ಚುನಾವಣೆ ಪ್ರಕ್ರಿಯೆ ವಿಳಂಬಕ್ಕೆ ಅಸಮಾಧಾನ
ಕ.ಪ್ರ.ವಾರ್ತೆ , ಬೇಲೂರು , ಡಿ. 19
ಚುನಾವಣೆ ಪ್ರಕ್ರಿಯೆಯನ್ನು 4 ಗಂಟೆ ವಿಳಂಬವಾಗಿ ನಡೆಸಿದ ಚುನಾವಣಾ ಅಧಿಕಾರಿಗಳ ವಿರುದ್ಧ ತಾಲೂಕು ಪಂಚಾಯ್ತಿ ಸದಸ್ಯರು ಹರಿಹಾಯ್ದ ಘಟನೆ ಗುರುವಾರ ನಡೆಯಿತು.
ತಾಲೂಕು ಪಂಚಾಯ್ತಿ 2ನೇ ಅವಧಿಗೆ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರಿಂದ ಬಿಜೆಪಿ ಸದಸ್ಯೆ ಶಾಂತಮ್ಮ ಮಹದೇವಯ್ಯರವರು ಒಬ್ಬರೇ ನಾಮಪತ್ರ ಸಲ್ಲಿಸಿ, ಚುನಾವಣೆಗಾಗಿ ತಾಲ್ಲೂಕು ಪಂಚಾಯಿತಿ ಸದಸ್ಯರು ಕಾದು ಕುಳಿತರು. ಆದರೆ, 12ಕ್ಕೆ ಚುನಾವಣೆಯ ಸಮಯವಾದರೂ ಚುನಾವಣಾ ಅಧಿಕಾರಿಗಳಾದ ಸಕಲೇಶಪುರ ಉಪ ವಿಭಾಗಾಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಕೆಲ ಸದಸ್ಯರು ಅಧಿಕಾರಿಗಳ ವಿರುದ್ಧ ತಾ.ಪಂ.ಸದಸ್ಯರಾದ ರವಿಕುಮಾರ್ ಮತ್ತು ಪರ್ವತಯ್ಯ ಕಿಡಿಕಾರಿದರು.
ಎಚ್ಚರಿಕೆ: ಬೆಳಗ್ಗೆ ಉಪ ವಿಭಾಗಾಧಿಕಾರಿಗಳ ಪರವಾಗಿ ನಾಮಪತ್ರ ಸ್ವೀಕರಿಸಿದ್ದ ತಹಸೀಲ್ದಾರ್ ಜಗದೀಶ್ ಸಹ ಆಗಮಿಸದಿರುವುದು ಮತ್ತಷ್ಟು ಸದಸ್ಯರನ್ನು ಕೆರಳುವಂತೆ ಮಾಡಿತು. ಚುನಾವಣೆ ನಡೆಸುವುದಕ್ಕಾಗಿ ಆಗಮಿಸಿದ್ದ ಉಪ ವಿಭಾಗಾಧಿಕಾರಿಗಳ ಕಚೇರಿಯ ಉಪ ತಹಸೀಲ್ದಾರ್ ಬಸವರಾಜುರವರಿಗೆ ಘೇರಾವ್ ಮಾಡಲಾಗುವುದು ಎಂದು ಎಚ್ಚರಿಸಿದರು.
ಕೆಂಡಾಮಂಡಲ: ನಂತರ ಕೆಲ ಸಮಯ ದೂರವಾಣಿ ಮೂಲಕ ಉಪ ವಿಭಾಗಾಧಿಕಾರಿಗಳನ್ನು ಸಂಪರ್ಕಿಸಿದಾಗ ಹಳೇಬೀಡು ಸಮೀಪದ ನಂಜಾಪುರ ಗ್ರಾಮಕ್ಕೆ ತೆರಳಿದ್ದಾರೆಂದು ತಿಳಿದುಬಂತು. ಸದಸ್ಯರು ಕೆಲ ಹೊತ್ತು ಅಧಿಕಾರಿಗಳಿಗಾಗಿ ಕಾದು ಕುಳಿತರು. ಮಧ್ಯಾಹ್ನವಾದರೂ ಅಧಿಕಾರಿಗಳು ಬಾರದಿರುವುದನ್ನು ಕಂಡು ಮತ್ತೆ ಸದಸ್ಯರು ಕೆಂಡಾಮಂಡಲವಾದರು.
ಪಟ್ಟು: 3 ಗಂಟೆಗೆ ಆಗಮಿಸಿದ ಉಪ ವಿಭಾಗಾಧಿಕಾರಿಯನ್ನು ಸದಸ್ಯರಾದ ರವಿಕುಮಾರ್ ಹಾಗೂ ಪರ್ವತಯ್ಯ, ಶೇಖರಯ್ಯ ಮತ್ತು ಸದಸ್ಯರುಗಳು ಸಮಯಕ್ಕೆ ಸರಿಯಾಗಿ ಬಾರದಿರುವ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಪಟ್ಟು ಹಿಡಿದರು.
ಕೆಲ ಸಮಯದ ನಂತರ ಉಪ ವಿಭಾಗಾಧಿಕಾರಿಗಳು ತಾಲೂಕು ಪಂಚಾಯ್ತಿ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆಯನ್ನು ನಡೆಸಿ ಅಧ್ಯಕ್ಷರ ಆಯ್ಕೆಯನ್ನು ಅಧಿಕೃತವಾಗಿ ಶಾಂತಮ್ಮ ಮಹದೇವಯ್ಯ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡುವ ಮೂಲಕ ಬೆಳಗ್ಗೆಯಿಂದ ನಡೆದ ತಾಲೂಕು ಪಂಚಾಯ್ತಿ ಅಧ್ಯಕ್ಷರ ಆಯ್ಕೆಯಲ್ಲಿನ ಗೊಂದಲಗಳಿಗೆ ತೆರೆ ಎಳೆದರು.