ಮೌಢ್ಯ ನಿಷೇಧ ಕಾಯ್ದೆಗೆ ಮಹಾಸಭೆ ವಿರೋಧ
ಕ.ಪ್ರ.ವಾರ್ತೆ , ಹಾಸನ , ಡಿ. 18
ಮೂಢನಂಬಿಕೆ ನಿಷೇಧ ಕಾಯ್ದೆ ಏಕಪಕ್ಷೀಯವಾದದ್ದು. ಇದು ಕೇವಲ ಬ್ರಾಹ್ಮಣ ವಿರೋಧಿ ಕಾಯ್ದೆಯಾಗಿಸುವ ಸಂಭವವಿದ್ದು ಈ ಕಾಯ್ದೆ ಜಾರಿಗೆ ಬಂದರೆ ಧಾರ್ಮಿಕ ಭಾವನೆಗಳ ಮೇಲೆ ಪೆಟ್ಟು ಬೀಳಲಿದೆ.
ಸ್ವತಂತ್ರ ಭಾರತದ ಪ್ರತಿಯೊಬ್ಬ ಪ್ರಜೆಯೂ ತಮ್ಮ ತಮ್ಮ ನಂಬುಗೆಗೆ ತಕ್ಕಂತೆ ಧಾರ್ಮಿಕ ಆಚರಣೆ ಮಾಡುವುದು ಸಂವಿಧಾನಾತ್ಮಕವಾದ ಹಕ್ಕು. ಇವುಗಳನ್ನು ಪ್ರಶ್ನಿಸುವುದಾಗಲೀ ನಿಷೇಧಿಸುವುದಾಗಲೀ ಸಂವಿಧಾನಕ್ಕೆ ವಿರೋಧವಾದದ್ದು ಎಂದು ಡಾ. ರಮೇಶ್ ತಿಳಿಸಿದರು. ಅವರು ನಗರ ಬಾಹ್ಮಣಸಭಾದ ಮಹಾಸಭೆಯಲ್ಲಿ ಮಾತನಾಡುತ್ತಿದ್ದರು.
ರಮೇಶ್ ಅವರ ಈ ಅಭಿಪ್ರಾಯವನ್ನು ಕೆ.ಎಸ್. ಎನ್. ಮೂರ್ತಿ ಅವರು, ಅನುಮೋದಿಸಿದರು. ಅದರಂತೆ ಈ ಬಗ್ಗೆ ಸರ್ಕಾರಕ್ಕೆ ಉದ್ದೇಶಿತ ಕಾಯ್ದೆಯನ್ನು ಕೈಬಿಡುವಂತೆ ಒತ್ತಾಯಿಸಿ ಖಂಡನಾ ನಿರ್ಣಯ ಕೈಗೊಂಡು ಇದನ್ನು ಸರ್ಕಾರದ ಗಮನಕ್ಕೆ ತರಲು ಸರ್ವಾನು ಮತದಿಂದ ತೀರ್ಮಾನಿಸಲಾಯಿತು.
ರಾಜಕಾರಣಿಗಳ ಮೌಢ್ಯ ನಿಲ್ಲಲಿ: ಸಾರ್ವಜನಿಕರ ದೈಹಿಕ, ಆರ್ಥಿಕ ವಿಚಾರಗಳಿಗೆ ಧಕ್ಕೆ ಬರುವಂತಹ ನಂಬಿಕೆಗಳನ್ನು ನಿಷೇಧಿಸುವುದು ಅಗತ್ಯವೆನಿಸಿದೆ. ಉದಾಹರಣೆಗೆ, ದೇವರ ಹೆಸರಿನಲ್ಲಿ ನಡೆಯುವ ಪ್ರಾಣಿಬಲಿ, ಮಕ್ಕಳನ್ನು ಮುಳ್ಳಿನ ಮೇಲೆ ಎಸೆಯುವುದು, ಬೆತ್ತಲೆಸೇವೆ, ವಾಮಾಚಾರ ಮುಂತಾದ ಅಮಾನುಷ ಪದ್ಧತಿಯನ್ನು ನಿಷೇದಿಸುವುದು ಸೂಕ್ತ. ವಾಸ್ತು ಹೆಸರಿನಲ್ಲಿ ವಿಧಾನಸೌಧದ ಕೊಠಡಿಯನ್ನು, ತಾವು ವಾಸಿಸುವ ನಿವಾಸ, ಕಚೇರಿಗಳನ್ನು ತಮ್ಮ ಮನಬಂದಂತೆ ಒಡೆದು ಅಲಂಕಾರ ಮಾಡಿಕೊಂಡು ಸಾರ್ವಜನಿಕರ ತೆರಿಗೆ ಹಣವನ್ನು ಖರ್ಚು ಮಾಡುವ ಸಚಿವರು ಹಾಗೂ ಅಧಿಕಾರಿಗಳ ಮೌಢ್ಯಕ್ಕೆ ಮೊದಲು ತಡೆಹಾಕಬೇಕು ಎಂದರು.
ಧಾರ್ಮಿಕ ನಂಬಿಕೆಗಳ ಮೇಲೆ ಪ್ರಹಾರ ಮಾಡುವುದು ಏಕಪಕ್ಷೀಯ ತೀರ್ಮಾನ. ವಿಧಾನಸೌಧದ ಮೇಲಿರುವ 'ಸರ್ಕಾರಿ ಕೆಲಸ ದೇವರ ಕೆಲಸ' ಎಂಬ ಫಲಕವನ್ನು ತೆಗೆಸಲು ಸಾಧ್ಯವೇ ಪ್ರಮಾಣ ವಚನ ಸ್ವೀಕರಿಸುವಾಗ ದೇವರ ಹೆಸರಿನಲ್ಲಿ ಏಕೆ ಪ್ರಮಾಣ ಮಾಡುವುದು, ಚುನಾವಣೆ ಬಂತೆಂದರೆ ದೇವಾಲಯಗಳಲ್ಲಿ ಹೋಮ-ಹವನ, ಪೂಜೆ ಮಾಡುವುದನ್ನು ರಾಜಕಾರಣಿಗಳೇ ಮಾಡುತ್ತಾರೆ. ಅದೇ ರೀತಿ ಸಾರ್ವಜನಿಕರೂ ತಮ್ಮದೇ ಆದ ನಂಬಿಕೆಗಳನ್ನು ಆಚರಿಸುತ್ತಿರುತ್ತಾರೆ. ಮಾಲೆ, ರುದ್ರಾಕ್ಷಿ ಮಾರಾಟ ಮಾಡುವುದು, ಧರಿಸುವುದು, ತಾವು ನಂಬಿದ ಸನ್ಯಾಸಿಗಳಿಗೆ ಮಠಾಧಿಪತಿಗಳಿಗೆ ಗೌರವ ಸಮರ್ಪಿಸುವುದು, ಜ್ಯೋತಿಷ್ಯ ಶಾಸ್ತ್ರಗಳ ಮೊರೆ ಹೋಗುವುದು ಮುಂತಾದವು ವೈಯಕ್ತಿಕ ನಂಬುಗೆಗಳಾಗಿರುತ್ತವೆ. ಈ ಹಿನ್ನೆಲೆಯಲ್ಲಿ, ಉದ್ದೇಶಿತ ಕಾಯ್ದೆಯನ್ನು ಕೈಬಿಟ್ಟು, ಧಾರ್ಮಿಕವಾದ ವೈಯಕ್ತಿಕವಾದ ನಂಬಿಕೆ, ವಿಚಾರಗಳನ್ನು ಅವರವರ ಭಾವನೆಗೆ ಬಿಟ್ಟು ನಾಡಿನ ನೈಜ ತೊಂದರೆಗಳ ನಿವಾರಣೆ ಬಗ್ಗೆ ಗಮನಹರಿಸಬೇಕೆಂದು ಸರ್ಕಾರವನ್ನು ಕೋರುವ ನಿರ್ಣಯವನ್ನು ಕೈಗೊಳ್ಳಲಾಯಿತು.