ಹಸಿರೆಲೆ ಗೊಬ್ಬರದಿಂದ ಮಣ್ಣಿನ ಫಲವತ್ತತೆ ಹೆಚ್ಚಳ
ಸಕಲೇಶಪುರ: ಹಸಿರೆಲೆ ಗೊಬ್ಬರವನ್ನು ಭೂಮಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗಿ ಅಧಿಕ ಇಳವರಿ ಪಡೆಯಬಹುದು ಎಂದು ಪ್ರಗತಿಪರ ಕೃಷಿಕ ಹಂಜಗೋಡನಹಳ್ಳಿ ನರೇಶ್ ಹೇಳಿದ್ದಾರೆ. ತಾಲೂಕಿನ ಹಾನುಬಾಳು ಗ್ರಾಮದಲ್ಲಿ ವಿನಾಯಕ ರೈತಶಕ್ತಿ ಗುಂಪು ಮತ್ತು ಕೃಷಿ ಇಲಾಖೆ ಜಂಟಿಯಾಗಿ ಏರ್ಪಡಿಸಿದ್ದ ಬತ್ತ ಬೆಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿ, ಸೆಣಬು/ ಡಯಾಂಚಾ ಬೆಳೆಯುವುದರಿಂದ ಎಕರೆಗೆ 20 ಟನ್ ಸಾವಯವ ಗೊಬ್ಬರ ಸೇರಿಸಿದಂತಾಗುತ್ತದೆ. ಕಡಿಮೆ ಖರ್ಚಿನಲ್ಲಿ ಯಂತ್ರ ನಾಟಿ ಮಾಡುವ ಮೂಲಕ ಹೆಚ್ಚಿನ ಲಾಭ ಪಡೆಯಬಹುದು ಎಂದರು.
ಸಹಾಯಕ ಕೃಷಿ ನಿರ್ದೇಶಕ ಯೋಗೇಶ್ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ 750 ಎಕರೆ ಪ್ರದೇಶದಲ್ಲಿ ಬತ್ತದ ಗದ್ದೆಗಳನ್ನು ಯಂತ್ರದ ಮೂಲಕ ನಾಟಿ ಮಾಡಿಸಲಾಗಿದೆ. ಯಂತ್ರ ನಾಟಿ ಜತೆಗೆ ಲಘು ಪೋಷಕಾಂಶಗಳಾದ 100 ಕೆಜಿ ಜಿಪ್ಸಂ, 10 ಕೆಜಿ ಜಿಂಕ್, 2.5 ಕೆಜಿ ಬೋರಾನ್ ಬಳಸಿದ ಗದ್ದೆಗಳಲ್ಲಿ ಎಕರೆಗೆ 8-10 ಕ್ವಿಂಟಲ್ ಹೆಚ್ಚಿನ ಇಳವರಿ ಪಡೆಯಬಹುದು ಎಂದರು. ಹಾಸನ ಆಕಾಶವಾಣಿಯ ವಿಜಯ ಅಂಗಡಿ ಮಾತನಾಡಿ, ಮಾಗಿ ಉಳುಮೆ ಮತ್ತು ಸಾವಯವ ಕೃಷಿ ಪದ್ಧತಿಗಳನ್ನು ತಿಳಿಸಿದರು. ಮಣ್ಣಿನಲ್ಲಿ ಕಾಲ್ಸಿಯಂ ಮತ್ತು ಮೆಗ್ನಿಶಿಯಂ ಕೊರತೆ ನೀಗಿಸಲು ಎಕರೆಗೆ 200 ಕೆಜಿ ಡೋಲಮೈಟ್ ಬಳಕೆ ಅತಿ ಮುಖ್ಯ ಎಂದರು. ಹಾನುಬಾಳು ಮತ್ತು ಸುತ್ತಮುತ್ತಲಿನ ರೈತರು ಇದ್ದರು. ಕೃಷಿ ಅಧಿಕಾರಿ ಚೆಲುವರಂಗಪ್ಪ, ಜಿಪಂ ಮಾಜಿ ಸದಸ್ಯ ಕುಮಾರಸ್ವಾಮಿ, ತಾಪಂ ಮಾಜಿ ಸದಸ್ಯ ರಂಗನಾಥ, ಹಾನುಬಾಳು ಗ್ರಾಪಂ ಅಧ್ಯಕ್ಷೆ ಸೋಮಮ್ಮ, ಸದಸ್ಯ ಯೋಗೇಶ್, ರೈತ ಅನುವುಗಾರ ಶಿವದೀಪ್, ಮಂಗಳ, ಯೋಗೇಶ್ ಇತರರು ಇದ್ದರು.