ಅಧಿಕಾರಿಗಳಿಂದ ಹನುಮ ಜಯಂತಿ ಆಚರಣೆ
ಕ.ಪ್ರ.ವಾರ್ತೆ , ರಾಮನಾಥಪುರ , ಡಿ. 18
ಇಲ್ಲಿನ ಪುರಾಣ ಪ್ರಸಿದ್ಧ ಚತುರ್ಯುಗ ಮೂರ್ತಿ ಶ್ರೀ ರಾಮೇಶ್ವರ ಸ್ವಾಮಿ ದೇವಾಲಯದ ಕಾವೇರಿ ನದಿಯಲ್ಲಿ ಮತ್ಸ್ಯಗಳಿರುವ ಮೆಟ್ಟಿಲುಗಳ ಬಳಿ ಇರುವ ಪುರಾತನ ಮಂಟಪ ಹಾಗೂ ಅದರೊಳಗಿರುವ ಅರ್ಧನಾರೀಶ್ವರ ಮತ್ತು ವೀರಾಂಜನೇಯ ಸ್ವಾಮಿಯನ್ನು ಸ್ಥಳೀಯ ಧಾರ್ಮಿಕ ಮನೋಭಾವನೆ ಉಳ್ಳವರ ಸಹಕಾರದಿಂದ ಇತ್ತೀಚೆಗೆ ಬೆಣ್ಣೆ ಅಲಂಕಾರಗಳಿಂದ ರೂಪುಗೊಂಡಿದೆ.
ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ದಂಡಾಧಿಕಾರಿ ಜಗದೀಶ್ ಅವರು ವಿಧಿ- ವಿಧಾನಗಳಿಂದ ಪೂಜಾ ಕೈಂಕರ್ಯ ಸಲ್ಲಿಸುವುದರೊಂದಿಗೆ ಹನುಮ ಜಯಂತಿ ಆಚರಿಸಲಾಯಿತು.
ಬಹಳ ವರ್ಷಗಳ ಹಿಂದೆ ವಿಶೇಷ ಪೂಜೆಯಂದು, ಶ್ರೀ ರಾಮ ಸೀತಾ ಲಕ್ಷ್ಮಣ ಆಂಜನೇಯ ಸಮೇತ ಮೂರ್ತಿಗಳನ್ನು ಪೂಜಿಸಿ ರಾತ್ರಿ ವೇಳೆ ನದಿಯಲ್ಲಿ ತೆಪ್ಪೋತ್ಸವ ನಡೆಸಿ ಈ ಮಂಟಪದಲ್ಲಿ ಉಯ್ಯಾಲೆ ಇರಿಸಿ, ಶ್ರದ್ಧಾ ಭಕ್ತಿಗಳಿಂದ ಪೂಜೆ ಸಲ್ಲಿಸುತ್ತಿದ್ದರೆಂಬ ಪ್ರತೀಕವಿದೆ. ಇಂದಿಗೂ ಈ ಮಂಟಪದಲ್ಲಿ ಉಯ್ಯಾಲೆಗೆ ಬಳಸುವ ಸರಳುಗಳನ್ನು ನೇತು ಹಾಕುವ ಕಬ್ಬಿಣದ ಕೊಂಡಿಗಳಿವೆ.
ಪ್ರಕೃತಿಯ ಹೊಡೆತಕ್ಕೆ ಸಿಲುಕಿ ಈ ಮಂಟಪದಲ್ಲಿ ಸರಿಯಾಗಿ ಪೂಜೆ ಕೈಂಕರ್ಯಗಳಿಲ್ಲದೆ ಹಾಳು ಮಂಟಪವಾಯಿತು. ಈ ಮಂಟಪದ ವಿಶೇಷವೇನೆಂದರೆ, ಇಲ್ಲಿನ ಒಳಭಾಗದಲ್ಲಿರುವ ಅರ್ಧ ನಾರೀಶ್ವರನ ಎರಡು ಲಿಂಗಗಳನ್ನು ಹೊಂದಿಕೊಂಡಂತೆ ಬಸವನನ್ನು ಚಿತ್ರಿಸಲಾಗಿದೆ ಹಾಗೂ ಇಲ್ಲಿರುವ ಆಂಜನೇಯ ಶಿಲಾ ಪ್ರತಿಮೆ ದಕ್ಷಿಣಾಭಿಮುಖವಾಗಿದ್ದು, ಇದರಲ್ಲಿ ಸೂರ್ಯ, ಚಂದ್ರ, ಶಂಖಚಕ್ರ ಕಾಣಬಹುದು.
ಪ್ರತಿಮೆಯ ಕಾಲ ಕೆಳಭಾಗದಲ್ಲಿ ರಕ್ಕಸನು ಇರುವುದರಿಂದ ಈ ಸ್ವಾಮಿಗೆ ವೀರಾಂಜನೇಯ ಎಂಬ ನಾಮಾಂಕಿತಗೊಂಡಿರುವ ಪ್ರತೀತಿ. ಈಗ ಸ್ಥಳೀಯರ ಧಾರ್ಮಿಕ ಮನೋಭಾವನೆಯಿಂದ ಬೆಣ್ಣೆ ಅಲಂಕಾರಗಳಿಂದ ರೂಪು ಪಡೆಯಲು ಸ್ಥಳೀಯ ಜನಪ್ರತಿನಿಧಿಗಳು ಮತ್ತು ತಾಲೂಕು ದಂಡಾಧಿಕಾರಿ ಸಹಕರಿಸಿದ್ದು, ಯಾತ್ರಾರ್ಥಿಗಳ ಪ್ರಶಂಸೆಗೆ ಪಾತ್ರವಾಗಿದೆ.
ಇತ್ತೀಚಿನ ದಿನಗಳಲ್ಲಿ ಕೆಲವು ಕಿಡಿಗೇಡಿಗಳು ವಾಮಾಚಾರಕ್ಕೆ ಸಂಬಂಧಪಟ್ಟಂತೆ ಹೋಮ ಹವನ ಇತ್ಯಾದಿಗಳನ್ನು ಈ ಮಂಟಪದಲ್ಲೇ ಕೈಗೊಳ್ಳುತ್ತಿದ್ದು, ಇದರಿಂದ ಬರುವ ಯಾತ್ರಾರ್ಥಿಗಳಿಗೆ ಕಿರಿಕಿರಿ ಉಂಟಾಗುತ್ತಿದೆ.
ಇದನ್ನು ತಡೆಗಟ್ಟಲು ಮಂಟಪದ ಸುತ್ತ ಕಬ್ಬಿಣದ ಸರಳುಗಳನ್ನು ಅಳವಡಿಸಿ ಈ ಮಂಟಪದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಸ್ಥಳೀಯ ಪಂಚಾಯ್ತಿ ಸದಸ್ಯರಾದ ಲಲಿತಾ ಕುಮಾರ್ ತಿಳಿಸಿದರು.
ತಹಸೀಲ್ದಾರ್ ಜಗದೀಶ್ ಅವರು ಈ ಮಂಟಪದಲ್ಲಿ ಇನ್ನು ಮುಂದೆ ಹೋಮ ಹವನಾದಿ ವಾಮಾಚಾರಗಳನ್ನು ಕೈಗೊಳ್ಳುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಲ್ಲಿಯೇ ಇದ್ದ ಅಧಿಕಾರಿಗಳಿಗೆ ಆದೇಶಿಸಿದರು. ನಂತರ ಮಂಟಪದ ಸ್ವಚ್ಛಗೆ ಕಬ್ಬಿಣದ ಸರಳುಗಳನ್ನು ಶೀಘ್ರದಲ್ಲೇ ನಿರ್ಮಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ರಾಮನಾಥಪುರ ರಾಜಸ್ವ ನಿರೀಕ್ಷಕ ಅಂಜನಪ್ಪ, ಗ್ರಾಮ ಲೆಕ್ಕಿಗ ಧರ್ಮೇಶ್, ಕೊಣನೂರು ರಾಜಸ್ವ ನಿರೀಕ್ಷಕ ಸೋಮಣ್ಣ ಸ್ಥಳೀಯರಾದ ಗಣೇಶ್, ಸುಬ್ರಹ್ಮಣ್ಯ, ನಾಗರಾಜ್, ಕೋಳಿ ಸಿದ್ದಯ್ಯ ಇದ್ದರು.