ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜೈವಿಕ ಇಂಧನ ವಿಚಾರ ಸಂಕಿರಣ

Vishwanath S
Updated On : 21 Dec 2013, 1:11 am

ಕ.ಪ್ರ.ವಾರ್ತೆ ,  ಹಾಸನ ,  ಡಿ. 20
ತಾಲೂಕಿನ ಮಡೆನೂರಿನ  ಜೈವಿಕ ಇಂಧನ ಉದ್ಯಾನದಲ್ಲಿ ಇತ್ತೀಚೆಗೆ ಕಂದಲಿಯ  ಕೃಷಿ ವಿಜ್ಞಾನ ಕೇಂದ್ರ, ಕಾರೆಕೆರೆ ಕೃಷಿ ಮಹಾವಿದ್ಯಾಲಯ ವತಿಯಿಂದ ಕೃಷಿ ತಂತ್ರಜ್ಞಾನ ಸಪ್ತಾಹದ ನಿಮಿತ್ತ ಸಮಗ್ರ ಕೃಷಿ ಪದ್ಧತಿ ಯೋಜನೆಯಡಿಯಲ್ಲಿ  ಜೈವಿಕ ಇಂಧನ ತಂತ್ರಜ್ಞಾನದ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಪರಿಸರವಾದಿ ಹಾಗೂ ಪ್ರಗತಿ ಪರ ರೈತ ಹೆಚ್.ಪಿ. ಮೋಹನ್ ಮಾತನಾಡಿ, ಸಣ್ಣ ಮತ್ತು ಅತೀಸಣ್ಣ ರೈತರು ನಾನಾ ಜೈವಿಕ ಇಂಧನ ಗಿಡಗಳನ್ನು ಬೆಳೆಸಿ ನಿರಂತರವಾಗಿ ವರ್ಷವಿಡೀ ಆದಾಯ ಪಡೆದು ಆರ್ಥಿಕವಾಗಿ ಸ್ವಾವಲಂಬನೆ ಹೊಂದಿ ಸುಭದ್ರರಾಗಲು ಕರೆ ನೀಡಿದರು.
ಕರೆ: ನಮ್ಮ ದೇಶದಲ್ಲಿ ಶೇ. 10ರಷ್ಟು ಇಂಧನದ ಪೂರೈಕೆ ಇದ್ದು ಉಳಿದ 90ರಷ್ಟು ಇಂಧನದ ಬೇಡಿಕೆಯನ್ನು ಹೊರರಾಷ್ಟ್ರಗಳಿಂದ ಪಡೆಯುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಜೈವಿಕ ಇಂಧನದ ಉತ್ಪಾದನೆ ಮತ್ತು ಅದರ ಮಹತ್ವದ ಬಗ್ಗೆ ದೊಡ್ಡ ಆಂದೋಲನವಾಗಬೇಕಾಗಿದೆ ಎಂದು ರೈತರಿಗೆ ಕರೆ ನೀಡಿದರು.
ಜೈವಿಕ ಇಂಧನ ಉದ್ಯಾನದ ಯೋಜನಾ ಸಂಯೋಜಕ  ಡಾ. ಬಾಲಕಣಷ್ಣಗೌಡ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 1 ಲಕ್ಷ ರೈತರು ಜೈವಿಕ ಇಂದನದ ಬಗ್ಗೆ ತರಬೇತಿ ಪಡೆದಿದ್ದು ಸುಮಾರು 15 ಲಕ್ಷ ಗಿಡಗಳನ್ನು ನೆಟ್ಟಿರುವುದು ರಾಜ್ಯದಲ್ಲೇ ಪ್ರಶಂಸನೀಯ ಎಂದು ತಿಳಿಸಿದರು.
ಹೆಚ್ಚಿನ ಉತ್ಪಾದಕತೆ: ಜೈವಿಕ ಇಂಧನ ಗಿಡ ಮರಗಳನ್ನು ಬೆಳೆಯುವುದು ಅತ್ಯಂತ ಸರಳವಾಗಿದ್ದು ಮೈಸೂರು ಮಹಾರಾಜರ ಕಾಲದಲ್ಲಿ ಜೈವಿಕ ಇಂಧನದಿಂದ ಅರಮನೆ ಬೆಳಗುತ್ತಿತ್ತು ಎಂದರು.
ರೈತರು ಜೈವಿಕ ಇಂಧನದ ಗಿಡಗಳನ್ನು ಬೆಳೆಸುವುದರಿಂದ ಎಣ್ಣೆ ಉತ್ಪಾದನೆ ಜೊತೆಗೆ ಗಿಡಗಳಿಂದ ಉದುರಿದ ಸೊಪ್ಪಿನಿಂದ ಮಣ್ಣಿನ ಫಲವತ್ತತೆ, ಹಿಂಡಿಯ ಬಳಕೆಯಿಂದ ಗೋಬರ್ ಗ್ಯಾಸ್ ಅನಿಲದ ಉತ್ಪಾದನೆಗೆ ಸಹಕಾರಿ ಹಾಗೂ ಕೃಷಿ ಬೆಳೆಗಳಾದ ರಾಗಿ, ಜೋಳ, ತೊಗರಿ, ಅಲಸಂದೆ ಬೆಳೆಗಳಲ್ಲಿ ಶೇ 10- 12ರಷ್ಟು ಹೆಚ್ಚಿನ ಉತ್ಪಾದಕತೆಯನ್ನು ಪಡೆಯಲಾಗಿದೆ ಎಂದು ರೈತರಿಗೆ ತಿಳಿಸಿದರು.
ಡಾ. ಟಿ.ಎಸ್. ಮಂಜನಾಥಸ್ವಾಮಿ ನಿರೂಪಿಸಿದರು. ಡಾ. ಚನ್ನಕೇಶವ ವಂದಿಸಿದರು.   ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಸಹೋದ್ಯೋಗಿಗಳಾದ ಡಾ. ಎ. ಸಿ. ಗಿರೀಶ್,   ಜೈವಿಕ ಇಂಧನದ ಗಿಡಗಳ ಪ್ರಾತ್ಯಕ್ಷಿಕೆ ತಾಕುಗಳಿಗೆ ಮತ್ತು ಜೈವಿಕ ಇಂಧನ ಉತ್ಪಾದನಾ ಘಟಕಕ್ಕೆ ರೈತರನ್ನು ಭೇಟಿ ನೀಡಿಸಿ ತಾಂತ್ರಿಕ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಬೇಲೂರು ತಾಲೂಕು ಸದಾಶಿವಯ್ಯ, ಅಣ್ಣೇನಹಳ್ಳಿ, ದಂಡಿಗನಹಳ್ಳಿ ಮತ್ತು ಬಲ್ಲೇನಹಳ್ಳಿ ಗ್ರಾಮದ ರೈತರು ಮತ್ತು ರೈತ ಮಹಿಳೆಯರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement