ದುರಸ್ತಿ ಕಾಣದ ರಸ್ತೆಗಳಿಗೆ ಮುಕ್ತಿ ಎಂದು?
ಕ.ಪ್ರ.ವಾರ್ತೆ , ಸಕಲೇಶಪುರ , ಡಿ. 18
ತಾಲೂಕಿನ ಬಹುತೇಕ ರಸ್ತೆಗಳು ಹೊಂಡದಿಂದ ತುಂಬಿಹೋಗಿದ್ದು, ವಾಹನಗಳ ಸುಗಮ ಸಂಚಾರ ಅಸಾಧ್ಯವಾಗಿದೆ.
ತಾಲೂಕಿನಲ್ಲಿ 749 ಕಿಮೀ ಜಿಲ್ಲಾ ಪಂಚಾಯ್ತಿಗೆ ಸೇರಿದ ರಸ್ತೆಗಳಿದ್ದರೆ, ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿರುವ 189 ಕಿ.ಮೀ.ಗಳಷ್ಟು ರಸ್ತೆ ರಾಜ್ಯ ಹೆದ್ದಾರಿ, 371 ಕಿ.ಮೀ.ಗಳಷ್ಟು ರಸ್ತೆ ಜಿಲ್ಲಾ ಮುಖ್ಯ ರಸ್ತೆಗಳಿದ್ದು (ಎಂ.ಡಿ.ಆರ್), ಈ ಬಹುತೇಕ ರಸ್ತೆಗಳು ದುಸ್ಥಿತಿಗೆ ಈಡಾಗಿವೆ.
ಬಿರಡಹಳ್ಳಿ- ಬ್ಯಾಕರವಳ್ಳಿ ಮಾರ್ಗವಾಗಿ ಸೋಮವಾರಪೇಟೆ ಸಂಪರ್ಕಿಸುವ 45 ರಾಜ್ಯ ಹೆದ್ದಾರಿ ಗುಂಡಿಯಿಂದಲೇ ತುಂಬಿ ಹೋಗಿದ್ದರೆ, ಬೈಂದೂರು- ವಿರಾಜಪೇಟೆ ಸಂಪರ್ಕಿಸುವ ಸುಮಾರು 40 ಕಿ.ಮೀ. ರಸ್ತೆಯಲ್ಲಿ ವಾಹನ ಸಂಚರ ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ಜನ್ನಾಪುರ- ವಣಗೂರು ರಾಜ್ಯ ಹೆದ್ದಾರಿಯಲ್ಲಿ ಹೊಂಡಗಳದ್ದೇ ಸಾಮ್ರಾಜ್ಯ, ಬಿಸ್ಲೆ ಸುಬ್ರಮಣ್ಯ ರಸ್ತೆಯಲ್ಲಿ ಡಾಂಬರ್ ಕಿತ್ತುಹೋಗಿದ್ದರೂ ದುರಸ್ತಿ ಕಾಣದಾಗಿದೆ. ಜಿಲ್ಲಾ ಮುಖ್ಯರಸ್ತೆಗಳಲ್ಲೂ ಸಹ ಗುಂಡಿಗಳದ್ದೇ ಸಾಮ್ರಾಜ್ಯ, ಜಿಪಂ ಸೇರುವ 749 ಕಿ.ಮೀ. ರಸ್ತೆಯಲ್ಲಿ ಶೇ. 90ರಷ್ಟು ರಸ್ತೆಗಳು ದುಸ್ಥಿತಿಯಿಂದ ಕೂಡಿವೆ.
ಶಾಸಕರು ಹೇಳೋದೇನು?: ರಸ್ತೆ ದುಸ್ಥಿತಿಯ ಬಗ್ಗೆ ಮಾತನಾಡುವ ಶಾಸಕ ಎಚ್.ಕೆ. ಕುಮಾರಸ್ವಾಮಿ ಅವರು, ಕ್ಷೇತ್ರದ ವಿಸ್ತೀರ್ಣ ತೀರಾ ದೊಡ್ಡದಿದ್ದು ಸರ್ಕಾರ ನೀಡುವ ಅನುದಾನ ಕಡಿಮೆ ಇದೆ. ಸರ್ಕಾರ ಅನುದಾನ ನೀಡುವಾಗ ಕ್ಷೇತ್ರದ ವಿಸ್ತೀರ್ಣವನ್ನು ಗಮನದಲ್ಲಿಟ್ಟುಕೊಂಡು ಹಣ ನೀಡಿದರೆ ಉತ್ತಮ ರಸ್ತೆಗಳ ನಿರ್ಮಾಣ ಸಾಧ್ಯ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಮಂತ್ರಿಗಳೊಂದಿಗೆ ಮಾತನಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ, ಮಲೆನಾಡ ಪ್ರದೇಶಗಳಿಗೆ ಪ್ರತಿವರ್ಷ ರಸ್ತೆ ಅಭಿವೃದ್ಧಿಗಾಗಿ ವಿಶೇಷ ಅನುದಾನ ಮೀಸಲಿಡುವಂತೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜವಾಗಿಲ್ಲ ಎನ್ನುತ್ತಾರೆ.