'ಕಾರ್ಮಿಕರು ಸಂಘಟಿತರಾಗಬೇಕು'
ಅರಕಲಗೂಡು: ಒಪ್ಪಿಕೊಂಡ ಕೆಲಸಗಳನ್ನು ನಿರ್ದಿಷ್ಟ ಸಮಯದಲ್ಲಿ ನಿರ್ವಹಿಸಿ, ಜನರ ಮೆಚ್ಚುಗೆಗೆ ಪಾತ್ರರಾಗುವ ಜೊತೆಗೆ ಸಂಘಟಿತರಾಗಿ ಉತ್ತಮ ಜೀವನ ನಿರ್ವಹಣೆಗೂ ಮುಂದಾಗಬೇಕು ಎಂದು ಶಾಸಕ ಎ. ಮಂಜು ಅವರು ತಿಳಿಸಿದರು.
ಅವರು ಇಲ್ಲಿನ ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಬಹು ವರ್ಷಗಳ ನಂತರ ಕಟ್ಟಡ ಕಾರ್ಮಿಕರು ಸಂಘಟಿತರಾಗುತ್ತಿರುವುದು ಒಂದು ಉತ್ತಮ ಬೆಳವಣಿಗೆ. ಸಂಘಟಿತರಾಗಿ ತಮ್ಮ ಅತ್ಯಾವಶ್ಯಕ ಸೌಲಭ್ಯಗಳನ್ನು ಹಕ್ಕೊತ್ತಾಯದೊಂದಿಗೆ ಪಡೆಯುವ ಜೊತೆಗೆ ಕುಟುಂಬಗಳನ್ನು ಉತ್ತಮ ಸ್ಥಿತಿಯಲ್ಲಿ ಕಾಯ್ದುಕೊಳ್ಳುವ ಜೊತೆಗೆ ಆರ್ಥಿಕವಾಗಿಯೂ ಸದೃಢರಾಗಬೇಕೆಂದರು.
ಕಿವಿಮಾತು: ಸಮಾರಂಭದ ಉದ್ಘಾಟನೆ ನೆರವೇರಿಸಿದ ಕಾರ್ಮಿಕ ಅಧಿಕಾರಿ ಕೆ.ಎನ್. ಪ್ರಹ್ಲಾದ್ ಅವರು ಮಾತನಾಡಿ, ಕಟ್ಟಡ ನಿರ್ಮಾಣ ಕಾರ್ಮಿಕರಿಗಾಗಿ ಸರ್ಕಾರ ಹಲವು ಸೌಲಭ್ಯಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಅರಿತು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದ ಅವರು ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಸಹಾಯಧನ ನೀಡಲು ಅವಕಾಶವಿದ್ದು ಮಕ್ಕಳಿಗೆ ಶಿಕ್ಷಣ ಒದಗಿಸಲು ಕಾರ್ಮಿಕರು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಸವಲತ್ತು ಹೊಂದಬೇಕು: ಜಿಲ್ಲಾ ಪಂಚಾಯಿತಿ ಸದಸ್ಯ ವಿ.ಎ. ನಂಜುಂಡಸ್ವಾಮಿ ಅವರು ಮಾತನಾಡಿ ಕಾರ್ಮಿಕ ಸಂಘಟನೆ ರಚನೆಯಾಗಿರುವುದು ತುಂಬಾ ಸಂತೋಷದ ವಿಷಯ.ಆದರೆ ಸಂಘಟನೆಯ ವಿಷಯದಲ್ಲಿ ರಾಜರಕಾರಣಿಗಳನ್ನು ಹತ್ತಿರಕ್ಕೆ ಸೇರಿಸಬೇಡಿ.
ಇದರಿಂದ ಸಂಘಟನೆಗೆ ಬಾರೀ ಪೆಟ್ಟು ತಗುಲುವ ಸಂಭವವಿರುತ್ತದೆ ಎಂದು ಎಚ್ಚರಿಕೆ ನೀಡರಲ್ಲದೇ ಸಂಘಟನೆಯಲ್ಲಿ ಜಾತಿ ವಿಚಾರವೂ ಬಾರದಂತೆ ಎಚ್ಚರ ವಹಿಸಿ, ಕಾರ್ಮಿಕರು ಕಾರ್ಮಿಕರಾಗಿ ಮಾತ್ರ ಇದ್ದು, ಉತ್ತಮ ಬದುಕು ಸಾಗಿಸಲು ಬೇಕಾದ ಸವಲತ್ತುಗಳನ್ನು ಹೊಂದಿ ಎಂದು ಎಂದು ಸಲಹೆ ನೀಡಿದರು.
ಹಣ ಉಳಿಸಿ: ಇಂದು, ಕಟ್ಟಡ ಕಾರ್ಮಿಕರು ಪ್ರತಿದಿನ ರು. 300-400 ರೂಗಳನ್ನು ಶ್ರಮವಹಿಸಿ ದುಡಿಯುತ್ತಾರೆ. ಆದರೂ, ಅವರಿಂದ ಉತ್ತಮ ಜೀವನ ಸಾಧ್ಯವಾಗಿಲ್ಲ. ಈ ಕಾರ್ಮಿಕರಿಗೆ ವಸತಿ ಯೋಜನೆಯಡಿ ಮನೆಗಳು ನೀಡುವಂತಾಗಬೇಕು ಎಂದರು.
ತಾಲೂಕು ಪಂಚಾಯಿತಿ ಸದಸ್ಯ ಕೀರ್ತಿರಾಜ್ ಮಾತನಾಡಿ, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವಂತೆ ಕರೆ ಇತ್ತರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ ನಾಗರೀಕ ಸಮಾಜದ ನಿರ್ಮಾಣದಲ್ಲಿ ಕಟ್ಟಡ ಕಾರ್ಮಿಕರ ಕೊಡುಗೆ ಅಪಾರವಾಗಿದ್ದು, ಕಟ್ಟಡ ಕಾರ್ಮಿಕರು ದುಶ್ಚಟಗಳಿಗೆ ದಾಸರಾಗದೇ ದುಡಿದ ಹಣವನ್ನು ಸಂಗ್ರಹಿಸಿ ಉತ್ತಮ ಬದುಕು ಕಟ್ಟಿಕೊಳ್ಳಬೇಕೆಂದು ನುಡಿದರು.
ಶ್ರೀಮನ್ಮೂಲಮಠದ ಶ್ರೀ ಶಿವಸುಜ್ಞಾನ ಸ್ವಾಮಿಗಳು ಮಾತನಾಡಿದರು. ಸಮಾರಂಭದಲ್ಲಿ ವೃತ್ತ ನಿರೀಕ್ಷಕ ರಾಜು,ಪಿಎಸ್ಐ ರೇವಣ್ಣ, ಕಾರ್ಮಿಕ ನಿರೀಕ್ಷಕಿ ಮಂಗಳಗೌರಿ, ವ್ಯಾಪಾರಿ ಅತಿಉಲ್ಲಾ, ಸಾರಥಿ ಪ್ರಸಾದ್, ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ಬಿ.ಎಲ್.ಯೋಗೇಶ್, ಹೆಚ್.ಎಸ್. ಮಂಜು, ಮಂಜೇಗೌಡ ಇತರರು ಉಪಸ್ಥಿತರಿದ್ದರು.