ನಗರಸಭೆ ಆವರಣದಲ್ಲಿ ಕಾಂಗ್ರೆಸ್ ಧರಣಿ
ಕ.ಪ್ರ.ವಾರ್ತೆ , ಹಾಸನ , ಡಿ. 20
ವಾಸ ದೃಢೀಕರಣ ಪತ್ರ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರಸಭೆಯ ಕಾಂಗ್ರೆಸ್ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ನಗರಸಭೆ ಆವರಣದಲ್ಲಿ ಧರಣಿ ನಡೆಸಿ ನಗರಸಭೆಯ ಆಯುಕ್ತರ ವಿರುದ್ಧ ಘೋಷಣೆ ಕೂಗಿದರು.
ಆಕ್ರೋಶ: ನಗರದಲ್ಲಿ ವಾಸ ಮಾಡುತ್ತಿರುವ ಸಾರ್ವಜನಿಕರಿಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು, ಬ್ಯಾಂಕ್ ಖಾತೆ ತೆರೆಯಲು, ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಮತ್ತು ಉದ್ಯೋಗ ಆಕಾಂಕ್ಷಿಗಳಿಗೆ ಹಾಗೂ ಸರ್ಕಾರಿ ಸೌಲಭ್ಯಗಲನ್ನು ಪಡೆಯುವ ಉದ್ದೇಶಕ್ಕಾಗಿ ಹಾಸನ ನಗರಸಭೆವತಿಯಿಂದ ವಾಸ ದೃಢೀಕರಣ ಪತ್ರವನ್ನು ನೀಡಲಾಗುತ್ತಿದೆ. ಇದರಿಂದ ನಗರದ ಸಾರ್ವಜನಿಕರಿಗೆ ತುಂಬ ಅನುಕೂಲವಾಗಿತ್ತು. ಆದರೆ ಪ್ರಸ್ತುತ ನಗರಸಭೆಯಲ್ಲಿ ವಾಸ ದೃಢೀಕರಣ ಪತ್ರವನ್ನು ನೀಡುವ ಪ್ರಕ್ರಿಯೆಯನ್ನು ನಿಲ್ಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರಿಯಾದ ಕ್ರಮವಲ್ಲ: ನಾಗರಿಕರು ನಗರಸಭೆಯಲ್ಲಿ ತಮ್ಮ ಆಸ್ತಿ ಘೋಷಣೆ ಮಾಡಿಕೊಂಡು ತೆರಿಗೆ ಪಾವತಿಸುತ್ತಿದ್ದು, ನೀರಿನ ತೆರಿಗೆ, ಒಳಚರಂಡಿ ತೆರಿಗೆ, ಕಟ್ಟಡ ಪರವಾನಗಿಗೆ ಶುಲ್ಕವನ್ನು ನಗರಸಭೆಗೆ ಪಾವತಿಸುತ್ತಿದ್ದರು ಸಹ ವಾಸ ದೃಢೀಕರಣ ಪತ್ರಯನ್ನು ನಿಲ್ಲಿಸಲಾಗಿದೆ. ನಗರಸಭೆ ವತಿಯಿಂದಲೇ ಜನನ ಮತ್ತು ಮರಣ ದೃಢೀಕರಣ ಪತ್ರವನ್ನು ನೀಡುತ್ತಿರುವಾಗ, ವಾಸ ದೃಢೀಕರಣ ಪತ್ರವನ್ನು ಕೊಡದಿರುವುದು ಸರಿಯಾದ ಕ್ರಮವಲ್ಲ ಎಂದು ಆರೋಪಿಸಿದರು.
ಸಾಧ್ಯವಾಗುತ್ತಿಲ್ಲ: ನಗರಸಭೆಯಿಂದ ವಾಸ ದೃಢೀಕರಣ ಪತ್ರವನ್ನು ಬೇಕಾಬಿಟ್ಟಿ ಪಡೆಯಲಾಗುತ್ತಿದೆ ಎಂಬ ಕಾರಣಕ್ಕೆ ಜಿಲ್ಲಾಧಿಕಾರಿಗಳು ನಗರಸಭೆಯಿಂದ ವಾಸ ದೃಢೀಕರಣ ಪತ್ರ ನೀಡಬಾರದು ಎಂದಿದ್ದಾರೆ ಎಂಬ ಕಾರಣವನ್ನು ಅಧಿಕಾರಿಗಳು ನೀಡುತ್ತಿದ್ದಾರೆ. ಕೇವಲ ತಹಸೀಲ್ದಾರ್ ಕಚೇರಿಯಲ್ಲಿ ವಾಸ ದೃಢೀಕರಣ ಪತ್ರ ನೀಡುತ್ತಿರುವುದರಿಂದ ಎಲ್ಲರಿಗೂ ಕಷ್ಟಸಾಧ್ಯವಾಗುತ್ತಿದೆ. ಹೆಚ್ಚಿನ ಅವಶ್ಯಕತೆ ಇರುವರು ವಾಸ ದೃಢೀಕರಣ ಪತ್ರವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರು.
ಒತ್ತಾಯ: ಸಾರ್ವಜನಿಕ ಹಿತದೃಷ್ಟಿಯಿಂದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿ ಸಾರ್ವಜನಿಕರಿಗೆ ವಾಸ ದೃಢೀಕರಣ ಪತ್ರ ಕೊಡಲು ತೀರ್ಮಾನವಾಗಿದ್ದರೂ ಸಹ ಅಧ್ಯಕ್ಷ, ಉಪಾದ್ಯಕ್ಷರು ಹಾಗೂ ಆಯುಕ್ತರು ನಗರಸಭೆ ವತಿಯಿಂದ ವಾಸ ದೃಡೀಕರಣ ಪತ್ರವನ್ನು ನೀಡುವಂತ ಪ್ರಯತ್ನವನ್ನು ಮಾಡುತ್ತಿಲ್ಲ. ಆದ್ದರಿಂದ ಕೂಡಲೇ ಸಾರ್ವಜನಿಕರ ಹಿತದೃಷ್ಟಿಯಿಂದ ವಾಸ ದೃಢೀಕರಣ ಪತ್ರವನ್ನು ನೀಡುವಂತೆ ಒತ್ತಾಯಿಸಿದರು.
ಕಿಡಿ: ನಗರಸಭೆಯ ಚುನಾಯಿತ ಪ್ರತಿನಿಧಿಗಳು ನಗರಸಭೆಗೆ ಬಂದು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಲು ಕೂರಲು ವಿಶಾಲವಾದ ವ್ಯವಸ್ಥೆ ಇಲ್ಲ. ನಗರಸಭೆಯರು ಬಂದರೆ ಹೊರಗಡೆ ನಿಲ್ಲುವಂತಹ ಪರಿಸ್ಥಿತಿ ಇತೆ. ಈಗಾಗಲೇ ಅನೇಕ ಬಾರಿ ಮೌಖಿಕವಾಗಿ ಸದಸ್ಯರಿಗೆ ಕೂರಲು ಸ್ಥಳವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದರೂ ಸಹ ಈವರೆಗೂ ಯಾವುದೇ ಪ್ರಯೋಜನಗಳು ಆಗಿಲ್ಲ. ಇದರಿಂದ ಸಂಪೂರ್ಣವಾಗಿ ಸದಸ್ಯರನ್ನು ಕಡೆಗಣಿಸಲಾಗಿದೆ ಎಂದು ಕಿಡಿಕಾರಿದರು.
ಆರೋಪ: ಅಷ್ಟೇ ಅಲ್ಲದೆ, ನಗರಸಭೆಯು ಸಾಕಷ್ಟು ಅವ್ಯವಸ್ಥೆಯಿಂದ ಕೂಡಿದ್ದು, ಇದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆ ಉಂಟಾಗುತ್ತಿದೆ. ಸಾರ್ವಜನಿಕ ಸೇವೆ ಮಾಡುವ ಬದಲಾಗಿ, ಅವರಿಗೆ ತೊಂದರೆ ನೀಡುವಂತಹ ವ್ಯವಸ್ಥೆ ನಗರಸಭೆ ಆಡಳಿತ ವ್ಯವಸ್ಥೆಯಲ್ಲಿ ನಡೆಯುತ್ತಿದೆ. ಇದರಿಂದ ಜನರು ನಗರಸಭೆಗೆ ಶಾಪವಾಗುತ್ತಿದ್ದಾರೆ ಎಂದು ಆರೋಪಿಸಿದರು.
ಆದ್ದರಿಂದ ಕೂಡಲೇ ನಗರಸಭೆಯಿಂದ ವಾಸ ದೃಢೀಕರಣ ಪತ್ರ ನೀಡುವಂತಹ ವ್ಯವಸ್ಥೆ ಆಗಬೇಕು ಹಾಗೂ ನಗರಸಭೆ ಸದಸ್ಯರಿಗೆ ಆವರಣದಲ್ಲಿ ಕೂರಲು ಕೊಠಡಿಯ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಎಚ್.ಎಂ. ಯಶವಂತ್, ರಮೇಶ್ ಬಾಬು, ಇಂದುಮತಿ, ಆರಿಫ್ ಖಾನ್, ಮಹಾಂತೇಶ್ ಹಾಗೂ ಇತರರು ಇದ್ದರು.
'ಅವರದ್ದೇ ಪಕ್ಷ, ಅವರ ಸರ್ಕಾರದ್ದೇ ಅಧಿಕಾರಿ'
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತವಿದೆ. ಇತ್ತೀಚೆಗಷ್ಟೇ ಸ್ಥಳೀಯ ಕಾಂಗ್ರೆಸ್ ಮುಖಂಡರ ಶಿಫಾರಸ್ಸಿನಂತೆ ನಗರಸಭೆ ಆಯುಕ್ತರನ್ನು ನೇಮಿಸಲಾಗಿದೆ. ಇದನ್ನು ಪರಿಜ್ಞಾನ ವಿಲ್ಲದೇ ಕಾಂಗ್ರೆಸ್ ಸದಸ್ಯರೇ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮೂಲಕ ತಮ್ಮ ಪಕ್ಷದ ಸರ್ಕಾರವೇ ಸರಿಯಿಲ್ಲ ಎಂದು ಸಾರಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಲಾಗುತ್ತಿದೆ.