ಕ್ರಿಯಾ ಯೋಜನೆಯಲ್ಲಿ ತಾರತಮ್ಯ ಆರೋಪ
ಕ.ಪ್ರ.ವಾರ್ತೆ , ಹಾಸನ , ಡಿ.13
ಹದಿಮೂರನೇ ಹಣಕಾಸು ಯೋಜನೆಗೆ ಸಂಬಂಧಿಸಿದಂತೆ ಸಿದ್ಧಪಡಿಸಿರುವಂತಹ ಕ್ರಿಯಾಯೋಜನೆಯಲ್ಲಿ ತಾರತಮ್ಯ ತಾಳುವ ಮೂಲಕ ಆಡಳಿತಾರೂಢ ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ ತಾಳಿದ್ದಾರೆ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಧಿಕ್ಕಾರ ಹಾಕಿದ ಘಟನೆ ಶುಕ್ರವಾರ ನಡೆಯಿತು.
ಜಿಲ್ಲಾ ಪಂಚಾಯ್ತಿಯ ಹೊಯ್ಸಳ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಡಿ.ಜಿ. ಅಂಬಿಕ ರಾಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್ ಸದಸ್ಯರು ಜೆಡಿಎಸ್ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ವಾಗ್ವಾದ ನಡೆಸಿದರು.
ಆಕ್ರೋಶ: ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕಾಂಗ್ರೆಸ್ನ ಕಿಶೋರ್, ಬಿಜೆಪಿಯ ಲಕ್ಷ್ಮಣ್, ಅಮಿತ್ ಶೆಟ್ಟಿ ಮತ್ತು ಜ್ಯೋತಿ ಗುರುದೇವ್ ಮಾತನಾಡಿ, ಈ ಯೋಜನೆಗೆ ಸಂಬಂಧಿಸಿದಂತೆ ರು. 1.43 ಕೋಟಿ ಕ್ರಿಯಾಯೋಜನೆಗೆ ಅನುಮೋದನೆ ಪಡೆದು, ಪ್ರಸ್ತುತ ರು. 2.43 ಕೋಟಿಯ ಕ್ರಿಯಾಯೋಜನೆ ಮಾಡಲಾಗಿದೆ. ಅದಲ್ಲದೇ, ಇಲ್ಲಿ ಸಾಕಷ್ಟು ತಾರತಮ್ಯ ತಾಳಲಾಗಿದೆ. ತಮ್ಮ ಸದಸ್ಯರಿಗೆ ಹೆಚ್ಚಿನ ಅನುದಾನವನ್ನು ನೀಡಿ ಇತರರಿಗೆ ಕಡಿಮೆ ಅನುದಾನ ನೀಡುವ ಮೂಲಕ ತಾರತಮ್ಯ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಹಿತಿ ನೀಡಿ: ಯಾವ ಸದಸ್ಯರಿಗೆ ಎಷ್ಟೆಷ್ಟು ಅನುದಾನ ನೀಡಲಾಗಿದೆ ಎಂಬ ಮಾಹಿತಿಯನ್ನು ನೀಡಿ ಎಂದು ಅರ್ಜಿ ಸಲ್ಲಿಸಿದರೂ ಸಹ ಮಾಹಿತಿಯನ್ನು ನೀಡುತ್ತಿಲ್ಲ. ಕೂಡಲೇ ಈ ಯೋಜನೆಯಲ್ಲಿ ಹಂಚಿಕೆಯಾಗಿರುವ ಮಾಹಿತಿಯನ್ನು ನೀಡದಿದ್ದರೆ 13ನೇ ಹಣಕಾಸು ಯೋಜನೆಯಲ್ಲಿ ಹಂಚಿಕೆಯಾಗಿರುವುದನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದ ಅವರು, ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ತಮಗೆ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ಹಾಕಿಕೊಂಡು ಇತರರಿಗೆ ತಾರತಮ್ಯ ತಾಳಲಾಗಿದೆ. ಎಲ್ಲಾ ಸದಸ್ಯರಿಗೆ ಅನುದಾನವನ್ನು ಹಂಚಿಕೆ ಮಾಡಬೇಕು. ಅಧ್ಯಕ್ಷರು ಸರ್ವಾಧಿಕಾರಿ ಧೋರಣೆಯನ್ನು ತಾಳಿದಿದ್ದಾರೆ. ಅಧ್ಯಕ್ಷರಿಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಗೈರಾದವರ ವಿರುದ್ಧ ಕ್ರಮಕ್ಕೆ ಆಗ್ರಹ: ಗ್ರಾಮಸಭೆಗಳಿಗೆ ಹಾಜರಾಗದಂತಹ ಅಧಿಕಾರಿಗಳ ಬಗ್ಗೆ ಶಿಸ್ತುಕ್ರಮಗಳನ್ನು ಕೈಗೊಳ್ಳಬೇಕು. ಕೇವಲ ಬೆರಳೆಣಿಕೆಯಷ್ಟು ಅಧಿಕಾರಿಗಳು ಮಾತ್ರ ಸಭೆಯಲ್ಲಿ ಭಾಗವಹಿಸುತ್ತಾರೆ. ಇದರಿಂದ ಸಭೆ ಮಾಡಿ ಪ್ರಯೋನವಾಗುವುದಿಲ್ಲ. ಆದ್ದರಿಂದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸದಸ್ಯರು ಒತ್ತಾಯಿಸಿದರು. ನಂತರ ಬೇಲೂರು ತಾಲೂಕಿನಿಂದ ಸಕಲೇಶಪುರಕ್ಕೆ ಸಾರಿಗೆ ಬಸ್ ವ್ಯವಸ್ಥೆ ಇಲ್ಲದೆ ಜನರು ಪರದಾಡಂತಾಗಿದೆ. ಅಧಿಕಾರಿಗಳು ಈ ಮಾರ್ಗದಲ್ಲಿ ಆದಾಯ ಆಗುವುದಿಲ್ಲ ಎಂಬ ಕಾರಣ ನೀಡಿ ಬಸ್ಗಳನ್ನು ನಿಲ್ಲಿಸಿದ್ದಾರೆ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜೆಡಿಎಸ್ನ ಸದಸ್ಯರಾದ ಚಂದ್ರೇಗೌಡ, ನಂಜುಂಡಸ್ವಾಮಿ ಹಾಗೂ ಹುಟ್ಟೇಗೌಡರು ಮಾತನಾಡಿ, ಅನುದಾನ ಹಂಚಿಕೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸಗಳಾಗಿದ್ದು, ಅದರ ಬಗ್ಗೆ ಅಧ್ಯಕ್ಷರೊಂದಿಗೆ ಕೂತು ಚರ್ಚಿಸಿ ಸರಿಪಡಿಸಿಕೊಳ್ಳಿ. ಅದನ್ನು ಬಿಟ್ಟು ಸಭೆಯಲ್ಲಿ ಈ ರೀತಿ ಧಿಕ್ಕಾರು ಹಾಕುವುದು ಸರಿಯಲ್ಲ. ಏನೇ ಇದ್ದರೂ ಆದನ್ನು ಸಭೆಯ ನಂತರ ಅಧ್ಯಕ್ಷರೊಂದಿಗೆ ಚರ್ಚಿಸಿ ಎಂದ ಅವರು, ಗ್ರಾಮಸಭೆಯನ್ನು ಒಂದೇ ದಿನ ಹತ್ತಾರು ಸಭೆಗಳನ್ನು ಆಯೋಜಿಸುವುದರಿಂದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಇಓಗಳು ಕ್ರಮಕೈಗೊಳ್ಳಬೇಕು ಎಂದರು.
ಶಾಸಕರ ಸ್ಪಷ್ಟನೆ: ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಅನುದಾನ ಹಂಚಿಕೆಯಲ್ಲಿ ವ್ಯತ್ಯಾಸಗಳು ಇದ್ದಲ್ಲಿ ಅದನ್ನು ಅಧ್ಯಕ್ಷರೊಂದಿಗೆ ಚರ್ಚಿಸಿ, ಈಗ ಹಂಚಿಕೆಯಾಗಿರುವುದರಲ್ಲಿ ಕೇವಲ ಸಾವಿರಾರು ರು.ಗಳು ಮಾತ್ರ ವ್ಯತ್ಯಾಸಗಳು ಕಂಡು ಬಂದಿದೆ. ಯಾವುದೇ ಅಧಿಕಾರ ಇರುವಂತಹ ಪಕ್ಷದವರೇ ಸ್ವಲ್ವ ಹೆಚ್ಚಿನ ಅನುದಾನವನ್ನು ಹಂಚಿಕೊಳ್ಳುತ್ತಾರೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವಂತಹ ಪದ್ಧತಿಯಾಗಿದೆ ಎಂದು ಹೇಳಿದರು.
ಅಧ್ಯಕ್ಷರು ರು. 25 ಲಕ್ಷ ಹಾಗೂ ಉಪಾಧ್ಯಕ್ಷ ರು. 15 ಲಕ್ಷ ಅನುದಾನ ಪಡೆದಿದ್ದಾರೆ. ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರವನ್ನು ಕೇಳಿ ಎಂದ ಅವರು, ಅಧ್ಯಕ್ಷರು ತಮ್ಮ ವಿವೇಚನೆಯ ಆಧಾರದ ಮೇಲೆ ಅನುದಾನವನ್ನು ಹಂಚಿಕೆ ಮಾಡಬಹುದಾಗಿದೆ. ಆದ್ದರಿಂದ ಇಲ್ಲಿ ಬಾರಿ ವ್ಯತ್ಯಾಸಗಳು ಕಂಡು ಬಂದಲ್ಲಿ ಸಭೆಯ ನಂತಹ ಅಧ್ಯಕ್ಷರೊಂದಿಗೆ ಚರ್ಚಿಸಿ ಸರಿದೂಗಿಸಿಕೊಳ್ಳಿ ಎಂದು ಹೇಳಿದ ಅವರು, ಒಂದೇ ದಿನ 40 ಗ್ರಾಮಸಭೆಗಳನ್ನು ಆಯೋಜಿಸುವುದರಿಂದ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸಭೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಇದರಿಂದ ಗ್ರಾಮಗಳಲ್ಲಿ ಸಮಸ್ಯೆಯನ್ನು ಆಲಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಬಗ್ಗೆ ಇಓ ಗಳು ಮುತುವರ್ಜಿವಹಿಸಿ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಕ್ರಮಕೈಗೊಳ್ಳಬೇಕು: ಜೊತೆಗೆ ಈ ರೀತಿಯ ಸಾಮಾನ್ಯ ಸಭೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಬರದೇ ತಮ್ಮ ಕೆಳಗಿನ ಅಧಿಕಾರಿಗಳು ಕಳುಹಿಸುತ್ತಾರೆ. ಇದರಿಂದ ಸಭೆಯಲ್ಲಿ ಜಿಲ್ಲಾಮಟ್ಟದಲ್ಲಿ ಚರ್ಚಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇಂತಹ ಸಭೆಗಳಿಗೆ ಜಿಲ್ಲಾಮಟ್ಟದ ಅಧಿಕಾರಿಗಳೇ ಬರುವಂತೆ ಕ್ರಮಕೈಗೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಅಂಬಿಕ ರಾಮಣ್ಣ ಮಾತನಾಡಿ, ಅನುದಾ ಹಂಚಿಕೆಯಲ್ಲಿ ಯಾವುದೇ ಬಾರಿ ವ್ಯತ್ಯಾಸಗಳು ಕಂಡು ಬಂದಿಲ್ಲ. ಒಂದುವೇಳೆ ವ್ಯತ್ಯಾಸಗಳು ಹೆಚ್ಚಾದಲ್ಲಿ ಸಭೆಯ ನಂತರ ಅದನ್ನು ಚರ್ಚಿಸೋಣ ಎಂದು ಹೇಳಿದರು.
ಮುಖ್ಯ ಅಡುಗೆ ಮಾಡುವವರಿಗೆ ರು. 1200 ಹಾಗೂ ಅಡುಗೆ ಸಹಾಯಕರಿಗೆ ರು. 1100ಗಳ ವೇತನ ನೀಡಲಾಗುತ್ತಿದೆ. ಆದ್ದರಿಂದ ಇವರ ವೇತನವನ್ನು ಹೆಚ್ಚಿಸುವಂತೆ ಕ್ರಮಕೈಗೊಳ್ಳಬೇಕು ಎಂದರು.
ನಂತರ ಶಾಸಕ ಶಿವಲಿಂಗೇಗೌಡ ಮಾತನಾಡಿ, ಸರ್ಕಾರದ ನಿಯಮದಲ್ಲಿ ಉದ್ಯೋಗ ಖಾತರಿಯಲ್ಲಿ ಪ್ರತಿನಿತ್ಯ ರು. 174 ಗಳನ್ನು ನೀಡಲಾಗುತ್ತದೆ. ಆದರೆ ಇಲ್ಲಿ ಯಾಕೆ ಅಷ್ಟು ಹಣ ನೀಡುವುದಿಲ್ಲ. ಇದರಿಂದ ನಿಯಮವನ್ನು ಉಲ್ಲಂಘಿಸದಂತಾಗುತ್ತದೆ. ಆದ್ದರಿಂದ ಈ ಬಗ್ಗೆ ಸರ್ಕಾರಕ್ಕೆ ಬರೆದುಕೊಳ್ಳುವಂತೆ ಸೂಚಿಸಿದರು.
ಸದಸ್ಯ ಚಂದ್ರೇಗೌಡ ಮಾತನಾಡಿ, ಬಿಸಿಯೂಟ ಯೋಜನೆಯಿಂದ ಮಕ್ಕಳ ಶಿಕ್ಷಣ ಪ್ರಮಾಣ ಕಡಿಮೆಯಾಗುತ್ತಿದೆ.
ಸರ್ಕಾರಿ ಶಾಲೆಗಳಲ್ಲಿ ಎಷ್ಟೇ ಸೌಲಭ್ಯಗಳನ್ನು ಒದಗಿಸಿದರು ಸಹ ಅದಕ್ಕೆ ಶಿಕ್ಷಕರನ್ನೇ ಬಳಸಿಕೊಳ್ಳುವುದರಿಂದ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ಈ ಬಗ್ಗೆ ಚರ್ಚಿಸಿ ಶಿಕ್ಷಕರನ್ನು ಇದರಿಂದ ದೂರ ಇಡುವಂತಹ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ ಕ್ರಮಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಬಿಳಿ ಚೌಡಯ್ಯ ಹಾಗೂ ಇತರರು ಇದ್ದರು.
ಗೈರುಹಾಜರಾದ ಇಒಗಳಿಗೆ ನೋಟಿಸ್
ಸಾಮಾನ್ಯ ಸಭೆಗೆ ಹಾಜರಾಗದಂತಹ ತಾಲೂಕು ಪಂಚಾಯ್ತಿ ಇಓಗಳಿಗೆ ನೋಟಿಸ್ ನೀಡುವಂತೆ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ಸಿಂಗ್ ಹೇಳಿದರು. ಇನ್ನು ಮುಂದೆ ಸಭೆಗಳಿಗೆ ಅಲ್ಲಾ ಅಧಿಕಾರಿಗಳು ಸರಿಯಾಗಿ ಬೇಕು. ಆದ್ದರಿಂದ ಈ ಸಭೆಗೆ ಗೈರು ಹಾಜರಾಗಿರುವಂತಹ ಇಓ ಗಳಿಗೆ ನೋಟಿಸ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸದಸ್ಯ ಬಿ.ಆರ್. ಸತ್ಯನಾರಾಯಣ ಮಾತನಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಲಕ್ಷಾಂತರ ಮಂದಿ ಗ್ರಾಮೀಣ ಹಾಗೂ ನಗರದ ಪ್ರದೇಶದ ಬಡ ಮಹಿಳೆಯರು ಬಿಸಿಯೂಟ ಯೋಜನೆಯಲ್ಲಿ ಆಡುಗೆ ಮಾಡುತ್ತಿದ್ದಾರೆ. ಆದರೆ ಅವರಿಗೆ ನೀಡುತ್ತಿರುವಂತಹ ವೇತನ ತುಂಬಾ ಕಡಿಮೆಯಾಗಿದ್ದು, ಇದರಿಂದ ಆರ್ಥಿಕ ಸುಧಾರಣೆ ಅಸಾಧ್ಯವಾಗಿದೆ. ಉದ್ಯೋಗ ಖಾತರಿ ಯೋಜನೆಯಲ್ಲಿ ಪ್ರತಿನಿತ್ಯ ರು. 174 ನೀಡಲಾಗುತ್ತದೆ. ಆದರೆ ಇವರಿಗೆ ಕೇವಲ ಪ್ರತಿನಿತ್ಯ ರು. 30ರಿಂದ ರು. 40ಗಳನ್ನು ನೀಡಲಾಗುತ್ತದೆ.