ಬರಪೀಡಿತ ಪಟ್ಟಿಗೆ ಅರಸೀಕೆರೆ ತಾಲೂಕು
ಅರಸೀಕೆರೆ: ಅರಸೀಕೆರೆ ತಾಲೂಕನ್ನು ರಾಜ್ಯ ಸರ್ಕಾರ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿರುವುದಕ್ಕೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸತತ ಬರಗಾಲ ಪೀಡಿತ ಪ್ರದೇಶವಾಗಿದ್ದ ಅರಸೀಕೆರೆ ತಾಲೂಕನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದ ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ಕೈಬಿಟ್ಟಿದ್ದ ಕಾರಣ ತಾಲೂಕಿನಾದ್ಯಂತ ರಾಜ್ಯ ಕಾಂಗ್ರೆಸ್ ಸರ್ಕಾರದ ಧೋರಣೆಯನ್ನು ಖಂಡಿಸಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಈ ಬಗ್ಗೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರ ನೇತೃತ್ವದಲ್ಲಿ ಕ್ಷೇತ್ರದ ಜನಪ್ರತಿನಿಧಿಗಳ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತಾಲೂಕಿನ ಸಮಸ್ಯೆಗಳ ಬಗ್ಗೆ ಮನವಿಯನ್ನು ಸಲ್ಲಿಸಿದ್ದರೂ ಅಲ್ಲದೆ ರೈತಸಂಘ ಅರಸೀಕೆರೆ ಬಂದ್ಗೆ ಕರೆ ನೀಡಿ ಧರಣಿ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿತ್ತು. ತಾಲೂಕು ಬಿಜೆಪಿ ಘಟಕ ಆಮರಣಾಂತ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಕೆ ನೀಡಿತ್ತು. ಶಾಸಕರು ತಮಗೆ ನೀಡಿರುವ ಭರವಸೆಯನ್ನೂ ಈಡೇರಿಸಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಾಲೂಕಿನ ಜನತೆ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ದತ್ತಪೀಠಕ್ಕೆ ಜಿಲ್ಲೆಯಿಂದ ಸಾವಿರಾರು ಮಂದಿ
ಹಾಸನ: ಚಿಕ್ಕಮಗಳೂರಿನ ದತ್ತಪೀಠಕ್ಕೆ ಡಿ. 16ರಂದು ಹಾಸನ ಜಿಲ್ಲೆಯಿಂದ ದತ್ತಾಮಾಲಾಧಾರಿಗಳು ನೂರಾರು ಮಂದಿ ಹೊರಡಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ತಿಳಿಸಿದ್ದಾರೆ.
ಮೆರವಣಿಗೆ: ಬೇಲೂರಿನ ಶ್ರೀ ಚನ್ನಕೇಶವ ದೇವಸ್ಥಾನದ ಮುಂಭಾಗದಿಂದ ಬೆಳಗ್ಗೆ 9.30 ಕ್ಕೆ ಜಿಲ್ಲೆಯ ದತ್ತಮಾಲಾಧಾರಿಗಳು ಬೃಹತ್ ಮೆರವಣಿಗೆ ಹೊರಟು ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿ ಚಿಕ್ಕಮಗಳೂರಿನ ದತ್ತಪೀಠಕ್ಕೆ ಹೊರಡಲಾಗುವುದು ಎಂದು ಹೇಳಿದ್ದಾರೆ.
ಧಾರ್ಮಿಕ ಸಭೆ: ದತ್ತಪೀಠದಲ್ಲಿ ದತ್ತಪಾದಕೇಯ ದರ್ಶನ ಹಾಗೂ ಗಣಪತಿ ಹೋಮ, ದತ್ತ ಹೋಮ ಮತ್ತು ಧಾರ್ಮಿಕ ಸಭೆಗಳಲ್ಲಿ ದತ್ತಮಾಲಾಧಾರಿಗಳು ಪಾಲ್ಗೊಳ್ಳಲಿದ್ದಾರೆ. ಧಾರ್ಮಿಕ ಸಭೆಯಲ್ಲಿ ವಿವಿಧ ಮಠಾಧೀಶರು ಹಾಗೂ ರಾಜ್ಯ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಮುಖಂಡರು ಭಾಗವಹಿಸಲಿದ್ದಾರೆ. ಡಿ.16ರಂದು ಬೆಳಗ್ಗೆ 8ಕ್ಕೆ ಹಾಸನದ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಹಾಸನದ ದತ್ತಮಾಲಾಧಾರಿಗಳು ಪೂಜೆ ಸಲ್ಲಿಸಿ ನಂತರ ಬೇಲೂರಿನ ಮೆರವಣಿಗೆ ಸಾಗಲಿದೆ.
ಇಂದು ರನ್ ಫಾರ್ ಯೂನಿಟಿ
ಹಾಸನ: ನಗರದಲ್ಲಿ ಡಿ.15ರಂದು ರನ್ ಫಾರ್ ಸ್ಟ್ಯಾಚು ಆಫ್ ಯೂನಿಟಿ ಓಟವನ್ನು ಹಮ್ಮಿಕೊಳ್ಳಲಾಗಿದೆ. ಗುಜರಾತಿನ ನರ್ಮದಾ ಅಣೆಕಟ್ಟಿನ ಹತ್ತಿರ ಇರುವ ಸಾಧು ಐಲ್ಯಾಂಡಿನಲ್ಲಿ ನಿರ್ಮಿಸುವಂತಹ ವಿಶ್ವೇದಲ್ಲೇ ಅತಿ ದೊಡ್ಡದಾದ ಭಾರತರತ್ನ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಪ್ರತಿಮೆಯ ಅಂಗವಾಗಿ ಅಖಿಲ ಭಾರತದಾದ್ಯಂತ ರನ್ ಫಾರ್ ಯೂನಿಟಿ ಓಟವನ್ನು ಜಿಲ್ಲೆಯಲ್ಲೂ ಹಮ್ಮಿಕೊಳ್ಳಲಾಗಿದೆ. ರಾಜ್ಯಮಟ್ಟದ ಕ್ರೀಡಾಪಟು ಎ.ಎಸ್.ಬಾಲಸುಬ್ರಹ್ಮಣ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದಂತಹ ಆರ್. ಚೇತನ್ ಅವರು ಏಕತಾ ಓಟದ ಉದ್ಘಾಟನೆ ನೆರವೇರಿಸುವರು. ಏಕತಾ ಓಟ, ನಗರದ ಸರ್ಕಾರಿ ಪ್ರೌಢಶಾಲೆಯ ಮೈದಾನದಿಂದ ಪ್ರಾರಂಭಿಸಿ ಎವಿಕೆ ಕಾಲೇಜು ಮೂಲಕ ಹೇಮಾವತಿ ವೃತ್ತ, ಎನ್.ಆರ್. ಸರ್ಕಲ್, ಬಿಎಂ. ರಸ್ತೆಯ, ಶಂಕರಮಠ ರಸ್ತೆ ಮೂಲಕ ಪ್ರೌಢಶಾಲಾ ಮೈದಾನದಲ್ಲಿ ಕೊನೆಕೊಳ್ಳಲಿದೆ. ಈ ಓಟಕ್ಕೆ ಸಾರ್ವಜನಿಕರು ಭಾಗಿಯಾಗಬಹುದು ಎಂದು ತಿಳಿಸಲಾಗಿದೆ.
ಅಭಿನಂದನೆ...
ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ ಸಮೀಪದ ಕಲ್ಕೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಇಂದಿರಾಕಿಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದು, ಅವರನ್ನು ಹೆಚ್ಡಿಸಿಸಿ ಮಾಜಿ ಉಪಾಧ್ಯಕ್ಷ ಕೆಂಪನಂಜೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಕುಳ್ಳೇಗೌಡ, ಗ್ರಾಪಂ ಸದಸ್ಯ ಜಾವೀದ್ ಅಭಿನಂದಿಸಿದರು.
ಜಾವಗಲ್ನಲ್ಲಿ ಹನುಮ ಜಯಂತಿ
ಜಾವಗಲ್: ಜಾವಗಲ್ನಲ್ಲಿ ಹನುಮ ಜಯಂತಿ ಅಂಗವಾಗಿ ಗ್ರಾಮದ ಶ್ರೀಆಂಜನೇಯ ಸ್ವಾಮಿ ದೇವಾಲಯದಲ್ಲಿ ಶನಿವಾರ ಮುಂಜಾನೆ ಸ್ವಾಮಿಯವರಿಗೆ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ಕುಂಕುಮಾರ್ಚನೆ ನಡೆಸಿ ಮಹಾಮಂಗಳಾರತಿ ನಡೆಸಲಾಯಿತು. ಶ್ರೀಆಂಜನೇಯ ಸ್ವಾಮಿ ಉತ್ಸವಮೂರ್ತಿಯನ್ನು ಪುಷ್ಪಾಲಂಕೃತ ವಾಹನದಲ್ಲಿ ಶೃಂಗರಿಸಿ ಸ್ಯಾಕ್ಸೋಫೋನ್ ವಾದ್ಯದೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಉತ್ಸವದ ಅಂಗವಾಗಿ ಊರಿನ ಎಲ್ಲಾ ಬೀದಿಗಳಲ್ಲೂ ಮನೆಯ ಮುಂದೆ ನೀರುಹಾಕಿ, ರಂಗೋಲಿಯಿಂದ ಶೃಂಗರಿಸಿ ದೇವರಿಗೆ ಹಣ್ಣುಕಾಯಿ ಅರ್ಪಿಸಿದರು. ದೇವಾಲಯದಲ್ಲಿ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿತ್ತು. ದೇವಾಲಯ ಸಮಿತಿಯ ಸಂಚಾಲಕ ಜೆ.ಎಸ್. ಸೋಮೇಗೌಡ, ವೆಂಕಟರಾಮಯ್ಯ. ಟೈಲರ್ ಪಾಪಣ್ಣ, ಗಂಗಾಧರ, ಶ್ರೀನಿವಾಸ್, ತಮ್ಮಣ್ಣ, ಮಂಜುನಾಥ್, ಕೆಂಗೇಗೌಡ, ರುದ್ರೇಶ, ಕಾಂತರಾಜು ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.
ಸಿದ್ದರಾಮಯ್ಯ ಅಭಿಮಾನಿ ಬಳಗ ಉದ್ಘಾಟನೆ
ಹಾಸನ: ಸಮಾಜದ ಎಲ್ಲಾ ವರ್ಗದವರನ್ನು ಗಣನೆಗೆ ತೆಗೆದುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಳ್ವಿಕೆ ನಡೆಸುವ ಮನೋಭಾವದವರು ಎಂದು ಸಿದ್ದರಾಮಯ್ಯ ಅಭಿಮಾನಿ ಬಳಗದ ರಾಜ್ಯ ಘಟಕದ ಅಧ್ಯಕ್ಷ ಹಿನಕಲ್ ಪ್ರಕಾಶ್ ಹೇಳಿದರು. ಕನಕದಾಸರ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ಸಿದ್ದರಾಮಯ್ಯ ಅಭಿಮಾನಿ ಬಳಗದ ಜಿಲ್ಲಾ ಘಟಕವನ್ನು ಉದ್ಘಾಟಿಸಿ ಮಾತಾಡಿದ ಅವರು, ಸಿದ್ದರಾಮಯ್ಯ ಅವರು ಜಾತ್ಯಾತೀತ ನಾಯಕರಾಗಿದ್ದು, ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವಂತಹ ಪ್ರಯತ್ನಗಳು ನಡೆಸುವ ಮೂಲಕ ಒಂದು ವರ್ಗದ ನಾಯಕ ಎಂದು ಬಿಂಬಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅಭಿಮಾನಿ ಬಳಗದ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ವಿಶ್ವನಾಥ್ರನ್ನು ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅಭಿಮಾನಿ ಬಳಗದ ಹಾಸನ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದೇಗೌಡ, ಶಿವಣ್ಣ, ಚಂದ್ರಶೇಖರ್, ಬಸವಣ್ಣ, ಲತಾ, ವಿಜಯ್ ಕುಮಾರ್ ಹಾಜರಿದ್ದರು.
'ಸಂಸ್ಕೃತಿ ಉಳಿಸಿಕೊಳ್ಳುವ ಪ್ರಯತ್ನ ಶ್ಲಾಘನೀಯ'
ಹೊಳೆನರಸೀಪುರ: ಜಾನಪದ ತಜ್ಞ ಹಾಗೂ ನಾಡೋಜ ಪ್ರಶಸ್ತಿ ಪುರಸ್ಕತ ದಿ.ಡಾ.ಹೆಚ್.ಎಲ್. ನಾಗೇಗೌಡರು ಜಾನಪದ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದು, ಜಾನಪದ ಪರಿಷತ್ತಿನ ತಾಲೂಕು ಘಟಕವು ಅವರ ನೆನಪಿಗಾಗಿ ಶಾಲೆಗೊಂದು ಜಾನಪದ ಕಾರ್ಯಕ್ರಮಗಳನ್ನು ಹಲವಾರು ಶಾಲೆಗಳಲ್ಲಿ ಹಮ್ಮಿಕೊಳ್ಳುವ ಮೂಲಕ ಹಿಂದಿನ ಜನಪದ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದು ಇಲ್ಲಿನ ರೋಟರಿ ಸಂಸ್ಥೆಯ ಅಧ್ಯಕ್ಷ ರೊ.ಆರ್.ಬಿ. ಪುಟ್ಟೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಜಾನಪದ ಪರಿಷತ್ತಿನ ತಾಲೂಕು ಘಟಕವು ಪಟ್ಟಣದ ವಾಸವಿ ವಿದ್ಯಾ ಸಂಸ್ಥೆಯ ಪ್ರೌಢಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ಹಮ್ಮಿಕೊಳ್ಳಲಾಗಿದ್ದ ಶಾಲೆಗೊಂದು ಜಾನಪದ ಗೀತೆ ಗಾಯನ ಸ್ಪರ್ಧಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ವೇದಿಕೆಯಲ್ಲಿ ಪರಿಷತ್ತಿನ ಕಾರ್ಯದರ್ಶಿ ಹೆಚ್.ಎನ್. ಕೃಷ್ಣ, ಖಜಾಂಚಿ ಜಿ.ಪಿ. ಮಂಜುನಾಥಗುಪ್ತ ಇದ್ದರು. ಕಾವ್ಯಶ್ರೀ ಕೃಷ್ಣ, ಹೆಚ್.ಆರ್. ವೀರಬಸಪ್ಪ, ಎಂ.ಸಿ. ಸತ್ಯನಾರಾಯಣರಾವ್ ಜಾನಪದಗಳನ್ನು ಹಾಸ್ಯದ ಮೂಲಕ ಹೇಳಿ ಮಕ್ಕಳನ್ನು ರಂಜಿಸಿದರು.
ಅಡಿಕೆ ಬೆಳೆ ನಿಷೇಧ: 12 ಜಿಲ್ಲೆಗಳ ರೈತರ ಮರಣ ಶಾಸನ
ಬೇಲೂರು: ರಾಜ್ಯದ 12 ಜಿಲ್ಲೆಯ ರೈತರ ಜೀವನಕ್ಕೆ ಆಧಾರವಾದ ಅಡಿಕೆ ಬೆಳೆಯ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ಮರಣ ಶಾಸನವಾಗಲಿದೆ. ಕೇಂದ್ರ ಸರ್ಕಾರ ನೇರ ಹೊಣೆ ಹೊರಬೇಕು ಎಂದು ಪ್ರತಿಪಕ್ಷದ ಉಪನಾಯಕ ವೈ.ಎಸ್.ವಿ. ದತ್ತ ಟೀಕಿಸಿದ್ದಾರೆ. ತಾಲೂಕು ಜೆಡಿಎಸ್ ಅಧ್ಯಕ್ಷ ತೊ.ಚ. ಅನಂತಸುಬ್ಬರಾಯ ಮನೆಗೆ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಡಿಕೆ ಬೆಳೆಯನ್ನು ಆಹಾರ ಪದಾರ್ಥದಿಂದ ಪ್ರಥಮದಲ್ಲಿ ತೆಗೆದು ಹಾಕಿ, ವಾಣಿಜ್ಯ ಬೆಳೆಗಳ ಸಾಲಿನಲ್ಲಿ ಸೇರಿಸಿದಾಗ ಮಾತ್ರ ಅಡಿಕೆ ಬೆಳೆಗಾರ ಉಳಿಯಲು ಸಾಧ್ಯಾವಾಗುತ್ತದೆ ಎಂದು ತಿಳಿಸಿದರು. ರಾಜ್ಯದಲ್ಲಿ ಸುಮಾರು 6 ಲಕ್ಷಕ್ಕೂ ಅಧಿಕ ಎಕರೆಯಲ್ಲಿ ಅಡಿಕೆ ಬೆಳೆ ಇದ್ದು, ಸುಮಾರು 50 ಲಕ್ಷ ಕುಟುಂಬಗಳ ನೆಮ್ಮದಿ ಜೀವನಕ್ಕೆ ಈ ನಿಷೇಧ ಮಾರಕ ಪರಿಣಾಮ ಬೀರಲಿದೆ. ಸುಪ್ರೀಂ ಕೋರ್ಟ್ಗೆ ಅಡಿಕೆ ಬೆಳೆ ಬಗ್ಗೆ ತಿಳಿವಳಿಕೆ ಮೂಡಿಸುವ ಕೆಲಸ ಕೇಂದ್ರ ಸರ್ಕಾರದಾಗಿದೆ ಎಂದರು.ಲೆ ಕಾಂಗ್ರೆಸ್ ಸರ್ಕಾರ ಪ್ರಭುತ್ವ ಸಾಧಿಸಲು ಹೊರಟಿರುವುದರಲ್ಲಿ ಅರ್ಥವಿಲ್ಲ. ಸಿದ್ದರಾಮಯ್ಯನವರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತವೆ ಎಂದರು.
ಶ್ರೀ ಚಿಕ್ಕಮ್ಮ ಸಿಡಿ ಮಹೋತ್ಸವ
ಅರಸೀಕೆರೆ: ಪಟ್ಟಣದ ಶ್ರೀಮೆಳೆಯಮ್ಮ ಮತ್ತು ಶ್ರೀಚಿಕ್ಕಮ್ಮ ಧೂತರಾಯ ಹಾಗೂ ಕೆಂಚರಾಯಸ್ವಾಮಿಯವರ ಸಿಡಿ ಮತ್ತು ಜಾತ್ರಾ ಮಹೋತ್ಸವ ಗುರುವಾರದಿಂದ ಆರಂಭವಾಗಿದ್ದು, ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೂರಾರು ಭಕ್ತರು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು. ಡಿ. 12ರಂದು ಗುರುವಾರ ಬೆಳಗ್ಗೆ ಧ್ವಜಾರೋಹಣ ಕಾರ್ಯಕ್ರಮಗಳು ನಡೆದ ನಂತರ ಸಂಜೆ ಗ್ರಾಮದೇವತೆಗಳಾದ ಶ್ರೀಕರಿಯಮ್ಮ ಮತ್ತು ಶ್ರೀ ಮಲ್ಲಿಗಮ್ಮದೇವಿಯವರ ಸಮ್ಮುಖದಲ್ಲಿ ಮೆಳೆಯಮ್ಮ ಮತ್ತು ಚಿಕ್ಕಮ್ಮ ದೇವರ ಉತ್ಸವವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು. ಉತ್ಸವದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಉತ್ಸವ ಸಾಗುವ ಮಾರ್ಗದ ಉದ್ದಕ್ಕೂ ಮಹಿಳೆಯರು ಪೂಜೆ ಸಲ್ಲಿಸಿ ತಮ್ಮ ಭಕ್ತಿ ಸಮರ್ಪಿಸಿದರು. ಶುಕ್ರವಾರ ಮಧ್ಯಾಹ್ನ 3ಕ್ಕೆ ಶ್ರೀ ಮೆಳೆಯಮ್ಮ ದೇವಿಯ ಮೂಲಸನ್ನಿಧಿಯಲ್ಲಿ ಸಿಡಿ ನಡೆಯಿತು. ರಾತ್ರಿ ಆರತಿಯೊಂದಿಗೆ ಬಾನ ನೈವೇದ್ಯ ನಂತರ ಮಹಾಮಂಗಳಾರತಿ ನಡೆಯಿತು. ಶನಿವಾರ ಗೋಧೂಳಿ ಲಗ್ನದಲ್ಲಿ ಗಂಗಾ ಪೂಜೆ, ಮಧ್ಯಾಹ್ನ ಶ್ರೀದೇವಿಯವರ ಮಹಾರಥೋತ್ಸವ ನಡೆದು, ಮಧ್ಯಾಹ್ನ ಭಕ್ತರಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಾ ಕಾರಂಜಿ
ಹೊಳೆನರಸೀಪುರ ಪಟ್ಟಣದಲ್ಲಿ ಶನಿವಾರ ನಡೆದ ಪ್ರೌಢಶಾಲಾ ಮಟ್ಟದ ಪ್ರತಿಭಾ ಕಾರಂಜಿಯನ್ನು ಶಾಸಕ ಎಚ್.ಡಿ. ರೇವಣ್ಣ ಉದ್ಘಾಟಿಸಿದರು. ತಾಪಂ ಅಧ್ಯಕ್ಷೆ ಪುಷ್ಪಾಗೌಡೇಗೌಡ, ಪುರಸಭೆ ಅಧ್ಯಕ್ಷೆ ಎಚ್.ಆರ್.ಕಲಾವತಿ, ಜಿಪಂ ಸದಸ್ಯೆ ಗೌರಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಶಿವಮಾದಪ್ಪ ಇತರರು ಇದ್ದಾರೆ.
ಮಂಜುನಾಥ್ಗೆ ನೆರವು ನೀಡಿ
ಹಾಸನ: ಕಿಡ್ನಿಯ ವೈಫಲ್ಯದಿಂದ ಬಳಲುತ್ತಿರುವ ಜಿ.ಆರ್.ಮಂಜುನಾಥಥ್ರಿಗೆ ಆರ್ಥಿಕ ನೆರವು ನೀಡುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಉಪಾಧ್ಯಕ್ಷ ಗಿರೀಶ್ ಮನವಿ ಮಾಡಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರಾಗಿರುವ ಜಿ.ಆರ್. ಮಂಜುನಾಥ್ (37) ಟೈಲರ್ ಆಗಿ ವೃತ್ತಿ ನಡೆಸಿ ಜೀವನ ಸಾಗಿಸುತಿದ್ದರು. ಕಳೆದ ನಾಲ್ಕು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದು, ಈಗ ವೃತ್ತಿಯನ್ನು ಮಾಡಲು ಸಾಧ್ಯವಾಗದ ಕಾರಣ ಚಿಕಿತ್ಸೆಗೆ ಆರ್ಥಿಕ ತೊಂದರೆ ಉಂಟಾಗುತ್ತಿದೆ ಎಂದರು. ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸರಿಯಾಗಿ ಕಾರ್ಯ ನಿರ್ವಹಿಸದ ಕಾರಣ ವಾರಕ್ಕೆ ಎರಡು ಬಾರಿ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಡಯಾಲಿಸಿಸ್ ಮಾಡಿಸಲಾಗುತ್ತಿದೆ ಎಂದ ಅವರು, ಶಾಸಕ ಎಚ್.ಎಸ್. ಪ್ರಕಾಶ್ ಅವರು ರು. 4000 ಸಹಾಯ ಮಾಡಿದ್ದು, ಆಗೆಯೇ ಕರ್ನಾಟಕ ರಕ್ಷಣಾ ವೇದಿಕೆ ಕೂಡ ಸಹಾಯ ಮಾಡಿದೆ ಎಂದರು. ಆದ್ದರಿಂದ ಇವರಿಗೆ ಆರ್ಥಿಕ ನೆರವು ನೀಡುವವರು ಜಿ.ಆರ್. ಮಂಜುನಾಥ್, ಸತ್ಯಮಂಗಲ ವಿಭಾಗದ ಎಸ್ಬಿಎಂ ಖಾತೆ ಸಂಖ್ಯೆ 64132273993ಕ್ಕೆ ಜಮೆ ಮಾಡಬಹುದು.
ತ್ಯಾಜ್ಯ ನಿರ್ವಹಣೆಯಲ್ಲಿ ಜನರ ಹೊಣೆ ಮಹತ್ವದ್ದು
ಹಾಸನ: ಪುರಸಭೆ ತ್ಯಾಜ್ಯ ನಿರ್ವಹಣೆಯಲ್ಲಿ ಸಾರ್ವಜನಿಕರೂ ಹೊಣೆ ಮಹತ್ವದಾಗಿದೆ ಎಂದು ಪುರಸಭೆ ಅಧ್ಯಕ್ಷ ಸತೀಶ್ ಹೇಳಿದ್ದಾರೆ. ಪಟ್ಟಣದ ಪುರಭವನದಲ್ಲಿ ಗುರುವಾರ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗಾಗಿ ಪುರಸಭೆ ಘನತ್ಯಾಜ್ಯ ವಸ್ತು ನಿರ್ವಹಣೆ ಕುರಿತು ಏರ್ಪಡಿಸಿದ್ದ ನಾನಾ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರು ತಮ್ಮ ಮನೆಯ ತ್ಯಾಜ್ಯ ನಿರ್ವಹಣೆಗಾಗಿ ಕನಿಷ್ಠ ಕ್ರಮಗಳನ್ನು ಅನುಸರಿಸಿದರೆ ಪುರಸಭೆ ತ್ಯಾಜ್ಯ ನಿರ್ವಹಣೆಯ ಅರ್ಧದಷ್ಟು ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಎಂದರು.
ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಬಗ್ಗೆ ಜನರು ಜಾಗೃತರಾದರೆ ಪಟ್ಟಣವನ್ನು ಸುಂದರಗೊಳಿಸಬಹುದು ಎಂದ ಅವರು, ಈ ನಿಟ್ಟಿನಲ್ಲಿ ಮಕ್ಕಳಲ್ಲಿ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವುದು ಘನ ಮತ್ತು ದ್ರವ ತ್ಯಾಜ್ಯದ ಬಗ್ಗೆ ಸೂಕ್ತ ನಿರ್ವಹಣೆ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ನಾನಾ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ತ್ಯಾಜ್ಯವಸ್ತುಗಳ ಮರುಬಳಕೆ, ತ್ಯಾಜ್ಯವಸ್ತು ನಿರ್ವಹಣೆಯಲ್ಲಿ ಸಾರ್ವಜನಿಕರ ಮಹತ್ವದ್ದು ಎಂದರು.
ಕೃಷಿ ಸಹಕಾರಿ ಬ್ಯಾಂಕ್ಗಳಿಗೆ ಶೀಘ್ರ ಎಟಿಎಂ ಸೌಲಭ್ಯ
ಬೇಲೂರು: ಜಿಲ್ಲಾ ಪಾಥಮಿಕ ಕೃಷಿ ಸಹಕಾರಿ ಬ್ಯಾಂಕ್ಗಳು ಉತ್ತಮವಾಗಿ ನಡೆಯುತ್ತಿದ್ದು, ಈ ದಿಸೆಯಲ್ಲಿ ವಾಣಿಜ್ಯ ಬ್ಯಾಂಕ್ನಲ್ಲಿ ಇರುವ ಎಟಿಎಂ ಸೌಲಭ್ಯಗಳನ್ನು ಸದ್ಯದಲ್ಲಿ ಜಿಲ್ಲೆಯ ಕೃಷಿ ಸಹಕಾರಿ ಬ್ಯಾಂಕ್ಗಳಿಗೆ ನೀಡಲಾಗುತ್ತದೆ ಎಂದು ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರಲ್ಲಿ ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿ, ಸಹಕಾರಿ ಸಂಘಗಳ ಪೂರಕ ಬೆಳವಣಿಗೆಗೆ ಸಂಪನ್ಮೂಲ ಅಗತ್ಯವಾಗುತ್ತದೆ ಎಂದು ತಿಳಿಸಿದರು. ಪ್ರತಿ ರೈತರ ಒಂದು ಎಕರೆ ಭೂಮಿ ಪ್ರದೇಶಕ್ಕೆ ಕನಿಷ್ಟ ಕೃಷಿ ಅಲ್ಪಾವಧಿ ಸಾಲವಿದೆ, ಆದರೆ ನಾವು ಈ ಸಂಬಂಧ ರಾಜ್ಯ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿಯೊಂದಿಗೆ ಚರ್ಚೆ ಮಾಡಿ ಗರಿಷ್ಠ ಸಾಲ ನೀಡುವ ಗುರಿ ಹೊಂದಲಾಗಿದೆ. ಕೃಷಿ ಸಹಕಾರಿ ಬ್ಯಾಂಕ್ಗಳು ಕೇವಲ ಅಲ್ಪಾವಧಿ ಸಾಲವಲ್ಲದೆ, ಹೈನುಗಾರಿಕೆ ಹಾಗೂ ಇನ್ನಿತರ ಸಾಲ ಸೌಲಭ್ಯ ನೀಡುವ ಮಹತ್ವದ ಯೋಜನೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ಗೆ ತಕ್ಕಪಾಠ
ಸಕಲೇಶಪುರ: ಪ್ರಸ್ತುತ ಸಮಾಜದ ವ್ಯವಸ್ಥೆಯಲ್ಲಿ ಇರುವ ಜನರ ಸೌಹಾರ್ಧಯುತ ಭಾವನೆಗಳಿಗೆ ಧಕ್ಕೆ ತರುವಂಥಹ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯ ಸರ್ಕಾರವೇ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಕಾರಣವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಜನತೆ ಕಾಂಗ್ರೆಸ್ ತಕ್ಕಪಾಠ ಕಲಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ವಿದ್ಯುತ್, ಕುಡಿಯುವ ನೀರಿನ ಸಮಸ್ಯೆ, ಸಮಗ್ರ ಜನರ ಬಡತನ, ನಿರುದ್ಯೋಗ ನಿವಾರಣೆಯಂಥಹ ಸಮಾಜಮುಖಿ ಕಾರ್ಯಕ್ರಮಗಳತ್ತ ಚಿಂತಿಸದೇ ಜಾತಿ, ಜಾತಿಗಳನ್ನು ಎತ್ತಿಕಟ್ಟಲು ಅವಕಾಶ ನೀಡುವ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿರುವ ರಾಜ್ಯ ಸರ್ಕಾರವನ್ನು ರಾಜ್ಯಪಾಲರೇ ಕಟು ಶಬ್ದಗಳನ್ನು ಪ್ರಯೋಗ ಮಾಡಿ ಟೀಕಿಸಿದ್ದಾರೆ. ಇದು ರಾಜ್ಯ ಸರ್ಕಾರದ ವಿಫಲತೆಗೆ ಸಾಕ್ಷಿ ಎಂದು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಟೀಕಾ ಪ್ರಹಾರ ನಡೆಸಿದರು.
'ಸಂಚಾರ' ಸೇವೆ
ಹಾಸನ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸುಗಮ ಸಂಚಾರದ ಹಿನ್ನೆಲೆಯಲ್ಲಿ ಪೊಲೀಸ್ ವಾರ್ಡನ್ ಸೇವೆ ಆರಂಭಿಸಿದ್ದು, ಇತ್ತೀಚೆಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಪೊಲೀಸ್ ವಾರ್ಡನ್ಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
'ಧಾರ್ಮಿಕತೆಯಿಂದ ನೆಮ್ಮದಿಯ ಜೀವನ'
ಚನ್ನರಾಯಪಟ್ಟಣ: ದೇಶದ ಜನತೆ ತಮ್ಮ ಮನಸ್ಸಿನಲ್ಲಿನ ಅಜ್ಞಾನವನ್ನು ಹೋಗಲಾಡಿಸಿ ಧಾರ್ಮಿಕತೆಯತ್ತ ತಮ್ಮ ಮನಸ್ಸನ್ನು ಹರಿಸಿದರೆ ಜೀವನದಲ್ಲಿ ನೆಮ್ಮದಿ ದೊರೆಯುತ್ತದೆ ಎಂದು ನುಗ್ಗೇಹಳ್ಳಿ ಪುರವರ್ಗ ರಂಭಾಪುರಿ ಶಾಖಾ ಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ತಾಲೂಕಿನ ಅಣತಿ ಗ್ರಾಮದಲ್ಲಿ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಜನತೆ ಇತ್ತೀಚಿನ ದಿನಗಳಲ್ಲಿ ತಮ್ಮ ಜೀವನದಲ್ಲಿ ಹಲವು ಒತ್ತಡಗಳಲ್ಲಿ ಕಾರ್ಯ ಮಾಡುವ ನಿಟ್ಟಿನಲ್ಲಿ ಮನಸ್ಸಿನ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದು, ಮನಸ್ಸಿನ ನೆಮ್ಮದಿಗೆ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ತಿಳಿಸಿದರು. ರಾಜಕಾರಣದಲ್ಲಿ ಧರ್ಮವಿರಬೇಕು. ಆದರೆ, ಧರ್ಮದಲ್ಲಿ ರಾಜಕಾರಣವನ್ನು ಮಾಡದೆ ಧಾರ್ಮಿಕ ಸಮಾರಂಭ ಮಾಡಲು ಮುಂದಾಗಬೇಕು ಎಂದು ತಿಳಿಸಿದರು. ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಗ್ರಾಮದ ದಿಗಂಬರೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ದಾರಕ್ಕೆ ರು. 2 ಲಕ್ಷ ನೀಡಲಾಗುವುದು. ಇದರ ಜೊತೆಗೇ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನಕ್ಕೆ ರು. 4 ಲಕ್ಷ ಅನುದಾನವನ್ನು ತಮ್ಮ ಶಾಸಕರ ಅಭಿವೃದ್ಧಿ ಅನುದಾನದಿಂದ ನೀಡಲಾಗುವುದು ಎಂದು ತಿಳಿಸಿದರು.
ನಾಳೆ ಸಾರಿಗೆ ಸಂಸ್ಥೆ 2ನೇ ಘಟಕ ಆರಂಭ
ಹಾಸನ: ರಾಜ್ಯ ರಸ್ತೆ ಸಾರಿಗೆ ನಿಗಮ, ಹಾಸನ ವಿಭಾಗದ 2ನೇ ಘಟಕದ ಉದ್ಘಾಟನಾ ಸಮಾರಂಭವು ಡಿ. 16 ರಂದು ಬೆಳಗ್ಗೆ 11ಕ್ಕೆ ನಗರದ ರೇಲ್ವೆ ನಿಲ್ದಾಣದ ಸಮೀಪ ನಡೆಯಲಿದೆ. ಮಾಜಿ ಪ್ರಧಾನಿ ಹಾಗೂ ಲೋಕಸಭಾ ಸದಸ್ಯ ಹೆಚ್.ಡಿ. ದೇವೇಗೌಡರ ಉಪಸ್ಥಿತಿಯಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೆರವೇರಿಸುವರು. ಶಾಸಕ ಹೆಚ್.ಎಸ್. ಪ್ರಕಾಶ್ ಅಧ್ಯಕ್ಷತೆ ವಹಿಸುವರು. ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಡಿ.ಜಿ. ಅಂಬಿಕಾ ರಾಮಣ್ಣ, ವಿಧಾನಸಭಾ ಸದಸ್ಯರಾದ ಹೆಚ್.ಡಿ. ರೇವಣ್ಣ, ಹೆಚ್.ಕೆ. ಕುಮಾರಸ್ವಾಮಿ, ವೈ.ಎನ್. ರುದ್ರೇಶಗೌಡ, ಎ. ಮಂಜು, ಕೆ.ಎಂ. ಶಿವಲಿಂಗೇಗೌಡ, ಸಿ.ಎನ್. ಬಾಲಕೃಷ್ಣ ಮತ್ತು ವಿಧಾನ ಪರಿಷತ್ ಸದಸ್ಯರಾದ ಪಟೇಲ್ ಶಿವರಾಂ, ಗೋ. ಮಧುಸೂದನ್, ಮರಿತಿಬ್ಬೇಗೌಡ, ಬಿ.ಬಿ. ಶಿವಪ್ಪ, ಹಾಗೂ ತಾಲೂಕು ಪಂಚಾಯ್ತಿ ಅಧ್ಯಕ್ಷೆ ರತ್ನ ಹನುಮೇಗೌಡ, ನಗರಸಭಾ ಅಧ್ಯಕ್ಷೆ ವಿದ್ಯಾಶ್ರೀ, ನಗರಸಭಾ ಸದಸ್ಯೆ ಹೆಚ್. ಶೋಭ ಹಾಗೂ ನಾನಾ ಜನಪ್ರತಿನಿಧಿಗಳು ಭಾಗವಹಿಸುವರು.
ನಗರಸಭೆ ಮಾಜಿ ಅಧ್ಯಕ್ಷ ಸಿ.ಆರ್. ಶಂಕರ್ ಪತ್ನಿ ನಿಧನ
ಹಾಸನ: ನಗರಸಭೆ ಮಾಜಿ ಅಧ್ಯಕ್ಷ ಸಿ.ಆರ್.ಶಂಕರ್ ಅವರ ಪತ್ನಿ ಶಾಂತಿ (53) ಹೃದಯಘಾತದಿಂದ ಶನಿವಾರ ನಿಧನರಾಗಿದ್ದಾರೆ.
ನಗರದ ಸಮೀಪ ಚನ್ನಪಟ್ಟಣದಲ್ಲಿ ವಾಸವಾಗಿರುವ ಸಿ.ಆರ್. ಶಂಕರ್ ಅವರು ಪತ್ನಿ ಶಾಂತಿ ಶನಿವಾರ ಸಂಜೆ 4ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇವರು ಪತಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಸ್ವ-ಗ್ರಹದಲ್ಲಿ ಇಡಲಾಗಿದ್ದು, ಡಿ. 15ರಂದು ಭಾನುವಾರ ಬೆಳಗ್ಗೆ 11 ಅಂತಿಮ ಸಂಸ್ಕಾರ ನಡೆಯಲಿದೆ.
ಶಾಸಕ ಎಚ್.ಎಸ್. ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಸಮಾಜಿ ಸೇವಕ ಭವಾನಿ ರೇವಣ್ಣ ಹಾಗೂ ಇತರರು ಭೇಟಿ ನೀಡಿ ಸಂತಾಪ ಸೂಚಿಸಿದರು.
ಅವರು ಹೇಳಿದ್ದು
ಯಡಿಯೂರಪ್ಪನವರೇ ನಿಮ್ಮ ಹೋರಾಟದ ಬಗ್ಗೆ ನಮಗೆ ಗೌರವವಿದೆ. ಹೋರಾಟದ ಮೂಲಕವೇ ಅಧಿಕಾರಕ್ಕೆ ಬಂದಿರಿ. ಆದರೆ, ಅದಕ್ಕೆ ಜೆಡಿಎಸ್ನವರೂ ಕಾರಣ ಎಂಬುದನ್ನು ನೆನಪಿಟ್ಟುಕೊಳ್ಳಿ.
-ಶ್ರೀನಿವಾಸಪ್ರಸಾದ್ಕಂದಾಯ ಸಚಿವ