'ಏಡ್ಸ್ ಜಾಗೃತಿ ದೊಡ್ಡ ಮಟ್ಟದಲ್ಲಾಗಬೇಕು'
ಆಲೂರು: ಗುಣಪಡಿಸಲಾಗದ ಮಾರಕ ರೋಗ ಏಡ್ಸ್ ಭಾರತದಲ್ಲಿ ಶರವೇಗದಲ್ಲಿ ಹರಡುತ್ತಿದೆ. ರೋಗ ಬಾರದಂತೆ ಎಚ್ಚರಿಕೆ ವಹಿಸುವುದೊಂದೇ ಇದಕ್ಕೆ ಮದ್ದಾಗಿದ್ದು, ಜನತೆಯಲ್ಲ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ದೊಡ್ಡಮಟ್ಟದಲ್ಲಾಗಬೇಕೆಂದು ಶಾಸಕ ಹೆಚ್.ಕೆ ಕುಮಾರಸ್ವಾಮಿ ತಿಳಿಸಿದರು.
ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿ ರಾಯರಕೊಪ್ಪಲು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ, ವಿಶ್ವ ಏಡ್ಸ್ ದಿನಾಚರಣೆ ಹಾಗೂ ವಿಶ್ವ ಅಂಗವಿಕಲರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಳವಳಕಾರಿ ಅಂಶ: ವಿಶ್ವದಲ್ಲೇ ಎರಡನೇ ಅತೀ ಹೆಚ್ಚು ಸಂಖ್ಯೆಯ ಏಡ್ಸ್ ರೋಗಿಗಳು ಭಾರತದಲ್ಲಿರುವುದು ಕಳವಳಕಾರಿ ವಿಷಯವಾಗಿದ್ದು, ಅಜ್ಞಾನ, ಅಜಾಗರೂಕತೆ, ಅರಿವಿನ ಕೊರತೆಯಿಂದಾಗಿ ದಿನದಿಂದ ದಿನಕ್ಕೆ ಏಡ್ಸ್ ರೋಗ ಹೆಮ್ಮರದಂತೆ ಹರಡುತ್ತಿದೆ. ಯುವಜನತೆ ಹೆಚ್ಚಾಗಿ ರೋಗಕ್ಕೆ ತುತ್ತಾಗುತ್ತಿದ್ದು, ಇವರಿಗೆ ಜಾಗೃತಿ ಮೂಡಿಸುವ ಕೆಲಸ ಕೇವಲ ಆರೋಗ್ಯ ಇಲಾಖೆಯದೆಂದು ಸುಮ್ಮನಿರದೇ ನಾವೆಲ್ಲರೂ ಈ ಕಾರ್ಯದಲ್ಲಿ ಕೈ ಜೋಡಿಸಬೇಕು ಎಂದರು.
ಅಂಗವಿಕಲರು ಅಬಲರಲ್ಲ, ಅವರಿಗೆ ಸೂಕ್ತ ಸವಲತ್ತುಗಳನ್ನು ಒದಗಿಸಿದರೆ, ಅವರಿಗೆ ದೇವರು ನೀಡಿರುವ ವಿಶೇಷ ಶಕ್ತಿಯಿಂದ ಜಗತ್ತು ಅವರನ್ನು ಗುರುತಿಸುವಂತೆ ಮಾಡುತ್ತಾರೆ. ಇದಕ್ಕೆ ನೈಜ ನಿದರ್ಶನ ಪ್ಯಾರಾಒಲಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಜಿಲ್ಲೆಯ ಹೆಮ್ಮೆಯ ಪುತ್ರ ಗಿರೀಶ್ ಸಾಕ್ಷಿಯಾಗಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.
ತಾಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಕಾಂತರಾಜು ಮಾತನಾಡಿ, ಅಂಗವಿಕಲ ಮಕ್ಕಳು ಹುಟ್ಟಿದರೆಂದು ಪೋಷಕರು ಚಿಂತಿಸದೆ, ಅವರಲ್ಲಿ ಉತ್ಸಾಹ ತುಂಬಿ ಸರ್ಕಾರದಿಂದ ಸವಲತ್ತುಗಳ ಬಗ್ಗೆ ತಿಳಿದುಕೊಂಡು ಅವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಪ್ರತಿ ಗ್ರಾಮಗಳಲ್ಲಿ ಏಡ್ಸ್ ಬಗ್ಗೆ ಜಾಗೃತಿ ಮೂಡಿಸಲು ಬೀದಿ ನಾಟಕ, ತೊಗಲುಗೊಂಬೆ ಆಟದಂತಹ ಗ್ರಾಮೀಣ ಸಂಸ್ಕತಿಯ ಕಲಾತಂಡಗಳನ್ನು ಬಳಸಿಕೊಂಡಾಗ ಅದು ಗ್ರಾಮೀಣ ಭಾಗದವರಿಗೆ ಬೇಗ ತಲುಪುತ್ತದೆ ಎಂದರು.
ರಾಯರಕೊಪ್ಪಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮೋಹನ್ ಕುಮಾರ್ ಮಾತನಾಡಿ, ವೈದ್ಯರು ಹಾಗೂ ರೋಗಿಗಳ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ಆ ದೃಷ್ಟಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತೀ ವರ್ಷವೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ಅಧಿಕಾರಿಗಳು, ಜನರು ಹಾಗೂ ಜನ ಪ್ರತಿನಿಧಿಗಳ ಸಹಕಾರ ಅತ್ಯಗತ್ಯ ಎಂದರು.
ಕಾರಗೋಡು ಗ್ರಾಮ ಪಂಚಾಯ್ತಿ ಆಧ್ಯಕ್ಷೆ ಮೀನಾಕ್ಷಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮೋಹನ್ ಕುಮಾರ್, ಮಗ್ಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಗಿರೀಶ್, ಕಾರಗೋಡು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಧರ್ಮಪ್ಪ, ಸದಸ್ಯರಾದ ಗುರುದೇವ್, ಲೂಸಿ ಕವಿತ, ಚಿಸ್ಟಮಿನ್, ರಾಜಣ್ಣ. ಮಂಜಣ್ಣ, ವಿನ್ಸೆಂಟ್ ಅನ್ಸಿಲಿರಾಣಿ ಹಾಗೂ ಇತರರು ಇದ್ದರು.