ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ನೀಡಿ
ಕ.ಪ್ರ.ವಾರ್ತೆ , ಹೊಳೆನರಸೀಪುರ , ಡಿ 13
ಸರ್ಕಾರದ ಆದೇಶದಂತೆ ರೈತರ ಪಂಪ್‌ಸೆಟ್‌ಗಳಿಗೆ ಆಕ್ರಮ ಸಕ್ರಮ ಯೋಜನೆಯಡಿಯಲ್ಲಿ ರೈತರಿಂದ ನಿಗದಿತ ಶುಲ್ಕವನ್ನು ಪಡೆದಿದ್ದರೂ, ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡದ ವಿದ್ಯುತ್ ನಿಗಮದ ವಿರುದ್ಧ ರಾಜ್ಯ ರೈತ ಸಂಘ, ಹಸಿರು ಸೇನೆಯ ತಾಲೂಕು ಘಟಕದ ವತಿಯಿಂದ ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ನಿಗಮದ ವಿರುದ್ಧ ಕಿಡಿ: ರೈತ ಸಂಘದ ತಾಲೂಕು ಘಟಕದ ವತಿಯಿಂದ ಬಸಸ್ನಿಲ್ದಾಣದ ವೃತ್ತದಿಂದ ಮೆರವಣಿಗೆಯಲ್ಲಿ ಹೊರಟ ರೈತ ಪ್ರತಿಭಟನಾಕಾರರು, ತಾಲೂಕು ಕಚೇರಿಗೆ ತೆರಳಿ ಅಲ್ಲಿಯೂ ಕೆಲ ಕಾಲ ಸರ್ಕಾರ ಹಾಗೂ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡದ ವಿದ್ಯುತತ್ನಿಗಮದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸರ್ಕಾರದ ಆದೇಶದಂತೆ ಆಕ್ರಮ- ಸಕ್ರಮ ಯೋಜನೆಯಡಿಯಲ್ಲಿ ರೈತರಿಂದ ರು. 13,900 ಗಳ ಶುಲ್ಕ ವಸೂಲು ಮಾಡಿದ್ದರೂ, ಸೂಕ್ತವಾಗಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸದೇ, ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಎಂದು ರೈತರು ವಿದ್ಯುತ್ ನಿಗಮದ ವಿರುದ್ಧ ಕಿಡಿಕಾರಿದರು.
ನಿರ್ಲಕ್ಷ್ಯ: ಈ ಸಮಸ್ಯೆಯ ಕುರಿತಂತೆ ಹಲವಾರು ಬಾರಿ ವಿದ್ಯುತ್ ನಿಗಮದ ಅಧಿಕಾರಿಗಳನ್ನು ಭೇಟಿ ಮಾಡಿ, ತಮ್ಮ ಸಮಸ್ಯೆಗಳನ್ನು ವಿವರಿಸಿ ಮನವಿ ನೀಡಿದ್ದರೂ, ಸಂಬಂಧಿಸಿದ ಅಧಿಕಾರಿಗಳಾರು ಈ ಕುರಿತು ಸಊಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನೆಯ ಸಂದರ್ಭದಲ್ಲಿ ವಿವರಿಸಿದ ರೈತರು, ಸಾಲ ಮಾಡಿ ಬೋರ್‌ವೆಲ್‌ಗಳನ್ನು ಕೊರೆಸಿ, ವಿದ್ಯುತ್ ನಿಗಮಕ್ಕೆ ಸೂಕ್ತ ಶುಲ್ಕ ಪಾವತಿಸಿದ್ದರೂ ಕೃಷಿ ಚಟುವಟಿಕೆಗಳಿಗೆ ನೀರು ಹರಿಸಲು ಅವಶ್ಯಕವಾದ ವಿದ್ಯುತ್ತನ್ನು ಪೂರೈಸುವಲ್ಲಿ ವಿದ್ಯುತ್ ಇಲಾಖೆ ದಿವ್ಯ ನಿರ್ಲಕ್ಷ ತೋರಿದೆ ಎಂದು ರೈತ ಪ್ರತಿಭಟನಾಕಾರರು ದೂರಿದರು.
ಗಮನಹರಿಸಿ: ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮೀನಾರಾಯಣ್ ಅವರು, ರಾಜ್ಯ ಸರ್ಕಾರ ಕೇವಲ ಯೋಜನೆಗಳನ್ನು ಜಾರಿಗೆ ತಂದರಷ್ಟೇ ಸಾಲದು, ಅದನ್ನು ಸಮರ್ಥವಾಗಿ ಅಧಿಕಾರಿಗಳು ಜಾರಿಗೆ ತಂದಿದ್ದಾರೆಯೇ ಎಂಬುದನ್ನು, ಯೋಜನೆಯ ಉಪಯೋಗ ಅರ್ಹರಿಗೆ ತಲುಪುತ್ತಿದೆಯೇ ಎಂಬುದರ ಬಗ್ಗೆಯೂ ಗಮನ ಹರಿಸಬೇಕಿದೆ ಎಂದು ಹೇಳಿದರು.
ಸರ್ಕಾರಿ ಯೋಜನೆಗಳು ಸಂಬಂಧಿಸಿದ ಇಲಾಖೆಗಳಲ್ಲಿನ ಅಧಿಕಾರಿ ವರ್ಗದ ದಿವ್ಯ ನಿರ್ಲಕ್ಷತೆಯಿಂದಾಗಿ ಹಳ್ಳ ಹಿಡಿಯುತ್ತಿವೆ, ಆದರೆ ರೈತರನ್ನು ಮರೆತ ಸರ್ಕಾರವನ್ನು ರೈತ ಎಂದಿಗೂ ಕ್ಷಮಿಸಲಾರ, ಆದ್ದರಿಂದ ಕೂಡಲೇ ವಿದ್ಯುತ್ ಇಲಾಖೆ ಅಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಸ್ಥಳದಲ್ಲಿ ಹಾಜರಿದ್ದ ಸೆಸ್ಕ್‌ನ ಜೆಇ ಹರೀಶ್ ಅವರು ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಲು ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲಿಯೇ ಸಮರ್ಪಕವಾದ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೇ ನಿರಂತರ ಜ್ಯೋತಿ ಯೋಜನೆಯಡಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, 16 ಫೀಡರ್‌ಗಳ ಪೈಕಿ ಈಗಾಗಲೇ 6 ಫೀಡರ್‌ಗಳ ಅಳವಡಿಕೆ ಕಾರ್ಯ ಮುಗಿದಿದ್ದು, ಇನುಳಿದ ಫೀಡರ್‌ಗಳ ಅಳವಡಿಕೆ ಕಾರ್ಯ ಶೀಘ್ರದಲ್ಲಿಯೇ ಮುಗಿಯಲಿದೆ ಎಂದು ತಿಳಿಸಿದರು.
ರೈತರ ಮನವಿ ಸ್ವೀಕರಿಸಿದ ತಹಸೀಲ್ದಾರ್ ಆರ್.ಬಿ. ಶಿವಶಂಕರಪ್ಪ ಅವರು ಮನವಿ ಪತ್ರವನ್ನು ಸರ್ಕಾರಕ್ಕೆ ತಲುಪಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಶಾಖೆಯ ಅಧ್ಯಕ್ಷ ಜವರೇಶ, ಮಾಜಿ ಅಧ್ಯಕ್ಷ ನಂಜಂಡೇಗೌಡ, ಜಿಲ್ಲಾ ಉಪಾಧ್ಯಕ್ಷ ಗೋಪಾಲಕೃಷ್ಣ, ಕಡವಿನಕೋಟೆ ಪುಟ್ಟಸ್ವಾಮಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.