ಇಂದು ನವೋದಯ ಪ್ರೌಢಶಾಲೆಗೆ 'ಸುವರ್ಣ' ಕಳೆ
ಹೊಳೆನರಸೀಪುರ: ಅಸಂಖ್ಯಾ ವಿದ್ಯಾರ್ಥಿಗಳ ಪಾಲಿನ ಜ್ಞಾನದೇಗುಲವಾಗಿ, ವಿದ್ಯಾದಾನದ ಕೇಂದ್ರವಾಗಿ, ನಿತ್ಯ ನಿರಂತರ ಶಿಕ್ಷಣ ದಾಸೋಹದ ಕೇಂದ್ರವೆನಿಸಿರುವ ತಾಲೂಕಿನ ದೊಡ್ಡಕುಂಚೇವು ಗ್ರಾಮದಲ್ಲಿನ ನವೋದಯ ವಿದ್ಯಾಸಂಘದ ಪ್ರೌಢಶಾಲೆ ಎಂದಿಗೂ ದಣಿವರಿಯದ ವಿದ್ಯಾಕೇಂದ್ರವಾಗಿ ದಶಕಗಳ ಕಾಲ ಚಿರನೂತನವಾಗಿ ಸಾಗಿ ಬಂದು ಡಿ. 21ರಂದು ಸುವರ್ಣ ಸಂಭ್ರಮವನ್ನು ಆಚರಿಸಲಿದೆ.
ಸಂಭ್ರಮಾಚರಣೆಯ ಹಿಗ್ಗು: ಗತಿಸಿದ ಕಾಲ ಇತಿಹಾಸವಾಗುತ್ತದೆ. ಆದರೆ, ಇತಿಹಾಸದ ಪುಟಗಳು ಕಳೆದ ದಿನಗಳ ನೆನಪುಗಳನ್ನು ಚಿರನೂತನವಾಗಿಸುತ್ತದೆ. ತನ್ನ ಮಡಿಲಿನಲ್ಲಿ ಅದೆಷ್ಟೋ ವಿದ್ಯಾರ್ಥಿಗಳಿಗೆ ಜ್ಞಾನದಾಶ್ರಯವನ್ನು ನೀಡಿ, ಭವಿಷ್ಯದ ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಮತ್ತು ಇಂದಿಗೂ ನೀಡುತ್ತಲೇ ಇರುವ ಇಲ್ಲಿನ ನವೋದಯ ವಿದ್ಯಾ ಶಾಲೆಯು ನಾಡಿಗೆ ನೀಡಿರುವ ಕೊಡುಗೆ ಅವಿಸ್ಮರಣೀಯ ಮತ್ತು ಮಾನನೀಯವಾದುದಾಗಿದೆ ಎಂದರೂ ತಪ್ಪಾಗಲಾರದು.
ಇಂತಹ ಸಾಧನೆಯ ಪಥವನ್ನು ಕಂಡಿರುವ ದೊಡ್ಡಕುಂಚೆ ಗ್ರಾಮದಲ್ಲಿನ ನವೋದಯ ವಿದ್ಯಾಸಂಸ್ಥೆಯು ಇದೇ ಡಿ. 21ಕ್ಕೆ 50 ವರ್ಷಗಳನ್ನು ಪೂರೈಸುತ್ತಿದ್ದು ಸಂಭ್ರಮಾಚರಣೆಯ ಹಿಗ್ಗಿನಲ್ಲಿದೆ.
ಹಿರಿಯರ ಸ್ಮರಣೆ: ನವೋದಯ ವಿದ್ಯಾಸಂಸ್ಥೆಯು ಚನ್ನರಾಯಪಟ್ಟಣದಲ್ಲಿನ ತನ್ನ ವಿದ್ಯಾಸಂಸ್ಥೆಯ ಹೊರತಾಗಿ ಹೊಳೆನರಸೀಪುರ ತಾಲೂಕಿಗೆ ಸೇರಿದ ದೊಡ್ಡಕುಂಚೆ ಗ್ರಾಮದಲ್ಲಿ ಕರ್ನಾಟಕ ಸರ್ಕಾರದಲ್ಲಿ ಅಂದು ಶಿಕ್ಷಣ ಸಚಿವರಾಗಿದ್ದ ಇದೇ ಗ್ರಾಮದವರೇ ಆದ ಎ.ಜಿ. ರಾಮಚಂದ್ರರಾಯರ ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳಿಗೂ ಒಳ್ಳೆಯ ಗುಣಮಟ್ಟದ ಶಿಕ್ಷಣ ದೊರಕಬೇಕೆನ್ನುವ ದೂರದೃಷ್ಟಿತ್ವದಿಂದ ಪ್ರಾರಂಭಗೊಂಡಿತು.
ಈ ಶಾಲೆಯ ಪ್ರಾರಂಭಕ್ಕೆ ಹಲವಾರು ಮಹನೀಯರುಗಳು ತಮ್ಮ ಅಮೂಲ್ಯ ಸಹಕಾರಗಳನ್ನಿತ್ತಿದ್ದಾರೆ.
ಇವರುಗಳಲ್ಲಿ ಪ್ರಮುಖರೆಮದರೆ ದಿ.ಸಿ.ಆರ್. ಶ್ರೀನಿವಾಸ ಅಯ್ಯಂಗಾರ್, ಅಂಕಂ ಸಂಜೀವಶೆಟ್ಟಿ, ದಿ. ನರಸಣ್ಣ ಹಾಗೂ ಶಾಲೆಯ ಮೊದಲ ಮುಖ್ಯೋಪಾಧ್ಯಾಯರಾದ ಬಿ.ಎಸ್.ನರಸಿಂಹಮೂರ್ತಿ ಅವರ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲೇಬೇಕಿದೆ.
-ಎಚ್.ಡಿ. ಗುರುಪ್ರಸಾದ್