ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನ್ಯಾಯ: ದೇಜಗೌ

Vishwanath S
Updated On : 19 Dec 2013, 12:39 pm

ಅರಸೀಕೆರೆ: ಕರ್ನಾಟಕ ವೃತ್ತಿಪರ ಶಿಕ್ಷಣ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಕನ್ನಡನಾಡಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವೈದಕೀಯ ಮತ್ತು ಇಂಜಿನೀಯರಿಂಗ್ ಶಿಕ್ಷಣಗಳು ಮರೀಚಿಕೆಯನ್ನಾಗಿ ಮಾಡಲಾಗುತ್ತಿದೆ ಎಂದು ಹಿರಿಯ ಸಾಹಿತಿ ನಾಡೋಜ ಡಾ. ದೇ ಜವರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಸಮಾವೇಶ ಮತ್ತು ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಅಂಗವಾಗಿ ಪಟ್ಟಣದ ಕುವೆಂಪು ವೃತ್ತದಲ್ಲಿ ಮಂಗಳವಾರ ರಾತ್ರಿ ನಡೆದ ಸಮಾರಂಭದ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಿಇಟಿ ಕಾಯ್ದೆ ಬಗ್ಗೆ ನ್ಯಾಯ ಸಮ್ಮತ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಆಗ್ರಹಿಸಿದರು.  
ರಾಜ್ಯ ಸರ್ಕಾರ ಈ ಕಾಯ್ದೆ ಜಾರಿಗೊಳಿಸುವ ಮೂಲಕ ಪ್ರಸ್ತುತ ಸರ್ಕಾರಿ ಅಧೀನದಲ್ಲಿನ ಶೇ.45 ಇಂಜಿನಿಯರಿಂಗ್, ಶೇ. 40ರಷ್ಟು ದಂತ ವೈದಕೀಯ ಹಾಗೂ ಶೇ.35 ರಷ್ಟು ಪ್ರಮಾಣದ ವೈದ್ಯಕೀಯ ಸೀಟುಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಿಗೆ ವರದಾನವಾಗುತ್ತಿದೆ ಎಂದು ವಿಷಾದಿಸಿದರು.
ಅವುಗಳನ್ನು ಕರ್ನಾಟಕದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡದೆ, ಹೆಚ್ಚಿನ ಹಣವನ್ನು ನೀಡುವ ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾರಾಟ ಮಾಡಿಕೊಳ್ಳಲು ರಾಜ್ಯ ಸರ್ಕಾರ ಅಧಿಕೃತ ಪರವಾನಗಿ ನೀಡಿದಂತೆ ಆಗುವ ಕಾರಣ ಮುಂದಿನ ದಿನಗಳಲ್ಲಿ ವೈದಕೀಯ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಖಾಸಗಿ ಶಿಕ್ಷಣ ಸಂಸ್ಥೆಯ ಕಾಲೇಜಿನಲ್ಲಿ ಸೀಟು ಪಡೆಯಲು ಒಂದುವರೆ ಕೋಟಿ ರು.ಗಳನ್ನು ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಆಗ್ರಹ: ಜನಸಾಮಾನ್ಯರ ಮಕ್ಕಳಿಗೆ ವೈದಕೀಯ ಮತ್ತು ಇಂಜಿನೀಯರಿಂಗ್ ವಿದ್ಯಾಭ್ಯಾಸ ಎಂಬುವುದು ಗಗನ ಕುಸುಮವಾಗುತ್ತದೆ. ಆದ್ದರಿಂದ ಬಡವರ್ಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.
ಕನ್ನಡನಾಡು, ನುಡಿಯ ಸಮಸ್ಯೆಗಳೊಂದಿಗೆ ಇಲ್ಲಿನ ಶ್ರೀಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯದ ಕ.ರ.ವೇ ಸಂಘಟನೆ ಜನಪರ ಹೋರಾಟಗಳನ್ನು ಸಂಘಟಿಸಬೇಕೆಂದು ಕರೆ ನೀಡಿದರು.
ಕನ್ನಡದ ಶ್ಲಾಘನೆ: ಜಗತ್ತಿನ ಅನೇಕ ಸಂಸ್ಕತಿಯಲ್ಲಿ ಭಾರತದ ಸಂಸ್ಕೃತಿಯು ಮಾತೃಸ್ಥಾನದಲ್ಲಿದೆ. ಆದರಲ್ಲೂ ಕರ್ನಾಟಕದ ಹಿರಿಮೆ ಅತ್ಯಂತ ಅಗ್ರಸ್ಥಾನದಲ್ಲಿದ್ದು, ಈ ನಾಡಿನ ಬಸವಾದಿ ಶರಣರ ಮತ್ತು ದಾಸ ಶ್ರೇಷ್ಠರ ವಚನ ಸಾಹಿತ್ಯಗಳು, ಆದಿಕವಿ ಪಂಪಾನಿಂದ ರಾಷ್ಟ್ರಕವಿ ಕುವೆಂಪು ಅವರು ಒಳಗೊಂಡಂತೆ ಸುಮಾರು 5 ಸಾವಿರಕ್ಕೂ ಹೆಚ್ಚಿನ ಶ್ರೇಷ್ಠ ಕವಿಗಳು ಮತ್ತು ಸಾಹಿತಿಗಳು ಕನ್ನಡದ ಸಾರಸ್ವತ ಲೋಕವನ್ನು ಸಮೃದ್ಧವಾಗಿ ಬೆಳೆಸಿರುವ ಕಾರಣ 3 ಮಂದಿ ರಾಷ್ಟ್ರಕವಿಗಳು ಮತ್ತು 8 ಜ್ಞಾನಪೀಠ ಪ್ರಶಸ್ತಿಗಳು ಹಾಗೂ 5 ಭಾರತ ರತ್ನ ಪ್ರಶಸ್ತಿಗಳು ಕನ್ನಡದ ಕುವರರಿಗೆ ಸಂದಿವೆ ಎಂದು ಹೇಳಿದರು.
ಆದರೆ, ಇತ್ತೀಚಿನ ದಿನಗಳಲ್ಲಿ ಆಂಗ್ಲ ಭಾಷೆಯ ವ್ಯಾಮೋಹ ಹೆಚ್ಚಾಗುತ್ತಿರುವ ಕಾರಣ ಕನ್ನಡ ಭಾಷೆ ಬಗ್ಗೆ ನಮ್ಮಲ್ಲಿಯೇ ಬೆಳೆಯುವ ತತ್ಸಾರ ಭಾವನೆಗಳನ್ನು ಮೊದಲು ದೂರ ಮಾಡಬೇಕಾಗಿದೆ. ಕನ್ನಡ ಮಾಧ್ಯಮದಲ್ಲಿ ವಿದ್ಯಾಬ್ಯಾಸ ಮಾಡಿದ ಅನೇಕರು ಇಂದು ಪ್ರತಿಭಾನ್ವಿತರಾಗಿ ಜಾಗತೀಕ ಮಟ್ಟದಲ್ಲಿ ತಮ್ಮನ್ನೂ ಗುರುತಿಸಿಕೊಂಡಿರುವ ಸಾಕಷ್ಟು ಉದಾಹರಣೆಗಳಿವೆ ಎಂದರು.
ಕೂಡಲಸಂಗಮ ಪಂಚಮಶಾಲಿ ಪೀಠದ ಶ್ರೀಬಸವಜಯ ಮಣತ್ಯುಂಜಯ ಸ್ವಾಮೀಜಿ ಮತ್ತು ಕೆ.ಆರ್.ಪೇಟೆ ಕನಕ ಗುರುಪೀಠದ ಶ್ರೀಶಿವಾನಂದಪುರಿ ಸ್ವಾಮೀಜಿಗಳು ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾದ ಮಾಜಿ ಶಾಸಕ ಎ.ಎಸ್. ಬಸವರಾಜು, ಕಿರುತೆರೆ ಮತ್ತು ಚಲನಚಿತ್ರ ನಟಿಯರಾದ ಅಶ್ವಿನಿ ಗೌಡ ಮತ್ತು ಐಶ್ವರ್ಯ ಕ.ರ.ವೇ ರಾಜ್ಯ ಉಪಾಧ್ಯಕ್ಷೆ ಬಿಜಾಪುರದ ರೇಷ್ಮಾ ಮಾತನಾಡಿದರು. ತಾ.ಪಂ.ಅಧ್ಯಕ್ಷ ಎಚ್.ಟಿ. ಶಿವಮೂರ್ತಿ, ಪುರಸಭಾಧ್ಯಕ್ಷ ಮೋಹನ್ ಕುಮಾರ್, ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜ್ಜನಹಳ್ಳಿ ಬಸವರಾಜು, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ತಾಲೂಕು ರೈತಸಂಘದ ಅಧ್ಯಕ್ಷ ಮೇಳೇನಹಳ್ಳಿ ನಾಗರಾಜು, ಪುರಸಭಾ ಸದಸ್ಯ ಬಿ.ಎನ್. ವಿದ್ಯಾಧರ್, ಅನಂತ ಸದ್ವಿದ್ಯಾ ವಿದ್ಯಾಸಂಸ್ಥೆ ಅಧ್ಯಕ್ಷ ಆರ್.ಅನಂತಕುಮಾರ್, ಉದ್ಯಮಿ ಅರುಣ್ ಕುಮಾರ್ ಡಿ.ಎಸ್.ಎಸ್. ಸಂಘಟನೆ ಮುಖಂಡ ರಾಮು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಅನೇಕ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಸಮಾರಂಭದ ವೇದಿಕೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಅಂತಾರಾಷ್ಟ್ರೀಯ ಹಿರಿಯ ಕ್ರೀಡಾಪಟ್ಟು ಎಚ್.ಟಿ. ಮಹದೇವ್, ಪತ್ರಕರ್ತ ರಾಮಚಂದ್ರ, ಸಮಾಜಸೇವಕರಾದ ರೋಟರಿ ಮಾಜಿ ಅಧ್ಯಕ್ಷ ಎನ್.ಜಿ. ಮಧು, ಲಯನ್ಸ್ ಅಧ್ಯಕ್ಷ ಎಂ.ವೈ. ಖಾನ್, ಪ್ರಗತಿಪರ ರೈತ ಡಿ.ಆರ್. ರಾಜು, ಶ್ಯಾನುಭೋಗರಾದ ನಾರಾಯಣ್ ನಾಣಿ) ಹಾಗೂ ಪುರಸಭಾಧ್ಯಕ್ಷ ಮೋಹನ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement