ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅನಾವಶ್ಯಕ ನೀರು ಪೋಲು

Vishwanath S
Updated On : 14 Dec 2013, 12:11 pm

ಕ.ಪ್ರ. ವಾರ್ತೆ , ಅರಸೀಕೆರೆ ,  ಡಿ. 12
ಪಟ್ಟಣದ ಜನತೆಗೆ ಸಮರ್ಪಕ ಕುಡಿಯುವ ನೀರು ಪೂರೈಸದೇ ಸಾರ್ವಜನಿಕರ ಟೀಕೆಗೆ ಒಳಗಾಗಿರುವ ಪುರಸಭೆ ಇದೀಗ ಮತ್ತೊಮ್ಮೆ ಜನರ ಕೆಂಗಣ್ಣಿಗೆ ಗುರಿಯಾಗಿದೆ.
ಪಟ್ಟಣದ ಪ್ರಮುಖ ರಸ್ತೆಗಳ ಬದಿಯಲ್ಲಿ ಹಾದು ಹೋಗಿರುವ ಪುರಸಭೆಯ ಕುಡಿಯುವ ನೀರಿನ ಪೈಪ್‌ಗಳು ಅಲ್ಲಲ್ಲಿ ಒಡೆದು ಹೋಗಿರುವುದರಿಂದ ಅನಾವಶ್ಯಕವಾಗಿ ಕುಡಿಯುವ ನೀರು ರಸ್ತೆಗಳ ಮೇಲೆ ಹರಿಯುವುದು ಪ್ರತಿನಿತ್ಯ ಕಾಣಬಹುದಾಗಿದೆ. ಈ ಹಿನ್ನೆಲೆಯಲ್ಲಿ, ಬೇಸರಗೊಂಡಿರುವ ನಾಗರೀಕರು ನೀರು ಪೋಲಾಗುತ್ತಿರುವುದನ್ನು ತಪ್ಪಿಸುವಂತೆ ಪುರಸಭೆಯನ್ನು ಆಗ್ರಹಿಸಿದ್ದಾರೆ.
ಲಕ್ಷ್ಮೀಪುರ ಬಡಾವಣೆಯಲ್ಲಿನ ಪ್ರಧಾನ ಅಂಚೆ ಕಚೇರಿ ರಸ್ತೆಯಲ್ಲಿ ಇದೇ ಸಮಸ್ಯೆ ಇದ್ದು, ಈ ಭಾಗದ ನಿವಾಸಗಳಿಗೆ ನೀರು ಸರಬರಾಜು ಮಾಡುವ ಕೊಳವೆ ಮಾರ್ಗ ಒಡೆದು ಹೋಗಿದ್ದು ರಸ್ತೆಯ ಪೂರ್ತಿ ನೀರಿನಿಂದ ಆವೃತವಾಗುವುದು ಮಾಮೂಲಿಯಾಗಿದೆ. ಈ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಮಾಡಬೇಕಾಗಿದೆ. ಮಳೆ ಬಂದು ನೀರು ನಿಂತಂತೆ ರಸ್ತೆ ಪೂರಾ ಕೆಸರು ರಾಡಿಯಾಗಿದೆ.
ಮನೆಗಳಿಗೆ ಪೂರೈಕೆಯಾಗುವ ನೀರಿಗಿಂತ ಎರಡರಷ್ಟು ನೀರಿನ ಪ್ರಮಾಣ ರಸ್ತೆಗಳ ಮೇಲೆ ಹರಿದು ಚರಂಡಿ ಪಾಲಾಗುತ್ತಿದೆ. ಈ ನೀರನ್ನು ತಡೆಯಲು ಕೊಳವೆ ಬಾವಿಗಳ ದುರಸ್ತಿ ಕಾರ್ಯವೂ ಅಗತ್ಯವಿದ್ದು, ಪುರಸಭೆ ಆಡಳಿತ ಶೀಘ್ರವೇ ಕೊಳವೆ ಬಾವಿಗಳ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕೆಂದು ಇಲ್ಲಿನ ನಾಗರಿಕರು ಆಗ್ರಹಿಸಿದ್ದಾರೆ.
ಇಲ್ಲೂ ನೀರು ಪೋಲು: ಅದೇ ರೀತಿ ಸರ್ಕಾರಿ ಜೆ.ಸಿ. ಆಸ್ಪತ್ರೆ ಆವರಣದಲ್ಲಿರುವ ಎರಡು ದೊಡ್ಡ ನೀರಿನ ಟ್ಯಾಂಕ್‌ಗಳಿದ್ದು ಈ ಟ್ಯಾಂಕ್‌ಗಳಿಗೆ ಹೇಮಾವತಿ ನೀರು ಹಾಗೂ ನಾಗತಿಹಳ್ಳಿ ಕೆರೆಯ ನೀರನ್ನು ಸಂಗ್ರಹ ಮಾಡುತ್ತಿದ್ದು, ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತದೆ. ಇಂತಹ ನೀರನ್ನು ಸಂಗ್ರಹ ಮಾಡುವ ವೇಳೆ ಟ್ಯಾಂಕ್‌ಗಳು ಭರ್ತಿಯಾಗಿ ಸಾಕಷ್ಟು ಪ್ರಮಾಣದ ನೀರು ಹೊರ ಬೀಳುವ ಮೂಲಕ ಜೀವ ಜಲ, ಧರೆಯ ಪಾಲಾಗುತ್ತಿದೆ. ಹೀಗೆ ಅನೇಕ ರೀತಿಯಲ್ಲಿ ಅನಾವಶ್ಯಕವಾಗಿ ಪೋಲಾಗುತ್ತಿರುವ ನೀರನ್ನು ತಡೆಹಿಡಿದರೆ ಪುರಸಭೆ ಪಟ್ಟಣದ ಜನತೆ ಎದುರಿಸುತ್ತಿರುವ ನೀರಿನ ಸಮಸ್ಯೆಯನ್ನು ಬಹುತೇಕ ಮಟ್ಟಿಗೆ ಸುಧಾರಿಸಬಹುದಾಗಿದ್ದು, ಈ ನಿಟ್ಟಿನಲ್ಲಿ ಪುರಸಭೆ ಅಧಿಕಾರಿಗಳಾಗಲಿ ಅಥವಾ ಚುನಾಯಿತ ಜನಪ್ರತಿನಿಧಿಗಳಾಗಲಿ ಗಮನ ಹರಿಸಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement