ಕನ್ನಡ ರಾಷ್ಟ್ರಭಾಷೆ ಆಗಬಾರದೇಕೆ ?
ಕ.ಪ್ರ. ವಾರ್ತೆ , ಅರಸೀಕೆರೆ , ಡಿ. 18
620 ವರ್ಷಗಳ ಇತಿಹಾಸವಿರುವ ಹಿಂದಿ ರಾಷ್ಟ್ರೀಯ ಭಾಷೆಯಾದರೆ 2000 ವರ್ಷಗಳ ಇತಿಹಾಸಮೊಂದಿರುವ ಕನ್ನಡ ಭಾಷೆ ರಾಷ್ಟ್ರೀಯ ಭಾಷೆ ಏಕಾಗಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಪ್ರಶ್ನಿಸಿದರು.
ಪಟ್ಟಣದಲ್ಲಿ ಬುಧವಾರ ನಡೆದದ್ದ ಕರವೇ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿ ರಾಷ್ಟ್ರೀಯ ಭಾಷೆಯೆಂದು ಯಾವುದೇ ದಾಖಲೆಗಳಿಲ್ಲ. ಶಿಕ್ಷಕರು ವಿದ್ಯಾರ್ಥಿಗಳಿಗೆ ಸುಳ್ಳು ಹೇಳಿ ಹಿಂದಿಯನ್ನು ಎರಡನೇ ಭಾಷೆಯಾಗಿ ಶಿಕ್ಷಣದಲ್ಲಿ ಕಲಿಸುತ್ತಿದ್ದಾರೆ. ಆದರೆ ನಾಳೆ ಪ್ರತಿಭಾವಂತರು ಹಿಂದಿ ರಾಷ್ಟ್ರ ಭಾಷೆ ಎಂಬುದಕ್ಕೆ ಯಾವ ದಾಖಲೆ ಇದೆ ಎಂದು ಪ್ರಶ್ನಿಸಿದರೆ ಉತ್ತರ ನೀಡಲು ಸಾಧ್ಯವೇ ? ಎಂದು ಪ್ರಶ್ನಿಸಿದರು.
ಅಸಮಾಧಾನ: ನಂತರ, ಮಾತು ಮುಂದುವರಿಸಿದ ಅವರು, ಮೇವು ಹಗರಣದ ರೂವಾರಿ ಲಾಲು ಪ್ರಸಾದ್ ಯಾದವ್ ಜೈಲು ಸೇರಿ ಹೊರಬಂದರೂ ಅವರು ರಾಷ್ಟ್ರೀಯ ನಾಯಕರಾಗುತ್ತಾರೆ. ಆದರೆ ಮಾಜಿ ಹೆಚ್.ಡಿ. ದೇವೇಗೌಡ ಅವರಂತಹ ರಾಜಕಾರಣಿ ರಾಷ್ಟ್ರೀಯ ರಾಜಕಾರಣಿ ಎಂದು ಹಿಂದಿ ಮಾತನಾಡುವ ಜನರು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೋರಾಟ: ಇಂದು ಬೃಹದಾಕಾರವಾಗಿ ಬೆಳೆದು ವಿಶ್ವದ 22 ದೇಶಗಳಲ್ಲಿ 62 ಲಕ್ಷಕ್ಕೂ ಹೆಚ್ಚು ಜನರ ಸದಸ್ಯತ್ವವನ್ನು ಹೊಂದಿ ಕನ್ನಡ ನಾಡು-ನುಡಿ, ನೆಲ-ಜಲ ರಕ್ಷಣೆಗಾಗಿ ಪಣತೊಟ್ಟು ಹೋರಾಟ ನಡೆಸುತ್ತಿದ್ದೇವೆಂದು ವಿವರಿಸಿದರು.
ಕನ್ನಡ ನಾಡು ಖನಿಜ ಸಂಪತ್ತು, ಅರಣ್ಯ ಸಂಪತ್ತು, ಭಾಷಾ ಸಂಪತ್ತುಗಳನ್ನು ಹೊಂದಿರುವ ಸಮೃದ್ಧ ನಾಡು ಇಲ್ಲಿ ಮಹಾಪುರುಷರು, ಸಿದ್ಧರು, ವೀರಯೋಧರು ಜನಿಸಿದ ಪುಣ್ಯಭೂಮಿ. ಅಂತಹ ನಾಡಲ್ಲಿ ಹುಟ್ಟಿದ ನಾವು ಧನ್ಯರು. ವಿಶ್ವದ ಯಾವುದೇ ಭಾಷೆಯಲ್ಲಿ ವಚನ ಸಾಹಿತ್ಯ, ದಾಸ ಸಾಹಿತ್ಯಗಳಿವೆ ಎಂದರೆ ಅದು ಕನ್ನಡದಲ್ಲಿ ಮಾತ್ರ ಎಂದು ಬಣ್ಣಿಸಿದರು.
ಮಹನೀಯರ ಹೆಸರಿಡಿ: ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಹೆಸರಿಟ್ಟಂತೆ ರಾಜ್ಯದ ಮೈಸೂರು, ಬೆಳಗಾವಿ, ಮಂಗಳೂರು ಸೇರಿದಂತೆ ಪ್ರಮುಖ ಪಟ್ಟಣಗಳ ವಿಮಾನ ನಿಲ್ದಾಣಗಳಿಗೆ ನಾಡು- ನುಡಿ ಸೇವೆ ಸಲ್ಲಿಸಿದ ಮಹನೀಯರುಗಳ ಹೆಸರಿಡಬೇಕೆಂದು ಒತ್ತಾಯಿಸಿದ ಅವರು ಪು.ತಿ.ನ, ಮಾಸ್ತಿ, ಬೇಂದ್ರೆ ಮುಂತಾದ ಕವಿಗಳ ಮಾತೃಭಾಷೆ ಬೇರೆಯದ್ದೇ ಆಗಿದ್ದರೂ ಕನ್ನಡ ಭಾಷೆಯನ್ನು ಒಪ್ಪಿ ಅಪ್ಪಿ ನಮ್ಮೆಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆಂದು ಬಣ್ಣಿಸಿದರು.
ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಕನ್ನಡ ನಾಡು- ನುಡಿ ರಕ್ಷಣೆಗಾಗಿ ಹೋರಾಟ ನಡೆಸುತ್ತಿರುವ ಟಿ.ಎ. ನಾರಾಯಣಗೌಡರಿಗೆ ನಾಡಿನ ಬಗ್ಗೆ ಇರುವ ಕಾಳಜಿ ಅಭಿನಂದನಾರ್ಹ. ಆದರೆ ರಾಜ್ಯದ ಜಲಸಂಪತ್ತು ಅನ್ಯ ರಾಜ್ಯಗಳ ಪಾಲಾಗುತ್ತಿದೆ. ಈ ಬಗ್ಗೆ ಹೋರಾಟ ನಡೆಸುವ ಅಗತ್ಯವಿದೆ ಎಂದು ಮನವಿ ಮಾಡಿದರು.
ವಿಫಲ: ಕೃಷ್ಣ ಅಣೆಕಟ್ಟಿನ ಮೂಲಕ 736 ಟಿ.ಎಂ.ಸಿ. ನೀರನ್ನು ರಾಜ್ಯ ಬಳಕೆಮಾಡಿಕೊಳ್ಳಬಹುದೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದರೆ ರಾಜ್ಯ ಸರ್ಕಾರ ಇನ್ನೂ 300 ಟಿ.ಎಂ.ಸಿ. ನೀರನ್ನು ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಇದನ್ನು ಸಮರ್ಥವಾಗಿ ಬಳಸಿಕೊಂಡ ಆಂಧ್ರ ಸರ್ಕಾರ ಅಣೆಕಟ್ಟನ್ನು ನಿರ್ಮಿಸಿ ನೀರನ್ನು ಬಳಸಿಕೊಳ್ಳುತ್ತಿದೆ. ಅದೇ ರೀತಿ ಮಹದಾಯಿ ಯೋಜನೆಯ ಮೂಲಕ ಆಲಮಟ್ಟಿ ಜಲಾಶಯದ ನೀರನ್ನು ಗೋವಾ ರಾಜ್ಯಕ್ಕೆ ಮೀನು ಸಾಗಾಣಿಕೆಗಾಗಿ ಹರಿಸಲಾಗುತ್ತಿದೆ. ಆದರೆ, ಆಲಮಟ್ಟಿ ಜಲಾಶಯದ ಸುತ್ತಮುತ್ತ ಇರುವ ಉತ್ತರ ಕರ್ನಾಟಕದ ಜನ ಕುಡಿಯಲು ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಅಲ್ಲಿನ ಜನರ ಸಮಸ್ಯೆಯನ್ನು ನಿರ್ಮಾಣ ಮಾಡುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ವಿಷಾದಿಸಿದರು.
ಗುಳೇ ಹೋಗುವ ಪರಿಸ್ಥಿತಿ: ರಾಜ್ಯದ ಕೆಲ ಭಾಗಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಈ ಸಮಸ್ಯೆ ನಿವಾರಣೆಗೆ ಪಕ್ಷಭೇದ ಮರೆತು ಹೋರಾಟ ನಡೆಸುವ ಅಗತ್ಯವಿದೆ. ಅರಸೀಕೆರೆ ಕ್ಷೇತ್ರ ಸತತ ಬರಗಾಲ ಎದುರಿಸುತ್ತಿದ್ದು ಕಲ್ಪತರು ನಾಡು ಎಂದು ಹೆಸರಾಗಿದ್ದ ಇಲ್ಲಿ ತೆಂಗಿನ ಬೆಳೆ ಇಲ್ಲಿ ಸಂಪೂರ್ಣ ನಾಶವಾಗಿ ರೈತರ ಆರ್ಥಿಕ ಪರಿಸ್ಥಿತಿ ದುಸ್ಥಿತಿ ತಲುಪಿದ್ದು ಮಳೆಯ ಅಭಾವದಿಂದ ರೈತರು ಬೆಳೆದ ಬೆಳಗಳು ಮೇಲೇಳದೇ ಸಂಕಷ್ಟಕ್ಕೆ ಸಿಲುಕಿಸಿದ್ದು ಇದೇ ಪರಿಸ್ಥಿತಿ ಮುಂದುವರಿದರೆ ಇಲ್ಲಿನ ಜನರು ನೀರಿಗಾಗಿ ಗುಳೇ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಮುಖರಿಗೆ ಸನ್ಮಾನ: ಈ ಸಮಸ್ಯೆಯನ್ನು ಪರಿಹರಿಸಲು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕೆರೆ-ಕೆರೆಗಳಿಗೆ ನೀರು ಹರಿಸುವ ಅಗತ್ಯವಿದೆ. ಸರ್ಕಾರ ಯಾವುದೇ ನದಿ ಮೂಲದಿಂದಲಾದರೂ ನೀರು ಹರಿಸಬೇಕೆಂದು ಒತ್ತಾಯಿಸಿ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು. ಅದಕ್ಕೆ ಟ.ಎ. ನಾರಾಯಣಗೌಡರ ಹುಟ್ಟಿದ ಊರಿನ ಋಣ ತೀರಿಸಲು ಹೋರಾಟಕ್ಕೆ ಧುಮುಕಬೇಕೆಂದು ಕರೆ ನೀಡಿದ ಅವರು ಇಲ್ಲಿನ ಸಂಘಟನೆಗಳ ಮುಖಂಡರು ಕೂಡ ಇದಕ್ಕೆ ಸಂಪೂರ್ಣ ಬೆಂಬಲ ನೀಡಿ ಹೋರಾಟಕ್ಕೆ ಸಜ್ಜಾಗಬೇಕೆಂದು ಮನವಿ ಮಾಡಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಪ್ರಮುಖರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೂಡಲಸಂಗಮ ಮಠದ ಮೃತ್ಯುಂಜಯ ಸ್ವಾಮೀಜಿ, ಕಾಗಿನೆಲೆ ಮಠದ ಶಿವಾನಂದಪುರಿ ಸ್ವಾಮೀಜಿ, ಪುರಸಭಾಧ್ಯಕ್ಷ ಮೋಹನ್ ಕುಮಾರ್, ಚಿತ್ರನಟಿ ಅಶ್ವಿನಿ, ಮಾಜಿ ಶಾಸಕ ಎ.ಎಸ್. ಬಸವರಾಜ್, ತಾ.ಪಂ. ಅಧ್ಯಕ್ಷ ಹೆಚ್.ಟಿ. ಶಿವಮೂರ್ತಿ, ಎ.ಪಿ.ಎಂ.ಸಿ. ಅಧ್ಯಕ್ಷ ಅಜ್ಜಪ್ಪ, ಕರವೇ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ತಾಯಿ ಭುವನೇಶ್ವರಿ ದೇವಿಯ ಮೆರವಣಿಗೆಯನ್ನು ಪಟ್ಟಣದ ವಿವಿಧ ಬೀದಿಗಳಲ್ಲಿ ನಡೆಸಿದರು.