'ನೀರನ್ನು ಮಿತವಾಗಿ ಬಳಸದಿದ್ದರೆ ಜಲಕ್ಷಾಮ'
ಹೊಳೆನರಸೀಪುರ: ನೀರನ್ನು ಮಿತವಾಗಿ ಬಳಸದೇ, ಪೋಲು ಮಾಡುತ್ತಿರುವ ನಮ್ಮ ನಿರ್ಲಕ್ಷ್ಯತೆಯೇ ಮುಂದಿನ ದಿನಗಳಲ್ಲಿನ ಜಲಕ್ಷಾಮಕ್ಕೆ ಕಾರಣವಾದರೂ ಅಚ್ಚರಿ ಇಲ್ಲ ಎಂದು ಶಿಕ್ಷಕ ಕೆ. ಶಿವಕುಮಾರಾಚಾರಿ ಆತಂಕ ವ್ಯಕ್ತಪಡಿಸಿದರು.
ಪಟ್ಟಣದಲ್ಲಿನ ಪ್ರೇಮ ಮಹಿಳಾ ಸಮಾಜದ ವತಿಯಿಂದ ಇಲ್ಲಿನ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ನೀರನ್ನು ಉಳಿಸಿ, ಮಿತವಾಗಿ ಬಳಸಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಭೂಮಿಯು ಮುಕ್ಕಾಲು ಭಾಗ ನೀರಿನಿಂದಲೇ ಆವೃತವಾಗಿದ್ದರೂ ಕೂಡ, ಶೇ. 87ರಷ್ಟು ನೀರು ಕುಡಿಯಲು ಯೋಗ್ಯವಾದುದಲ್ಲ ಎಂದು ಪರಿಗಣಿಸಲಾಗಿದೆ. ನಾನಾ ಮಹಾನಗರಗಳಲ್ಲಿ ಕಾರ್ಖಾನೆಗಳಿಂದ ಹರಿದುಬರುವ ತ್ಯಾಜ್ಯವನ್ನೂ ನದಿಗಳಿಗೇ ಬಿಡುತ್ತಿರುವ ಕಾರಣದಿಂದಾಗಿ ಜನ-ಜಾನುವಾರುಗಳು ಕುಡಿಯುವ ನೀರು ಕಲುಷಿತವಾಗುತ್ತಿದೆ ಎಂದು ವಿಷಾದಿಸಿದರು.
ಪ್ರೇಮ ಮಹಿಳಾ ಸಮಾಜದ ಅಧ್ಯಕ್ಷೆ ಪ್ರೇಮಾ ಮಂಜುನಾಥ್ ಅವರು ನೀರಿನ ಮಿತವ್ಯಯದ ಬಗ್ಗೆ ತಿಳಿಸಿದರಲ್ಲದೇ, ಬಾಲ್ಯದಿಂದಲೇ ನೀರಿನ ಸಂರಕ್ಷಣೆಯ ಕುರಿತಂತೆ ವಿದ್ಯಾರ್ಥಿಗಳು ಅರಿವು ಹೊಂದಿರುವಂತೆ ತಿಳಿಹೇಳಿದರು.
ಪುರಸಭೆಯ ವ್ಯವಸ್ಥಾಪಕ ನಂಜುಂಡಶೆಟ್ಟಿ ಮಾತನಾಡಿ, ನೀರನ್ನು ಮಿತವಾಗಿ ಬಳಸುವ ವಿಧಾನ ಹಾಗೂ ನೀರಿನ ಸರಬರಾಜಿಗೆ ಹಾಗೂ ಶುದ್ಧೀಕರಣಕ್ಕೆ ತಗುಲುವ ವೆಚ್ಚಗಳು, ನೀರಿನ ಕ್ಷಾಮ ಉಂಟಾದಲ್ಲಿ ಎದುರಿಸಬೇಕಾದ ಸಮಸ್ಯೆಗಳ ಕುರಿತಂತೆ ಮಾಹಿತಿ ನೀಡಿದರು.
ಪುರಸಭೆಯ ರಮೇಶ್ ಹಾಗೂ ಆದರ್ಶ ವಿದ್ಯಾಲಯದ ಪ್ರಾಂಶುಪಾಲ ಲೋಕೇಶ್ಮಾತನಾಡಿದರು. ಬಾ.ರಾ. ಸುಬ್ಬರಾಯ ಇದ್ದರು. ಕುಸುಮ ರಾಜಶೇಖರ್ ನಿರೂಪಿಸಿದರು.