'ಅಧ್ಯಾತ್ಮ ಹಸಿವು ತಣಿಸಿದ ವ್ಯಕ್ತಿ ಕನಕದಾಸರು'
ಅರಸೀಕೆರೆ: ಕನಕದಾಸರು ಕೇವಲ ಕವಿ ಮಾತ್ರ ಅಲ್ಲ. ಪಾಳೇಗಾರ, ಯೋಧ, ದಾಸ, ಭಕ್ತ, ದಾರ್ಶನಿಕರಾಗಿ ಕೀರ್ತನೆಗಳ ಮೂಲಕ ಹರಿಭಕ್ತಸಾರದಿಂದ ಜನತೆಯ ಅಧ್ಯಾತ್ಮ ಪಿಪಾಸೆಯನ್ನು ತಣಿಸಿದ್ದಾರೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಗಂಡಸಿ ಹೋಬಳಿ, ಕೆಂಕೆರೆ ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕನಕ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಲು ಹೋರಾಟ ಮಾಡಿದ ಮಹಾನ್ ಪುರುಷ ಎಂದು ಬಣ್ಣಿಸಿದರು.
ದಾರಿದೀಪವಾಗಬೇಕು: ಬಸವಣ್ಣ, ಬುದ್ಧ, ಮಹಾವೀರ, ಕನಕದಾಸ- ಇವರೆಲ್ಲರೂ ದೈವಾಂಶ ಸಂಭೂತರಾಗಿದ್ದು ಭೂಲೋಕದಲ್ಲಿ ಅಸಮಾನತೆ ಹೆಚ್ಚಾದಾಗ ಅದನ್ನು ಹೋಗಲಾಡಿಸಲು ಜನ್ಮವೆತ್ತಿ ಅನೇಕ ಪವಾಡಗಳ ಮೂಲಕ ಜನರಲ್ಲಿದ್ದ ಕೀಳರಿಮೆಯನ್ನು ಹೋಗಲಾಡಿಸಿ ಸರಿದಾರಿಗೆ ತರಲು ಹೋರಾಟ ಮಾಡಿದರು.
ಇಂತಹ ಮಹಾನ್ ಪುರುಷರ ತತ್ವ, ಆದರ್ಶಗಳನ್ನು ಇಂದಿನ ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ದಾರಿದೀಪವಾಗಬೇಕು ಎಂದು ಹೇಳಿದರು.
ಹೆಮ್ಮೆಯ ವಿಚಾರ: ಕುರುಬ ಜನಾಂಗಕ್ಕೆ ಗೌರವ ತಂದುಕೊಟ್ಟವರು ಕನಕದಾಸರು ತಮ್ಮ ಕವಿತಾ ಪ್ರೌಢಿಮೆಯಿಂದ ಕಾಳಿದಾಸ ಮೆರಗನ್ನು ತಂದುಕೊಟ್ಟರೆ ಅಹಿಂಸಾ ಧರ್ಮವನ್ನು ಪಾಲಿಸಿದ ಅಶೋಕ ಚಕ್ರವರ್ತಿ ಇಂದಿನ ರಾಜಕಾರಣದಲ್ಲಿ ಅಧಿಕಾರಕ್ಕಾಗಿ ಕಿತ್ತಾಡುತ್ತಿರುವ ಸನ್ನಿವೇಶದಲ್ಲಿ ರಕ್ತಪಾತದಿಂದ ಸಿಗುವ ಅಧಿಕಾರ ತನಗೆ ಬೇಡವೆಂದು ತಿರಸ್ಕರಿಸಿದ ಅಶೋಕ ಚಕ್ರವರ್ತಿಯ ಮಾರ್ಗವನ್ನು ಅನುಸರಿಸಬೇಕು.
ಇಂತಹ ಮಹನೀಯರು ಜನಿಸಿದ್ದು ಕುರುಬ ಜನಾಂಗದಲ್ಲಿ ಎಂಬುದು ಹೆಮ್ಮೆಯ ವಿಚಾರ ಎಂದರು.
ಕಾಲಜ್ಞಾನಿ ಬಿರುದು: ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಕೆ.ಆರ್. ಪೇಟೆ ಕನಕ ಗುರುಪೀಠದ ಶಿವಾನಂದಪುರಿ ಸ್ವಾಮೀಜಿ, ಕುಲ ಕುಲ ಕುಲವೆಂದು ಬಡಿದಾಡದಿರಿ ನಿಮ್ಮ ಕುಲದ ನೆಲೆಯೆನ್ನೆನಾದರೂ ಬಲ್ಲಿರಾ ಎಂಬ ಉದ್ಘೋಷಣೆ ಮಾಡಿದ ಕನಕದಾಸರ ಆತ್ಮವಿಶ್ವಾಸ ಭಕ್ತಿ ಪರಾಕಾಷ್ಠೆಯ ಕುರುಹಾಗಿದೆ. ಹಾಗಾಗಿಯೇ ಕನಕದಾಸರಿಗೆ ಕಾಲಜ್ಞಾನಿ ಕನಕ ಎಂದು ಕರೆಯುತ್ತಿದ್ದರು ಎಂದು ಅಭಿಪ್ರಾಯಪಟ್ಟರು.
ಕನಕದಾಸರು ಸಮಾರಂಭದಲ್ಲಿ ಜೆ.ಪಿ.ಜಯಣ್ಣ, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಪಟೇಲ್ ಶಿವಪ್ಪ, ತಾಲೂಕು ಕುರುಬ ಸಮಾಜದ ಅಧ್ಯಕ್ಷ ತೊಂಡಿಗನಹಳ್ಳಿ ಕೃಷ್ಣಮೂರ್ತಿ, ಜಿ.ಪಂ. ಸದಸ್ಯ ಹುಚ್ಚೇಗೌಡ, ರೈತಮುಖಂಡ ಕನಕಂಚೇನಹಳ್ಳಿ ಪ್ರಸನ್ನಕುಮಾರ್, ಪುರಸಭೆ ಮಾಜಿ ಸದಸ್ಯ ರೇವಣ್ಣ, ವಕೀಲ ಆದಿಹಳ್ಳಿ ಲೋಕೇಶ್, ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಸತೀಶ್ ಹಾಗೂ ಇತರರು ಇದ್ದರು.