ಕಾಂಪೌಂಡ್ಗೆ ಡಿಕ್ಕಿ ಹೊಡೆದು ಲಾರಿ ಪಲ್ಟಿ: ಮೂವರಿಗೆ ಗಾಯ
ಕ.ಪ್ರ.ವಾರ್ತೆ , ಆಲೂರು , ಡಿ. 13
ಪಟ್ಟಣದ ಕೆ.ಇ.ಬಿ ವೃತ್ತದಲ್ಲಿ ಲಾರಿಂದು ಚಾಲಕನ ನಿಯಂತ್ರಣ ತಪ್ಪಿ ಸೆಸ್ ಕಚೇರಿಯ ಕಾಂಪೌಂಡ್ಗೆ ಡಿಕ್ಕಿ ಹೊಡೆದ ಪರಿಣಾಮ ಪಲ್ಟಿಯಾಗಿ ಮೂವರು ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ಸಕಲೇಶಪುರ ಕಡೆಯಿಂದ ಅತೀ ವೇಗದಿಂದ ಹಾಸನಕ್ಕೆ ಹೋಗುತ್ತಿದ್ದ ಲಾರಿ ಕೆ.ಇ.ಬಿ ವೃತ್ತದಲ್ಲಿನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಸೆಸ್ ಕಚೇರಿಯ ಕಾಂಪೌಂಡ್ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಚೇರಿಯ ಕಾಂಪೌಂಡ್ ಹಾಗೂ ಗೇಟ್ ಮುರಿದು ಬಿದ್ದಿದ್ದು, ಲಾರಿಯೂ ಸಹ ಉರುಳಿಬಿದ್ದು ಸಂಪೂರ್ಣ ಜಖಂಗೊಂಡಿದೆ. ಲಾರಿಯಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಪ್ಪಿದ ಅವಗಢ: ಪಟ್ಟಣದಲ್ಲಿರುವ ಬ್ರಿಟೀಷರ ಕಾಲದ ಕಾಂಕ್ರೀಟ್ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಮಾರುದ್ದದ ಗುಂಡಿ ಬಿದ್ದಿದ್ದರೂ ಯಾರೊಬ್ಬರೂ ಇತ್ತ ಗಮನ ಹರಿಸಿ ರಸ್ತೆ ದುರಸ್ತಿ ಮಾಡದ ಕಾರಣ ಪದೇ ಪದೇ ಈ ರೀತಿಯ ಅಪಘಾತಗಳು ಸಂಭವಿಸುತ್ತಿದ್ದು, ಇಂದು ಬೆಳಗಿನ ಜಾವವಾದ ಕಾರಣ ಕೆ.ಇ.ಬಿ ವೃತ್ತದಲ್ಲಿ ಜನರಿಲ್ಲದೇ ಇದ್ದುದ್ದರಿಂದ ಸಂಭವಿಸಬಹುದಾಗಿದ್ದ, ಭೀಕರ ಅವಘಡವೊಂದು ತಪ್ಪಿದಂತಾಗಿದೆ.
ಕೂದಲೆಳೆ ಅಂತರದಲ್ಲಿ ಪಾರು: ಇನ್ನೊಂದು ಗಂಟೆ ಕಳೆದಿದ್ದರೆ ಕೆ.ಇ.ಬಿ ವೃತ್ತದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ನೌಕರರು ಬಸ್ಗಾಗಿ ಕಾಯುತ್ತಾ ನಿಲ್ಲುತ್ತಿದ್ದರು. ಆಗೇನಾದರೂ ಈ ಅಪಘಾತ ಸಂಭವಿಸಿದ್ದರೆ, ಅಪಾರ ಸಂಖ್ಯೆಯಲ್ಲಿ ಸಾವು, ನೋವು ಉಂಟಾಗುತ್ತಿತ್ತು. ಅಲ್ಲದೆ ಲಾರಿ ಅದೃಷ್ಟವಶಾತ್ ಸೆಸ್ ಕಚೇರಿಯ ಕಾಂಪೌಂಡ್ನ ಪಕ್ಕದಲೇ ಇದ್ದ ವಿದ್ಯುತ್ ಕಂಬಕ್ಕೆ ಗುದ್ದದೇ ಕೂದಲೆಳೆ ಅಂತರದಲ್ಲಿ ಪಾರಾಗಿದೆ.
ಎಚ್ಚರಿಕೆ: ಬ್ರಿಟಿಷರ ಕಾಲದ ಕಾಂಕ್ರೀಟ್ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಪರಿವರ್ತಿಸಲು ಪಟ್ಟಣ ಪಂಚಾಯ್ತಿ ಅನುದಾನದಲ್ಲಿ ಶಾಸಕರು ಗುದ್ದಲಿ ಪೂಜೆ ನೆರವೇರಿಸಿ 1 ವರ್ಷ ಕಳೆದಿದ್ದು, ಈವರೆಗೂ ಕಾಮಗಾರಿ ಪ್ರಾರಂಭವಾಗಿಲ್ಲ. ಶೀಘ್ರ ಸಂಬಂಧಪಟ್ಟವರು ಇತ್ತ ಗಮನಹರಿಸಿ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದು, ಇಲ್ಲದೇ ಇದ್ದರೇ ರಸ್ತೆ ತಡೆ ನಡೆಸಿ ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ.