ಅಪಾಯ ತಪ್ಪಿಸಲು ವಿಪತ್ತು ನಿರ್ವಹಣಾ ತಂಡ
ಹಾಸನ: ಜಿಲ್ಲೆಯಲ್ಲಿ ಪೆಟ್ರೋಲ್, ಎಲ್ಪಿಜಿ ರಾಸಾಯನಿಕಗಳನ್ನು ಬಳಸುವ ಅನೇಕ ಅಪಾಯಕಾರಿ ಕಾರ್ಖಾನೆಗಳಿದ್ದು ಯಾವುದೇ ಅನಾಹುತಗಳು ಸಂಭವಿಸದಂತೆ ಮುಂಜಾಗ್ರತೆ ವಹಿಸಬೇಕಿದೆ ಇದಕ್ಕಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ವಿಪತ್ತು ನಿರ್ವಹಣಾ ತಂಡ ರಚಿಸಲಾಗಿದೆ ಎಂದು ಕೈಗಾರಿಕಾ ಸಹಾಯಕ ನಿರ್ದೇಶಕ ಸೋಮಶೇಖರ್ ತಿಳಿಸಿದ್ದಾರೆ.
ಜಿಲ್ಲಾಡಳಿತ ವತಿಯಿಂದ ನಗರದ ಕೈಗಾರಿಕಾ ಬಡಾವಣೆಯಲ್ಲಿ ಇರುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಎಚ್ಪಿಸಿಎಲ್ ಕಂಪನಿ) ಆವರಣದಲ್ಲಿ ಶುಕ್ರವಾರ ನಡೆದ ರಾಸಾಯನಿಕ ದುರಂತಗಳ ನಿವಾರಣಾ ದಿನ ಹಾಗೂ ಅಣುಕು ಪ್ರದರ್ಶನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾಲಕ್ಕೆ ತಕ್ಕಂತೆ ಬದಲಾವಣೆ: 1986ರ ಪರಿಸರ ಸಂರಕ್ಷಣೆ ಕಾಯ್ದೆಯಡಿ 1996ರಲ್ಲಿ ರಾಸಾಯನಿಕ ದುರಂತ ನಿಯಮಗಳನ್ನು ರೂಪಿಸಲಾಗಿದೆ. ಜಿಲ್ಲೆಯಲ್ಲಿ 2006ರಲ್ಲಿ ಜಿಲ್ಲಾಮಟ್ಟದ ನಿರ್ವಹಣಾ ಸಮಿತಿ ರಚಿಸಲಾಗಿದ್ದು ಅದರಂತೆ ಜಿಲ್ಲೆಯಲ್ಲಿರುವ ಅಪಾಯಕಾರಿ ಕಾರ್ಖಾನೆಗಳು ತುರ್ತು ಪರಿಸ್ಥಿತಿ ನಿರ್ವಹಣೆ, ಸನ್ನಡತೆ ಯೋಜನೆಗಳನ್ನು ರೂಪಿಸಲಾಗಿದೆ. ಕಾಲಕಾಲಕ್ಕೆ ಬದಲಾವಣೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಸನ್ನದ್ಧರಾಗಬೇಕು: ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಮಂಜುನಾಥ್ ಮಾತನಾಡಿ, ಅಪಘಾತಗಳು ಆಕಸ್ಮಿಕವಾಗಿ ಸಂಭವಿಸುತ್ತವೆ ಆದರೆ ಅದನ್ನು ನಿಯಂತ್ರಿಸಲು ಮತ್ತು ಅಪಾಯಗಳನ್ನು ಶಮನಗೊಳಿಸಲು ಸನ್ನಧ್ದರಾಗಿರಬೇಕು ಎಂದರು. ವಿಕೋಪ, ಅನಾಹುತಗಳ ಸಾಧ್ಯತೆ, ಭಿನ್ನತೆ ಹಾಗೂ ತೊಂದರೆ ನಿವಾರಣೆಗೆ ನಿರಂತರ ತರಬೇತಿ, ಜಾಗೃತಿ ಅಗತ್ಯ ಎಂದ ಅವರು ಭೂಪಾಲ್ ಅನಿಲ ದುರಂತದ ಸಂದರ್ಭದಲ್ಲಿ ಕರ್ತವ್ಯ ನಿರ್ವಹಣೆಯ ತಮ್ಮ ಅನುಭವವನ್ನು ಅವರು ಹಂಚಿಕೊಂಡರು. ಹೆಚ್.ಪಿ.ಸಿ.ಎಲ್. ಸಂಸ್ಥೆಯ ಮುಖ್ಯಸ್ಥರಾದ ಪ್ರಸಾದ್ ಅವರು ತಮ್ಮ ಕಾರ್ಖಾನೆಯಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಿಸಿದರು.
ಪೆಟ್ರೋಲಿಯಂ ಉತ್ಪನ್ನ ನಿರ್ವಹಿಸಲು ರಾಜ್ಯದ ಎರಡನೇ ಅತಿ ದೊಡ್ಡ ಘಟಕ ಹಾಸನದಲ್ಲಿದೆ. ದಿನದ 24 ಗಂಟೆಗಳಲ್ಲಿ ನಿಗಾ ವಹಿಸಲಾಗುತ್ತಿದೆ ಎಂದರು. ಅಪರ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ರಶ್ಮಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ರೇಮಂಡ್ ಡಿ. ಅಲ್ಮೇಡಾ, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ರುದ್ರೇಗೌಡ, ಡಿವೈಎಸ್ಪಿ ಪರಮೇಶ್ವರಪ್ಪ, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ಹೋಂ ಗಾರ್ಡ್ಸ್ ಮುಖ್ಯಸ್ಥ ಸತೀಶ್ ಹಾಗೂ ಇತರರು ಇದ್ದರು.