ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಐಚ್ಛಿಕ ವಿಷಯ ಪರಿಣತರ ನೇಮಕಕ್ಕೆ ಚಿಂತನೆ

Vishwanath S
Updated On : 17 Dec 2013, 12:24 pm

ಕ.ಪ್ರ.ವಾರ್ತ್ಣೆ ಹಾಸನ ,  ಡಿ 16
ಐಚ್ಛಿಕ ವಿಷಯದಲ್ಲಿ ವ್ಯಾಸಂಗ ಮಾಡಿರುವ ಶಿಕ್ಷಕರನ್ನೇ ಕಡ್ಡಾಯವಾಗಿ ಪ್ರತಿ ಸರ್ಕಾರಿ ಶಾಲೆಗಳಲ್ಲಿ ನೇಮಕ ಮಾಡುವಂತ ಪ್ರಕ್ರಿಯೆ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.
ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಎಲ್ಲ ಸೌಕರ್ಯಗಳಿದ್ದರೂ ಮಕ್ಕಳ ಹಾಜರಾತಿ ಕಡಿಮೆಯಾಗುತ್ತಿದೆ. ಆದ್ದರಿಂದ ಶಾಲೆಗಳಲ್ಲಿ ಇಂಗ್ಲಿಷ್, ಕನ್ನಡ, ಗಣಿತ ಸೇರಿದಂತೆ ಇತರೆ ಭಾಷೆಗಳ ಐಚ್ಛಿಕ ವಿಷಯದಲ್ಲಿ ವ್ಯಾಸಂಗ ಮಾಡಿರುವವರನ್ನೇ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೆ ಚಿಂತನೆ ನಡೆಯುತ್ತಿದೆ. ಆಯಾ ವಿಷಯದಲ್ಲಿ ಪರಿಣತರ ನೇಮಕದಿಂದ ಗುಣಮಟ್ಟದ ಶಿಕ್ಷಣ ಕಾಪಾಡಲು ಸಾಧ್ಯವಾಗುತ್ತದೆ ಎಂದರು.
ಇನ್ನು ಮುಂದೆ ಯಾವುದೇ ಸಮಸ್ಯೆಯಾಗಬಾರದು ಎಂಬ ದೃಷ್ಟಿಯಿಂದ ಕೆಲ ಮಾನದಂಡ ಇಟ್ಟುಕೊಂಡು ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತದೆ. ಮುಂದಿನ ದಿನಗಳಲ್ಲಿ 9 ಸಾವಿರ ಶಿಕ್ಷಕರ ನೇಮಕಾತಿ ನಡೆಸಲಾಗುತ್ತದೆ. ಅದೇ ರೀತಿ ಪ್ರೌಢಶಾಲಾ ಶಿಕ್ಷಕರ ನೇಮಕಾತಿಯ ಪ್ರಕ್ರಿಯೆ ಕೂಡ ನಡೆಸಲಾಗುತ್ತದೆ ಎಂದರು.
ಶಿಕ್ಷಕರ ಕೊರತೆ ಉಂಟಾಗಬಾರದು ಎಂಬ ದೃಷ್ಟಿಯಿಂದ ಒಂದು ವರ್ಷದಲ್ಲಿ ನಿವೃತ್ತಿಯಾಗುವ ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ ಆಗಿಂದಾಗ್ಗೆ ನೇಮಕಾತಿ ಮಾಡುವ ಪ್ರಕ್ರಿಯೆಗೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಿ ಶಾಲೆಗಳಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರ ರೂಪಿಸುತ್ತಿರುವ ಯೋಜನೆಗಳಿಗೆ ಸರಿಯಾಗಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಶಿವಲಿಂಗೇಗೌಡ ಮಾತನಾಡಿ, ಕನ್ನಡವನ್ನು ಕಡ್ಡಾಯಗೊಳಿಸಿ ಸರ್ಕಾರದಿಂದಲೇ ಕಾನ್ವೆಂಟ್‌ಗಳನ್ನು ತೆರೆಯುವ ವ್ಯವಸ್ಥೆ ಆಗಬೇಕು. ಇದರಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಲಿದೆ. ಇಂದಿನ ಪರಿಸ್ಥಿತಿ  ಮುಂದುವರೆದರೆ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳೆಲ್ಲವನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಈಗಾಗಲೇ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ.
ಶಾಲೆಗಳು ದೂರವಾದರೂ ಆಂಗ್ಲ ಮಾಧ್ಯಮದಲ್ಲಿಯೇ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದಾರೆ. ಆದ್ದರಿಂದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಕರನ್ನು ಹೆಚ್ಚಿಸಬೇಕು. ಫಲಿತಾಂಶ ಬರುವ ಮುನ್ನವೇ ಕೆಲ ಖಾಸಗಿ ಶಾಲೆಯವರು ಪ್ರವೇಶಾತಿ ಕರೆಯುತ್ತಿದ್ದಾರೆ. ಇದರಿಂದ ಅರ್ಹ ಮಕ್ಕಳು ಆರ್‌ಟಿಇ ಕಾಯ್ದೆಯಿಂದ ವಿಫಲರಾಗುತ್ತಿದ್ದಾರೆ ಎಂದರು.
ಶಾಲೆಗಳಿಗೆ ಬರುವ ಅಕ್ಕಿ ಗುಣಮಟ್ಟ ಕಳಪೆಯಾಗಿದೆ ಎಂಬ ದೂರುಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಸರ್ಕಾರಿ ಶಾಲೆಯ ಶಿಕ್ಷಕರನ್ನು ಬಿಸಿಯೂಟ ಸೇರಿದಂತೆ ಎಲ್ಲ ಕೆಲಸ ಕಾರ್ಯಗಳಲ್ಲಿ ಬಳಸಿಕೊಳ್ಳುತ್ತಿರುವುದರಿಂದ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ಇದರಿಂದ ಶಿಕ್ಷಕರ ಮೇಲೆ ಒತ್ತಡ ಹೆಚ್ಚಾಗಿ ಪಾಠ-ಪ್ರವಚನ ಕಡಿಮೆಯಾಗುತ್ತಿದೆ. ಶಿಕ್ಷಕರ ಮೇಲಿನ ಒತ್ತಡವನ್ನು ಕಡಿಮೆಗೊಳಿಸಬೇಕು. ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮಕ್ಕಳು ಕಡಿಮೆ ಇರೋ ಕಡೆಗಳಲ್ಲಿ ಹೆಚ್ಚಿನ ಕಟ್ಟಡ ವ್ಯರ್ಥ. ಅದಕ್ಕಾಗಿ ಅಧಿಕಾರಿಗಳು ಅದನ್ನು ಹೆಚ್ಚಿನ ಮಕ್ಕಳು ಇರುವ ಕಡೆಗಳಿಗೆ ಬದಲಾಯಿಸುವ ಬಗ್ಗೆ ನಮ್ಮ ಗಮನಕ್ಕೆ ತನ್ನಿ. ಅದನ್ನು ಬದಲಿಸುವ ವ್ಯವಸ್ಥೆ ಮಾಡಲಾಗುತ್ತದೆ. ಒಂದೇ ಕಡೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವವರನ್ನು ಬೇರೆಡೆ ಹಾಕಲು ಸಹ ಪ್ರಯತ್ನಗಳು ನಡೆಯುತ್ತಿದೆ ಎಂದರು.
ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜು ಮಾತನಾಡಿ, ಆರ್‌ಟಿಇನಲ್ಲಿ ಕಳೆದ ಬಾರಿ 1800 ಸೀಟ್ ಇತ್ತು. ಈ ಪೈಕಿ 1500 ಮಕ್ಕಳು ಸೀಟ್ ಪಡೆದಿದ್ದರು. ಈ ಬಾರಿ 2 ಸಾವಿರ ಸೀಟುಗಳಿದ್ದು, ಅರ್ಜಿಗಳು ಬರುತ್ತಿವೆ ಎಂದು ಮಾಹಿತಿ ನೀಡಿದರು.
ಜಿಪಂ ಅಧ್ಯಕ್ಷೆ ಅಂಬಿಕಾ ರಾಮಣ್ಣ, ಉಪಾಧ್ಯಕ್ಷ ಬಿಳಿಚೌಡಯ್ಯ, ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್, ಜಿಪಂ ಸಿಇಒ ಉಪೇಂದ್ರ ಪ್ರತಾಪ್‌ಸಿಂಗ್ ಇದ್ದರು.
ಇನ್ನು ಮುಂದೆ ಯಾವುದೇ ಸಮಸ್ಯೆಯಾಗಬಾರದು ಎಂಬ ದೃಷ್ಟಿಯಿಂದ ಕೆಲ ಮಾನದಂಡ ಇಟ್ಟುಕೊಂಡು ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತದೆ. ಮುಂದಿನ ದಿನಗಳಲ್ಲಿ 9 ಸಾವಿರ ಶಿಕ್ಷಕರ ನೇಮಕಾತಿ ನಡೆಸಲಾಗುತ್ತದೆ. ಅದೇ ರೀತಿ ಪ್ರೌಢಶಾಲಾ ಶಿಕ್ಷಕರ ನೇಮಕಾತಿಯ ಪ್ರಕ್ರಿಯೆ ಕೂಡ ನಡೆಸಲಾಗುತ್ತದೆ
- ಕಿಮ್ಮನೆ ರತ್ನಾಕರ, ಪ್ರೌಢ ಶಿಕ್ಷಣ ಸಚಿವ

ಆರ್‌ಟಿಇ ಕಾಯ್ದೆಉಲ್ಲಂಘಿಸಿದರೆ ಕ್ರಮ
ಶಾಲೆಗಳು ಆರ್‌ಟಿಇನಲ್ಲಿ ಮಕ್ಕಳಿಗೆ ಸರಿಯಾಗಿ ಸೀಟನ್ನು ನೀಡದಿದ್ದರೆ ಹಾಗೂ ಈ ಕಾಯ್ದೆಯನ್ನು ಉಲ್ಲಂಘಿಸಿದಲ್ಲಿ ಅಂತಹ ಶಾಲೆಗಳ ಪರವಾನಗಿ ರದ್ದುಪಡಿಸಲಾಗುತ್ತದೆ. ಆರ್‌ಟಿಇ ಕಾಯ್ದೆಗಳು ಉಲ್ಲಂಘನೆಯಾಗುತ್ತಿದ್ದಲ್ಲಿ ಆ ಬಗ್ಗೆ ಲಿಖಿತ ದೂರು ನೀಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಕಿಮ್ಮನೆ ರತ್ನಾಕರ ಹೇಳಿದರು.
ನಿವೃತ್ತಿಯಾದ ಶಿಕ್ಷಕರಿಗೆ ನಿವೃತ್ತಿ ಹಣವನ್ನು 6 ತಿಂಗಳೊಳಗೆ ನೀಡದೆ ಅಧಿಕಾರಿಗಳು ಸತಾಯಿಸಿದ್ದು ಕಂಡು ಬಂದರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement