ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪ್ರತಿ ಸಮಾಜಕ್ಕೆ ಪೀಠ ಸ್ಥಾಪಿಸಲು ಶ್ರಮಿಸಿದ್ದ ಬಾಲಗಂಗಾಧರ ಸ್ವಾಮಿ

Vishwanath S
Updated On : 15 Dec 2013, 1:16 am

ಕ.ಪ್ರ. ವಾರ್ತೆ ,ಸಕಲೇಶಪುರ , ಡಿ. 14
ಯಾವುದೇ ಸಮಾಜಕ್ಕೆ ತೊಂದರೆ ಆಗದಂತೆ ಎಲ್ಲಾ ಸಮಾಜದಲ್ಲಿ ಧರ್ಮ ಪೀಠಗಳನ್ನು ಸ್ಥಾಪಿಸಲು ಭೈರವೈಕ್ಯ ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮಿಜಿ ಶ್ರಮ ವಹಿಸಿದ್ದರು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದರು.
ತಾಲೂಕಿನ ಯಸಳೂರು ಹೋಬಳಿ ಕಳಲೆಗೂಡಿಗೆಯಲ್ಲಿ ಶನಿವಾರ ನಡೆದ ಆದಿಚುಂಚನಗಿರಿ ಮಠದ ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಪ್ರತಿಮೆ ಅನಾವರಣ ಮತ್ತು  ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾತನಾಡಿದ ಗೌಡರು, ಮಠಗಳು ಒಂದು ಜಾತಿಗೆ ಸೀಮಿತವಾಗಿರಬಾರದು, ಮಠದಲ್ಲಿ ತಾರತಮ್ಯ ಸಲ್ಲದು ಎಂದರು.
ಕಿವಿಮಾತು: ಪಟ್ಟನಾಯಕನಹಳ್ಳಿ ಮಠ, ಕೆಂಗೇರಿ ಮಠ ಮತ್ತು ಆದಿಚುಂಚನಗರಿ ಮಠದಲ್ಲಿ ಭಿನ್ನಭಿಪ್ರಾಯವಿದ್ದು, ಸದ್ಯದಲ್ಲಿ ಭಿನ್ನಪ್ರಾಯ ಬಗೆಹರಿಸಬೇಕು. ಆದಿಚುಂಚನಗಿರಿ ಇದು ಧಾರ್ಮಿಕ ಸಭೆಯಾಗಿದ್ದು, ರಾಜಕೀಯ ತರವಲ್ಲ, 33 ವರ್ಷದಿಂದ ನಾನು ಈ ಸಂಸ್ಥಾನವನ್ನು ನೋಡಿಕೊಂಡು ಬಂದಿದ್ದೇವೆ. ಈ ಸಂಸ್ಥಾನ ಕಟ್ಟಲು ಸಾಕಷ್ಟು ಜನರು ಶ್ರಮವಹಿಸಿದ್ದಾರೆ. ಇದನ್ನು ಸದಾ ಗಮನದಲ್ಲಿ ಇಟ್ಟುಕೊಂಡು ಮಠದಿಂದ ಬಡಜನರಿಗೆ ಉಪಯೋಗವಾಗುವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕೆಂದರು ಕಿವಿಮಾತು ಹೇಳಿದರು.
ಯಾವುದೂ ಶಾಶ್ವತವಲ್ಲ: ರಾಜ್ಯದಲ್ಲಿ 18 ತಿಂಗಳು ನಾನು ಸಿಎಂ ಆಗಿ ಎಲ್ಲಾ ಜನಾಂಗಕ್ಕೆ ಸಮಾನತೆ ಅಧಿಕಾರ ಕೊಟ್ಟಿದ್ದೇನೆ. ಎಲ್ಲಾದರೂ ತಪ್ಪು ಕಂಡು ಬಂದಲ್ಲಿ ಸಿಡಿದೆಳ್ಳುತ್ತೇವೆಯೇ ಹೊರತು ಸುಮ್ಮನೆ ಕೂರುವುದಿಲ್ಲ. ರಾಜ್ಯದ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಎಲ್ಲಾ ಬೆಳವಣಿಗೆಯನ್ನು ಗಮನಿಸುತ್ತಿದ್ದೇನೆ. ರಾಜಕೀಯದಲ್ಲಿ ಯಾರೂ ಮೇಲೂ ಅಲ್ಲ ಮತ್ತು ಕೆಳಗೆ ಹೋಗೋದು ಶಾಶ್ವತವಲ್ಲ ಎಂದರು.
ಹಣ ಮೀಸಲಿಡಬೇಕು: ಆದಿಚುಚಂಚಗಿರಿ ಮಠ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಸಮಾಜಕ್ಕೆ ಪೂರಕವಾದಂತಹ ಕೆಲಸವನ್ನು ಮಾಡಡುತ್ತಿರುವುದು ಶ್ಲಾಘನೀಯ. ಬಾಲಗಂಗಾಧರ ನಾಥ ಸ್ವಾಮಿಯ ಅವರ ಜನಪರ ಚಿಂತನೆಗಳನ್ನು ನಿರ್ಮಲಾನಂದ ಸ್ವಾಮಿಜಿ ಪೂರ್ಣಗೊಳಿಸಬೇಕು. ಪ್ರತಿ ಜಿಲ್ಲೆಯ ಪ್ರಮುಖ ಬೆಳೆಗಳ ಬಗ್ಗೆ ಸರ್ಕಾರ ಚಿಂತನೆ ನಡೆಸಿ 2ರಿಂದ 3 ಸಾವಿರ ಕೋಟಿ ರು. ಮೀಸಲಿಡಬೇಕು ಎಂದು ಆಗ್ರಹಿಸಿದರು.
ರಾಜ್ಯದ ರೈತರು ಧೃತಿಗೆಡದೆ ಭಯ ಮತ್ತು ಆತಂಕದಲ್ಲಿ ಆತ್ಮಹತ್ಯೆಗೆ ಶರಣಾಗಬಾರದು. ರೈತರದ್ದೇ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂಬು ಆಶಾ ಭಾವನೆಯನ್ನು ರೈತರು ಇಟ್ಟುಕೊಳ್ಳಬೇಕು.
ಕಿಚ್ಚು ನಂದಿಸಲು ಸಾಧ್ಯವಿಲ್ಲ: ನಮ್ಮಲ್ಲೇ ಇದ್ದವರು ಈಗಲೂ ದೇವೇಗೌಡರ ಬಗ್ಗೆ ಆನೆ ಹಾವಳಿ ಬಗ್ಗೆ ಬೇಕಾಬಿಟ್ಟಿ ಟೀಕೆ ಮಾಡುತ್ತಿದ್ದಾರೆ. ಅದರ ಬಗ್ಗೆ ನಾನು ಚರ್ಚೆ ಮಾಡೋಲ್ಲ. ದೇವೇಗೌಡರು ಏಕಾಏಕಿ ಆನೆಯನ್ನು ಹಿಡಿಯಲು ಸಾಧ್ಯವಿಲ್ಲ. ದೇವೇಗೌಡರು ಏಕಾಂಗಿಯಾಗಿ ದೆಹಲಿಗೆ ಹೋಗಿ ಪ್ರಧಾನಿಯಾದರು. ಈಗ ಏಕಾಂಗಿಯಲ್ಲ. ಅವರಲ್ಲಿ ಇರುವ ಹೋರಾಟ ಕಿಚ್ಚನ್ನು ನಂದಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗುಡುಗಿದರು.
ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಮಾತನಾಡಿ,  ನಾಡಗೌಡ ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದರು. ಅದರೆ ಯಾವುದೇ ಒಂದು ಸಮುದಾಯಕ್ಕೆ ಕಟ್ಟಲಿಲ್ಲ. ಎಲ್ಲಾ ವರ್ಗದ ಜನರು ವಾಸ ಮಾಡಲು ಅನುವು ಮಾಡಿದರು.  ಹಾಗೆಯೇ ರಾಜಕೀಯ ಕ್ಷೇತ್ರದಲ್ಲಿ ದೇವೇಗೌಡರು ಒಂದು ಜನಾಂಗದಿಂದ ರಾಜಕೀಯವಾಗಿ ಹೊರ ಹೊಮ್ಮಲಿಲ್ಲ. ಎಲ್ಲಾ ಜನರ ಪ್ರೀತಿ, ಆಶೀರ್ವಾದದಿಂದಲೇ ಮಂತ್ರಿ, ಪ್ರಧಾನಿಯಾದರು. ಸೇವಾ ಮನೋಭಾವ, ಬದ್ಧತೆ ಇದ್ದರೆ ರಾಜಕೀಯದಲ್ಲಿ ಉನ್ನತಿಗೆ ಏರಲು ಕಷ್ಟವಾಗದು ಎಂದರು.
ಯಸಳೂರು ತೆಂಕಲಗೂಡು ಮಠದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ,  ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾ ಶಿವಸ್ವಾಮೀಜಿ, ಮಾದ್ರೆ ಮುದ್ದಿನಕಟ್ಟೆ ಮಠದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ,  ಹೈಕೋರ್ಟ್ ರಿಜಿಸ್ಟ್ರಾರ್ ಎಚ್.ಪಿ. ಸಂದೇಶ್, ಮೈಸೂರು ನ್ಯಾಯಾಲಯದ ಸರ್ಕಾರಿ ಅಭಿಯೋಜಕ ಹನಸೆ ಎಚ್.ಈ. ಚಿನ್ನಪ್ಪ,  ಮಾಜಿ ಸಚಿವ ಜೀವಿಜಯ, ಶಾಸಕರಾದ ಸಿ.ಎನ್. ಬಾಲಕೃಷ್ಣ, ಎ.ಮಂಜು,   ಎಚ್.ಕೆ.ಕುಮಾರಸ್ವಾಮಿ,  ಪುರಸಭೆ ಅಧ್ಯಕ್ಷ ಸತೀಶ್, ಸಕಲೇಶಪುರ ತಾಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಎಸ್.ಎಸ್. ವೇದಾವತಿ, ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್,  ಮುಖಂಡರಾದ ಎಚ್.ಪಿ. ಮೋಹನ್, ಭೈರಮುಡಿ ಚಂದ್ರು,  ಸುಮಂಗಲಿ, ಎಚ್.ಎಸ್. ಪುಟ್ಟಸ್ವಾಮಿಗೌಡ, ಆರ್. ಪಿ. ವೆಂಕಟೇಶ್ ಮೂರ್ತಿ,  ಕಾಮ್ಮಳ್ಳಿ ಕೆ.ಟಿ. ಬೆಳ್ಳಿಗೌಡ. ಎಂಪಿಎಂಸಿ ಅಧ್ಯಕ್ಷ ಸುಪ್ರದೀಪ್ ಮತ್ತು ಇತರರು ಇದ್ದರು.
'ಕಾಫಿ ಬೆಳೆಗಾರರ ಬಗ್ಗೆ ಚಿಂತನೆ ಇಲ್ಲ'
ರಾಜ್ಯದಲ್ಲಿ ಕಾಫಿ, ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿ ಇದ್ದು, ಉತ್ತರ ಕರ್ನಾಟಕದ ಬೆಳೆಗಾರರು ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಯುವುದರಲ್ಲಿ ಸಂಕಷ್ಟು ಎದುರಿಸುತ್ತಿದ್ದರೆ, ಮಲೆನಾಡಿನಲ್ಲಿ ಕಾಫಿ, ಏಲಕ್ಕಿ ಬೆಳೆಯಲು ತೀವ್ರ ತೊಂದರೆ ಎದುರಿಸುತ್ತಾರೆ ಎಂದು ದೇವೇಗೌಡ ಅವರು ವಿಷಾದಿಸಿದರು.
ನಾನು ಸಿಎಂ ಆಗಿದ್ದಾಗ 36 ಸಾವಿರ ಕೋಟಿ ಬಜೆಟ್‌ನಲ್ಲಿ 2500 ಸಾವಿರ ಕೋಟಿ ಬೆಳೆ ಸಾಲ ಮನ್ನಾ ಮಾಡಿದ್ದೇನೆ. ಆದರೆ ರಾಜ್ಯ ಸರ್ಕಾರ ಸಂಕಷ್ಟದಲ್ಲಿ ಇರುವ ಬೆಳೆಗಾರರ ಬಗ್ಗೆ ಚಿಂತನೆ ನಡೆಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement