾಗೂ ತಹಸೀಲ್ದಾರ್ ಸಮ್ಮುಖದಲ್ಲಿ ಮಂಗಳವಾರ ನಾಶಪಡಿಸಲಾಯಿತು. ಈ ಸಂದರ್ಭದಲ್ಲಿ ನಿರೀಕ್ಷಕ ಸುನಿಲ್ ಎಂ.ಡಿ., ಕೆ.ಜಿ. ಸಂತೋಷ್, ಎಂ. ಬಸವರಾಜಪ್ಪ ಸಮ್ಮುಖದಲ್ಲಿ ಹಾಗೂ ಸಿಬ್ಬಂದಿಗಳು ನಾಶ ಮಾಡಿದರು. ಖಾಲಿ ಉಳಿದ ಬಾಟಲಿಗಳನ್ನು ಹರಾಜು ಮಾಡಿ ಸರ್ಕಾರಕ್ಕೆ ಜಮಾ ಮಾಡುವುದಾಗಿ ತಿಳಿಸಿದ್ದಾರೆ.
ಹಿತ ರಕ್ಷಣಾ ಸಮಿತಿ ಸಭೆ
ಹೊಳೆನರಸೀಪುರ: ತಾಲೂಕಿನ ಪರಿಶಿಷ್ಟ ಜಾತಿ, ವರ್ಗಗಳ ಜನರ ಹಿತ ರಕ್ಷಣಾ ಸಮಿತಿಯ ಸಭೆಯನ್ನು ಕ್ಷೇತ್ರದ ಶಾಸಕ ಹೆಚ್.ಡಿ. ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ಡಿ. 11ರಂದು ಮ. 2ಕ್ಕೆ ಹೊಳೆನರಸೀಪುರ ತಾಲೂಕು ಕಚೇರಿಯ ಸಭಾಂಗಣದಲ್ಲಿ ಕರೆಯಲಾಗಿದೆ ಎಂದು   ಪರಿಶಿಷ್ಟ ಜಾತಿ, ವರ್ಗಗಳ ಹಿತರಕ್ಷಣಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ತಾಲೂಕು ಸಮಾಜ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
ಇಂದು ಅನ್ನಸಂತರ್ಪಣೆ ಕಾರ್ಯಕ್ರಮ
ಅರಕಲಗೂಡು: ಇಲ್ಲಿನ ಧರ್ಮಸ್ಥಳ ಪಾದಯಾತ್ರಾ ಸಮಿತಿ ವತಿಯಿಂದ ಪಟ್ಟಣದ ದೊಡ್ಡಮ್ಮ ದೇವಿ ದೇವಾಲಯದ ಆವರಣದಲ್ಲಿ ಅನ್ನಸಂತರ್ಪಣೆ ಮತ್ತು ಹಾಸ್ಯ ಲಾಸ್ಯ ಜಾನಪದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬುಧವಾರ ಸಂಜೆ 6 ಗಂಟೆಗೆ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ಸಕಲೇಶಪುರ ಉಪ-ವಿಭಾಗಾಧಿಕಾರಿ ಡಾ.ಮಧುಕೇಶ್ವರ್ ನೆರವೇರಿಸುವರು. ಶಾಸಕ ಎ.ಮಂಜು ಅವರು ಅಧ್ಯಶ್ಕ್ಷತೆ ವಹಿಸಲಿದ್ದು,ಕಾರ್ಯಕ್ರಮದ ಸಾನಿಧ್ಯವನ್ನು ಅರೇಮಾದನಹಳ್ಳಿ ಶ್ರೀ ಮನ್ಮೂಲ ಮಠದ ಶ್ರೀ ಶಿವಸುಜ್ಞಾನಸ್ವಾಮಿಗಳು, ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು,ಚಿಲುಮೆ ಮಠದ ಶ್ರೀ ಜಯದೇವಸ್ವಾಮಿಗಳು ವಹಿಸುವರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಸ್. ಜಗದೀಶ್, ಉದ್ಯಮಿ ಎಂ.ಆರ್. ರಂಗಸ್ವಾಮಿ, ಕುರುಬರ ಸಂಘದ ನಿರ್ದೇಶಕ ಅನಿಲ್ ಕುಮಾರ್, ಪಿಎಸ್‌ಐ ರೇವಣ್ಣ, ದೊಡ್ಡಮ್ಮ ಸೇವಾ ಸಮಿತಿ ಅಧ್ಯಕ್ಷ ಎ.ಎಸ್. ರಾಮಸ್ವಾಮಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಶೆಟ್ಟಿಗೌಡ,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಜಿತ್ ಹೆಗಡೆ, ಧರ್ಮಸ್ಥಳ ಪಾದಯಾತ್ರಾ ಸಮಿತಿ ಅಧ್ಯಕ್ಷ ಶಶಿಕುಮಾರ್ ಇತರರು ಪಾಲ್ಗೊಳ್ಳುವರು.
243 ಉದ್ಯೋಗ
ಆಕಾಂಕ್ಷಿಗಳ ನೋಂದಣಿ
ಹಾಸನ: ಜಿಲ್ಲೆಯಲ್ಲಿ 243 ಉದ್ಯೋಗಾಕಾಂಕ್ಷಿಗಳು ಉದ್ಯೋಗ ಬಯಸಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿ ಜೆ.ಬಿ. ವಿಜಯಲಕ್ಷ್ಮಿ ತಿಳಿಸಿದ್ದಾರೆ. ಎಸ್ಸೆಸ್ಸೆಲ್ಸಿಗಿಂತ  ಕಡಿಮೆ ವಿದ್ಯಾರ್ಹತೆ ಹೊಂದಿರುವ 16, ಎಸ್ಸೆಸ್ಸೆಲ್ಸಿ  ಹಾಗೂ ಪಿಯುಸಿ  ವಿದ್ಯಾರ್ಹತೆ ಪಡೆದಿರುವ 134, ಪದವೀಧರರು 40, ತಾಂತ್ರಿಕ ವಿದ್ಯಾರ್ಹತೆ ಪಡೆದಿರುವ 53 ಸೇರಿದಂತೆ ಒಟ್ಟು 243 ಅಭ್ಯರ್ಥಿಗಳು ನೋಂದಾಯಿಸಿದ್ದಾರೆ. ಪರಿಶಿಷ್ಟ ಜಾತಿ 923, ಪರಿಶಿಷ್ಟ ಪಂಗಡದ 142, ಅಂಗವಿಕಲರು 467 ಸೇರಿದಂತೆ ಒಟ್ಟು 12,374ಮಂದಿ ಜೀವದಾಖಲೆಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಶ್ರೀಗಳ ಕುರಿತ ಹೇಳಿಕೆಗೆ ಖಂಡನೆ
ಅರಕಲಗೂಡು: ಕೋಡಿ ಮಠದ ಶ್ರೀಗಳನ್ನು ಕುರಿತು ಅವಹೇಳನಕಾರಿ ಮಾತನಾಡುವ ಕಾಂಗೈ ಮುಖಂಡರಿಗೆ ನೈತಿಕ ಹಕ್ಕಿಲ್ಲ. ಮಠದ ಪಾವಿತ್ರ್ಯತೆಯನ್ನು ಅರಿತು ಎಚ್ಚರದಿಂದ ಮಾತನಾಡಲಿ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಪಿ. ಟಿ. ಕೇಶವೇಗೌಡ ಹೇಳಿದ್ದಾರೆ.  ಪತ್ರಿಕಾ ಹೇಳಿಕೆ ನೀಡಿರುವ ಅವರು ಚುನಾವಣೆ ಸಂದರ್ಭದಲ್ಲಿ ಶಾದಿಭಾಗ್ಯ ಯೋಜನೆ ತಂದು ಅಲ್ಪಸಂಖ್ಯಾತರನ್ನು ಓಲೈಸಲು ಹೊರಟಿರುವ ಕಾಂಗ್ರೆಸ್‌ಗೆ ಜನತೆ ತಕ್ಕ ಪಾಠ ಕಲಿಸಬೇಕಿದೆ. ಕೋಡಿ ಮಠದ ಶ್ರೀಗಳು ಧಾರ್ಮಿಕ ಕಾರ್ಯಗಳ ಮೂಲಕ ವಿದ್ಯಾದಾನ, ಅನ್ನದಾನದ ಮೂಲಕ ಮನ್ನಣೆಗೆ ಪಾತ್ರರಾಗಿದ್ದಾರೆ. ಇಂತಹ ಧಾರ್ಮಿಕ ಗುರುಗಳ ವಿರುದ್ದವಾದ ಹೇಳಿಕೆಯನ್ನು ತಾಲೂಕು ಬಾಜಪ ಖಂಡಿಸುತ್ತದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement