ಅಂಬೇಡ್ಕರ್ ಭವನ ನಿರ್ಮಾಣದಲ್ಲಿ ಅವ್ಯವಹಾರ: ಸಣ್ಣಸ್ವಾಮಿ ಆರೋಪ
ಹಾಸನ: ಸಕಲೇಶಪುರದ ಅಂಬೇಡ್ಕರ್ ಭವನ ನಿರ್ಮಾಣ ಹಾಗೂ ಅಗನಿ ಗುಡ್ಡದ ಸ್ವಾಭಾವಿಕ ಜಲಧಾರೆಯ ಯೋಜನೆಯಲ್ಲಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡುವುದಾಗಿ ಕಾಂಗ್ರೆಸ್ನ ಪರಿಶಿಷ್ಟ ಜಾತಿ ವಿಭಾಗದ ಪ್ರಧಾನ ಕಾರ್ಯದರ್ಶಿ ಡಿ.ಸಿ. ಸಣ್ಣಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಅಂಬೇಡ್ಕರ್ ಭವನಕ್ಕೆ ರು. 80 ಲಕ್ಷಗಳ ಅಂದಾಜು ತಯಾರಿಸಲಾಗಿತ್ತು. ಈಗ ರು. 1.25 ಕೋಟಿಗಳ ಮಾಡಿದ ಕಾಮಗಾರಿಗೆ ಬಿಲ್ ಮಾಡಿ ಹಣ ಪಾವತಿಸುವಂತೆ ಜಿಲ್ಲಾಧಿಕಾರಿಗೆ ಒತ್ತಡ ತಂದಿದ್ದಾರೆ. ಈ ಹಿಂದೆ ಕ್ಷೇತ್ರದ ಶಾಸಕರ ಕೈವಾಡವಿದೆ ಎಂದು ಆರೋಪಿಸಿದರು.
ತಾಲೂಕಿನ ಹಾನಬಾಳು ಗ್ರಾಮಕ್ಕೆ ಅಗನಿ ಗುಡ್ಡದ ಸ್ವಾಭಾವಿಕ ಜಲಧಾರೆಯನ್ನು ಮಂಜೂರು ಮಾಡಿಸಿ ರು. 40 ಲಕ್ಷದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಅಂದಾಜು ತಯಾರಿಸಿ ಕಾಮಗಾರಿಯನ್ನು ನಿರ್ವಹಿಸಲಾಗುತ್ತಿತ್ತು. ಆದರೆ ಮಾಡಿದ ಕಾಮಗಾರಿಗೆ ಮತ್ತೆ ರು. 40 ಲಕ್ಷಗಳ ಬಿಲ್ಲನ್ನು ತಯಾರಿಸಿ ಜಿಲ್ಲಾ ಪಂಚಾಯ್ತಿಗೆ ಕಳುಹಿಸಲಾಗಿದೆ. ಒಟ್ಟು ರು. 80 ಲಕ್ಷಗಳನ್ನು ಈ ಕಾಮಗಾರಿಗೆ ಖರ್ಚು ಮಾಡಿದ್ದೇವೆ ಎಂದು ಸುಳ್ಳು ದಾಖಲಿ ನೀಡಿ ಹಣವನ್ನು ಪಡೆದಿದ್ದಾರೆ ಎಂದು ದೂರಿದರು.
ಸಕಲೇಶಪುರ ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರದಿಂದ ಅತಿವೃಷ್ಟಿಯಿಂದ ಹಾನಿಯಾಗಿರುವುದಕ್ಕೆ ರು. 2 ಕೋಟಿಗಳನ್ನು ಸರ್ಕಾರ ಮಂಜೂರು ಮಾಡಿದೆ. ಈ ಕಾಮಗಾರಿಯನ್ನು ತಮ್ಮ ಹಿಂಬಾಲಕರಿಗೆ ಕೊಡಿಸುವುದರ ಮೂಲಕ ಕಾಮಗಾರಿಯನ್ನೇ ಮಾಡದೆ ಬಿಲ್ ಭರಿಸುವುದಕ್ಕೆ ಅಧಿಕಾರಿಗಳ ಮೇಲೆ ಒತ್ತಡಗಳನ್ನು ಕ್ಷೇತ್ರದ ಶಾಸಕರು ಹಾಕುತ್ತಿದ್ದಾರೆ ಎಂದು ಆರೋಪಿಸಿದ ಅವರು, ಇನ್ನು ಲೋಕೋಪಯೋಗಿ ಇಲಾಖೆಗೆ ಗುಂಡಿ ಮುಚ್ಚುಲು ರು. 1.27 ಕೋಟಿ ಹಾಗೂ ಕಾಡು ಕಡಿಯಲು ರು. 1.08 ಕೋಟಿ ಹಣ ಬಿಡುಗಡೆಯಾಗಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಸ್ತೆ ಅಭಿವೃದ್ಧಿಗೆ ಸುಮಾರು ರು. 88.53 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದು, ಅದನ್ನು ಸಮರ್ಪಕವಾಗಿ ಸಾರ್ವಜನಿಕರ ಕೆಲಸಕ್ಕೆ ಸದ್ಬಳಕೆಯಾಗಬೇಕು. ಈಗಾಗಲೇ ಹಲವು ಅನುದಾನಗಳ ಕಾಮಗಾರಿಗಳು ಕಳಪೆ ಮಟ್ಟದಿಂದ ಕೂಡಿದ್ದು, ಈದರ ಹಿಂದೆ ಕ್ಷೇತ್ರದ ಶಾಸಕರ ಕೈವಾಡವಿದೆ. ಸಕಲೇಶಪುರದ ಅನೆಮಹಲ್ನಿಂದ ಮೂಡಿಗೆರೆ ಗಡಿಯವರೆಗೆ ಜಿಲ್ಲಾ ಉಸ್ತುವಾರಿ ಸಚಿವರು ರು. 6 ಕೋಟಿ ಮಂಜೂರು ಮಾಡಿದ್ದಾರೆ. ಆ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಖಂಡರಾದ ಎಚ್.ಬಿ. ಭಾಸ್ಕರ್, ಕೋಮಾರಯ್ಯ, ಬಿ.ಬಿ.ಸುಂದ್ರಮ್ಮ ಹಾಗೂ ಇತರರು ಇದ್ದರು.