ಹೇಳಿಕೆ ತಿರುಚಿ ದಾಖಲಿಸಿದ್ದಕ್ಕೆ ಆಕ್ಷೇಪ
ಹೊಳೆನರಸೀಪುರ: ತಮ್ಮ ನಿಲುವು ಹಾಗೂ ಹೇಳಿಕೆಗಳನ್ನು ಸೂಕ್ತವಾಗಿ ರೆಕಾರ್ಡ್ ಮಾಡದೇ, ತಿರುಚಿ ಆಡಳಿತ ಜೆಡಿಎಸ್ ಸದಸ್ಯರ ಹೇಳಿಕೆಗಳಂತೆಯೇ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು ಎಂದು ಸಭೆಯ ನಡಾವಳಿ ಪುಸ್ತಕದಲ್ಲಿ ರೆಕಾರ್ಡ್ ಮಾಡಿರುವ ಅಂಶವನ್ನು ವಿರೋಧಿಸಿ ಇಲ್ಲಿನ ಪುರಸಭೆಯಲ್ಲಿ ಸೋಮವಾರದಂದು ನಡೆದ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಹಾಗೂ ಪಕ್ಷೇತರ ಸದಸ್ಯರು ಅಧ್ಯಕ್ಷರ ಪೀಠದ ಮುಂದೆ ಧರಣಿ ಕುಳಿತು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಪುರಸಭೆ ಅಧ್ಯಕ್ಷೆ ಎಚ್.ಆರ್. ಕಲಾವತಿ ಅವರ ಅಧ್ಯಕ್ಷತೆಯಲ್ಲಿ ಸಭೆ ಆರಂಭಗೊಳ್ಳುತ್ತಿದ್ದಂತೆಯೇ ಹಿಂದಿನ ಸಭೆಯ ನಡಾವಳಿಗಳನ್ನು ಓದಿ ರೆಕಾರ್ಡಾ ಮಾಡುವ ವಿಷಯವು ಪ್ರಸ್ತಾಪವಾಗುತ್ತಿದ್ದಂತೆಯೇ, ಹಿಂದಿನ ಸಭೆಯಲ್ಲಿ ಕೆಲಮೊಂದು ವಿಷಯಗಳ ಕುರಿತಂತೆ ತಮ್ಮ ಆಕ್ಷೇಪ ಹಾಗೂ ವಿರೋಧವನ್ನು ವ್ಯಕ್ತಪಡಿಸಿದ್ದರೂ ಕೂಡ ನಡಾವಳಿ ಪುಸ್ತಕದಲ್ಲಿ ರೆಕಾರ್ಡ್ ಮಾಡುವ ಸಂದರ್ಭದಲ್ಲಿ ಸಭೆಯು ಒಪ್ಪಿ ಸರ್ವಾನುಮತದಿಂದ ತೀರ್ಮಾನಿಸಿತು ಎಂದು ನಮೂದಿಸಿರುವ ಅಂಶದ ಕುರಿತಂತೆ ಕಾಂಗ್ರೆಸ್ನ ರಾಘವೇಂದ್ರ, ಜಯಕಾಂತಮ್ಮ, ಸುಮಿತ್ರಾದೇವಿ, ಶೋಭ, ಚೈತ್ರ ಆಕ್ಷೇಪ ವ್ಯಕ್ತಪಡಿಸಿದರು.
ಅಲ್ಲದೇ, ಪಕ್ಷೇತರ ಸದಸ್ಯರಾದ ರಂಗನಾಥ್ ಹಾಗೂ ಸರಸ್ವತಿ ಅವರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಾಗಿದ್ದು, ತಮ್ಮ ಹೇಳಿಕೆಗಳನ್ನು ತಿರುಚಲಾಗಿದೆ ಎಂದು ಅಧ್ಯಕ್ಷರ ಪೀಠದ ಮುಂದೆ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.
ಸಮಯ ವ್ಯರ್ಥ: ಸಭೆಯು ಗದ್ದಲದೊಂದಿಗೆ ಆರಂಭಗೊಂಡಿತಾದರೂ, ನಂತರದಲ್ಲೂ ಸಭೆ ಸುಗಮವಾಗಿ ನಡೆಯಲಿಲ್ಲ. ಪುರಸಭೆಯ ಎಲ್ಲಾ ಸದಸ್ಯರಿಗೂ ನೀಡಲಾಗಿದ್ದ ಪುರಸಭೆಯ ಸಭೆಯಲ್ಲಿ ಚರ್ಚೆಯಲ್ಲಿರುವ ವಿಷಯ ಹಾಗೂ ಹಿಂದಿನ ಸಭೆಯ ನಡಾವಳಿಗಳ ಪ್ರತಿಯಲ್ಲಿನ ಮುದ್ರಣ ದೋಷದಿಂದಾಗಿ ಉಂಟಾದ ಅನುಮಾನ ಹಾಗೂ ಗೊಂದಲಗಳು ವಿರೋಧಿ ಕಾಂಗ್ರೆಸ್ ಹಾಗೂ ಪಕ್ಷೇತರ ಸದಸ್ಯರಲ್ಲದೇ, ಖುದ್ದು ಆಡಳಿತಾರೂಢ ಜೆಡಿಎಸ್ ಸದಸ್ಯರೇ ಮುಖ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸಭೆಯ ಅರ್ಧದಷ್ಟು ಸಮಯವನ್ನು ನುಂಗಿಹಾಕಿದ ಘಟನೆ ಕೂಡ ನಡೆಯಿತು.
ಅಲ್ಲದೇ ನ್ಯಾಯಾಲಯದಲ್ಲಿ ಮೊಕದ್ದಮೆ ಇರುವ ಪ್ರಕರಣವನ್ನೂ ಸಹ ಸಭೆಯಲ್ಲಿ ಚರ್ಚೆಯ ವಿಷಯವಾಗಿ ಅಭಿವೃದ್ಧಿಯ ಕಾರಣದಿಂದ ಚರ್ಚಿಸಲು ವಿಷಯವಾಗಿ ಇಟ್ಟಿರುವುದನ್ನು ಪ್ರಬಲವಾಗಿ ವಿರೋಧಿಸಿದ ಕಾಂಗ್ರೆಸ್ ಹಾಗೂ ಪಕ್ಷೇತರ ಸದಸ್ಯರು ನ್ಯಾಯಾಲಯದ ಮುಂದಿರುವ ವಿಷಯವನ್ನು ಚರ್ಚಿಸಿ ನ್ಯಾಯಾಂಗ ನಿಂದನೆಗೆ ಪುರಸಭೆ ಆಡಳಿತ ಮುಂದಾಗಿದೆ ಎಂದು ಸದರಿ ವಿಷಯಗಳ ಚರ್ಚೆಗೆ ಅವಕಾಶ ನೀಡದಂತೆ ತಮ್ಮ ವಿರೋಧ ವ್ಯಕ್ತಪಡಿಸಿದರು.
ತಮ್ಮ ವಾರ್ಡ್ನ ಗಂಭೀರ ಸಮಸ್ಯೆಯೊಂದರ ಕುರಿತಂತೆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದರೂ ತಮ್ಮ ಮನವಿಗೆ ಸ್ಪಂದಿಸದೇ, ಆಡಳಿತ ಪಕ್ಷದ ಸದಸ್ಯನಾದ ತಮ್ಮ ಹಕ್ಕುಗಳಿಗೆ ಮುಖ್ಯಾಧಿಕಾರಿಗಳು ಚ್ಯುತಿ ತಂದಿದ್ದಾರೆ ಎಂದು ಸದಸ್ಯ ಸ್ವಾಮಿ ಪ್ರಸ್ತಾಪಿಸಿದಾಗ, ಸದಸ್ಯ ಎಚ್.ವಿ. ಪುಟ್ಟರಾಜು ಮಾತನಾಡಿ ಪುರಸಭೆಯ ಆಸ್ತಿಗಳನ್ನು ಒತ್ತುವರಿ ಮಾಡಿರುವವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಂಡು ಸೂಕ್ತ ಕ್ರಮ ಜರುಗಿಸುವಂತೆ ದನಿಗೂಡಿಸಿದರು.
ಸ್ವಾಧೀನಕ್ಕೆ ಆಗ್ರಹ: ಹರಾಜಿನಲ್ಲಿ ಮಳಿಗೆಗಳನ್ನು ಪಡೆದು ವರ್ಷಗಳಾಗುತ್ತಾ ಬಂದಿದ್ದರೂ ಸ್ವಾಧೀನಕ್ಕೆ ಪಡೆಯದವರ ಮಳಿಗೆಗಳನ್ನು ಮರಳಿ ಪುರಸಭೆಗೆ ಸ್ವಾಧೀನಪಡಿಸಿಕೊಳ್ಳುವಂತೆ ಪಕ್ಷೇತರ ಸದಸ್ಯ ರಂಗನಾಥ್ ವಿಷಯವೊಂದರ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮುಖ್ಯಾಧಿಕಾರಿಗಳನ್ನು ಒತ್ತಾಯಿಸಿದ ಸಂದರ್ಭದಲ್ಲಿ ಹೇಳಿಕೆ ನೀಡಿದ ಮುಖ್ಯಾಧಿಕಾರಿ ಹರೀಶ್, ಈ ಕುರಿತಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಈಗಾಗಲೇ ಬಿಡ್ದಾರರು ಕಟ್ಟಿರುವ ಹಣವನ್ನು ಮುಟ್ಟುಗೋಲು ಹಾಕಿಕೊಂಡು ಸದರಿ ಮಳಿಗೆಗಳನ್ನು ಮರು ಹರಾಜು ನಡೆಸಲು ಅನುಮತಿಯನ್ನು ಕೋರಿರುವುದಾಗಿ ತಿಳಿಸಿದರು.
ಸ್ವಚ್ಛತೆ ಇಲ್ಲ: ಸದಸ್ಯ ಹಾಗೂ ವಕೀಲ ಎ. ಶ್ರೀಧರ್ ಮಾತನಾಡಿ, ಪಟ್ಟಣದ ಸ್ವಚ್ಛತೆಗಾಗಿ ಗುತ್ತಿಗೆ ಆಧಾರದಲ್ಲಿ ಕೆಲಸಗಾರರನ್ನು ನೇಮಿಸಿಕೊಂಡಿದ್ದರೂ ಪಟ್ಟಣದಲ್ಲಿನ ಕೆಲವು ಭಾಗಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ, ಅಲ್ಲದೇ ದಿನ ಬೆಳಗಾದರೆ ಪತ್ರಿಕೆಗಳಲ್ಲಿ ಸ್ವಚ್ಛತೆಯಿಲ್ಲದ ಕುರಿತಂತೆ ವರದಿಯಾಗುತ್ತಿದ್ದರೂ ಹೇಗೆ ಬಿಲ್ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಅಧ್ಯಕ್ಷೆ ಎಚ್.ಆರ್. ಕಲಾವತಿ, ಉಪಾಧ್ಯಕ್ಷ ರಘುರಾಮ್, ಮುಖ್ಯಾಧಿಕಾರಿ ಹರೀಶ್, ಪುರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.