ಮಾಜಿ ಅಧ್ಯಕ್ಷರ ನಿಧನಕ್ಕೆ ಸಂತಾಪ
ಹಾಸನ: ನಗರ ವಿವಿಧೋದ್ದೇಶ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕರಾಗಿದ್ದ ಹೆಚ್.ಎಸ್. ಪ್ರೇಮಕುಮಾರ್ ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ಸಹಕಾರ ಸಂಘದ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಂಘದ ಕಚೇರಿಯಲ್ಲಿ ಬುಧವಾರ ಬೆಳಗ್ಗೆ ಎಚ್.ಎಸ್. ಪ್ರೇಮಕುಮಾರ್ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ 2 ನಿಮಿಷ ಮೌನ ಆಚರಿಸಿದರು. ಈ ವೇಳೆ ಸಹಕಾರ ಸಂಘದ ಅಧ್ಯಕ್ಷ ಹೆಚ್.ಆರ್.ಎನ್. ಕಂಠಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಎಂ. ಮಲ್ಲೇಶಗೌಡ, ನಿರ್ದೇಶಕರಾದ ಸುಜೀತ್ ಮೊರೆ, ಕೆ. ಶೇಷಾದ್ರಿ, ಎಂ.ಜಿ. ರತ್ನಮ್ಮ, ಗೋಪಾಲ್, ಅರುಣ್ ಕುಮಾರ್, ಹೆಚ್.ಸಿ. ಮಂಜುನಾಥ್ ಇತರರು ಇದ್ದರು.
ಶಿಕ್ಷಣ ಸಚಿವರ ಪ್ರವಾಸ
ಹಾಸನ: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಡಿ.17ರಂದು ಬೆಳಿಗ್ಗೆ 10.30ಕ್ಕೆ ಹಾಸನಕ್ಕೆ ಆಗಮಿಸಿ ಜಿಲ್ಲೆಯ ಇಲಾಖಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಿದ್ದಾರೆ.
ಕರಕುಶಲ ತರಬೇತಿಗೆ ನೇರ ಸಂದರ್ಶನ
ಹಾಸನ: ಬೆಂಗಳೂರಿನ ಬಿಡದಿ ಬಳಿಯಿರುವ ಕೆನರಾ ಬ್ಯಾಂಕ್ ಪ್ರಾಯೋಜಿತ ಕೆ.ಪಿ.ಜೆ. ಪ್ರಭು ಕರಕುಶಲ ತರಬೇತಿ ಸಂಸ್ಥೆಯು ನಿರುದ್ಯೋಗಿ ಯುವಕರಿಗೆ ಮರ ಮತ್ತು ಕಲ್ಲು ಕೆತ್ತನೆ ಹಾಗೂ ಲೋಹ ಶಿಲ್ಪ ವಿಭಾಗಗಳಲ್ಲಿ 18 ತಿಂಗಳು ಮತ್ತು ಕುಂಭ ಕಲೆ (ಟೆರ್ರಾಕೋಟಾ) ಯಲ್ಲಿ 6 ತಿಂಗಳಾವಧಿಯ ಉಚಿತ ತರಬೇತಿ ತರಗತಿಗಳನ್ನು ವ್ಯವಸ್ಥೆ ಗೊಳಿಸಿದೆ. ಅಭ್ಯರ್ಥಿಗಳು ಕನಿಷ್ಟ 7 ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದು, ವಯೋವುತಿ 18 ರಿಂದ 35ರೊಳಗಿರಬೇಕು. ಅಭ್ಯರ್ಥಿಗಳಿಗೆ ತರಬೇತಿ ಅಂಗವಾಗಿ ಪ್ರವಾಸ ಏರ್ಪಡಿಸಲಾಗುವುದಲ್ಲದೆ, ನುರಿತ ಶಿಕ್ಷಕರಿಂದ ತರಬೇತಿ ನೀಡಲಾಗುವುದು. ತರಬೇತಿಗೆ ಸೇರಲಿಚ್ಛಿಸುವವರು ನೇರ ಸಂದರ್ಶನಕ್ಕೆ ಡಿ. 26ರಿಂದ ಡಿ. 28ರೊಳಗೆ ಬೆಂಗಳೂರು ಸಮೀಪದ ಜೋಗರದೊಡ್ಡಿ (ಬಿಡದಿ ಹೋಬಳಿ, ರಾಮನಗರ ಜಿಲ್ಲೆ)ಯಲ್ಲಿರುವ ಕೆನರಾ ಬ್ಯಾಂಕ್ ಪ್ರಾಯೋಜಿತ ಕೆಪಿಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯಲ್ಲಿ ಹಾಜರಾಗಬೇಕು. ಆಯ್ಕೆಯಾದ ಅಭ್ಯರ್ಥಿಗಳನ್ನು ಅದೇ ದಿನ ಸ್ಥಳದಲ್ಲೇ ತರಬೇತಿಗೆ ಸೇರಿಸಿಕೊಳ್ಳಲಾಗುವುದು. ಹೆಚ್ಚಿನ ವಿವರಗಳಿಗಾಗಿ ಸಂಸ್ಥೆಯ ನಿರ್ದೇಶಕ ಎಂ. ವೆಂಕಟೇಶ ಶೇಷಾದ್ರಿ (ಮೊಬೈಲ್: 9900158885) ಅವರನ್ನು ಸಂಪರ್ಕಿಸಬಹುದಾಗಿದೆ.
ನ್ಯಾಯಬೆಲೆ ಅಂಗಡಿ ನವೀಕರಿಸಲು ಗಡುವು
ಹಾಸನ: ನ್ಯಾಯಬೆಲೆ ಅಂಗಡಿ ಪ್ರಾಧಿಕಾರಗಳ ಅವಧಿಯು ಡಿ.31ಕ್ಕೆ ಮುಕ್ತಾಯಗೊಳ್ಳುತ್ತವೆ. ಈ ಪ್ರಾಧಿಕಾರಗಳನ್ನು ಮುಂದಿನ ಮೂರು ವರ್ಷದ ಅವಧಿಗೆ ನವೀಕರಿಸಬೇಕಾಗಿರುವುದರಿಂದ ನಿಗಧಿತ ಶುಲ್ಕ ರು. 125 ಪಾವತಿಸಿ ಪ್ರಾಧಿಕಾರಗಳನ್ನು ನವೀಕರಿಸಿಕೊಳ್ಳಲು ನ್ಯಾಯಬೆಲೆ ಅಂಗಡಿ ಮಾಲೀಕರು, ಕಾರ್ಯದರ್ಶಿಗಳಿಗೆ ಈ ಮೂಲಕ ತಿಳಿಯಪಡಿಸಿದೆ.
ಏಡ್ಸ್ ಬಗ್ಗೆ ಅರಿವು ಮೂಡದಿದ್ದರೆ ಮನುಕುಲ ನಾಶ
ಸಕಲೇಶಪುರ: ಏಡ್ಸ್ ಬಗ್ಗೆ ಜನರಲ್ಲಿ ಅರಿವು ಮೂಡದಿದ್ದರೆ ಮುಂದಿನ ಒಂದು ಶತಮಾನದಲ್ಲಿ ಮನುಕುಲ ಅಳಿಸಿ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಡಾ. ಕಿರಣ್ ಹೇಳಿದ್ದಾರೆ. ಮಂಗಳವಾರ ಪಟ್ಟಣದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಏಡ್ಸ್ ಜಾಗೃತಿ ಆಂದೋಲನ ಉದ್ಘಾಟಿಸಿ ಮಾತನಾಡಿದ ಅವರು, ಪ್ರಪ್ರಥಮ ಬಾರಿಗೆ 1986 ರಲ್ಲಿ ದೇಶದ ಚೆನ್ನೈನಲ್ಲಿ ಕಾಣಿಸಿಕೊಂಡ ಈ ಮಾರಿ 2013 ರ ವೇಳೆಗೆ ಬೃಹತ್ ಪ್ರಮಾಣದಲ್ಲಿ ಹರಡಿದ್ದು ಇಂದು ನೂರು ಜನರಿಗೆ ಒಬ್ಬ ಏಡ್ಸ್ ಪೀಡಿತ ರೋಗಿ ಇದ್ದರೆ, ನೂರು ಗರ್ಭಿಣಿಯರಲ್ಲಿ ಒಬ್ಬರು ಏಡ್ಸ್ ಪೀಡಿತರಾಗಿದ್ದಾರೆ ಎಂದರು. ಈ ಪ್ರಮಾಣದಲ್ಲೇ ಈ ಮಹಾಮಾರಿ ಹಬ್ಬಿದರೆ ಮನುಕುಲ ಮುಂದಿನ ದಿನಗಳಲ್ಲಿ ಭಾರೀ ಗಂಡಾಂತರ ಎದುರಿಸುವುದು ನಿಶ್ಚಿತ ಎಂದು ಅವರು ಆತಂಕ ವ್ಯಕ್ತಪಡಿಸಿದರು. ರಕ್ತ ಪಡೆಯುವ ಸಂದರ್ಭದಲ್ಲಿ, ಲೈಂಗಿಕ ಕ್ರೀಯೆ ನಡೆಸುವ ವೇಳೆ, ಹೆಚ್ಚು ಜಾಗೃತರಾಗಿದ್ದರೆ ಮಹಾಮಾರಿಯಿಂದ ತಪ್ಪಿಸಿಕೊಳ್ಳುವುದು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಯುವ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು. ಪ್ರಾಂಶುಪಾಲ ರಮೇಶ್, ಸೇರಿದಂತೆ ಅಧ್ಯಾಪಕ ವರ್ಗ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಪಟ್ಟಣದ ಮುಖ್ಯಬೀದಿಯಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.
ಸಂತಾಪ ಸಭೆ
ಜಾವಗಲ್: ಮೈಸೂರು ಮಹಾಸಂಸ್ಥಾನದ ಕೊನೆಯ ಮಹಾರಾಜ ಶ್ರೀಕಂಠದತ್ತ ನರಸಿಂಹರಾಜ ಒಡೆಯರವರ ನಿಧನಕ್ಕೆ ಜಿಲ್ಲಾ ಪಂಚಾಯ್ತಿ ಸದಸ್ಯ ಲಕ್ಷ್ಮಣ್, ತಾಪಂ ಸದಸ್ಯರಾದ ಲಕ್ಷ್ಮೀ,ರಾಜೇಶ್ವರಿ,ಲೋಲಾಕ್ಷಮ್ಮ,,ಬ್ಲಾಕ್ಕಾಂಗ್ರೇಸ್ ಅಧ್ಯಕ್ಷ ಕಲ್ಲಹಳ್ಳಿ ನಾಗರಾಜು,ಜಿ.ಪಂ.ಮಾಜಿಸದಸ್ಯೆ ಭಾಗ್ಯ ರಾಜೇಗೌಡ ಸೂಚಿಸಿದ್ದಾರೆ.
ಜ. 5ರಿಂದ ತರಗತಿ
ಅರಸೀಕೆರೆ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 2013-14ನೇ ಸಾಲಿನ ಪ್ರಥಮ, ದ್ವಿತೀಯ ಮತ್ತು ಅಂತಿಮ ಬಿ.ಎ. ತರಗತಿಗಳು ಹೊಯ್ಸಳೇಶ್ವರ ಅಧ್ಯಯನ ಕೇಂದ್ರದಲ್ಲಿ ಬರುವ ಜ. 5 ರಿಂದ ಪ್ರಾರಂಭಗೊಳ್ಳಲಿವೆ ಎಂದು ಸಂಯೋಜಕರಾದ ಟಿ. ಸರೋಜಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಧ್ಯಯನ ಕೇಂದ್ರ ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿಗಳು ವಾರದ ಕೊನೆಯಲ್ಲಿ ನಡೆಯಲಿರುವ ಸಮಾಲೋಚನಾ ತರಗತಿಗಳಿಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ.
ಒಡೆಯರ್ಗೆ ಶ್ರದ್ಧಾಂಜಲಿ
ಜಾವಗಲ್: ಮೈಸೂರು ಮಹಾಸಂಸ್ಥಾನದ ಕೊನೆಯ ಮಹಾರಾಜ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಧನಕ್ಕೆ ಜಾವಗಲ್ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕ, ಆಳ್ವಾಸ್ ವಿರಾಸತ್ ಘಟಕ, ಜಾನಪದ ಪರಿಷತ್ ಘಟಕ, ಬಿಸಿಸಿ ಗೆಳೆಯರ ಬಳಗ, ಸೇರಿದತೆ ನಾನಾ ಸಂಘ ಸಂಸ್ಥೆಗಳು ಅತೀವ ಸಂತಾಪ ಸೂಚಿಸಿವೆ.
ಹೋಬಳಿ ಕಸಾಪ ಅಧ್ಯಕ್ಷ ಶಿವಶಂಕರ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸಭೆ ಸೇರಿ ಸಂತಾಪ ಸಲ್ಲಿಸಿ ಒಂದು ನಿಮಿಷ ಮೌನ ಆಚರಿಸಲಾಯಿತು. ಶಿವಶಂಕರ್, ಆಳ್ವಾಸ್ ವಿರಾಸತ್ ಘಟಕ ಅನಿಲ್ ಕುಮಾರ್, ಕಸಾಪ ಕಾರ್ಯದರ್ಶಿ ಶಿವಪ್ರಕಾಶ್, ನಾಗರಾಜು, ಜೆ.ಎಂ. ಚಂದ್ರಶೇಖರ್, ಮಹೇಶ ಇದ್ದರು.
15ರಂದು ಸ್ಮರಣೋತ್ಸವ
ಜಾವಗಲ್: ಸಮೀಪದ ಗೇರುಮರ ಸತ್ತಮುತ್ತಲ ಗ್ರಾಮಗಳ ಬಸವತತ್ವ ಅಭಿಮಾನಿಗಳು ಸೇರಿ 12ನೇ ಶತಮಾನದ ಶರಣರ ಬದುಕು, ಬರಹ, ಬೋಧನೆಗಳ ಜನಮಾನಕ್ಕೆ ತಲುಪಿಸುವ ನಿಟ್ಟಿನಲ್ಲಿ ಇದೇ 15 ರಂದು ಗೇರುಮರ ವಿಶ್ವಗುರು ಬಸವಣ್ಣ ವೈರಾಗ್ಯ ನಿಧಿ ಅಕ್ಕಮಹದೇವಿ ವಿರಕ್ತಾಶ್ರದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ನಾನಾ ಮಠದ ಸ್ವಾಮಿಜಿಗಳು ಭಾಗವಹಿಸಲಿದ್ದಾರೆ. ಹುಲಿಕಲ್ ನಟರಾಜು ಪವಾಡ ರಹಸ್ಯ ಬಯಲು ಎಂಬ ಕಾರ್ಯಕ್ರಮ ನಡೆಸಲಿದ್ದಾರೆ.
ಶೇಖರ್ಗೆ ಗೋವಿಂದ ದಾಸ್ ಪ್ರಶಸ್ತಿ
ಹಾಸನ: ಮೊದಲ ತಲೆಮಾರಿನ ದಲಿತ ಕವಿ ಡಿ. ಗೋವಿಂದದಾಸ್ ಅವರ ಹೆಸರಿನಲ್ಲಿ ನೀಡುವ ರಾಜ್ಯಮಟ್ಟದ ಗೋವಿಂದ ದಾಸ್ ಪ್ರಶಸ್ತಿಗೆ ಸಾಹಿತಿ ಹಾಗೂ ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ವಿವಿ ಯ ರಿಜಿಸ್ಟ್ರಾರ್ ಡಾ.ಎಂ.ಎಸ್. ಶೇಖರ್ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ರು. 5 ಸಾವಿರ ಮತ್ತು ಫಲಕ ಒಳಗೊಂಡಿದೆ. ಗೋವಿಂದ ದಾಸ್ ಅವರ ಮಗ ನಿರಂಜನ್ ದಾಸ್ ರಾಜ್ಬಾನ್ ಅವರು ಈ ವರ್ಷದಿಂದ ಪ್ರಶಸ್ತಿ ಆರಂಭಿಸಿದ್ದು ಡಾ. ಶೇಖರ್ ಅವರ ಸಾಹಿತ್ಯ ಹಾಗೂ ಅವರು ದಿ. ಗೋವಿಂದದಾಸ್ ಅವರ ಕುರಿತು ಸಂಶೋಧನೆ ನಡೆಸಿ ಬರೆದಿರುವ ಡಿ. ಗೋವಿಂದ ದಾಸ್ ಸಮಗ್ರ ಸಾಹಿತ್ಯ ಕೃತಿ ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಕೆ.ಟಿ. ಶಿವಪ್ರಸಾದ್, ಸುಬ್ಬು ಹೊಲೆಯಾರ್, ದಸಾಪ ರಾಜ್ಯಾಧ್ಯಕ್ಷರಾದ ಅರ್ಜುನ ಗೊಳಸಂಗಿ, ಸಿ. ಸುವರ್ಣ, ಆರ್ಪಿಐ ಸತೀಶ್ ಇದ್ದರು.
ಡಿ. 15ರಂದು ಹಾಸನದ ಅಂಬೇಡ್ಕರ್ ಭವನದಲ್ಲಿ ನಡೆಯುವ ಹಾಸನ ಜಿಲ್ಲಾ ಮೊದಲ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ದಸಾಪ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಹೆತ್ತೂರು ನಾಗರಾಜ್ ತಿಳಿಸಿದ್ದಾರೆ.
ಬಾಲಗಂಗಾಧರ ಶ್ರೀ ಪ್ರತಿಮೆ ಅನಾವರಣ
ಸಕಲೇಶಪುರ: ತಾಲೂಕಿನ ಕಳಲೆ ಕೂಡಿಗೆಯಲ್ಲಿ ಡಿ. 14ರಂದು ಬೆಳಗ್ಗೆ 10ಕ್ಕೆ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ ಪ್ರತಿಮೆ ಅನಾವರಣ ಹಾಗೂ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಪುರಪ್ರವೇಶ ಮತ್ತು ಗುರವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಪ್ರತಿಮೆ ಅನಾವರಣಗೊಳಿಸುವರು. ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಸಾನಿಧ್ಯ ವಹಿಸುವರು. ತೆಂಕಲಗೋಡು ಮಠದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಕಿರಿಕೊಡ್ಲಿ ಮಠದ ಶ್ರೀ ಸದಾಶಿವಸ್ವಾಮೀಜಿ, ಮುದ್ದಿನಕಟ್ಟೆ ಮಠದ ಸದಾಶಿವಸ್ವಾಮೀಜಿ, ಕಲ್ಮಠದ ಶ್ರೀ ಮಹಾಂತ ಸ್ವಾಮೀಜಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಗೌರವಾನ್ವಿತ ಉಪಸ್ಥಿತಿಯಲ್ಲಿ ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸುವರು. ಕಾನೂನು ಹಾಗೂ ಸಂಸದೀಯ ಸಚಿವ ಟಿ.ಬಿ.ಜಯಚಂದ್ರ ಇತರರು ಭಾಗವಹಿಸುವರು.
ಇಂದು ಸಕಲೇಶಪುರಕ್ಕೆ ದೇವೇಗೌಡ
ಹಾಸನ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಜಿಲ್ಲಾ ಪ್ರವಾಸ ಕಾರ್ಯಕ್ರಮದನ್ವಯ ಡಿ. 14ರಂದು ಬೆಳಿಗ್ಗೆ 9ಕ್ಕೆ ಹಾಸನಕ್ಕೆ ಆಗಮಿಸುವರು.
ನಂತರ ಸಕಲೇಶಪುರ ತಾಲ್ಲೂಕು ಕಳಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ನಂತರ ರಾತ್ರಿ ಹೊಳೆನರಸೀಪುರದಲ್ಲಿ ವಾಸ್ತವ್ಯ. ಡಿ.15ರಂದು ದೇವೇಗೌಡರು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಂತರ ಬೆಂಗಳೂರಿಗೆ ತೆರಳುವರು.