ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಿಬ್ಬಂದಿಗೆ ಕಿರುಕುಳ ನೀಡಿದ್ರೆ ಹುಷಾರ್

Vishwanath S
Updated On : 17 Dec 2013, 12:25 pm

ಹಾಸನ: ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳು ಸಿಬ್ಬಂದಿ ಮೇಲೆ ಕಿರುಕುಳ ನೀಡದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ನಗರದ ರೇಲ್ವೆ ನಿಲ್ದಾಣ ಸಮೀಪ ಹಾಸನ ಕೆಎಸ್‌ಆರ್‌ಟಿಸಿ ಘಟಕದ 2ನೇ ಶಾಖೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ಇಲಾಖೆಯಲ್ಲಿ ಅಧಿಕಾರಿಗಳು ಸಿಬ್ಬಂದಿಗೆ ಕಿರುಕುಳ ನೀಡಿರುವ ಘಟನೆಗಳು ವರದಿಯಾಗಿದ್ದು, ಅದನ್ನು ಸಂಪೂರ್ಣ ತಡೆಗಟ್ಟುವ ನಿಟ್ಟಿನಲ್ಲಿ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ನಾನು ಸಚಿವ ಆದಾಗಿನಿಂದಲೂ ಇಲಾಖೆಯಲ್ಲಿ ಕಿರುಕುಳಗಳು ಕಡಿಮೆಯಾಗಿವೆ. ಒಂದು ವೇಳೆ ಕಿರುಕುಳ ನೀಡಿದರೆ, ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಕೇಂದ್ರದಿಂದ ಸುಮಾರು 10 ಸಾವಿರ ಬಸ್‌ಗಳಿಗೆ ಅನುಮೋದನೆ ಸಿಕ್ಕಿದ್ದು, ಈ ಪೈಕಿ 2100 ಬಸ್‌ಗಳು ರಾಜ್ಯಕ್ಕೆ ಬರಲಿವೆ. ಜೊತೆಗೆ ರಾಜ್ಯಾದ್ಯಂತ 24 ಡಿಪೋಗಳನ್ನು ಪ್ರಾರಂಭಿಸಲಾಗುತ್ತದೆ. ಈ ಪೈಕಿ 19 ಡಿಪೋಗಳು ಗ್ರಾಮಾಂತರ ಪ್ರದೇಶಗಳಲ್ಲಿ, 5 ಬೆಂಗಳೂರಿನಲ್ಲಿ ಪ್ರಾರಂಭಿಸಲಾಗುತ್ತದೆ. ಜೊತೆಗೆ ಈ ಹಿಂದೆ ನಗರ ಸಾರಿಗೆಗಳು ಕೇವಲ ಬೆಂಗಳೂರು ಹಾಗೂ ಮೈಸೂರಿನಲ್ಲಿ ಸಂಚರಿಸುತ್ತಿದ್ದವು. ಆದರೆ ಈಗ ಎಲ್ಲ ಜಿಲ್ಲೆಗಳಲ್ಲೂ ನಗರ ಸಂಚಾರಿ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಈಗಾಗಲೇ 15 ಸ್ಥಳಗಳಲ್ಲಿ ನಗರ ಸಂಚಾರಿ ಬಸ್‌ಗಳು ಕಾರ್ಯಾರಂಭ ಮಾಡಿದ್ದಾವೆ ಎಂದರು.
ಹಾಸನದಲ್ಲಿ ಈ 2ನೇ ಘಟಕವನ್ನು 4.6 ಎಕರೆ ಪ್ರದೇಶದಲ್ಲಿ 3.10 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಆದೇ ರೀತಿ ಹೊಳೆನರಸೀಪುರದಲ್ಲಿ 2 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ, ದುದ್ದ, ಅರಕಲಗೂಡಿನಲ್ಲಿಯೂ ಬಸ್ ನಿಲ್ದಾಣ ಕಾಮಗಾರಿಗಳು ನಡೆಯುತ್ತಿವೆ. ಹಾಸನದ ಹಳೆ ಬಸ್ ನಿಲ್ದಾಣವನ್ನು ನಗರದಲ್ಲಿ ಈಗಾಗಲೇ ನಿರ್ಮಾಣಗೊಂಡು ಕಾರ್ಯ ನಿರ್ವಹಿಸುತ್ತಿರುವ ಹೈಟೆಕ್ ಬಸ್ ನಿಲ್ದಾಣಕ್ಕಿಂತ ಚೆನ್ನಾಗಿ ನಿರ್ಮಿಸಲು ಸೂಚಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದು, ಕ್ಷೇತ್ರದ ಶಾಸಕರು ಕೆಎಸ್‌ಆರ್‌ಟಿಸಿ ಸಿಬ್ಬಂದಿಯೊಂದಿಗೆ ಚರ್ಚಿಸಿ ನನ್ನ ಗಮನಕ್ಕೆ ತಂದರೆ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇನೆ. ಹೈಟೆಕ್ ಬಸ್ ನಿಲ್ದಾಣಕ್ಕೆ ಹೋಗುವ ಮಾರ್ಗ ಮಧ್ಯೆ ಮೇಲ್ಸೆತುವೆ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ 36 ಕೋಟಿ ವೆಚ್ಚದ ಯೋಜನೆಯು ಈಗಾಗಲೇ ಪ್ರಗತಿಯಲ್ಲಿದ್ದು, ಈ ಬಗ್ಗೆ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಲಾಗುತ್ತದೆ. ರಸ್ತೆಗಳ ತಡೆ ನಿರ್ಮಾಣ ಕೆಲಸ ನಮಗೆ ಬರೋದಿಲ್ಲ. ಅದನ್ನು ಸಂಬಂಧಪಟ್ಟ ಇಲಾಖೆಯವರು ಮಾಡಬೇಕು ಎಂದರು.
ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ಹಾಸನದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರತಿನಿತ್ಯ ಸುಮಾರು 15ರಿಂದ 20 ಸಾವಿರ ಮಂದಿ ಓಡಾಡುತ್ತಿದ್ದಾರೆ. ಅದಕ್ಕೆ 20 ನಗರ ಸಾರಿಗೆ ಬಸ್‌ಗಳನ್ನು ಸಂಚರಿಸುವಂತೆ ಮಾಡಬೇಕು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಳಗ್ಗೆ 8ರಿಂದ 10 ಗಂಟೆ ಸಮಯದಲ್ಲಿ ಬಸ್‌ಗಳ ಸಂಚಾರ ಹೆಚ್ಚಿಸಬೇಕು. ಎಲ್ಲ ತಾಲೂಕುಗಳಲ್ಲಿ ನಗರ ಸಾರಿಗೆ ಸಂಚರಿಸುವಂತೆ ಕ್ರಮ ಕೈಗೊಳ್ಳುವಂತೆ ಸಚಿವರಿಗೆ ಮನವಿ ಮಾಡಿದ ಅವರು, ಹೊಳೆನರಸೀಪುರ ಬಸ್ ನಿಲ್ದಾಣದ ಕಾಮಗಾರಿ ಕಳೆದ 2 ವರ್ಷದಿಂದ ನಡೆಯುತ್ತಿದ್ದು, ಕೂಡಲೇ ಕಾಮಗಾರಿ ಪೂರ್ಣಗೊಳಿಸಿಕೊಡಬೇಕು ಎಂದರು.
ಶಾಸಕ ಎಚ್.ಎಸ್.ಪ್ರಕಾಶ್ ಮಾತನಾಡಿ, ಹೊಸ ಬಸ್ ನಿಲ್ದಾಣಕ್ಕೆ ಹೋಗುವ ಮಾರ್ಗ ಮಧ್ಯೆಯಲ್ಲಿ ರೇಲ್ವೆ ಮೇಲ್ಸೇತುವೆ ಆಗಬೇಕಿದೆ. ನಗರದ ಹೊಸ ಬಸ್ ನಿಲ್ದಾಣ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಂತೆ ಇದೆ. ಅದೇ ರೀತಿ ಹಳೆ ಬಸ್ ನಿಲ್ದಾಣದ ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸಿ ಕಾರ್ಯಾರಂಭಕ್ಕೆ ಚಾಲನೆ ನೀಡಬೇಕು. ಅಲ್ಲಿನ ಅಂಗಡಿ-ಮುಂಗಟ್ಟನ್ನು ಒಬ್ಬರಿಗೆ ವಹಿಸದೆ ಪ್ರತ್ಯೇಕವಾಗಿ ಟೆಂಡರ್ ವ್ಯವಸ್ಥೆ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಇರುವ ಬಹಳಷ್ಟು ಕೆರೆಗಳಿಗೆ ತಡೆಗೋಡೆಗಳು ಇಲ್ಲದ ಪರಿಣಾಮ ಬಸ್ ದುರಂತಗಳು ಹೆಚ್ಚಾಗುತ್ತಿವೆ. ಆದ್ದರಿಂದ ತಡೆಗೋಡೆ ಹಾಕುವಂತ ವ್ಯವಸ್ಥೆ ಆಗಬೇಕು. ಜೊತೆಗೆ ಇಲಾಖೆಯ ಸಿಬ್ಬಂದಿಗೆ ಪ್ರತ್ಯೇಕವಾಗಿ ನಿವೇಶನ ನೀಡುವ ವ್ಯವಸ್ಥೆ ಕಲ್ಪಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಮಾತನಾಡಿ, ಹಾಸನ ವಿಭಾಗದಲ್ಲಿ ಸಾರಿಗೆ ಇಲಾಖೆಯ ಸಾಕಷ್ಟು ಸಮಸ್ಯೆಗಳಿದ್ದು, ಬಸ್‌ಗಳು ದುಸ್ಥಿತಿಯಲ್ಲಿದ್ದು ಅಪಘಾತಕ್ಕೆ ಕಾರಣವಾಗಿವೆ. ಆದ್ದರಿಂದ ಹೊಸ ಬಸ್‌ಗಳನ್ನು ನೀಡುವ ಮೂಲಕ ಅಪಘಾತಗಳ ಸಂಖ್ಯೆ ಕಡಿಮೆಯಾಗುವಂತೆ ಮಾಡಬೇಕು. ಈ ಇಲಾಖೆಯಲ್ಲಿ ಪಾರದರ್ಶಕವಾಗಿ ಅಡಳಿತ ನಡೆಸಬೇಕಾದ ಅನಿವಾರ್ಯತೆ ಇದೆ ಎಂದರು.
ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ, ಜಿಪಂ ಅಧ್ಯಕ್ಷೆ ಅಂಬಿಕಾ ರಾಮಣ್ಣ, ತಾಪಂ ಅಧ್ಯಕ್ಷೆ ರತ್ನ ಹನುಮೇಗೌಡ, ಉಪಾಧ್ಯಕ್ಷ ದೇವೇಗೌಡ, ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement