477 ಗ್ರಾಮದ ನೀರಡಿಕೆ ತಣಿಸಲಿರುವ ಹೇಮಾವತಿ
ಅರಸೀಕೆರೆ: ಫ್ಲೋರೈಡ್ಪೀಡಿತ 477 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಮಹದಾಸೆಗೆ ಚಾಲನೆ ದೊರೆತಿದೆ. ಬರಪೀಡಿತ ಪ್ರದೇಶವಾಗಿರುವ ತಾಲೂಕಿನ ಎಲ್ಲ ಕೆರೆಗಳಿಗೆ ನದಿ ನೀರು ಒದಗಿಸುವ ಯೋಜನೆಯ ಅನುಷ್ಠಾನಕ್ಕಾಗಿ ನೀರಾವರಿ ಹೋರಾಟ ಸಮಿತಿ ಹೆಸರಿನಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು. ಪಕ್ಷಾತೀತವಾಗಿ, ಕ್ಷೇತ್ರದ ಜನತೆ ಬೆಂಬಲಿಸಿ ಹೋರಾಟಕ್ಕಿಳಿಯಬೇಕೆಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಕರೆ ನೀಡಿದರು.
ತಾಲೂಕಿನ ಗಂಡಸಿ ಹ್ಯಾಂಡ್ಪೋಸ್ಟ್ನಲ್ಲಿ 477 ಗ್ರಾಮಗಳಿಗೆ ನೀರು ಒದಗಿಸುವ ಯೋಜನೆಯ ಸರ್ವೆ ಕಾಮಗಾರಿಗೆ ಶಾಸಕತ್ರಯರಾದ ಕೆ.ಎಂ.ಶಿವಲಿಂಗೇಗೌಡ, ವೈ.ಎನ್.ರುದ್ರೇಶ್ಗೌಡ ಹಾಗೂ ಸಿ.ಎನ್.ಬಾಲಕೃಷ್ಣ ಚಾಲನೆ ನೀಡಿದ ನಂತರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಪ್ರಕೃತಿ ವೈಪರೀತ್ಯ, ಸತತ ಮಳೆ ಅಭಾವದಿಂದ ತೆಂಗು ಬೆಳೆ ಸಂಪೂರ್ಣ ನಾಶದ ಅಂಚಿಗೆ ತಲುಪಿದ್ದು ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಇನ್ನೈದು ವರ್ಷ ಇದೇ ಸ್ಥಿತಿ ಮುಂದುವರೆದರೆ ಇಡಿ ತಾಲೂಕಿನ ಜನತೆ ನೀರಿಗಾಗಿ ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗಲಿದೆ ಎಂದರು.
ಸತತ ಬರಗಾಲ, ಮಳೆ ಅಭಾವದಿಂದ ಸಂಕಷ್ಟಕ್ಕೀಡಾಗಿರುವ ರೈತರ ಹಿತ ಕಾಯಲು ತಾಲೂಕಿನ ಕೆರೆಗಳಿಗೆ ಚಾನಲ್ ಮೂಲಕ ನೀರು ಹರಿಸುವ ಅಗತ್ಯ ಇದೆ. ಇದಕ್ಕೆ ಎರಡೂವರೆ ಟಿಎಂಸಿ ನೀರು ಅಗತ್ಯವಿದ್ದು ಅದನ್ನು ಹೇಮಾವತಿ, ಕೃಷ್ಣಾ, ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಒದಗಿಸಬೇಕು. ಅಥವಾ ಪರಮಶಿವಯ್ಯ ವರದಿಯಂತೆ ನೇತ್ರಾವತಿ ತಿರುವು ಯೋಜನೆಯಲ್ಲಿ ಇಡಿ ಅರಸೀಕೆರೆ ತಾಲೂಕು ಸಂಪೂರ್ಣ ನೀರಾವರಿಯಾಗಲಿದ್ದು, ಆ ಮೂಲಕವಾದರೂ ನೀರು ಒದಗಿಸಬೇಕು ಎಂದು ಒತ್ತಾಯಿಸಿದರು.
192 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಟ್ಟ ನಂತರ ಸ ಮುದ್ರ ಸೇರಲಿರುವ ನೀರನ್ನು ಬರಪೀಡಿತ ಅರಸೀಕೆರೆಗೆ ಒದಗಿಸಬೇಕು. ತಾಲೂಕು ಶಾಶ್ವತ ಬರಪೀಡಿತವೆಂಬ ಹಣೆಪಟ್ಟಿ ಹೊತ್ತಿದ್ದು ಇದರ ನಿರ್ಮೂಲನೆಗಾಗಿ ಅವಿರತ ಹೋರಾಟ ನಡೆಸಲಾಗುವುದು ಎಂದರು.
ಬೇಲೂರು ಕ್ಷೇತ್ರದ ಶಾಸಕ ವೈ.ಎನ್.ರುದ್ರೇಶ್ಗೌಡ ಮಾತನಾಡಿ, ನಮ್ಮ ಕ್ಷೇತ್ರದ ಎಲ್ಲ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಯೋಜನೆಗೆ ಚಾಲನೆ ದೊರೆತಿರುವುದು ಸಂತೋಷದ ಸಂಗತಿ ಎಂದರು.
ಚ.ರಾ.ಪಟ್ಟಣ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, 150 ಕೋಟಿ ಯೋಜನೆಯನ್ನು ಮಂಜೂರು ಮಾಡಿಸುವುದು ಸಾಮಾನ್ಯವಲ್ಲ. ಅದನ್ನು ಶಾಸಕರು ಸಾಧಿಸಿ ತೋರಿಸಿದ್ದಾರೆ ಎಂದರು.
ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ, ಜಿಂದಾಲ್ ಕಂಪನಿಯ ಮ್ಯಾನೇಜರ್ ರಾಮಚಂದ್ರರಾವ್ ಮಾತನಾಡಿದರು. ವೇದಿಕೆಯಲ್ಲಿ ತಾಪಂ ಅಧ್ಯಕ್ಷ ಎಚ್.ಟಿ.ಶಿವಮೂರ್ತಿ, ಪುರಸಭೆ ಅಧ್ಯಕ್ಷ ಮೋಹನ್ಕುಮಾರ್, ಜಿಪಂ ಸದಸ್ಯರಾದ ಹುಚ್ಚೇಗೌಡ, ಜ್ಯೋತಿ ಗಂಗಾಧರ್, ಎಪಿಎಂಸಿ ಮಾಜಿ ಅಧ್ಯಕ್ಷ ಮುರುಂಡಿ ಶಿವಯ್ಯ, ಬಾಣಾವರ ಅಶೋಕ್, ಕಾರ್ಯಕಾರಿ ಎಂಜಿನಿಯರ್ ಕೆ.ಎಂ.ನಾಗರಾಜ್, ಎಇಇ ಶೇಖರಪ್ಪ, ಎಇ ಟಿ.ಎನ್.ರಾಮಚಂದ್ರ, ತುಂಗಭದ್ರಾ ಸರ್ವೆ ಕನ್ಸಲ್ಟೆಂಟ್ನ ಕೆ.ಮಂಜುನಾಥ್ ಇತರರು ಇದ್ದರು.