ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾಲುಬಾಯಿ ರೋಗ ಭೀತಿ ನಡುವೆಯೇ ದನಗಳ ಸಂತೆ

Vishwanath S
Updated On : 19 Dec 2013, 12:39 pm

ಕ.ಪ್ರ.ವಾರ್ತೆ ,  ರಾಮನಾಥಪುರ ,  ಡಿ. 18
ಕಾಲು ಬಾಯಿ ಜ್ವರದ ಭೀತಿಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಕ್ಕಾಗಿ ಜಿಲ್ಲೆಯ ಬಹುತೇಕ ಕಡೆ ಸಂತೆ ಹಾಗೂ ಜಾತ್ರೆಯಲ್ಲಿ ದನಗಳು ಸೇರುವುದು ಮತ್ತು ಮಾರಾಟವನ್ನು ಜಿಲ್ಲಾಧಿಕಾರಿಗಳು ನಿಷೇಧಿಸಿದ್ದರೂ, ರಾಮನಾಥಪುರದಲ್ಲಿ ಇತ್ತೀಚೆಗೆ ನಡೆದ ಸಂತೆಯಲ್ಲಿ ನಿಗದಿತ ಪ್ರಮಾಣಕ್ಕೂ ಮೀರಿ ಹೆಚ್ಚಿನ ದನಗಳು ಸೇರಿದ್ದವು.  
ಆದೇಶಕ್ಕೆ ಕಿಮ್ಮತ್ತಿಲ್ಲ: ಆದರೆ, ಇಲ್ಲಿನ ಗ್ರಾಮಪಂಚಾಯ್ತಿ ಸಂತೆಗೆ ದನಗಳು ಸೇರುವುದನ್ನು ತಡೆಯಲು ನಿರ್ಲಕ್ಷ್ಯ ತೋರಿ ಜೊತೆಗೆ ಸಂತೆಗೆ ಬರುವ ರೈತರಿಗೆ ಕಾಲುಬಾಯಿ ಜ್ವರದ ಮುನ್ನೆಚ್ಚರಿಕೆ ಕುರಿತು ಯಾವ ಪ್ರಚಾರವನ್ನೂ ಕೈಗೊಳ್ಳದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಜಿಲ್ಲಾಧಿಕಾರಿಗಳ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ.  
ಇಲ್ಲಿನ ಸೋಮವಾರ ಸಂತೆಗೆ ಬೆಳಗಿನ ಜಾವ 5 ಗಂಟೆಯಿಂದ ಸೇರುವ ದನಗಳೊಂದಿಗೆ ಬರುವ ರೈತರು ತಮಗೆ ಸರಿಯಾದ ಬೆಲೆ ದೊರಕದೇ ಹೋದಾಗ ಕೆಲವರು ತಮ್ಮ ದನಗಳೊಂದಿಗೆ ಮನೆಗೆ ಮರಳುವರು.  
ಆದರೆ, ಸಂತೆಗೆ ಬಂದಿರುವ ದನಗಳ ಪೈಕಿ ಯಾವುದಾದರೂ ಒಂದು ಅಥವಾ ಎರಡು ಮಾರಕ ರೋಗ ದನಗಳಲ್ಲಿ ಕಾಲುಬಾಯಿ ಜ್ವರ ಇತ್ತೆಂದರೆ ಸಾಕು ಮಿಕ್ಕುಳಿದ ದನಗಳಲ್ಲಿ ಈ ರೋಗ ಹರಡಲು ಹೆಚ್ಚು ಸಮಯ ಬೇಕಿಲ್ಲ.  ಈ ರೋಗ ಕೆಲವು ದನಗಳಿಗೆ ತಕ್ಷಣ ಪರಿಣಾಮ ಬೀರಿದರೆ ಮತ್ತೆ ಕೆಲವು ದನಗಳಿಗೆ ನಿಧಾನವಾಗಿ ಸಂಪೂರ್ಣ ಆವರಿಸಿದ ನಂತರ ಅವಘಡ ಹೊಂದುತ್ತವೆ.  ಈಗಿನ ದುಬಾರಿ ಪಶು ಆಹಾರ ಖರೀದಿಸಿ ವರ್ಷಾನುಗಟ್ಟಲೆ ಸಾಕಿ ಬೆಳೆಸಿ ಹೆಚ್ಚು ಲಾಭ ಪಡೆಯಲು ಹಂಬಲಿಸುವ ರೈತರಿಗೆ ಈ ಕಾಲುಬಾಯಿ ಜ್ವರ ಒಂದು ದೊಡ್ಡ ಮಾರಕ ರೋಗವಾಗಿ ಪರಿಣಮಿಸಿದೆ.  
ಹತೋಟಿಗೆ ತರಬಹುದು: ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಜಿಲ್ಲೆಯ ಹಾಗೂ ತಾಲೂಕಿನ ಎಲ್ಲಾ ಕೇಂದ್ರಗಳಲ್ಲಿ ನುರಿತ ತಜ್ಞ ಪಶುವೈದ್ಯರುಗಳ ನಿಯೋಗದೊಂದಿಗೆ ಉಚಿತ ಪಶು ತಪಾಸಣಾ ಶಿಬಿರವನ್ನು ಏರ್ಪಡಿಸುವುದರಿಂದ ಮತ್ತು ಆರಂಭದಲ್ಲೇ ಈ ರೋಗ ತಡೆಗಟ್ಟುವ ಮುನ್ನೆಚ್ಚರಿಕೆ ವಿಧಾನದ ಕುರಿತು ಹೆಚ್ಚು ಪ್ರಚಾರ ಕೈಗೊಳ್ಳುವುದರಿಂದ ಕಾಲುಬಾಯಿ ಜ್ವರದ ರೋಗವನ್ನು ತಕ್ಕಮಟ್ಟಿಗೆ ಹತೋಟಿಗೆ ತರಲು ಸಾಧ್ಯವಾಗಬಹುದು.
ಇನ್ನು ಮುಂದಾದರೂ ರೈತರ ಹಿತದೃಷ್ಟಿಯಿಂದ ಸ್ಥಳೀಯ ಜನಪ್ರತಿನಿಧಿಗಳು ಸಂಬಂಧಿಸಿದ ಹಿರಿಯ ಅಧಿಕಾರಿಗಳು ಸರಿಯಾದ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹೆಚ್.ಇ. ಜಗದೀಶ್ ಆಗ್ರಹಿಸಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement