ಜನ ಸಮೂಹದ ಸಾಮೀಪ್ಯಕ್ಕೆ ಒಕ್ಕಲಿಗರ ಸಂಘ: ಶಾಸಕ ಬಾಲಕೃಷ್ಣ
ಬೇಲೂರು: ಬೆಂಗಳೂರಿಗೆ ಸೀಮಿತವಾಗಿದ್ದ ರಾಜ್ಯ ಒಕ್ಕಲಿಗರ ಸಂಘವನ್ನು ಸದಸ್ಯತ್ವ ಅಭಿಯಾನದ ಮೂಲಕ ಸಮುದಾಯ ಜನರ ಹತ್ತಿರ ತಂದಿದ್ದು, 3 ಲಕ್ಷಕ್ಕೂ ಹೆಚ್ಚು ಜನರನ್ನು ಸಂಘಕ್ಕೆ ನೋಂದಾಯಿಸಲಾಗಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೆ ಸ್ಪರ್ಧಿಸಿರುವ ಚನ್ನರಾಯಪಟ್ಟಣದ ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
3 ಲಕ್ಷ ಸದಸ್ಯತ್ವ: ರಾಜ್ಯ ಒಕ್ಕಲಿಗರ ಸಂಘದ ಸದಸ್ಯತ್ವ ಕೇವಲ 4ರಿಂದ 5 ಜಿಲ್ಲೆಗೆ ಸೀಮಿತವಾಗಿ ಕೆಲವರ ಹಿಡಿತದಲ್ಲಿತ್ತು. ಆದರೆ ತಾವು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾಗಿ, ವೈದ್ಯಕೀಯ ವಿಭಾಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಪಾರದರ್ಶಕ ನೋಂದಣಿಗೆ ಅವಕಾಶ ನೀಡಿ 3 ಲಕ್ಷ ಮಂದಿಗೆ ಸದಸ್ಯತ್ವ ನೀಡಲಾಗಿದೆ ಎಂದರು.
ಮಾಹಿತಿ: ಹಾಸನ ಜಿಲ್ಲೆಯಲ್ಲಿ 25 ಸಾವಿರ ಮತದಾರರಿದ್ದು, ಬೇಲೂರು ತಾಲೂಕಿನಲ್ಲಿ 1650 ಮತದಾರರಿದ್ದಾರೆ. ಒಟ್ಟು ರಾಜ್ಯದಲ್ಲಿ 3 ಲಕ್ಷ ಮಂದಿ ತಲಾ ಒಂದೂವರೆ ಸಾವಿರ ರು. ಹಣ ಕಟ್ಟಿ ತಮ್ಮ ಸದಸ್ಯತ್ವವನ್ನು ನೊಂದಣಿ ಮಾಡಿಸಿದ್ದು, ಆ ಹಣವನ್ನು ಸಿಂಟಿಕೇಟ್ ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದು ಅದರಲ್ಲಿ ಬರುತ್ತಿರುವ ಬಡ್ಡಿಯಿಂದ ಪ್ರತಿವರ್ಷ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಆದ್ಯತೆ ಮೇರೆಗೆ ಉಚಿತ ಹಾಸ್ಟೆಲ್ ನಿರ್ಮಾಣ ಮಾಡಲಾಗುತ್ತಿದ್ದು, ಪ್ರಾರಂಭಿಕವಾಗಿ ಮೈಸೂರ, ಹಾಸನ, ತುಮಕೂರು ಹಾಗೂ ಬೆಂಗಳೂರಿನಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂಬ ಮಾಹಿತಿ ನೀಡಿದರು.